Friday, November 1, 2024

ಗೋವಿನ ಹಾಡು (ಪುಣ್ಯಕೋಟಿ ಹಾಡು) Complete Original Song of 'Punyakoti'


ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ 

ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು


ರೂಢಿಯೊಳಗರುಣಾದ್ರಿ ಗಿರಿಯು ನಾಡಿನೊಳಗಿಹುದೊಂದು ಬೆಟ್ಟವು 

ರೂಢಿಗಂಬರ ತುರುಕುವಂದದಿ ನೋಡಲಾಶ್ಚರವೆನಿಸಿತು


ಸೃಷ್ಟಿಯೊಳಗರುಣಾದ್ರಿಗಿರಿಯು ಬೆಟ್ಟದಾ ಬಳಸೇಳು ಗಿರಿಗಳು 

ನೆಟ್ಟನೆ ಹನ್ನೆರಡು ಯೋಜನ ದಟ್ಟೆಸಿತಾರಣ್ಯದಿ


ನಾಗಸಂಪಿಗೆ ಮಾವು ನೇರಿಲು ತೇಗ ಚೆನ್ನಂಗಿ ಬನ್ನಿ ಪಾದ್ರಿಯು 

ಬಾಗೆ ತಿಂತ್ರಿಣಿ ಮತ್ತೆ ಬಿಲ್ವ ತಾಗಿ ಮೆರೆದವರಣ್ಯದಿ


ಆಲವರಳಿಯು ಅತ್ತಿಕಿತ್ತಳೆ ಜಾಲ ತದಿಗಿಲು ಅಗಿಲು ಶ್ರೀಗಂಧ 

ಬೇಲ ಭೂತಳೆ ಬಿದಿರು ಬೂರಗ ಲೀಲೆಯೊಳು ವನವೊಪ್ಪಿತು


ಎಕ್ಕೆ ಎಲಚಿಯು ಲಕ್ಕಿಗಿಡಗಳು ಸೊಕ್ಕಿ ಮೆರೆವಾ ಸೀಗೆ ಮರಗಳು 

ಉಕ್ಕಿ ಬೆಳೆಯುವ ನೆಲ್ಲಿಗಿಡಗಳು ತೆಕ್ಕಯಿಸಿತಾರಣ್ಯದಿ


ತೊಂಡೆ ತೊಟ್ಟಿಯು ಸೊಂಡೆಗಿಡ ಭೂ ಮಂಡಲಾದೊಳು ಬೆಳೆವ ತೊಳಸಿಯು 

ಉಂಡು ಸಂತಸಗೊಂಬ ನೇರಿಲು ತಂಡ ತಂಡದಿ ಮೆರೆದುವು


ಮೊಲ್ಲೆ ಮಲ್ಲಿಗೆ ಮುಗುಳುಸಂಪಿಗೆ ಚೆಲ್ವ ಜಾಜಿಯು ಸುರುಗಿ ಸುರಹೊನ್ನೆ 

ಎಲ್ಲಿ ನೋಡಲು ದವನ ಕೇತಕಿ ಅಲ್ಲಿ ಮೆರೆದವರಣ್ಯದಿ


ನಿಂಬೆ ನೇರಿಲು ಹಲಸು ಬೇಲವು ಅಂಬರಕ್ಕೆ ಹರಿವ ಅಡಕೆಯು 

ತುಂಬಿ ತುಳುಕುವ ತೆಂಗಿನಾ ಮರ ಸಂಭ್ರಮಾದೊಳು ಮೆರೆದುವು


ಆಡಸೋಗೆಯು ಕಾಡುನುಗ್ಗೆಯು ರೂಢಿಯಿಂದಲಿ ಬೆಳೆವ ತಗ್ಗಿಯು 

ಕೂಡಿ ಬೆಳೆಯುವ ಈಜಿಯಿಪ್ಪೆಯು ರೂಢಿಯೊಳು ವನವೊಪ್ಪಿತು


ವರಹ ಶಾರ್ದೂಲ ಸಿಂಹ ವಾರಣ ಕರದಿ ಕಾಡೆಮ್ಮೆ ಕಡವೆ ಮೃಗಗಳು 

ಅರುಣ ಸಾರಗ ಬೆಕ್ಕು ಜಂಬುಕ ಮರೆ ಹುಲ್ಲೆ ಸಿಂಗ ಮುಸುವನು


ಗಿಳಿಯು ಕೋಗಿಲೆ ನವಿಲು ಕಾಡ್ಕೊಳಿ ಪೊಳೆವ ಕಾಡ್ಡೆಕ್ಕು ಲಗಡೆ ರಣಹದ್ದು 

ಸುಳಿವ ಕಾಳಿಂಗ ಹಂಸ ಚಕೋರನ ಬಳಗವೊಪ್ಪಿತು ವನದೊಳು


ಪಚ್ಚೆಹಕ್ಕಿಯು ಪಾರಿವಾಳವು ಹೆಚ್ಚಿನಾ ಗೌಜೀನ ಹಕ್ಕಿಯು 

ಕಚ್ಚಿ ಆಡುವ ಸಿಪಲೆ ಹಕ್ಕಿಯು ರಚ್ಚಿಸಿ ಮೆರೆದವರಣ್ಯದಿ


ಬಣ್ಣದುರುಳಿಯ ಬೆಟ್ಟದಾವರೆ ಕಣ್ಣಿಗೆ ಪ್ರಿಯವಾದ ಸರ್ಪವು 

ಬಣ್ಣ ಬಣ್ಣದ ಕೀರ ಮರಿಗಳು ತಣ್ಣಗಿರ್ದವರಣ್ಯದಿ


ಉರುಬಿನಿಂದಾ ಬರುವ ಕರಿಗಳು ಎರಗಿ ಬರುತಿಹ ಗಂಡು ಮೃಗಗಳು 

ತರುಬಿ ಬರುತಿಹ ಮಲೆಯ ಹೋರಿಯು ಬಳಸಿ ಮೆರೆದವರಣ್ಯದಿ


ಕೆಂಚ ನಾಟ್ಗಳು ಕೆಲವು ಕಾಡ್ಕೊಳಿ ಪಂಚವರ್ಣದ ಪಾರಿವಾಳವು 

ಸಂಚಿನೊಳ್ತಾ ಬರುವ ಕಿರುಬನು ಮುಂಚಿ ಮೆರೆದವರಣ್ಯದಿ


ಹೊಂಚಿ ಕಾಯುವ ತೋಳ ನರಿಗಳು ಅಂಜಿವೋಡುವ ಮೊಲನು ಕಪಿಗಳು 

ರಂಜಿಸುತ್ತಿಹ ಕೋಣ ಮರಿಗಳು ಬಂದು ಮೆರೆದವರಣ್ಯದಿ


ಗಿರಿಯ ಪ್ರಾಂತ್ಯದಿ ಶೈಲಗೃಹದಿ ಇರುವ ಮುನಿಗಳು ತಪಸಿ ಸಿದ್ಧರು 

ಪರಮ ಮುನಿಜನ ಬ್ರಹ್ಮ ಋಷಿಗಳು ಹರಿಯ ಧ್ಯಾನದೊಳಿರ್ದರು


ಪೃಥ್ವಿಯೊಳಗರುಣಾದ್ರಿಗಿರಿಯು ಒತ್ತಿನೊಳಗಿಹ ಪುಣ್ಯತೀರ್ಥವು 

ಸತ್ಯಸಾಗರ ಮುಂದೆ ಗೌತಮಿ ಉತ್ತಮಾ ನದಿ ಮೆರೆದವು


ಗಿರಿಗಳೆಡೆಯೊಳು ಅಡವಿ ಮಧ್ಯದಿ ತುರುವ ದೊಡ್ಡಿಯ ಮಾಡಿಕೊಂಡು 

ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು


ಗೊಲ್ಲದೊಡ್ಡಿಯೊಳಿರುವ ಪಶುಗಳು ಎಲ್ಲ ಬೆಟ್ಟದ ಮೇಲೆ ಮೇಯುತ 

ಒಳ್ಳೆ ಹುಲ್ಲು ನೀರ್ಗಳಿಂದಲಿ ಅಲ್ಲಿ ಮೆರೆದವರಣ್ಯದಿ


ತಿರುಗಿ ಮಂದೆಗೆ ಬರುತ ಪಶುಗಳು ನೆನೆದು ತಮ್ಮಾ ಕರುಗಳನ್ನು 

ಪರಿದು ಲಂಘಿಸಿ ಚಿಮ್ಮಿ ನೆಗೆಯುತ ಭರದಿ ಬಂದವು ದೊಡ್ಡಿಗೆ


ತಮ್ಮ ತಾಯ್ಸಳ ಕಂಡು ಕರುಗಳು ಅಮ್ಮನೆಂದೂ ಕೂಗಿ ನಲಿಯುತ 

ಸುಮ್ಮಾನದೊಳು ಮೊಲೆಯನುಂಡು ನಿರ್ಮಲಾದೊಳು ಇದ್ದವು


ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು 

ಮದನ ತಿಲಕವ ಫಣೆಯೊಳಿಟ್ಟು ಚದುರಸಿಕೆಯನು ಹಾಕಿದ


ಉಟ್ಟ ದಟ್ಟಯು ಪಟ್ಟೆ ಚಲ್ಲಣ ತೊಟ್ಟ ಪದಕವು ಬಿಲ್ಲೆ ಸರಗಳು 

ಕಟ್ಟಿ ಭಾಪುರಿ ಭುಜದ ಕೀರ್ತಿಯು ಇಟ್ಟ ಮುದ್ರಿಕೆಯುಂಗುರ


ಪಚ್ಚೆ ಕಡಗವು ಪವಳದಾಸರ ಹೆಚ್ಚಿನಾ ಕಾಲ್ಗಡಗ ಗೆಜ್ಜೆಯು 

ನಿಶ್ಚಿತಾನಂದದಲಿ ಮೆರೆದನು ಮುತ್ತಿನಾ ಸರ ಪದಕವು


ಇಟ್ಟ ಮುತ್ತಿನ ಒಂಟ ಬಾವುಲಿ ಕಂಠಮಾಲೆ ಪದಕ ಸರಗಳು 

ದಿಟ್ಟತನದಲಿ ಧರಿಸಿ ಮೆರೆದನು ಗಂಟೆ ಮೊದಲಾದೊಡವೆಯಾ


ನೀಲದೊಂಟಿಯು ತಾಳಿ ಚೌಕಳಿ ಕಾಲ ಕಡಗವು ಮೇಲೆ ಭಾಪುರಿ 

ನೀಲದುಂಗುರ ಕಾಲ ಸರಗಳು ಲೋಲ ಧರಿಸಿಯೆ ಮೆರೆದನು


ಚಂದ್ರಗಾವಿಯ ಅಂಗಿತೊಟ್ಟು ಇಂದ್ರನೀಲದ ಪಾಗುಸುತ್ತಿ 

ಚಂದ್ರಕಾಂತದ ದುಪಟಿಯನ್ನು ಚಂದದಿಂದಲಿ ಪೊದ್ದನು


ಗೊಲ್ಲ ಶೃಂಗಾರೀಸಿಕೊಂಡು ಒಳ್ಳೆ ದುಕುಲಗಳನ್ನು ಪೊದ್ದು 

ಬೆಳ್ಳಿಯಂಡೆಯ ಕೈಲಿ ಪಿಡಿದು ಎಲ್ಲ ಗೋವಳ ಕರೆದನು


ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲಗೌಡನು 

ಬಳಸಿ ಬರುವ ತರುಗಳನ್ನು ಬಳಿಗೆ ಕರೆದನು ಹರುಷದಿ


ಪಾರ್ವತೀ ಲಕ್ಷ್ಮೀಯು ಬಾರೆ ಸರಸ ಸದ್ಗುಣವನಿತೆ ಬಾರ 

ಸರಸ್ವತಿಯ ಮಾಣಿಕವೆ ಬಾರೆಂದು ಸರಸದಿಂ ಗೊಲ್ಲ ಕರೆದನು


ಉದಯ ಭಾಸ್ಕರ ದೇವಿ ಬಾರೆ ಚದುರ ಗುಣ ಸಂಪನ್ನೆ ಬಾರೆ 

ಹೃದಯ ನಿರ್ಮಳೆ ನೀನು ಬಾರೆಂದು ಹರುಷದೊಳು ಗೊಲ್ಲ ಕರೆದನು


ಧರ್ಮದೇವಿ ನೀನು ಬಾರೆ ಧರ್ಮಗುಣದಾ ತಾಯೆ ಬಾರೆ 

ಧರ್ಮವತಿಯೇ ನೀನು ಬಾರೆಂದು ಪ್ರೇಮದೊಳು ಗೊಲ್ಲ ಕರೆದನು


ಗಂಗೆ ಬಾರೇ ಗೌರಿ ಬಾರೇ ತುಂಗಭದ್ರೆ ನೀನು ಬಾರೇ 

ಅಂಗನಾಮಣಿ ನೀನು ಬಾರೆಂದು ಅಂಗವಿಸಿ ಗೊಲ್ಲ ಕರೆದನು


ರಂಗನಾಯಕಿ ನೀನು ಬಾರೆ ರಘುಕುಲೋತ್ತಮೆ ನೀನು ಬಾರೆ 

ಶೃಂಗಾರದ ಸೊಬಗಿ ಬಾರೆಂದು ಅಂಗವಿಸಿ ಗೊಲ್ಲ ಕರೆದನು


ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ 

ಪೂರ್ಣಗುಣ ಸಂಪನ್ನೆ ಬಾರೆಂದು ನಾಣ್ಯದಿಂ ಗೊಲ್ಲ ಕರೆದನು


ಕಾಮಧೇನುವೆ ನೀನು ಬಾರೆ ಭೂಮಿ ದೇವಿಯೆ ನೀನು ಬಾರೆ 

ರಾಮದರಗಿಣಿ ನೀನು ಬಾರೆಂದು ಪ್ರೇಮದಿಂ ಗೊಲ್ಲ ಕರೆದನು


ಭಾಗ್ಯ ಲಕ್ಷ್ಮಿಯೆ ನೀನು ಬಾರೆ ಭಾಗ್ಯ ಗುಣ ಚಾರಿತ್ರೆ ಬಾರೆ 

ಯೋಗವತಿಯೇ ನೀನು ಬಾರೆಂದು ಬೇಗದಿಂ ಗೊಲ್ಲ ಕರೆದನು


ಗೊಲ್ಲ ಕರೆದಾ ಧ್ವನಿಯ ಕೇಳಿ ಎಲ್ಲ ಪಶುಗಳು ಬಂದವಾಗ 

ಚಲ್ಲಿ ಸೂಸಿ ಪಾಲ ಕರೆದು ಅಲ್ಲಿ ತುಂಬಿತು ಬಿಂದಿಗೆ


ಒಡನೆ ದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕಾಗಿ 

ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ


ಎಣಿಕೆ ಹುಲ್ಲೆ ವರ್ಣದಾವು ಉನ್ನಂತ ಬೆಟ್ಟದ ಕೆಂದ ಆವು 

ಉನ್ನಂತವಹ ಕಪಿಲೆ ಗೋವಳು ಉನ್ನಂತವಾಗಿ ನಡೆದವು


ಕರುವುಗಾಳು ಕಡಸುಗಾಳು ಸರಿಯ ಪ್ರಾಯದ ಎತ್ತುಗಾಳು 

ದುರುಳು ಪ್ರಾಯದ ಗೋವಳೆಲ್ಲ ತೆರಳಿದಾವಾರಣ್ಯಕೆ



ಅಟ್ಟ ಬೆಟ್ಟದ ಕಿಬ್ಬಿಯೊಳಗೆ ಇಟ್ಟೆಡೆಯ ಬೆಟ್ಟಾದ ನಡುವೆ 

ದಟ್ಟೆಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು


ಅಕ್ಕಿಯಂತ ಹುಲ್ಲುಗಳನು ಸಕ್ಕರೆಯಂದದಲಿ ಸವಿದು 

ಅಕ್ಕರಿಂದಾಹಾರಗೊಂಡು ಸೊಕ್ಕಿ ಸಂತಸಗೊಂಡವು


ಹರಿದು ಮೇದ ಪಶುಗಳನು ಕರೆದು ತಂದನು ಗೊಲ್ಲಗೌಡನು 

ಕೊರಳ ಗಂಟೆಯ ಡಣಿರು ಡಣಿರೆನೆ ಮರಳಿ ಬರುತಿರೆ ದೊಡ್ಡಿಗೆ


ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಬುತಾನೆಂತೆಂಬ ವ್ಯಾಘ್ರನು 

ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು


ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು 

ಅಡಗಿಕೊಂಡು ಗವಿಯ ಬಾಗಿಲ ಹೊರನುಡಿಯ ಆಲಿಸುತಿರ್ದನು


ಕೊರಳ ಗಂಟೆಯ ಧ್ವನಿಯು ಕರ್ಣಕೆ ಎರಗಲಾಕ್ಷಣ ವ್ಯಾಘ್ರನೆದ್ದು

ಹರಿದು ಆಹಾರಗೊಂಬೆನೆನುತಲಿ ಹೊರಹೊರಟು ತಾ ಬಂದಿತು


ಸಿಡಿಲು ಘೋಷದಿ ಮೊರೆಯುತಾ ಹುಲಿ ಘುಡುಘುಡಿಸಿ ಭೋರಿಡುತ ವ್ಯಾಘ್ರನು 

ತುಡುಕಿಯೆರಗಿದ ರಭಸದಿಂದೊ ಗ್ಗೂಡೆದವಾಗಾ ಗೋಡ್ಗಳು


ಕೋಮಲತೆಯಿಂ ನಲಿದು ನೆಗೆಯುತ ಆ ಮಹಾಟವಿ ಮಧ್ಯದಲ್ಲಿ 

ಪ್ರೇಮದಿಂದಲಿ ಬರುವ ಪಶುವನು ಭೂಮಿಯೊಳು ಹುಲಿ ಕಂಡಿತು


ಕನ್ನೆ ಮಗನ ಪಡೆದ ಪಶುವು ತನ್ನ ಕಂದನ ನೆನೆದುಕೊಂಡು 

ಪುಣ್ಯಕೋಟಿಯೆಂಬ ಪಶುವು ಚನ್ನಾಗಿ ತಾ ಬರುತಿರೆ


ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟ ವ್ಯಾಘ್ರನು 

ಬಂದು ಬಳಸಿ ಅಡ್ಡಗಟ್ಟಿ ಕೊಂಡಿತಾಗ ಪಶುವನು


ಹೊಲನ ಗದ್ದೆಯ ಹಾಳುಮಾಡಿದೆ ಬೆಳೆದ ಪೈರನು ಸವಿದು ಕೆಡಿಸಿದೆ 

ಬಳಿಕ ಎನ್ನಯ ಗವಿಯ ಬಳಿಗೆ ತಳುಗದೇ ನೀ ಬಂದೆಯಾ


ಎಂದು ಹುಲಿಯು ಅಡ್ಡಗಟ್ಟಿ ಹಿಂದೆ ಮುಂದಿಹ ಪಶುಗಳೆಲ್ಲ 

ಒಂದಕೊಂದು ಭಯದೊಳೋಡಿ ಮುಂದೆ ದೊಡ್ಡಿಗೆ ಬಂದವು


ಪುಣ್ಯಕೋಟಿ ಎಂಬ ಪಶುವನು ತಾನು ತಿಂದೇನೆಂದು ಹುಲಿಯು 

ಚೆನ್ನಗೋವನು ಅಡ್ಡಗಟ್ಟಿ ತಿನ್ನ ಯಷೀಕರಿಸಿತು


ಖೂಳ ಹುಲಿಯು ಅಡ್ಡಗಟ್ಟಿ ಬೀಳ ಹೊಯ್ದನು ನಿನ್ನ ನೆನುತಲಿ 

ಸೀಳಿ ಬಿಸುಡುವೆ ಬೇಗವೆನುತ ಪ್ರಳಯವಾಗಿಯೆ ಕೋಪಿಸಿ


ಹಾಳು ಮಾಡುವ ಗರತಿಯಲ್ಲ ಬೀಳು ಮಾಡುವ ಗೈಮೆಯಲ್ಲ 

ಬಾಳುವಂತೆ ಮಾಳ್ವೆ ಧರೆಯೊಳು ಕೇಳಯ್ಯ ಹುಲಿರಾಯನೆ


ನಾನು ಮೆಟ್ಟಿದ ಭೂಮಿ ಬೆಳೆವುದು ಧಾನ್ಯಧನಗಳುಂಟು ಮಾಡುವೆ 

ಶಾನೆ ಕ್ಷೀರವ ಕೊಡುವೆ ನಿತ್ಯವು ಮಾನವರಿಗುಪಕಾರಿಯು


ಅಡವಿಯೊಳಗಣ ಹುಲ್ಲ ಮೇಯುವೆ ಮಡುವಿನೊಳಗಣ ನೀರ 

ಕುಡಿಯುವೆ ಒಡೆಯನಾಜ್ಞೆ ಯಿಂದಲಿರುವೆನು ಕಡೆಹಾಯಿಸು ಹುಲಿರಾಯನೆ


ಉತ್ತರಾವನು ಕೊಡಲು ಹುಲಿಯು ಮತ್ತೆ ಕೋಪದಿ ರೌದ್ರತಾಳಿ 

ಕತ್ತ ಮುರಿವೆನು ಕಚ್ಚಿ ಒದರುವೆ ರಕ್ತ ಹೀರುವೆನೆಂದಿತು


ಒಂದು ಬಿನ್ನಹ ಹುಲಿಯರಾಯನೆ ಕಂದನೈದೆನೆ ಮನೆಯ ಒಳಗೆ 

ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವ


ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ 

ನುಸುಳಿಹೋದರೆ ನೀನು ಬರುವೆಯ ಹಸನಾಯಿತೀಗೆಂದಿತು


ಮುನ್ನ ಪಾಂಡವ ಸತಿಯು ಹುಸಿಮ ತನ್ನ ನಿಜವನು ತಪ್ಪಿ ನಡೆದಳು 

ನಿನ್ನ ನಂಬುವರಾರು ಈಗ ನಿನ್ನ ನಾ ಬಿಡೆನೆಂದಿತು


ಮೂರು ಮೂರ್ತಿಗಳಾಣೆ ಬರುವೆನು ಸೂರ್ಯಚಂದ್ರಮರಾಣೆ ಬರುವೆನು 

ಧಾರುಣೀ ದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು


ಬರುವೆನೆಂದು ಭಾಷೆ ಮಾಡಿ ತಪ್ಪೆನೆಂದಾ ಪುಣ್ಯ ಕೋಟಿಯು 

ಒಪ್ಪಿಸಲೊಡಂಬಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು


ಅಲ್ಲಿಂದ ಕಳುಹೀಸಿಕೊಂಡು ನಿಲ್ಲದೆ ದೊಡ್ಡಿಗೆ ಬಂದು 

ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು


ಮಗನೆ ಬಾರೊ ಮೊಲೆಯ ಕುಡಿಯೊ ಹೇಗೆ ಬದುಕಿಯೊ ಏನನರಿಯ 

ಬೇಗ ಬಾರೊ ಕಂದ ಎನುತಲಿ ಮಗನ ನೋಡಿಯೆ ಎಂದಳು


ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು 

ದುಷ್ಟ ವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೆ


ಇಂದು ಒಂದು ದುಷ್ಟ ವ್ಯಾಘ್ರನು ತಿಂದೆನೆನುತಲಿ ಬಂದಿತಯ್ಯ 

ಕಂದ ನಿನಗೆ ಮೊಲೆಯ ಕೊಡುವೆ ನೆಂದು ಬಂದೆನು ದೊಡ್ಡಿಗೆ


ಕೊಂದೆನೆಂಬ ದುಷ್ಟ ವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು 

ಕಂದ ನಿನ್ನನು ನೋಡಿ ಪೋಗುವೆ ನೆಂದು ಬಂದೆನು ದೊಡ್ಡಿಗೆ


ಅಮ್ಮ ನೀನು ಸಾಯಲೇತಕೆ ಸುಮ್ಮನಿರು ನೀ ಎಲ್ಲಾರಹಾಗೆ 

ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾನವಡಗಿ ನಿಂದಿತು


ಕೇಳಿ ಮಗನ ಬುದ್ಧಿಯನ್ನು ತಾಳಿ ಹರುಷವ ಸತ್ಯವೆಂದು 

ಬಾಳಿ ಬದುಕುವ ಭಾಗ್ಯ ನಿನ್ನದು ಮುಂದರಿತು ನೀ ಬಾಳ್ವೆಯಾ


ಕೊಟ್ಟ ಭಾಷೆಗೆ ತಪ್ಪಲಾರೆನು ಕೆಟ್ಟ ಯೋಚನೆ ಮಾಡಲಾರೆನು 

ನಿಷ್ಠೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ


ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಸರ್ವ ಬಳಗವು

ಸತ್ಯವಾಕ್ಯಕೆ ತಪ್ಪಿದಾರೆ ಅಚ್ಯುತಾ ಹರಿ ಮೆಚ್ಚನು


ಕೊಟ್ಟ ಭಾಷೆಗೆ ತಪ್ಪಿದಾರೆ ಸೃಷ್ಟಿಯೊಳು ಶ್ರೀಹರಿಯು ಮೆಚ್ಚನು 

ಎಷ್ಟು ಕಾಲ ಇರುವುದೀ ಕಾಯ ಕಟಕಟಾ ಕಂದಯ್ಯನೆ


ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ 

ಆರ ಬಳಿಯಲಿ ಮಲಗಲಮ್ಮ ಆರು ಎನಗೆ ಹಿತವರು


ಅಮ್ಮಗಳಿರಾ ಅಕ್ಕಗಳಿರಾ ಎನ್ನ ತಾಯಿಯೊಡಹುಟ್ಟುಗಳಿರಾ 

ನಿಮ್ಮ ಕಂದನೆಂದು ಕಂಡಿರಿ ತಬ್ಬಲಿ ಮಗನೈದನೆ


ಮುಂದೆ ಬಂದರೆ ಹಾಯದೀರಿ ಹಿಂದೆ ಬಂದರೆ ಒದೆಯದೀರಿ 

ನಿಮ್ಮ ಕಂದನೆಂದು ಕಂಡಿರಿ ತಬ್ಬಲಿ ಮಗನೈದನೆ


ಅಮ್ಮ ಕೇಳೆ ಪುಣ್ಯಕೋಟಿಯೆ ನೀನು ಹೋಗಿ ಸಾಯಲೇತಕೆ 

ಬಳಗವೆಲ್ಲವು ಕೂಡಿ ನಿನ್ನ ಸಂಗಡಲೆ ನಾವ್ ಬರುವೆವು


ಅಮ್ಮ ನೀವು ಎನ್ನ ಸಂಗಡ ಬರುವುದೀಗ ಉಚಿತವಲ್ಲ 

ಮುನ್ನ ನಾನು ಪಡೆದ ಫಲವಿದು ಎನ್ನ ಬಿಡುವುದೆ ಎಂದಿತು


ಅಮ್ಮ ಕೇಳೆ ಪುಣ್ಯಕೋಟಿಯೆ ನಿನ್ನ ಕಂದನೆ ನಮ್ಮ ಕಂದನು 

ನಿನ್ನ ಮನದೊಳು ಖೇದವೇತಕೆ ನಿರ್ಮಲಾದೊಳಿರಮ್ಮನೆ


ಅಮ್ಮ ನೀವು ಎಲ್ಲರಿರಲು ಎನ್ನ ಮನದೊಳು ಖೇದವೇತಕೆ 

ನಿಮ್ಮ ಕಂದನೆಂದು ಕೊಂಡಿರಿ ತಬ್ಬಲಿ ಮಗನೈದನೆ


ತಬ್ಬಲಿಯಾದೆಲ್ಲೊ ಮಗನೆ ಹೆಬ್ಬುಲಿಯ ಬಾಯಿಗೆ ಹೊಗುವೆನು 

ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಳು ಕಂದನ


ಅಮ್ಮನೆಂದು ಕರೆವ ಬಾಯಲಿ ಮಣ್ಣಹಾಕಿದ ಶಿವನು ಎನುತಲಿ 

ಎನ್ನ ಪುಣ್ಯದ ಭಾಗ್ಯವನ್ನು ಯಾರಿಗೆಯು ನಾನುಸುರಲಿ


ನಿನ್ನ ಬಸುರಲಿ ಏಕೆ ಹುಟ್ಟಿದೆ ಅನ್ಯಕಾರಿ ಪಾಪಿ ನಾನು 

ಇನ್ನು ಅಮ್ಮನೆನುತ ಯಾರನು ಎನ್ನ ಪ್ರೇಮದಿ ಕರೆಯಲಿ


ಕಂದ ನಿನಗೆ ದುಃಖವೇತಕೆ ಚೆಂದದಿಂದ ಬಾಳು ಧರೆಯೊಳು 

ಮುನ್ನ ಜನ್ಮದ ಪಡೆದ ಫಲವಿದು ಎನ್ನ ಬಿಡುವುದೆ ಎಂದಿತು


ಕಂದನೀಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು 

ಚೆಂದದಿಂದ ಪುಣ್ಯನದಿಯೊಳು ನಿಂದು ಸ್ನಾನವ ಮಾಡಿತು


ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲ ಪೊಕ್ಕು ನಿಂತು 

ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು


ಅಣ್ಣ ಬಾರೋ ಹುಲಿಯ ರಾಯನೆ ಹಸಿದೆಯೆಲ್ಲೋ ದೋಷ ಬಂದಿತು 

ಎನ್ನ ಆಹಾರವನು ಬೇಗನೆ ಕೊಳ್ಳಲೋ ಹುಲಿರಾಯನೆ


ಖಂಡವಿದೆ ಕೊ ರಕ್ತವಿದೆ ಕೊ ಗುಂಡಿಗೆಯ ಕೊಟ್ಟೂಗಳಿದೆ ಕೋ 

ಉಂಡು ಸಂತಸಗೊಂಡು ನೀ ಭೂ ಮಂಡಲದೊಳು ಬಾಳಯ್ಯನೆ


ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು 

ಕನ್ನೆಯಿವಳನು ಕೊಂದು ತಿಂದರೆ ಎನ್ನ ನರಹರಿ ಮೆಚ್ಚನು


ಎನ್ನ ಒಡಹುಟ್ಟಕ್ಕ ನೀನು ನಿನ್ನ ತಿಂದು ನಾನೇನ ಪಡೆವೆನು 

ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು


ಮುನ್ನ ನೂರು ಗೋವ ಕೊಂದ ಅನ್ಯಕಾರಿ ಪಾಪಿ ನಾನು 

ಇನ್ನು ಇರಿಸಲು ಏಕೆ ಪ್ರಾಣವ ಬಿಡುವೆನೆಂದು ಪೇಳಿತು


ಅಮ್ಮ ನೀನು ಸತ್ಯವಂತೆಯು ನಿನ್ನ ದರುಶನ ಮಾತ್ರದಿಂದಲಿ 

ನಾನು ಪೂರ್ವದಿ ತಂದ ಫಲವು ಇಂದು ಪರಿಹರವಾಯಿತು


ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ 

ನೂಕಿ ನೀನು ಸಾಯಲೇತಕೆ ಬೇಕೆಂದು ನಾ ಬಂದೆನು


ನಿನ್ನ ಪ್ರಾಣವ ತೊರೆಯಲೇತಕೆ ಕನ್ನೆಯೆನ್ನನು ತಿಂದು ಬದುಕದೆ 

ಮುನ್ನ ನಿನ್ನಯ ತೃಷೆಯ ಸಲಹಿಕೊ ಪನ್ನಗ ಶಯನೀಗೆ ಪ್ರಿಯವು


ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರ ಸುರಿಯುತ 

ಅನ್ಯಕಾರಿಯು ತಾನು ಎನುತಲಿ ತನ್ನ ಮನದೊಳು ಧ್ಯಾನಿಸಿ


ಮೂರು ಮೂರ್ತಿಗೆ ಕೈಯ ಮುಗಿದು ಸೇರಿ ಎಂಟು ದಿಕ್ಕ ನೋಡಿ 

ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು


ಹರಿಯು ಮೆಚ್ಚಿದ ಹರನು ಮೆಚ್ಚಿದ ಬ್ರಹ್ಮದೇವನು ತಾನು ಮೆಚ್ಚಿದ 

ಸುರರು ಪೂಮಳೆಗರೆದು ಬೇಗದಿ ಕರುಣದಿಂದಲಿ ಇರುವರು


ಬ್ರಹ್ಮ ಪ್ರಾಣವ ಕರೆದುಕೊಂಡ ಹರನು ಪುಲಿಯ ಚರ್ಮ ಪೊದ್ದನು 

ಹರನು ಹಸುವನು ಮನ್ನಿಸಿಯೇ ಬೇಗ ತಿರುಗಿ ಕಳುಹಿದ ದೊಡ್ಡಿಗೆ


ಆಗ ತಮ್ಮಾ ಬಳಗವೆಲ್ಲಾ ಬೇಗದಿಂ ಸಂತೋಷಗೊಂಡು 

ಹೇಗೆ ಬಂದೆಯೆ ಪುಣ್ಯಕೋಟಿಯ ಈಗ ನೀನತಿ ಶೀಘ್ರದಿ


ಹುಲಿಗೆ ಮೋಕ್ಷವ ಕೊಟ್ಟು ಶಿವನು ಸಲಹಿ ಎನ್ನನು ಬಿಡಿಸಿದಾನು 

ನಲಿದು ಬಂದೆನು ಮರಳಿ ದೊಡ್ಡಿಗೆ ಗೆಲುವಿನಿಂದಲಿ ಈಗಲು


ಎಂದ ವಾಕ್ಯವ ಕೇಳಿ ಪಶುಗಳು ಚೆಂದದಿಂದ ನಲಿದು ನೆಗೆಯುತ 

ಇಂದುಧರ ಅರವಿಂದನಾಭ ಗೋ ವಿಂದ ಎನುತಲಿ ನಲಿದವು


ಗೊಲ್ಲಗೌಡನು ತಾನು ಬಂದು ಪುಣ್ಯಕೋಟಿಯ ಪಾದಕೆರಗಿದ 

ಉನ್ನತದ ಸೌಭಾಗ್ಯವೀಯೆಂದು ಚೆನ್ನಾಗಿ ತಾ ಕೇಳಿದ


ಪುಣ್ಯಕೋಟಿಯು ನಲಿದು ಕರುವಿಗೆ ಪುಣ್ಯಕಾರಿ ಎನುತ ಬೇಗದಿ 

ಚೆನ್ನ ಗೌಡನ ಕಂಡು ತಾನು ಉನ್ನತಾದಿಂದೆಂದಿತು


ಎನ್ನ ವಂಶದ ಗೋವಳೊಳಗೆ ನಿನ್ನ ವಂಶದ ಗೊಲ್ಲರೊಳಗೆ 

ಮುನ್ನ ಸಂಕ್ರಾಂತಿ ಹಬ್ಬದೊಳಗೆ ಚೆನ್ನ ಕೃಷ್ಣನ ಭಜಿಸಿಯ


ಪಾಲು ಪೊಂಗಲನಿಕ್ಕಿಸಯ್ಯ ಬಾಲ ಗೋವಳ ಕೂಡಿ ಸಾಗಲು 

ಲೋಲ ಕೃಷ್ಣನು ನಿಮಗೆ ಒಲಿವನು ಪಾಳಿಸೆನ್ನಯ ವಾಕ್ಯವಾ


ಪುಣ್ಯಕೋಟಿಯ ಮಾತಕೇಳಿ ಗೊಲ್ಲಗೌಡನು ತಾನು ಬೇಗದಿ 

ಪುಣ್ಯ ನದಿಯೊಳು ಮಿಂದು ಬಂದು ಆಗ ಹಬ್ಬವ ಮಾಡಿದ


ನಮ್ಮ ವಂಶಕೆ ವರುಷಕೊಂದು ಸಂಕರಾತ್ರಿಯ ಹಬ್ಬದೊಳಗೆ 

ಪಾಲು ಪೊಂಗಲ ಮಾಳ್ವವೆಂದು ಆಗ ಹಬ್ಬವ ಮಾಡಿದ


ಗೋವು ಹೇಳಿದ ಪುಣ್ಯ ಕಥೆಗಳ ಹೇಳಿದವರಿಗೆ ಕೇಳಿದವರಿಗೆ 

ಈವ ಅಚ್ಯುತ ಸೌಭಾಗ್ಯ ಸಂಪದ ಆವ ಕಾಲಕೆ ತೆಗೆಯದ


ಪದ್ಮನಾಭನೆ ಪರಂಧಾಮನೆ ಮದ್ದುರ ಶ್ರೀನಾರಸಿಂಹನೆ 

ಮುದ್ದು ವರಗಳ ಕೊಡುವ ನಿಮಗೆಯು ನಮೋ ನಮೋ ಮಂಗಳಂ

Wednesday, July 3, 2024

ಮೌನ ಸಂಗಾತಿ

"ಅನಿರೀಕ್ಷಿತ ಪರಿಚಯ"… ಬಯಸದೇ ಬಂದು ಸೇರಿದ್ದೆವು ಅಲ್ಲಿ.

ಕೆಲಸ ಸಂಬಂಧದ ಸಂದರ್ಭವೇ ನಮಗೆ ಪರಿಚಯದ ಹಾದಿಯಾಯಿತು.

ಬೇರೆಬೇರೆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದರೂ,

ಉದ್ದೇಶಗಳು ಸ್ಪಷ್ಟವಾಗಿದ್ದವು, ಅರ್ಥಪೂರ್ಣವಾಗಿದ್ದವು.


ಸಾಧಾರಣ ಮಾತುಕತೆಗಳು, ಸ್ವಲ್ಪ ಹಾಸ್ಯ, ಕೆಲ ಆಳವಾದ ವಿಚಾರಗಳು —

ಇವೆಲ್ಲವೂ ಸ್ನೇಹಕ್ಕೆ ಒಂದು ಸುಧಾರಿತ ರೂಪ ಕೊಟ್ಟುವಂತೆ ಭಾಸವಾಯಿತು.

ಯಾವುದೇ ಭ್ರಮೆಗಳಿಲ್ಲ, ಯಾವುದೇ ಗಡಿಮೀರಿದ ನಿರೀಕ್ಷೆಗಳಿಲ್ಲ.

ಹೆಚ್ಛು ಹೇಳದೆ, ಒಂದಷ್ಟು ಹಂಚಿಕೊಂಡಿದ್ದು, ಅದು ಪ್ರಾಮಾಣಿಕವಾಗಿತ್ತು… ಸರಳವಾಗಿತ್ತು.


ನಾವು ಇಬ್ಬರೂ ತಿಳಿದಿದ್ದೆವು — ಇದು ಸ್ನೇಹವೇ, ನಿಜವಾದ ಆತ್ಮೀಯತೆಯೇ ಆಗಬೇಕು. 

ಆದರೆ ಹೃದಯದ ಎಡೆಗಳಲ್ಲಿ ಹರಿದಿದ್ದ ಭಾವನೆಗಳನ್ನು ಸ್ಥಿಮಿತಗೊಳಿಸಲು ಕಷ್ಟವಾಯಿತು. 

ಅದು ಒಂದು "ಅರಿಯದ ಸಂಬಂಧ"


"ಕವಲುದಾರಿ" - ಸಮಯ ಸರಿದಂತೆ, ಅವಳು ತನ್ನ ಜೀವನದ ಮುಂದಿನ ಹಂತಕ್ಕೆ ಸಾಗಿದಳು 

ಅದೇ ಸಮಯದಲ್ಲಿ, ಹೃದಯಗಳು ಬೇರೆಯಾದ ದಾರಿಗಳತ್ತ ಸಾಗಿದವು.

ಆದರೆ ಹೃದಯದಲ್ಲಿ ಬದಲಾವಣೆಯ ತಾಳುವುದು ಕಠಿಣವಾಗಿತ್ತು.

ಬದಲಾದದ್ದೆಂದರೆ ಅವಳ ಆಲೋಚನೆಗಳು, ಅವಳ ಪ್ರಾಮುಖ್ಯತೆಗಳು. 

ಒಮ್ಮೆ ಹಂಚಿಕೊಂಡ ಕ್ಷಣಗಳು ನಿಧಾನವಾಗಿ ದೂರ ಸರಿಯುತ್ತಾ ಹೋಯ್ತು.

ಹೆಚ್ಚಾಗಿ ಮಾತನಾಡಿದವರಾಗಿದ್ದ ನಾವು,

ಇನ್ನು ಮಾತುಗಳನ್ನೇ ತಾಳದಂತಾಗಿ ಬಿಟ್ಟೆವು.


"ದೃಷ್ಟಿಕೋನ" ಅವಳ ದೃಷ್ಟಿಯಲ್ಲಿ ಎಲ್ಲವೂ ಸರಿಯಾಗಿತ್ತು —

ಆಕೆ ಪ್ರಾಮಾಣಿಕಳಾಗಿಯೇ ಇದ್ದಳು, ಆಕೆಗಾಗಿ ಕೆಲಸವೇ ಮೊದಲ ಪ್ರಾಮುಖ್ಯತೆ.

ಕೆಲಸದ ಮೇಲೆ ಕೇಂದ್ರೀಕರಿಸಬೇಕು, ಪ್ರಾಮುಖ್ಯತೆ ಅದಕ್ಕೆ ಕೊಡಬೇಕು —

ಇದು ಅವಳ ದೃಷ್ಟಿಕೋಣ.

ಅವಳಿಗೆ ಆ ದೃಷ್ಟಿ ಪ್ರಾಮಾಣಿಕವಾಗಿರಬಹುದು,

ಅವಳ ಅನುಭವಗಳು ಆ ರೀತಿ ಕಲಿಸಿರಬಹುದು.


ಆದರೆ ನನಗೆ ಆಗ ತೋಚಿದ ದಾರಿಯೇ ಬೇರೆ.

ಒಟ್ಟಾಗಿ ಕೆಲಸ ಮಾಡುವುದು ಸಾಧ್ಯ,

ಆದರೆ ಆ ಕೆಲಸಕ್ಕಿಂತಲೂ ಮೊದಲು

ಒಟ್ಟಾಗಿ ಇರುವ ಬಾಂಧವ್ಯ ಉಳಿಯಬೇಕು ಅನ್ನೋ ನಂಬಿಕೆ ನನಗಿತ್ತು.


"ತೊಳಲಾಟ"

ಅದು ಯಾವ ಹಂತಕ್ಕೆ ತಿರುಗಿತೆಂದರೆ,

ನಾನು ಹೆಚ್ಚು ಯೋಚಿಸುತ್ತ ಹೋದೆ. Overthinking ನನ್ನ ಶತ್ರುವಾಯಿತು. 

ಅವಳ ಪ್ರತಿಯೊಂದು ಮೌನ, ಪ್ರತಿಯೊಂದು ಸಂದೇಶವಿಲ್ಲದ ದಿನ 

ನನ್ನ ಹೃದಯದಲ್ಲಿ ತೀವ್ರ ಪ್ರಶ್ನೆಗಳನ್ನ ಮೂಡಿಸಿತು.

ನಾನೆಲ್ಲಿ ನಿರಾಶನಾಗುತ್ತೇನೋ ಎಂದು, 

ಹೊಣೆಗಾರಿಕೆಯೆಂಬಂತೆ ಬಂದ ಮಾತುಗಳೋ ಅಥವಾ ಅವಳ ಮಾತುಗಳು ನನಗೆ ಹಾಗೆ ಕೇಳಲಾರಂಭಿಸಿತೋ.. ಒಮ್ಮೊಮ್ಮೆ, ಮಾತುಗಳು ಬಲು ಬೇಗ ಮೌನಕ್ಕೆ ಜಾರುತ್ತಿತ್ತು.

ಆದರೆ ನನ್ನ ಹೃದಯಕ್ಕೆ ಮಾತ್ರ —

ಆ ಮೌನವೇ ಪ್ರಶ್ನೆಗಳಾಯಿತು. "ಮೌನವ್ರತ"


ಮನಸ್ಸು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿತ್ತು —

ಶಬ್ದಗಳ ಗರ್ಭದಲ್ಲೇ ಎಷ್ಟು ಬದಲಾವಣೆ ನಡೆದಿರಬಹುದು ಅಲ್ಲವೇ.

ಹೆಚ್ಚಾಗಿ ಆತ್ಮೀಯರಾಗಿದ್ದ ಸಂಬಂಧ,

ಇದೀಗ ಎಷ್ಟು ಅಜ್ಞಾತವಾಗಿ ಪರಿಣಮಿಸಿತು ಅನ್ನೋದು

ತಿಳಿಯದೆ ಹೋದಂತಾಯಿತು.

ಬದಲಾವಣೆಯ ಉಸಿರಲ್ಲಿ ನಾನೊಬ್ಬನೇ ಉಳಿದಂತಾಯಿತು.

ಅವಳು ಆ ಬದಲಾವಣೆಗೆ ಹೊಂದಿಕೊಂಡು ಮುಂದೆ ಸಾಗಿದಳು!!

ನಾನಿಲ್ಲಿ, ಕೇಳದ ಪ್ರಶ್ನೆಗಳ ಜೊತೆಗೆ ನಿಂತೆ.


ಈ ವ್ರತವ ಬಿಡಿಸುವಳಾ ಮೌನ ಸಂಗಾತಿ?? ಕಾಯಬೇಕಿದೆ..


Tuesday, November 12, 2019

ಎಂಜಲವನೆ ಬಳೆದಾ ಶ್ರೀಹರಿ

 'ಕೃಷ್ಣನ ದ್ವಾರಕೆಯೇ ಇಲ್ಲಿ ಕಂಡಹಾಗಿದೆ'
'ಆಹಾ ರಾಮರಾಜ್ಯ' 'ಇಲ್ಲಿ ಬದುಕುವುದೇ ನಮ್ಮ ಪುಣ್ಯ'
ನೆರೆದಿದ್ದ ಜನರಿಂದ ಹೀಗೆ ಯುಧಿಷ್ಠಿರನ ಇಂದ್ರಪ್ರಸ್ಥದ ಬಗ್ಗೆ ಹೊಗಳಿಕೆ ಬರುತ್ತಿದ್ದರೆ, ಇತ್ತ ಮಹಾ ಧರ್ಮಿಷ್ಠ ಯುಧಿಷ್ಠಿರ ನೆರೆದಿದ್ದ ಜನರಿಗೆಲ್ಲಾ ದಾನ ಧರ್ಮಗಳನ್ನು ಮಾಡುತ್ತಾ, ರಾಜಸೂಯ ಯಾಗಕ್ಕೆ ಆಗಮಿಸಿದ್ದ ರಾಜರುಗಳಿಗೆ ಆತಿಥ್ಯವನ್ನು ನೀಡುತ್ತಾ, ಋಷಿಗಳ, ಯತಿಗಳ ಸೇವೆಯನ್ನು ಮಾಡುತ್ತಾ ಎಲ್ಲರ ಬಾಯಲ್ಲಿ ಆಶಿರ್ವಾದವನ್ನು ಪಡೆಯುತ್ತಾ ಅಭೂತಪೂರ್ವ ರಾಜಸೂಯ ಯಾಗವನ್ನು ನಡೆಸುತ್ತಿದ್ದಾನೆ.
ಇದನ್ನೆಲ್ಲವನ್ನು ನೋಡುತ್ತಾ ಇದ್ದ ಶ್ರೀಕೃಷ್ಣ ಪರಮಾತ್ಮ ತಾನು ಸದಾ ಧರ್ಮಿಗಳ ಪರ ಎಂದು ಪದೇ ಪದೇ ನಿರೂಪಿಸುತ್ತಿರುವುನೇನೋ ಎಂಬಂತೆ ತನ್ನ ತಂಗಿಯ ಮನೆಯಲ್ಲಿ ಯುಧಿಷ್ಠಿರಾದಿ ಸಕಲ ಪಾಂಡವರಿಗೆ ಸಲಹೆ ಸೂಚನೆಯನ್ನು ನೀಡುತ್ತಾ ಇದ್ದಾನೆ.
ಸಹಸ್ರಾರು ಜನರಿಗೆ ಅದ್ಧೂರಿ ಭೋಜನದ ಏರ್ಪಾಡು ಭೀಮಸೇನ ನೋಡಿಕೊಳ್ಳುತ್ತಿದ್ದಾನೆ. ಋಷಿಗಳು, ಧರ್ಮಿಷ್ಠ ನೃಪರು ಇನ್ನೂ ಅನೇಕ ಮಹಾ ಪುರುಷರು ಭೂರಿ ಭೋಜನವನ್ನು ಸವೆದು ಯುಧಿಷ್ಠಿರನನ್ನು ಹರೆಸುತ್ತಿದ್ದಾರೆ.
ಏಕಾಏಕಿ, ಅರೇ ಏನಿದು ಎಂದು ಎಲ್ಲರೂ ಆಶ್ಚರ್ಯಚಿಕಿತರಾಗುವಂತೆ ಜಗನ್ನಿಯಾಮಕ, ಕೇವಲ ಮನಸಿನಿಂದಲೇ ಸೃಷ್ಟಿ ಸ್ಥಿತಿ ಲಯ ಕಾರ್ಯಗಳನ್ನು ನಿಯಾಮಿಸುವ, ಸರ್ವೋತ್ತಮನಾದ ಶ್ರೀಕೃಷ್ಣ ಪರಮಾತ್ಮ ಅಲ್ಲಿದ್ದ ಉಂಡೆಲೆಗಳನ್ನು ಎತ್ತಲು ಪ್ರಾರಂಭಿಸಿದ.
ಊಹಿಸಿಕೊಂಡರೆ ಕಣ್ಣಾಲಿಗೆಯಲ್ಲಿ ನೀರು ಬರುತ್ತದೆ. ಒಂದು ಸಣ್ಣ ಹುದ್ದೆಯಲ್ಲಿದ್ದರೇ ಈ ರೀತಿಯ ಸಣ್ಣ ಸಣ್ಣ ಕೆಲಸವನ್ನು ಮಾಡಲು ಹಿಂಜರಿಯುವ ನಮಗೆ ಶ್ರೀಕೃಷ್ಣ ಕಲಿಸಿದ ಮಹಾ ಪಾಠ. ಸರ್ವೋತ್ತಮನಾದರೂ ಮುಂಬರುವ ನಮ್ಮಂಥಾ ಪಾಮರರಿಗೆ ಬುದ್ಧಿಕಲಿಸಲೆಂದೇ ಎಂಜಲವನು ಬಳೆದನೇನೋ ಎಂಬಂತಿದೆ.
ಈ ಅದ್ಭುತ ಸನ್ನಿವೇಶವನ್ನು ಪುರಂದರ ದಾಸರು ತಮ್ಮ ಸರಳ ಕನ್ನಡ ಸಾಹಿತ್ಯದ ಮೂಲಕ ನಮಗೆ ಕೊಟ್ಟಿದ್ದಾರೆ.

ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ
ಎಂಜಲವನೇ ಬಳೆದಾ ಶ್ರೀಹರಿ||ಪ||

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ ಸರಗಳ ಹಿಂದಕೆ ಸರಿಸಿ
ಸರ ಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟಕಡೆಗೆ ತಾನು ಬಳೆದು ನಿಂತ.  ||೧||

ಪೊರಕೆಯ ಪಿಡಿದು ಕಸವನೆ ಗುಡಿಸಿ
ಸಗಣಿಯ ನೀರೊಳು ಕಲಿಸಿ ಥಳಿಹಾಕಿ
ಸಾಲುಸಾಲಾಗಿ ಮಣೆಯಿಟ್ಟು ಎಲೆ ಹಾಕಿ
ರಂಗೋಲಿ ಕೊಳವೆಯ ಎಳೆದು ತಾನಿಂತ.  ||೨||

ಎನ್ನ ಕೆಲಸಾಯ್ತೆಂದ ಇನ್ನೇಕೆ ತಡವೆಂದ
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನ ಮಹಿಮ ಶ್ರೀ ಪುರಂದರ ವಿಠಲನು
ಪುಣ್ಯಾತ್ಮರುಂಡೆಲೆಗಳನು ತೆಗೆದು ನಿಂತ ||೩||

ದಾಸರು ವರ್ಣಿಸಿರುವುದನ್ನು ನೋಡಿ, ಹಾಗೇ ನಮ್ಮ ಕಣ್ಣಮುಂದೆ ಗೋಚರವಾಗುತ್ತದೆ. ಕೃಷ್ಣ ಪೀತಾಂಬರವನ್ನು ಟೊಂಕಕ್ಕೆ ಎತ್ತಿ ಕಟ್ಟಿ, ಎಲೆಗಳನೆತ್ತುತ್ತಾ, ಪೊರಕೆ ಹಿಡಿದು ಬಳೆದು, ಗೋಮಯವನ್ನು ಹಚ್ಚಿ ರಂಗೋಲಿ ಹಾಕುವುದು. ದಾಸರೆಂದರೆ ಪುರಂದರ ದಾಸರಯ್ಯಾ..

ಇದಕ್ಕೆ ಅಲ್ಲವೇ ಶ್ರೀಕೃಷ್ಣನನ್ನು ಜಗದ್ಗುರು ಎಂದು ಸಂಭೋದಿಸಿರುವುದು..
ಶ್ರೀ ಕೃಷ್ಣಂ ವಂದೇ ಜಗದ್ಗುರುಮ್||
PC:Google

Wednesday, April 10, 2019

ಬಾಹ್ಯಾಕಾಶದಲ್ಲೊಂದು ತೂತು

ಒಂದೆರಡು ದಿನದ ಹಿಂದೆ complex variable ಅಂತ ಒಂದು ಗಣಿತದ ವಿಷಯ ಪಾಠ ಮಾಡ್ತಿದ್ದೆ. ಅದರಲ್ಲಿ singularity, pole ಮತ್ತು residue ಅಂತ ಬರತ್ತೆ. ಅದೆಲ್ಲ ನಾನಿಲ್ಲಿ ಹೇಳಕ್ಕೆ ಹೋಗ್ತಿಲ್ಲ ಧೈರ್ಯವಾಗಿ ಓದಬಹುದು.
ಸಿಂಗ್ಯುಲಾರಿಟಿ ಅನ್ನೋ ಗಣಿತದ ಭಾಷೆಯನ್ನು ಸುಲಭವಾಗಿ ಅರ್ಥ ಮಾಡಿಸಲು ಭೌತಶಾಸ್ತ್ರದ black hole ಅನ್ನು ಉದಾಹರಣೆಗೆ ತೆಗೆದುಕೊಂಡೆ. ನಮ್ಮಲ್ಲಿ ಒಂದು ಪಂಕ್ಷನ್  f(z) ಅಂತ ಬರತ್ತೆ. ಉದಾಹರಣೆಗೆ f(z)=z². z ಗೆ 3ನ್ನು ಹಾಕಿದರೆ f(z) 9ರ ಕಡೆ ಹೋಗುತ್ತದೆ, 5ನ್ನು ಹಾಕಿದರೆ f(z) 25ರ ಕಡೆ ಹೋಗುತ್ತದೆ. ಹಾಗೇ ಅದರಲ್ಲಿರೋ z ಗೆ ಏನನ್ನು ಹಾಕಿದರೆ ಆ ಫಂಕ್ಷನ್ ಅನಂತದ(infinity) ಕಡೆ ಹೋಗುತ್ತದೆಯೋ ಅದನ್ನು singularity ಅಂತ ಕರೀತಾರೆ. ಅಂದರೆ ಆ ಜಾಗದಲ್ಲಿ ನಿಮಗೆ function ಸಿಗೋದೇ ಇಲ್ಲ. ಅಲ್ಲಿ ಏನಿದೆ ಅಂತ ಗೊತ್ತಾಗಲ್ಲ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಎಲ್ಲಾ zನ values ಅಲ್ಲಿ f(z) ನಿಮ್ಮ ಕಣ್ಣಿಗೆ ಕಾಣ್ತಾ ಇರತ್ತೆ. ಯಾವುದೋ ಒಂದು ಜಾಗದಲ್ಲಿ f(z) ಎಲ್ಲಿ ಹೋಯ್ತು ಅನ್ನೋದೇ ಗೊತ್ತಾಗಲ್ಲ ಹಾಗೆ ಮಾಯ ಆಗಿ ಹೋಗಿಬಿಡತ್ತೆ. ಮತ್ತೆ ನೀವು "f(z) ಎಲ್ಲಿದ್ದೀಯಪ್ಪಾ" ಅಂತ ಕೇಳ್ಬೇಡಿ. ಅದು ಸಿಗಲ್ಲ. ಆ ಜಾಗವನ್ನು ನಾವು ಸಿಂಗ್ಯುಲಾರಿಟಿ ಅಂತ ಕರೀತೀವಿ.
Black hole ಕೂಡ ಹಾಗೆ, Einstein, Hawkins ಎಲ್ಲಾ ಕೊಟ್ಟ theoryಗಳ ಪ್ರಕಾರ black hole ಅನ್ನೋದು ಒಂದು ಜಾಗ, ಅಲ್ಲಿ gravity ಎಷ್ಟಿರತ್ತೆ ಎಂದರೆ, ಆ black hole ನಮ್ಮ ಕಣ್ಣಿಗೆ ಕಾಣ ಸಿಗದ ಬೆಳಕನ್ನೂ ಕೂಡ ಅದರ ಮೂಲಕ ಹಾದು ಹೋಗಲು ಬಿಡುವುದಿಲ್ಲ. ಎಳೆದಿಟ್ಟುಕೊಂಡು ಬಿಡತ್ತೆ.  ಹಾಗಾಗಿ ಆ ಜಗದಲ್ಲಿ ಏನಿದೆ? ಏನಾಗ್ತಿದೆ? ಎಂಬುದು ಗೊತ್ತೇ ಆಗಲ್ಲ, ನಮ್ಮ ಗಣಿತದ singularityತರನೇ.
ಹಾ ನಾನು ಇಲ್ಲಿ ಏನನ್ನು ಹೇಳಲಿಕ್ಕೆ ಬಂದರೆ ಎಂದರೆ ಮೂರು ದಿನದ ಕೆಳಗೆ ತರಗತಿಯಲ್ಲಿ black hole ಅನ್ನೋದು ಇದುವರೆಗೂ ಯಾರಿಗೂ ಕಂಡಿಲ್ಲಾ ಎಲ್ಲಾ just theoretical predictions, public tv  ಅಲ್ಲಿ ಏನಾದರೂ ನೋಡಿದ್ದರೆ ಅದೆಲ್ಲಾ ಯಾವುದೋ ಹಾಲಿವುಡ್ ಮೂವಿಯ ಅನಿಮೇಶನ್ ಅಥವಾ just simulation ಆಗಿರತ್ತೆ. ಅಂತ ಹೇಳಿ ಬಂದಿದ್ದೆ.
ವಿಧಿಯ ಕೈವಾಡ, ಇಂದು ಒಂದು ಘಟನೆ ನಡಿತು.. Event Horizon Telescope projectನ ವಿಜ್ಞಾನಿಗಳು black hole ನ ಫೋಟೋ ಕ್ಲಿಕ್ಕಿಸಿದ್ದಾರೆ.

ನಿಜಕ್ಕೂ science ನ ಪ್ರತಿಯೊಂದು fiction ಗಳೂ ನಿಜವಾಗ್ತಿವೆ.

ಸ್ವಲ್ಪ extra ಮಾಹಿತಿ: black hole ಅಲ್ಲಿ ಏಕೆ ಅಷ್ಟು ಗುರುತ್ವಾಕರ್ಷಣೆ ಇದೆ ಎಂದರೆ, Einstein ಪ್ರಕಾರ ಪ್ರತೀ ವಸ್ತುವಿನಲ್ಲೂ ಗುರುತ್ವಾಕರ್ಷಣಾ ಬಲವಿದೆ. ನ್ಯೂಟನ್ ಹೇಳಿದ ಹಾಗೆ ಸೇಬು ಆತನ ತಲೆಯ ಮೇಲೆ ಬಿದ್ದದ್ದು ಎಷ್ಟು ನಿಜವೋ ಹಾಗೇ ಭೂಮಿಯೂ ಕೂಡ ಸೇಬಿನ ಗುರುತ್ವಾಕರ್ಷಣೆಯ ಬಲದಿಂದ ಸೇಬಿನ ಕಡೆ ಹೋಗಿದ್ದು ನಿಜ.  ತುಂಬಾ negligible. ಇನ್ನು black hole ಅಲ್ಲಿ ಬೆಳಕನ್ನೂ ಎಳೆದಿಟ್ಟುಕೊಳ್ಳುವಷ್ಟು gravity ಹೇಗೆ ಬಂತು? Gravity ಜಾಸ್ತಿ ಆಗಬೇಕೆಂದರೆ ಅದರ (mass) ತೂಕ ಜಾಸ್ತಿ ಆಗಬೇಕು ಹಾಗೆ ಆಗ್ತಾ ಆಗ್ತಾ ಜೊತೆಗೆ ಅದರ ಸಾಂದ್ರತೆ ಕೂಡ ಜಾಸ್ತಿ ಆಗ್ತಾ ಹೋಗಬೇಕು ಎಷ್ಟು ಎಂದರೆ ನಮ್ಮ ದೊಡ್ಡ ಹಿಮಾಲಯವನ್ನು ಒಂದು ಸಾಸಿವೆಯನ್ನು ನೂರು ಭಾಗ ಮಾಡಿದಾಗ ಸಿಗೋ ಭಾಗದ ಗಾತ್ರಕ್ಕೆ ಸಣ್ಣದಾಗಿ ಮಾಡಬೇಕು. ಹೇಗೆ ಸ್ಯೂಟ್‌ಕೇಸಲ್ಲಿ ಬಟ್ಟೆಯನ್ನು ತುರುಕುತ್ತೇವೋ ಹಾಗೇ ಹಿಮಾಲಯವನ್ನು ಸಾಸಿವೆಯ ನೂರನೇ ಒಂದು ಭಾಗದ ಸ್ಯೂಟ್ಕೇಸಲ್ಲಿ ತುರುಕಬೇಕು, ಇನ್ನೊಂದು ಉದಾಹರಣೆಗೆ ಎಂದರೆ ಸೂರ್ಯನನ್ನು ಒಂದು ಹಸಿ ಶೇಂಗದ ಕಾಯಿಯ ಗಾತ್ರಕ್ಕೆ ಸಣ್ಣದಾಗಿಸಿದರೆ ಅದರಲ್ಲಿ black hole ನಷ್ಟು gravity ಬರುತ್ತದೆ.
ಗ್ರಾವಿಟಿಗೂ ತೂಕಕ್ಕೂ ಏನು ಸಂಬಂಧ?
ಒಂದು ಶಾಮಿಯಾನದ ಮೇಲೆ ಕಲ್ಲನ್ನು ಹಾಕಿ, ಈಗ ಆ ಕಲ್ಲಿನ ಹತ್ತಿರ ಏನನ್ನಾದರೂ ಇಡಿ. ಆ ವಸ್ತು ಕಲ್ಲಿನ ಕಡೆ ಹೊಗುತ್ತದೆಯಲ್ಲವೇ? ಅದೇ ಗುರುತ್ವಾಕರ್ಷಣೆ. ಆ ಕಲ್ಲಿನ ತೂಕದಿಂದ ಇನ್ನೊಂದು ವಸ್ತುವನ್ನು ಆಕರ್ಷಿಸಿತೋ ಹಾಗೆ ವಿಶ್ವದಲ್ಲೂ ಕೂಡ. ನಮ್ಮ ಗ್ರಹಗಳು ಸೂರ್ಯ ನಕ್ಷತ್ರಗಳೆಲ್ಲಾ ವಿಶ್ವವೆಂಬ ಶಾಮಿಯಾನದ ಮೇಲೆ ಹಾಕಿರುವ ಕಲ್ಲುಗಳು. ಕಲ್ಲಿನ ಭಾರ ಹೆಚ್ಚಾಗುತ್ತಾ ಹೋದರೆ ಹೇಗೆ ಶಾಮಿಯಾನ ಹರೆದು ರಂಧ್ರವಾಗುತ್ತದೋ ಹಾಗೇ black hole ಕೂಡ ಹಲವು ಕಾರಣಗಳಿಂದ ಹಲವಾರು ಗ್ಯಾಲಕ್ಸಿಗಳು ಕುಗ್ಗುತ್ತಾ ಹೋದ ಹಾಗೆ, ಅಲ್ಲಿ  ಏನೂ ಕಾಣ ಸಿಗದಂತೆ ಆಗಿರುವ ಬಾಹ್ಯಾಕಾಶದ ರಂಧ್ರ.
ಅಂತೂ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲೊಂದು ತೂತನ್ನು ಕಂಡು ಹಿಡಿದೇ ಬಿಟ್ಟರು.😀

Friday, September 14, 2018

ದಾಸರ ವಿಶೇಷ ಹಾಡುಗಳು

ಮನ್ಮಥ ಜನಕನ ಮರೆತ ಮನುಜರು ಮರ ಮರ ಮರ ಮರ ಮರ ಮರ ||ಪ||
ಚಿನ್ಮಯ ರೂಪವ ಚಿಂತಿಸದವನು ಛೀ ಛೀ ಛೀ ಛೀ ಛೀ ಮನುಜ||ಅ||
ಸುರರುವಂದ್ಯನ ಸುತ್ತದ ಕಾಲು ಸೂಳೆ ಮನೆಯ ಮಂಚದ ಕಾಲು
ಗರುಡಗಮನಗೆ ನಮಿಪದ ಶಿರವೂ
ಉರಗನ ವಿಷ ತಲೆಯೂ||
ನಾರಾಯಣ ಕಥೆ ಕೇಳದ ಕಿವಿಗಳು
ತೋರುವ ಮಾಳಿಗೆ ನಾಳಗಳು
ನರಹರಿ ರೂಪವ ನೋಡದ ಕಣ್ಣು
ನವಿಲುಗರಿಯ ಕಣ್ಣು||
ಮಂಗಳ ಮೂರ್ತಿಯ ಪಾಡದ ಕಂಠ
ಒಡೆದು ಹೋದ ಹರವಿಯ ಕಂಠ
ಮಂಗಳಾಂಗ ಶ್ರೀ ಪುರಂದರ ವಿಠಲನ
ಮರೆತವ ಅಗಸರ ಕತ್ತೆ ನಿಜವೂ||



ರಾಗ ನವರೋಜು /ಆದಿ ತಾಳ

ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ || ಪಲ್ಲವಿ ||

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ || ೧ ||

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ || ೨ ||

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವ್ ಚರಿಸುವಿರಿ || ೩ ||




ರಾಗ ಧನಶ್ರೀ ಅಟತಾಳ)

ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ||
ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ||

ಅಡಿಗೆಮನೆಯಲ್ಲಿ ಗಡಬಡ ಬರುವುದು
ಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು ||

ಹಾಲ ಕುಡಿವ ಬಗೆ ಮೂಲೆಲಿ ಕೂತುಕೊಂಡು
ಹಾಲಿನ ಮೇಲಿನ ಕೆನೆ ಕಾಲಲಿ ತಿಂದು ||

ಹಾಗಲು ಹೀಗಲು ಮೀಸಲಾಕಿದ ಹಾಲು
ಪುರಂದರವಿಠಲಗೆ ಸೇರಿತು ಮಾಲು ||



ಲೇಖನದಲ್ಲಿ ಪ್ರಸ್ತಾವಿಸಿದ ಉಮಾ-ರಮಾ ಸಂವಾದದ ಪದ್ಯ ಇಲ್ಲಿದೆ. ನೀವು ದಾಖಲಿಸಿರುವ ಪದ್ಯದಲ್ಲೂ ದಶಾವತಾರಗಳ ಬಣ್ಣನೆ ಇರುವುದು ಸ್ವಾರಸ್ಯವನ್ನು ಹೆಚ್ಚಿಸಿದೆ!

ತರಳೆ ರನ್ನೆ ಕಪ್ಪು ಮೈಯವ ಯಾತರ ಚೆಲುವನೇ ।
ಕರಿಯ ಜಟೆಯ ಜೋಗಿಗಿಂತ ಉತ್ತಮನಲವೆನೆ ।।
ಜಲಧಿಯೊಳಗೆ ವಾಸವೇನೆ ಮನೆಗಳಿಲ್ಲವೆ ।
ಲಲನೆ ಕೇಳು ಮಸಣಕ್ಕಿಂತ ಲೇಸು ಅಲ್ಲವೇ ।।
ಮಂದರಗಿರಿಯ ಪೊತ್ತಿಹುದು ಏನು ಚಂದವೇ ।
ಕಂದನ ಕೊರಳು ಕತ್ತರಿಸುವುದು ಯಾವ ನ್ಯಾಯವೇ ।।
ಮಣ್ಣನಗೆದು ಬೇರ ಮೆಲುವುದೇನು ಸಾಧುವೇ ।
ತನ್ನ ಕೈಯಲ್ಲಿ ಕಪಾಲ ಪಿಡಿವುದು ಯಾವ ನ್ಯಾಯವೇ ।।
ಮುತ್ತಿನ ಹಾರ ಇರಲು ಕರುಳ ಮಾಲೆಯ ಧರಿಪರೇ ।
ನಿತ್ಯ ರುಂಡ ಮಾಲೆಯ ಧರಿಸೋದು ಯಾವ ನ್ಯಾಯವೇ ।।
ಗಿಡ್ಡನಾಗಿ ಬೆಳೆದು ಅಳೆವುದು ಏನು ನ್ಯಾಯವೇ ।
ಗುಡ್ಡದ ಮಗಳ ತಂದೆಗೆ ಮುನಿಯೋದ್ಯಾವ ನ್ಯಾಯವೇ ।।
ಪಿತನ ಮಾತ ಕೇಳಿ ಮಾತೆಯ ಶಿರವನಳಿವರೇ ।
ಕ್ಷಿತಿಕಂಠನಾಗಿ ಇರುವುದು ಯಾವ ನ್ಯಾಯವೇ ।।
ಕೋಡಗ ಕರಡಿ ಕಪಿಗಳ ಹಿಂಡು ಬಂಧು ಬಳಗವೇ ।
ಕೂಡಿ ಬಂದ ಭೂತ ಬಳಗ ಜ್ಞಾತಿ ಸಂಬಂಧವೇ ।।
ಹಾವಿನ ಹೆಡೆಯ ತುಳಿವರೇನೇ ಅಂಜಿಕಿಲ್ಲವೇ ।
ಹಾವೇ ಮೈಯಿಗೆ ಸುತ್ತಿ ಇರಲು ಹ್ಯಾಂಗೆ ಜೀವಿಪನೇ ।।
ಬತ್ತಲೆ ಇರುವನೇನು ಅವಗೆ ನಾಚಿಕಿಲ್ಲವೇ ।
ಸತ್ತ ಗಜದ ಚರ್ಮ ಹೊದೆಯಲು ಹೇಸಿಕಿಲ್ಲವೇ ।
ಉತ್ತಮ ತೇಜ ಇರಲು ಧರೆಯೊಳು ಹದ್ದನು ಏರ್ವರೇ ।
ಎತ್ತಿನ ಬೆನ್ನು ಏರಿದವರು ಬುದ್ಧಿವಂತರೇ ।।
ಹರಿಹರರಿಗೆ ಸಾಮ್ಯವೇನೆ ಹೇಳೆ ರುಕ್ಮಿಣೀ ।
ಪುರಂದರ ವಿಟ್ಠಲ ಸರ್ವೋತ್ತಮ ಹೇಳು ಮನದಣಿ ।।
* * *

Tuesday, January 16, 2018

ದಾಸರೆಂದರೆ ಪುರಂದರ ದಾಸರಯ್ಯ

ದಾಸರೆಂದರೆ ಪುರಂದರ ದಾಸರಯ್ಯ ಎಂದು ಪುರಂದರ ದಾಸರ ಆರಾಧನೆ ಪ್ರಯುಕ್ತ ಕೆಲವು ದಿನಗಳು ಪ್ಹೆಸ್ಬುಕ್ಕಲ್ಲಿ ಒಂದಷ್ಟು ಹಾಡುಗಳನ್ನು ಹಾಕುತಿದ್ದೆ. ಹಾಗೆ ಕೆಳಗಿನ ಚಿತ್ರ ತುಂಬಾ ಹಿಂದೆ ನಾನು ಬಿಡಿಸಿದ್ದು. ಅದಕ್ಕೆ ಫೋಟೋಶಾಪಲ್ಲಿ ಹೊಸಾ ಲುಕ್ ಕೊಡೋಣ ಎಂದೆನಿಸಿ ಹೊಸ ಟಚ್ ಕೊಟ್ಟಿದ್ದಾಯ್ತು. ಹಾಗೆಯೇ ದಾಸರ ಬಗ್ಗೆ ಒಂದೆರಡು ಅತಿ ಕಡಿಮೆ ಸಾಲುಗಳು ಬರೆದಿದ್ದೇನೆ. ಯಾರು ಪುರಂದರ ದಾಸರು? ಮೂಲತಃ ಅವರು ನಾರದರ ಅವತಾರ. ಸದಾ ನಾರಾಯಣನ ನಾಮ ಸ್ಮರಣೆ ಮಾಡುವ ನಾರದರ ಅಂಶವಿದೆ ಅಂದ ಮೇಲೆ ಕೇಳಬೇಕೇ? ಹರಿಯನ್ನು ಹಾಡಿಪೊಗಳುವುದರಲ್ಲಿ ಎತ್ತಿದ ಕೈ. ಅಂದು ನಾರದರಾಗಿ ಕಯಾದುವಿನ ಗರ್ಭದಲ್ಲಿದ್ದ ಪ್ರಹ್ಲಾದನಿಗೆ ಸಕಲ ಪಾಠ ಮಾಡಿದವರು ಕಲಿಯುಗದಲ್ಲಿ ಅದೇ ಪ್ರಹ್ಲಾದರಾಯರ ಅವತಾರವಾದ ಶ್ರೀ ವ್ಯಾಸರಾಜರ ಬಳಿ ದಾಸತ್ವವನ್ನು ಗಳಿಸಿದವರು. ವೇದ, ಶಾಸ್ತ್ರ, ಶೃತಿ ಸ್ಮೃತಿಗಳೆಲ್ಲಾ ಪಾಮರರಿಗೆ ಅರ್ಥವಾಗುವ ಹಾಗೆ ಸರಳ ಕನ್ನಡದಲ್ಲಿ ಹಾಡುಗಳ ರೂಪದಲ್ಲಿ ಬರೆದವರು. ಶಾಸ್ತ್ರೀಯ ಸಂಗೀತವನ್ನು ಸುಲಭಗೊಳಿಸಿ ಕರ್ನಾಟಕ ಸಂಗೀತ ಪಿತಾಮಹರಾದವರು. ವಿಜಯ ನಗರ ಸಾಮ್ರಾಜ್ಯದಲ್ಲಿದ್ದು ಆಚಾರ್ಯ ಮದ್ವಸಾಮ್ರಾಜ್ಯದಲ್ಲಿ ದಾಸರಾಗಿ ರಾರಾಜಿಸಿದವರು. ದಾಸರ ಹಾಡಿನಲ್ಲಿರುವ ವಿಶೇಷವೇನು? ಮೂವತ್ತನೇ ವಯಸ್ಸಿನಲ್ಲಿ ಹರಿಯ ಕೃಪೆಯಿಂದ ಸಂಸಾರ, ಧನ ಕನಕದಲ್ಲಿ ವೈರಾಗ್ಯ ಮೂಡಿ 'ಪುರಂದರ ವಿಠಲ' ಎಂಬ ಅಂಕಿತ ನಾಮದಲ್ಲಿ ಐವತ್ತು ವರ್ಷಗಳ ಕಾಲ ಸುಮಾರು 45,000 ಕೀರ್ತನೆಗಳನ್ನು ರಚಿಸಿದವರು. ಅಂದರೆ ವರ್ಷಕ್ಕೆ ಸರಿಸುಮಾರು ಸಾವಿರ ಹಾಡುಗಳು. ಅವರ ಹಾಡುಗಳನ್ನು ಗಮನಿಸಿದರೆ, ಅದರಲ್ಲಿ ಇರದ ವಿಷಯಗಳೇ ಇಲ್ಲ. ಹರಿ ಭಕ್ತಿ, ತತ್ವಶಾಸ್ತ್ರದಿಂದ ಹಿಡಿದು ಹಾಸ್ಯ, ಅಣಕು ಪಿಳ್ಳಾರಿ ಗೀತೆಯವರೆಗೂ ಎಲ್ಲಾ ರೀತಿಯ ಹಾಡುಗಳನ್ನು ಬರೆದಿದ್ದಾರೆ. 'ಮನೆಯೊಳಗಾಡೋ ಗೋವಿಂದ, ತೋಳು ತೋಳು ತೋಳು ರಂಗ ತೋಳನ್ನಾಡೈ- ಎಂದು ಯಶೋದೆ ಕೃಷ್ಣನಿಗೆ ಲಾಲನೆ ಪಾಲನೆ ಮಾಡಿದ ರೀತಿಯನ್ನು ಸ್ವತಃ ತಾವೇ ಮಾಡಿದ್ದಾರೇನೋ ಎಂಬಂತೆ ಕಣ್ಣ ಮುಂದೆ ತಂದಿಟ್ಟಿದ್ದಲ್ಲದೆ, 'ಕೇಳಲೊಲ್ಲನೇ ಎನ್ನ ಮಾತನು ರಂಗ' ಎಂದು ಗೋಪಿಯಾಗಿ ಯಶೋದೆಯ ಮುಂದೆ ಕೃಷ್ಣನ ಬಗ್ಗೆ ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ. ಅದೆಷ್ಟು ರೀತಿ ಹತ್ತು ಸಾಲುಗಳಲ್ಲಿ ದಶಾವತಾರವನ್ನು ವರ್ಣಿಸಿದ್ದಾರೋ.. ಆಚಾರವಿಲ್ಲದ ನಾಲಗೆ, ಕೆರೆಯ ನೀರನು ಕೆರೆಗೆ ಚೆಲ್ಲಿ, ಜಾಲಿಯ ಮರದಂತೆ, ಮಾನವ ಜನ್ಮ ದೊಡ್ಡದು, ಆರು ಹಿತವರು ನಿನಗೆ- ಹೀಗೆ ಕಲಿಯುಗದ ಮಾನವರಿಗೆ ಮಾಡಬೇಕಾದ ಎಲ್ಲಾ ಉಪದೇಶಗಳಿರುವ ಹಾಡುಗಳಿವೆ. ಕಲ್ಲು ಸಕ್ಕರೆ ಕೊಳ್ಳಿರೋ ಎಂದು ಸಕಲ ವೇದಶಾಸ್ತ್ರಗಳ ಸಾರವನ್ನು ನಮ್ಮಂಥಾ ಪಾಮರರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಹಲವು ರಚನೆಗಳಿವೆ. ತುರುಕರು ಕರೆದರೆ ಉಣಬಹುದು, ಐದು ಕಾಲಿನ ಮಂಚ ತುಂಟ ಮಲಗಿದ್ದ, ತಂದೇ ತಂದೇ ತಂದೆನ್ನ ತಂದೆ ನಾ ಬಂದೆ, ಇಕ್ಕಲಾರೆ ಕೈಂಜಲು, ಊಟಕ್ಕೆ ಬಂದೆವು ನಾವು, ಒಂಬತ್ತು ಬಾಗಿಲೊಳು ಒಂದು ದೀಪವ ಹಚ್ಚಿ- ಎಂಬ ಒಗಟುಗಳುಳ್ಳ ಪದ್ಯಗಳಂತು ನಮ್ಮ ಬುದ್ದಿಮತ್ತೆಗೆ ಸವಾಲನ್ನು ಎಸೆಯುತ್ತವೆ. ನಾನೇಕೇ ಬಡವನೋ ನಾನೇಕೆ ಪರದೇಸಿ, ಎನಗೂ ಆಣೆ ರಂಗ ನಿನಗೂ ಆಣೆ- ಎಂಬ ಭಕ್ತಿ ಮತ್ತು ಸಲಗೆ ಎರಡೂ ಬೆರತಿರುವ ಕೇಳುಗರಿಗೆ ದಾರಿ ತೋರುವುದರ ಜೊತೆ ಮನಸಿಗೆ ಮುದ ನೀಡುವ ರಚನೆಗಳಿವೆ. ಕೀರ್ತನೆಗಳ ಜೊತೆಯಲ್ಲಿ ವಿವಿಧ ಪ್ರಕಾರಗಳಾದ ಉಗಾಭೋಗಗಳು, ಮುಂಡಿಗೆಗಳು(ಒಗಟಿನ ರೀತಿಯ ಪದ್ಯಗಳು) ಹಾಗೂ ಸುಳಾದಿಗಳನ್ನೂ(ಸುಲಭದ ಹಾದಿ ಅಂದರೆ ತತ್ವವಾದದ ತಿರುಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸುಲಭದ ಹಾದಿ ಈ ಸುಳಾದಿಗಳು) ರಚಿಸಿದ್ದಾರೆ. ಪ್ರಪಂಚದಲ್ಲಿ ಸಾಹಿತ್ಯಕ್ಕಾಗಿ ಕೊಡುವ ಪ್ರತಿಯೊಂದು ಪ್ರಶಸ್ತಿಗಳು ಇವರಿಗೆ ಸಲ್ಲಿದರೆ ತೀರಾ ಕಡಿಮೆಯಾಗುತ್ತದೇನೋ. ಹಾಗಾಗಿಯೇ ಗುರುಗಳಾದ ಶ್ರೀ ವ್ಯಾಸರಾಜರಿಂದಲೇ ದಾಸರೆಂದರೆ ಪುರಂದರ ದಾಸರಯ್ಯ ಎಂದು ಹೊಗಳಿಸಿಕೊಂಡವರಲ್ಲವೇ. ಅವರ ಹಾಡುಗಳ ಜೊತೆಯಲ್ಲಿ ಇನ್ನೂ ಅನೇಕ ಹರಿ ದಾಸರ ಹಾಡುಗಳನ್ನು ಈ ಆಪ್ ನಲ್ಲಿ ಪಡೆಯಬಹುದು. https://play.google.com/store/apps/details?id=pro.pada.android.haridasa&hl=en