Tuesday, September 22, 2015

ಪುರಾಣ vs ಇತಿಹಾಸ

‪#‎ನನಗನಿಸಿದ್ದು‬
ನನಗೆ ಕಲಿಸಿದ ಹಾಗೆ ಪುರಾಣಗಳಿಗೂ ಇತಿಹಾಸಕ್ಕೂ ಇರುವ ವ್ಯತ್ಯಾಸವೇನೆಂದರೆ, ಪುರಾಣಗಳು ಕೇವಲ ಕಥೆಗಳು. ರಾಮನ ಕಥೆ, ಕೃಷ್ಣನ ಕಥೆ ಎಂದು ನಮಗೆ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇತಿಹಾಸ ಎಂದೆಂದಿಗೂ ನಿಜ, ಟಿಪ್ಪು ಎಂಬ ಮಹಾ ರಾಜ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನು, ಮಕ್ಕಳ ಪ್ರೇಮಿ ಚಾಚ ನೆಹರು ಎಂದು ಉದಾಹರಣೆಗಳನ್ನು ಕೊಡುತ್ತಿದ್ದರು. ಆದರೆ ಇವಾಗಿನ ಬೆಳವಣಿಗೆಗಳ ಪ್ರಕಾರ ಇತಿಹಾಸ ತನ್ನ ರಾಜನ ಒಲಿಸಿಕೊಳ್ಳುವುದಕ್ಕಾಗಿ, ಪ್ರಶಸ್ತಿ, ಸಂಭಾವನೆ ಪಡೆಯುವುದಕ್ಕಾಗಿ ಬರೆದಿರುವುದು. ಪುರಾಣಗಳು ಎಂದೆಂದಿಗೂ ಸತ್ಯ ಹಾಗು ಬದಲಾಗದ ಮಹಾ ಗ್ರಂಥಗಳು. ಈ ಇತಿಹಾಸವನ್ನು ಕಥೆಗಳೆಂದು, ಪುರಾಣಗಳನ್ನು ಸತ್ಯವೆಂದು ತಿಳಿಸಿಕೊಟ್ಟ ಅಂತರ್ಜಾಲ ಹಾಗು ತಂತ್ರಜ್ಞಾನಕ್ಕೆ ಶರಣು.
ಸುಮ್ಮನೇ ಸಮಾಜ ಮೇಷ್ಟ್ರತ್ರ ಮೊಘಲರ ದೊರೆ ಗೊತ್ತಿಲ್ಲದೇ ಪೇಚಾಡಿ ಮುಷ್ಟಿ ಏಟು ತಿಂದಿದ್ದೆ, ಹತ್ತತ್ತಸಲ ಇತಿಹಾಸ ಬರ್ದಿದ್ದೆ, ಹುಡುಗಿರ ಮುಂದೆ ಮರ್ಯಾದೆ ತಗೆದು ಹೊರಗೆ ಹಾಕಿದ್ರು. ಇದು ನಮ್ಮೆಲ್ಲರ ಇತಿಹಾಸ.. ಅನ್ಯಾಯವಾಗಿ ನನ್ನ ಹೊಡೆದ್ರಲ್ಲಾ ಮೇಷ್ಟ್ರೇ.. ಇನ್ಮುಂದಾದ್ರು ಅಜ್ಜಿ ಹತ್ರ ಕೇಳಿದ್ದ ಕಥೆ ಇತಿಹಾಸ ಪುಸ್ತಕದಲ್ಲಿ ಬರ್ಲಿ. ಏನಂತೀರ?

ref:
https://www.facebook.com/1555043871409222/photos/a.1555049441408665.1073741827.1555043871409222/1654923281421280/?type=3

Wednesday, September 16, 2015

ಸ್ವಲ್ಪ ಭಾವನಾತ್ಮಕವಾಗಿ ಯೋಚಿಸೋಣ.

ನಮ್ಮ ದೇಶದ ಸಂಸ್ಕೃತಿ ಹೇಗಿದೆಯೆಂದರೆ ಇಂದು ಮಾರುಕಟ್ಟೆಗೆ ಹೋದಾಗ ‪#‎ನನಗನಿಸಿದ್ದು‬ .
ಗಣಪತಿ ಹಬ್ಬ ಅಥವ ಯಾವುದೇ ಹಬ್ಬ ಬರಿಯ ದೇವತಾರಾಧನೆಯಷ್ಟೇ ಅಲ್ಲದೇ ರೈತರ ಹಾಗು ಅನೇಕ ವ್ಯಾಪಾರಿಗಳ ಸುಗ್ಗಿಯ ಕಾಲ ಕೂಡ. ನಮ್ಮ ಪೂರ್ವಿಕರು ಏನೆ ಮಾಡಿದರೂ ಅದರ ಹಿಂದೆ ನೈಸರ್ಗಿಕವಾಗಿ ಜನಜೀವನಕ್ಕೆ ಹತ್ತಿರವಾಗೇ ಇರುತ್ತದೆ. ನಾನಿಲ್ಲಿ ವೈಜ್ಞಾನಿಕ ಕಾರಣ ಹೇಳುವುದಿಲ್ಲ. ನಿಮ್ಮ ವೈಜ್ಞಾನಿಕ ಕನ್ನಡಕ ಕಳಚಿ, ಚಕ್ರವರ್ತಿ ಸೂಲಿಬೆಲೆ ಹೇಳಿದಂತೆ, ಎಲ್ಲಿ ವಿಜ್ಞಾನ ಕೊನೆಯಾಗುತ್ತದೋ ಅಲ್ಲಿ ನಮ್ಮ ವೇದಗಳ ಜ್ಞಾನ ಪ್ರಾರಂಭ, ಹಾಗಾಗಿ ಸ್ವಲ್ಪ ಭಾವನಾತ್ಮಕವಾಗಿ ಯೋಚಿಸೋಣ.
ಹಬ್ಬಗಳಂದು ಹೂವು, ಹಣ್ಣು, ತರಕಾರಿ ಮಾರುವವರಿಗೆ ಎಂದಿಲ್ಲದ ಆದಾಯ ಹಾಗು ಸಂತೋಷ. ಬಾಳೆಗಿಡದಲ್ಲಿ ಬಾಳೆಹಣ್ಣಷ್ಟೇ ಜನ ತಿನ್ನಲು ಉಪಯೋಗಿಸಿದರೆ, ಹಬ್ಬ ಹರಿದಿನಗಳಲ್ಲಿ ಬಾಳೆಕೊಂಬು, ಬಾಳೆ ಎಲೆಗಳಿಗೆ ಎಲ್ಲಿಲ್ಲದ ಬೇಡಿಕೆ. ನಗರಗಳಲ್ಲಿ ಅನಾಯಾಸವಾಗಿ ಮಾವಿನ ಸೊಪ್ಪು, ಗರಿಕೆಗೂ ಗಳಿಕೆ ಬರುತ್ತದೆ. ಅಂದಮೇಲೆ ಈ ಬಾಳೆ ಬೆಳೆದವರಿಗೆ ಡಬ್ಬಲ್ ಧಮಾಕವಲ್ಲವೇ? ಯಾವ ಜನಪ್ರಿಯತೆ ಕೋರದ, ತನ್ನ (ಬೆಲೆ ಕಟ್ಟಲಾಗದ)ಕಲೆಯನ್ನು ಸಣ್ಣ ಮೊತ್ತಕ್ಕೆ (ಮುಳುಗಿಸುತ್ತಾರೆಂದು ಗೊತ್ತಿದ್ದು)ಮಾರುವ ಕುಂಬಾರರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತದೆಯಲ್ಲವೇ?
ಇನ್ನು ಭಾವನಾತ್ಮಕವಾಗಿ ಯೋಚಿಸೋಣ, ನಾಳೆ ನಮ್ಮ ಮನೆಯವರೆಲ್ಲಾ ಒಟ್ಟಿಗೆ ಸೇರುತ್ತಿದ್ದೇವೆ. ಎಲ್ಲೆಲ್ಲೋ ವಾಸವಾಗಿರುವ ನಾವೆಲ್ಲ ಹಬ್ಬಕ್ಕಾದರೂ ಸೇರಿ ಖುಶಿಯಾಗಿ ಕಳೆಯುವುದಕ್ಕೆ ಸಹಾಯ ಮಾಡುತ್ತವೆ ಈ ಹಬ್ಬಗಳು. ಪಟಾಕಿ ಹೊಡೆಯುವ ಸಣ್ಣ ಮಕ್ಕಳನ್ನು ನೋಡಿದಾಗ ತಮ್ಮ school, class, tables, formulas ಎಲ್ಲಾ ಮರೆತು ಸಂತೋಷದಿಂದಿರುತ್ತವೆ. ದಿನವಿಡೀ ಕೆಲಸ ಮಾಡುವ ಮನೆಯ ಮಹಿಳೆಯರಿಗೆ ಹಬ್ಬದ ದಿನ ಕೆಲಸ ಎರಡಷ್ಟಾದರೂ ಚೂರೂ ನೋಯಿಸಿಕೊಳ್ಳದೇ ಸಡಗರದಿಂದ ಓಡಾಡಲು ಎಲ್ಲಿಂದ ಶಕ್ತಿ ಬರುತ್ತದೆ, ಹಬ್ಬಗಳಿಂದ ತಾನೆ?
ನಮ್ಮ ಸರಕಾರದ ಬೊಕ್ಕಸಕ್ಕೂ ಹಬ್ಬಗಳು ಸಹಾಯ ಮಾಡುತ್ತವೆ. ಹೇಗೆ ಗೊತ್ತೇ? ಈ 3-4 ದಿನ ಬಸ್ಸುಗಳು ತುಂಬಿ ತುಳುಕುತ್ತವೆ.ಖುಷಿಯಾಗಿ ಕೆಲಸ ಮಾಡುವ ಜಾಗ ಹೊಸತಾಗಿ ಸಡಗರದಿಂದ ಹೊಳೆಯುತ್ತಿರುತ್ತವೆ. ನಂತರದ 3-4 ದಿನ ಕೆಲಸ ಮಾಡುವರ ಮನಸ್ಸು ಒಂದಿಷ್ಟು ಹೆಚ್ಚೇ ದುಡಿಸುತ್ತದೆ.
ಹಬ್ಬಗಳಂದು ಹಣದ ಬಗ್ಗೆ ಯಾರೂ ಯೊಚಿಸುವುದಿಲ್ಲ. ಅಂದು ಅತಿ ಹೆಚ್ಚು ವಹಿವಾಟು ನಡೆಯುತ್ತದೆ. ಇಷ್ಟೆಲ್ಲಾ ಉಪಯೋಗವಿರುವ ಹಬ್ಬಗಳ ಆಚರಣೆ ಮೂಢನಂಬಿಕೆ ಎನ್ನುವ ಈ ಬುದ್ದಿಜೀವಿಗಳಿಗೂ ಹಬ್ಬ ಪುಕ್ಕಸಟ್ಟೆ ಪ್ರಚಾರ ಕೊಡುತ್ತವೆ.
ನೀವೇ ಹೇಳಿ, ಈ ಮನುಷ್ಯ ಸಮಾಜ ಜೀವಿ, ವಹಿವಾತಿನಿಂದ ತನ್ನಲ್ಲಿದ್ದ ಸಂಪತ್ತನ್ನು ಇನ್ನೊಬ್ಬನಿಗೆ transfer ಮಾಡಿ ತಾನೂ ಸಂತೊಷ ಪಟ್ಟು ಮತ್ತೊಬ್ಬನನ್ನೂ ಸಂತೋಷ ಪಡಿಸುವ ಹಬ್ಬಗಳು ಮೂಡನಂಬಿಕೆ ಹೇಗಾಗುತ್ತವೆ? ನನ್ನ ಅಭಿಪ್ರಾಯ ಇಷ್ಟೇ, ಯಾವುದೇಕಾರಣಕ್ಕೂ ಈ ಬುದ್ದಿಜೀವಿಗಳ, ಪ್ರಗತಿಪರರ ಮಾತುಗಳಿಗೆ ಕಿವಿಗೊಡಬೇಡಿ, ನಿಮ್ಮ ಶಕ್ತ್ಯಾನುಸಾರ ಸಂಭ್ರಮಿಸಿ, ನಿಮ್ಮ ಸಂಭ್ರಮದ ಹಿಂದೆ ಎಷ್ಟೋ ವ್ಯಾಪಾರಿಗಳ, ರೈತರ ಸಂಭ್ರಮ ಅಡಗಿದೆ. ವಿಶಾಲವಾಗಿ ಯೋಚಿಸಿ. ನಮ್ಮ ಪೂರ್ವಿಕರು ಸಾವಿರಾರು ವರ್ಷ ತಪಗೈದು ಸಂಪಾದಿಸಿದ ಜ್ಞಾನದಿಂದ ಮಾಡಿದ ಆಚರಣೆಗಳನ್ನು ವಿರೋಧಿಸುವ ಈ ಲದ್ದಿ ಜೀವಿಗಳ ತರ್ಕ ಸಮವಲ್ಲ.
ಹಾಗೇ ಇನ್ನೊಂದು, ತಮಾಷೆಗೆಂದೂ ಉಪ್ಪಿ2 ಗಣೇಶ, ಬಾಹುಬಲಿ ಗಣೇಶ ಇಂಥವುಗಳಿಗೆ ಪ್ರೋತ್ಸಾಹಿಸಬೇಡಿ. ಏಕೆಂದರೆ ನಮಗೆ ದೇವರ ರೂಪ ಗೊತ್ತಿಲ್ಲ, ನಮ್ಮಂಥವರಿಗಾಗೇ ನಮ್ಮ ಋಷಿಮುನಿಗಳು ಸಾವಿರಾರು ವರ್ಷ ಸಾಧನೆಗೈದು, ದೇವರನ್ನು ಸಾಕ್ಷಾತ್ಕರಿಸಿ ರೂಪಗಳ ವರ್ಣನೆ ಕೊಟ್ಟಿದ್ದಾರೆ. ಅದನ್ನೇ ಆರಾಧಿಸೋಣ. ನಮ್ಮ ಸಂಸ್ಕೃತಿಯ ರಕ್ಷಣೆ ನಮ್ಮ ಕೈಲಿದೆ.
ಅಂದಹಾಗೆ ಕೊನೆಯದಾಗಿ,
ಗಣೇಶ ಬಂದ, ಕಾಯಿಕಡುಬು ತಿಂದ
ಚಿಕ್ಕ ಕೆರೆಲಿ ಎದ್ದ, ದೊಡ್ಡ ಕೆರೆಲಿ ಮುಳುಗಿದ
ಗಣಪತಿ ಬೊಪ್ಪ ????


Sunday, September 13, 2015

ಆಯುಷ್ಮಾನ್ ಭವ

ಅದ್ಯಾವುದೋ day cake cut ಮಾಡಿದ್ದನ್ನು ನೋಡಿ today ‪#‎ನನಗನಿಸಿದ್ದು‬ .
ಭಾರತಕ್ಕೆ ಇಲ್ಲಿಯ ಸಂಸ್ಕೃತಿಯ ಬಗ್ಗೆ ಅಪಾರವಾಗಿ ಕೇಳಿ ಕುತೂಹಲದಿಂದ ಬಂದಿದ್ದ ಬ್ರಿಟೀಷ್ ವ್ಯಕ್ತಿ ತಾನು ಉಳಿದುಕೊಂಡಿದ್ದ ಹೋಟೆಲ್ ರೂಮ್ ನ ಪಕ್ಕದ ರೂಮ್ ಹುಡುಗ "take this uncle, today is my birthday" ಎಂದು cake ತಂದು ಕೊಟ್ಟಾಗ ಮುಗುಳ್ನಕ್ಕನಂತೆ ಆ ಬ್ರಿಟೀಷ್. ನಂತರ ಒಂದು thanks ಹೇಳಿ "where did you get this cake?" ಎಂದು ಕೇಳಿದಾಗ from my dad ಎಂದು ಬಂದ ಉತ್ತರ ಮುಗ್ಡವೆನಿಸಿದರೂ cake ಜನಕರಾದ ಬ್ರಿಟೀಷ ವ್ಯಕ್ತಿಗೆ ತಾವು ಮಾಡಿದ್ದ ಆಕ್ರಮಣದ ಪ್ರಭಾವ ಅರಿವಾಗುತ್ತದೆ. ಅಷ್ಟೇ ಸಾಲದೆಂದು ಕೆಳಗಡೆ ಇದ್ದ party hall ಗೆ ಹೋದ ಅವನಿಗೆ, ಅಲ್ಲಿದ್ದ ಬಲೂನ್ಸ್, ಹಾಕಿದ್ದ ಹ್ಯಾಟ್ ಗಳು, ದ್ವಿಮುಖಿಗಳಾಗಿ ತೋರಿಕೆಗಾಗಿ ನಗು ನಗುತ್ತಾ ಮಾತಾಡುತ್ತಿದ್ದ ಮುಖಗಳನ್ನು ನೋಡಿದಾಗ, ತನ್ನ ಕಲ್ಪನೆಯ ಭಾರತ ಇದೇನಾ? ಎಂದು ರೂಮ್ ಗೆ ಹಿಂತಿರುಗಿದನಂತೆ. ಮಾರನೇ ದಿನ ಹೊರಬಂದಾಗ ದಾರಿಯಲ್ಲಿ greetings cardಗಳನ್ನು ನೋಡಿ ಕುತೂಹಲದಿಂದ ಹತ್ತಿರ ಹೋಗಿ ಓದಿದಾಗ happy valentines day ಎಂದು ಇದ್ದಿದ್ದನ್ನು ನೋಡಿ ಮನಸ್ಸಿನಲ್ಲೇ ಬೇಸರಗೊಂಡು, ನಮ್ಮ ಭಾರತದ ಪೂರ್ವಿಕರಿಗೆ ಮನಪೂರ್ವಕವಾಗಿ ಕ್ಷಮೆಯಾಚಿಸುತ್ತಾ, ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ತನ್ನ ದೇಶಕ್ಕೆ ವಾಪಸಾಗುತ್ತಾನೆ.
"ಮಾತೃ ದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ" ಎಂದು ಪ್ರಾರ್ಥನೆಯೊಂದಿಗೆ ಗರ್ಭ ಧರಿಸಿ ಪ್ರಾಣ ಒತ್ತೆಯಿಟ್ಟು ಜನ್ಮ ನೀಡಿದ ತಾಯಿ, ಯಾವ ಸ್ವಾರ್ಥವಿಲ್ಲದೇ ಹೆಂಡತಿ ಮಕ್ಕಳಿಗಾಗಿ, ಮಕ್ಕಳ ಅಭಿವೃದ್ಧಿಗಾಗಿ ದುಡಿವ ತಂದೆ, ಶ್ರೇಷ್ಟ ದಾನವಾದ ವಿದ್ಯಾದಾನ ಮಾಡಿದ ಗುರುಗಳನ್ನು ಪ್ರತಿದಿನ ನೆನೆಸಿಕೊಳ್ಳುವುದನ್ನು ಬಿಟ್ಟು ಒಂದು ದಿನ cake cut ಮಾಡಿ ಕೈತೊಳೆದುಕೊಳ್ಳುವುದು fathers day, mothers, day teachers day ಎಂದು wish ಮಾಡಿ ಏನೋ ಸಾಧಿಸಿದಂತೆ ಬೀಗುವುದು ಎಷ್ಟು ಮಟ್ಟಿಗೆ ಸರಿ? ಅದರಲ್ಲೂ cake cut ಮಾಡಿಸುವ ಸಂಪ್ರದಾಯ ನಾವು ನಮ್ಮತನವನ್ನು ಕಳೆದು ಕೊಂಡಿರುವುದನ್ನು ತೋರಿಸುತ್ತದೆ. ಪ್ರತಿದಿನ ಶಾಲೆಗಳಲ್ಲಿ ಮೇಲಿನ ಮಂತ್ರ ಹೇಳಿಸಿ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬೀಜ ಬಿತ್ತಿದಿದರೆ ಸಂಸ್ಕೃತದ ಶ್ಲೋಕ ಎಂದು ಅದು ಕೋಮುವಾದ ಆಗುತ್ತದೆ ಎಂದು ಹೌಹಾರಿಕೊಳ್ಳುವ ಬುದ್ದಿಜೀವಿಗಳ ಮಂಗಾಟ ನಗು ತರಿಸುವಂತದ್ದೆ.
"ಸಮುದ್ರವಸನೇ ದೇವಿ ಪರ್ವತಸ್ಥನ ಮಂಡಲೆ, ವಿಷ್ಣುಪತ್ನಿ ನಮಸ್ಥುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ" ಎಂದು ನಮ್ಮಂಥಾ ಸಾವಿರಾರು ಪಾಪಿಗಳು ತುಳಿದು, ಮೈತುಂಬೆಲ್ಲಾ ರಂಧ್ರಗಳನ್ನು ಕೊರೆದು, ಅಗೆದು ಬಗೆದು ಹಾಳು ಮಾಡುತ್ತಿದ್ದರೂ ಸಹಿಸಿಕೊಂಡಿರುವ ಭೂಮಿತಾಯಿಗೆ ಕ್ಷಮೆಯಾಚಿಸುವ ಮಂತ್ರ ಹೇಳಿಕೊಟ್ಟು ಪ್ರತಿನಿತ್ಯ ಪಠಿಸಿ ಪರಿಸರದ ಬಗ್ಗೆ ಕಾಳಜಿ, ಗೌರವ ಅದರ ಅನಂತಾನಂತ ಕರುಣೆಯ ಸ್ಮರಣೆ ಮಾಡದೆ ಎಂದೋ ಒಂದು ದಿನ environment day ಎಂದು ದುಡ್ಡು ಕೊಟ್ಟು ಗಿಡ ನೆಟ್ಟು 4 photo ತೆಗೆಸಿಕೊಂಡು facebook ಲಿ ಹಾಕಿದರೆ ಏನು ಪ್ರಯೋಜನ. ಅಲ್ಲದೇ ಅಂದು ನೆಟ್ಟ ಗಿಡಗಳನ್ನು ನಮ್ಮ ಕ್ಷಮಯಾ ಧರಿತ್ರಿಯೇ ಮುಂದೆ ಕಾಪಾಡಬೇಕು, ನೆಟ್ಟವರು ಅದಕ್ಕೆ ಇನ್ನೆಂದೂ ನೀರಾಕಲಾರರು.
"ಗಂಗೇ ಚ ಯಮುನೇಚೈವ ಗೋದಾವರೀ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂಕುರು" ಎಂದು ನಶಿಸಿ ಹೋಗುತ್ತಿರುವ ನಮ್ಮ ಜೀವನಾಧಾರದ ಬಗ್ಗೆ ಕಾಳಜಿ ಹಾಗು ಗೌರವಗಳನ್ನು ಬೆಳಸಬಹುದಲ್ಲವೇ? ಬದಲಾಗಿ water day ಅಂತೆ.
ಹುಟ್ಟು ಹಬ್ಬದ ದಿನ ಅತಿ ಹೆಚ್ಚು calories ಸಿಗುವ ಎಣ್ಣೆ ಹಚ್ಚಿ ಸ್ನಾನ ಮಾಡಿ ಗುರು ಹಿರಿಯರಿಗೆ ನಮಸ್ಕಾರ ಮಾಡಿ ಹೊಸ ಉಡುಪು ಧರಿಸಿ, "ಆಯುಷ್ಮಾನ್ ಭವ" ಆಯುಷ್ಯ, ಆರೋಗ್ಯ, ಸಂಪತ್ತು ಸಿಗಲೆಂದು ಆಶಿರ್ವಾದ ಪಡೆದು, ದೇವಸ್ಥಾನಗಳಿಗೆ ಹೋಗಿ ಒಂದು ಧನಾತ್ಮಕ ಮನಸ್ಸು ಗಳಿಸಿಕೊಂಡು, ಅಮ್ಮ ಮಾಡಿದ ತನಗಿಷ್ಟದ ಅಡಿಗೆ ಊಟ ಮಾಡಿ ಕೂಡ ಸಂತೋಷ ಪಡಬಹುದಲ್ಲವೇ? 25000 ವರ್ಷಗಳ ನಮ್ಮ ಸಂಸ್ಕೃತಿಯನ್ನು ಒದ್ದು ಮೊನ್ನೆ ಮೊನ್ನೆ ಸೃಷ್ಟಿಯಾದ ಪಾಶ್ಚಿಮಾತ್ಯರ cake cut ಮಾಡುವುದನ್ನು ಸರ್ವೇಸಾಮಾನ್ಯವಾಗಿ ಎಂಬಂತೆ ಪ್ರತಿಯೊಬ್ಬರೂ ಆಚರಿಸುವುದನ್ನು ನೋಡಿದಾಗ ನಮ್ಮಂಥಾ ಶತ ಸಹಸ್ರ ಮೂಡರು ಇನ್ನಿಲ್ಲ ಎಂದೆನಿಸುತ್ತದೆ. ನಿಮ್ಮ ಮಾಹಿತಿಗಾಗಿ cake ಎಂಬ ತಿನಿಸು ನಮ್ಮ ಭಾರತಕ್ಕೆ ತಂದಿದ್ದು ಬ್ರಿಟೀಷರ ಕಾಲದಲ್ಲಿ ಅಂದರೆ 200-300 ವರ್ಷಗಳ ಹಿಂದೆ. ಅಲ್ಲಿಯವರೆಗು ನಮ್ಮ ಪ್ರಾಚೀನರು ಜನ್ಮದಿನವನ್ನು ಆಚರಿಸುತ್ತಲೇ ಇದ್ದರು ಎಂಬುದನ್ನು ಮರೆಯಬಾರದು.
"ಓಂ ಸಹ ನಾವವತು, ಸಹ ನೌ ಬುನಕ್ತೋ, ಸಹ ವೀರ್ಯಂ ಕರವಾವಹೈ, ತೇಜಸ್ವಿ ನಾವಧೀತಮಸ್ತು ಮಾವಿದ್ವಿಶಾವಹೈ, ಓಂ ಶಾಂತಿ: ಶಾಂತಿ: ಶಾಂತಿಃ" ಎಂದು ಶಾಲೆಗಳಲ್ಲಿ ಎಲ್ಲರೂ ಕೈ ಮುಗಿದು ಪ್ರಾರ್ಥನೆ ಮಾಡಿ ಹಂಚಿ ಊಟ ಮಾಡುವಾಗ, ಸರ್ವರನ್ನು ಪ್ರೀತಿಸುವ, ಗೌರವಿಸುವ ಮನೋಭಾವ ಬೆಳೆಸುತ್ತಿದ್ದ ಆ ಸಂಸ್ಕೃತಿ ಮಾಯವಾಗಿದೆ. ನಮ್ಮ ಪೂರ್ವಿಕರು ಮಾಡಿರುವ ಹಬ್ಬ ಹರಿದಿನಗಳ ಆಚರಣೆಯ ಹಿಂದೆ ಪ್ರಕೃತಿಯ ಸಂರಕ್ಷಣೆ ಹಾಗು "ಓಂ ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿದುಖ:ಭಾಗ್ಭವೇತ್, ಓಂ ಶಾಂತಿ: ಶಾಂತಿ: ಶಾಂತಿಃ" ಎಂದು ಸರ್ವರ ಸಂತೋಷ ಬಯಸಿದರೂ ಅದನ್ನು ಅಲ್ಲೆಗಳೆದು cake cutting ಭೂತ ಕುಣಿಯುತ್ತಿದೆ. ಇನ್ನಾದರೂ ಆ day ಈ dayಗಳೆಂದು cake cut ಮಾಡುವುದನ್ನು ಬಿಟ್ಟು, ವಿಶ್ವಗುರು ಭಾರತದತ್ತ ತಿರುಗಿರುವ ಬೇರೆ ದೇಶದವರನ್ನು ಸ್ವಾಗತಿಸಿ ನಮ್ಮ ಸಂಸ್ಕೃತಿಯ ವೈಭವವನ್ನು ಸಾರುವ ಕೆಲಸವಾಗಬೇಕಿದೆ.
https://www.youtube.com/watch?v=eZZfxngJh80

Saturday, September 5, 2015

ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರೆಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು.


ನನಗೀಗ ಇಪ್ಪತ್ತೈದು ವಯಸ್ಸು. ಈಗ ನಾನು ಸಂಶೋಧನಾ ವಿದ್ಯಾರ್ಥಿ. ಇಲ್ಲಿಗೆ ಬರುವ ಮುನ್ನ ಎರಡು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಅದರ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ತಲೆಯ ತುಂಬಾ ಹುಡುಗರಿಗೆ ಅದು ಹೇಳಬೇಕು ಇದು ಹೇಳಬೇಕು ಎಂದು ಹಿಂದಿನ ದಿನ ಘಂಟೆಗಟ್ಟಲೇ ತಯಾರಾಗಿ, ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು. ಯುನಿವರ್ಸಿಟಿ ನೀನು ಗಣಿತ ಪಾಠ ಮಾಡಲು ಯೋಗ್ಯ ಎಂದು ಒಂದು ಕಾರ್ಡ್ ಕೊಟ್ಟು ಕಳುಹಿಸಿತ್ತೇ ಹೊರತು, ಹೇಗೆ ಪಾಠ ಮಾಡುವುದು ಎಂದು ತಿಳಿಸಿರಲಿಲ್ಲ. ನನಗಿಂತ ಎತ್ತರ & ದಪ್ಪ, ನೋಡಲು ಪ್ರಬುದ್ಧರಾಗಿ ಕಾಣುತ್ತಿದ್ದ ಹುಡುಗರು ಅನುಮಾನದೊಂದಿಗೆ ಎದ್ದು ನಿಂತಾಗ, ನನ್ನ ಊಹೆಗಳೆಲ್ಲಾ ತಲೆಕೆಳಗಾಯಿತು. ಪಾಠ ಹೇಗೆ ಮಾಡುವುದು, ಏನೇನೆಲ್ಲಾ ಹೊಸತು ಹೇಳಬೇಕು ಎಂದಷ್ಟೇ ಯೋಚಿಸಿ ಹೋದ ನನಗೆ, ನನ್ನ ದೇಹದ ಗಾತ್ರ ಕೂಡ ಮಾನದಂಡ ಎಂದು ತಿಳಿದಾಗ, ಹಿಂದಿನ ದಿನ ತಯಾರಾದದ್ದೆಲ್ಲಾ ಸೊನ್ನೆಯಿಂದ ಗುಣಿಸಿದ ಹಾಗೆ ನಾಶವಾಯಿತು. ಕೆಲವರಂತು, ಇವರು ಲೆಕ್ಚರ್ ಅಲ್ಲವೆಂದು ಭಾವಿಸಿಯೇ ಕುಳಿತಿದ್ದರು. ಎಲ್ಲರನ್ನು ಕೂಡಿಸಿ, ಜೋರಾಗಿ ಕೇಳುತ್ತಿದ್ದ ಹೃದಯ ಬಡಿತ ಎಣಿಸುತ್ತಾ, ನನ್ನನ್ನೇ ತಿನ್ನುವಂತೆ ನೋಡುತ್ತಿದ್ದ 60*2 ಕಣ್ಣುಗಳ ತೀವ್ರತೆ ತಡೆಯಲಾಗದೆ ಬೋರ್ಡ್ ಕಡೆ ತಿರುಗಿ ಅಳಿಸಿದ್ದ ಬೋರ್ಡನ್ನು ಮತ್ತೆ ಅಳಿಸುತ್ತಾ ನನ್ನನ್ನು ಸಮಾಧಾನ ಮಾಡಿಕೊಂಡೆ. ನನ್ನ ಸಹೋದ್ಯೋಗಿ ಹೇಳಿ ಕಳಿಸಿದಂತೆ ಮೊದಲು ನನ್ನ ಪರಿಚಯ ಮಾಡಿಕೊಂಡು, ಅವರ ಹೆಸರು ಕೇಳಿ, ಭಯದಿಂದ ನನಗೆ ತೋಚಿದ್ದು ಹೇಳಿ ಬಂದಾಗ, ಇಷ್ಟೊಂದು ಕಷ್ಟವೇ ಗುರುವಾಗೋದು ? ನನ್ನ ಕೆರಿಯರ್ ಆಯ್ಕೆ ತಪ್ಪೇ ! ಎಂದೆನಿಸಿತು.

ಸ್ಟಾಫ್ ರೂಮ್ಗೆ ಬಂದಾಗ, ಮೊದಲ ಅನುಭವ ಕೇಳಲು ಕಾಯುತ್ತಿದ್ದ ಸೀನಿಯರ್ಸ್ ಗಳ ಬಳಿ ನನ್ನ ಮರ್ಯಾದೆ ಹೋಗಬಾರದೆಂದು ಹೆಚ್ಚಾಗಿ ಏನೂ ಹೇಳದೇ ಹಾಗೇ ಬಂದು ಕುಳಿತೆ. ನಂತರ ಒಂದೆರಡು ತಿಂಗಳುಗಳ ಕಾಲ ಕಷ್ಟವೆನಿಸಿದರೂ ನಿಧಾನವಾಗಿ ಇಷ್ಟವಾಗುತ್ತಾ ಹೋಯಿತು. ದಿನೇ ದಿನೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ಹುಡುಗರನ್ನು ನನ್ನ ಪಾಠದ ಕಡೆ ಆಕರ್ಷಿಸಲು ಪ್ರಯತ್ನ ಜೋರಾಗಿಯೇ ನಡೆದಿತ್ತು. ಸರ್ ಸ್ವಲ್ಪ ಫಾಸ್ಟ್, ಸರ್ ಕ್ಲಾಸ್ ಲಿ ಹಿಂದೆ ತುಂಬ ಗಲಾಟೆ ಮಾಡ್ತಾರೆ, ಸರ್ ತುಂಬಾ ಹೇಳ್ತಾರೆ ಎಂಬ ಚಾಳಿಗಳು ಸ್ವಲ್ಪ ಮನ ಕೆಡಿಸಿದರೂ ಸವಾಲಾಗಿ ತೆಗೆದುಕೊಂಡೆ. ಸ್ಟಾಫ್ ರೂಮೇ ನನಗೆ ಸರಿಯಾದ ದಾರಿ ತೋರಲು ಸಾಧ್ಯ ಎಂದು ಅರಿತ ನಾನು, ಕಾರಿಡಾರ್ನಲ್ಲಿ ಹೋಗುತ್ತಾ ಬರುತ್ತಾ ಸಹೋದ್ಯೋಗಿಗಳು ಹೇಗೆ ಮಾಡುತ್ತಾರೆ, ಅವರ ಎಡವು ತೊಡವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ನಾನು ವಿದ್ಯಾರ್ಥಿಯಾಗಿದ್ದಾಗ ನನ್ನ ಮನಸ್ಥಿತಿಯನ್ನು ಜ್ಞಾಪಿಸಿಕೊಂಡು, ಹಾಗೆಯೇ ವಿದ್ಯಾರ್ಥಿಗಳಿಂದ ಅವರಿಗರಿಯದೇ ಅವರು ಏನು ಬಯಸುತ್ತಾರೆ ಎಂದು ತಿಳಿದು, ಪ್ಲಾನ್ ಮಾಡಲು ಪ್ರಾರಂಭಿಸಿದೆ. ಅದುವರೆಗೂ ಸಂಪಾದಿಸಿದ ವಿಜ್ಞಾನದ ಅನೇಕ ವಿಷಯಗಳನ್ನು ಸಮಯಕ್ಕೆ ತಕ್ಕಂತೆ ಗಣಿತದ ಜೊತೆ ಕೂಡಿಸಿ ಹೇಳುತ್ತಿದ್ದಾಗ ಆಗುತ್ತಿದ್ದ ಸೂಜಿ ಬಿದ್ದರೂ ಕೇಳುವಷ್ಟು ಮೌನ, ಕ್ಲಾಸ್ ರೂಮ್ ನಲ್ಲಿ ಆದ ಬದಲಾವಣೆಗಳು ನನ್ನ ವೃತ್ತಿಯ ಶ್ರೇಷ್ಠತೆ ಹಾಗು ಸವಾಲಿನ ಪರಿಕಲ್ಪನೆ ತಿಳಿಸುತ್ತಾ ಬಂದಿತು. ಈಗಿನ ವಿದ್ಯಾರ್ಥಿಗಳಿಗೂ ಕೋಲು ಹಿಡಿದು, ಹೊಡೆದು ಬಡೆದು, ಬಯ್ದು ಹೆದರಿಸಿ ಹೇಳಿ ಕೊಡುವ ಶಿಕ್ಷಕರಿಗಿಂತ ಅವರ ಮನ ಗೆಲ್ಲುವ, ಕ್ಲಾಸ್ ರೂಮ್ನಲ್ಲಿ ಒಂದು ಮಟ್ಟಿಗೆ ಸ್ವೇಚ್ಛೆಯಾಗಿರಲು ಬಿಡುವ ಶಿಕ್ಷಕರನ್ನೇ ಹೆಚ್ಚು ಇಷ್ಟಪಡುತ್ತಾರೆ.
ಅಂತೂ ವರ್ಷಾಂತ್ಯದಲ್ಲಿ ನನ್ನ ಕ್ಲಾಸ್ ಇಷ್ಟ ಪಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ವೃತ್ತಿಯ ಮೇಲೆ ಇದ್ದ ಗೌರವ ಹಾಗು ಪ್ರೀತಿ ಜಾಸ್ತಿ ಆಗುತ್ತಾ ಬಂದಿತು. ಕ್ಲಾಸ್ ರೂಮ್ನಲ್ಲಿ ನಡೆಸುತ್ತಿದ್ದ ವಿಷಯಗಳ ವಾಗ್ವಾದಗಳು ವಿದ್ಯಾರ್ಥಿಗಳನ್ನು ಹೆಚ್ಚು ಓದಿನತ್ತ ತೊಡಗಿಸಿಕೊಳ್ಳಲು ಸಹಾಯವಾಗುತ್ತಿತ್ತು. ನಾನು ಗಣಿತವೇ ಶ್ರೇಷ್ಠ ಎಂದು ಹೇಳಿದರೆ, ಹುಡುಗರು ನನ್ನನ್ನು ಸೋಲಿಸಲಿಕ್ಕಾದರೂ ಹುಡುಕಿ ತರುತ್ತಿದ್ದ ಬೇರೆ ವಿಷಯಗಳ ಅಂಶಗಳು ನನ್ನ ಜ್ಞಾನ ಹೆಚ್ಚಿಸುವುದರ ಜೊತೆಗೆ ನನ್ನ ಮನಸ್ಸಿನ ಖುಶಿಗೆ ಮೂಲವಾಗುತ್ತಿತ್ತು. ನನ್ನ ಮಾತು ಕೇಳುವ ನೂರಾರು ಕಿವಿಗಳಿವೆ ಎಂದುಕೊಂಡಾಗ ಆಗುವ ಗರ್ವ, ಸಂತೋಷ, ಜವಾಬ್ದಾರಿಯ ಪ್ರಜ್ಞೆ ಅನುಭವಿಸದೇ ಅರಿವಿಗೆ ಬಾರದು. ಕ್ಲಾಸ್ ಗೆ ಶರ್ಟಿನ ತೋಳು ಮಡಚುತ್ತಾ, ಒಂದು ಕೈಲಿ ಡಸ್ಟರ್ ನ ಧೂಳು ಕೊಡವುತ್ತಾ ಕ್ಲಾಸ್ ರೂಮ್ಗೆ ಹೋಗಿ ಪಾಠ ಮುಗಿಸಿ ಹೊರ ಬರುವಾಗ ನನ್ನ ಆಯಸ್ಸು 1 ಘಂಟೆ ಹೆಚ್ಚಾದಂತೆ ಅನಿಸುತ್ತಿತ್ತು.
ಗುರಿ ಮುಂದೆ, ಗುರು ಹಿಂದೆ ಎಂಬಂತೆ ನನ್ನ ಹಿಂದೆ ನಿಂತು ನನ್ನ ನೂರಾರು ವಿದ್ಯಾರ್ಥಿಗಳ ಮುಂದೆ ದೂಡಿ ಮಾರ್ಗದರ್ಶನ ಮಾಡಿದ ಗುರುಗಳಿಗೆ ನನ್ನ ಶಿರಸಾಷ್ಟಾಂಗ ಪ್ರಣಾಮಗಳು. ನನ್ನ ರೂಪಿಸಿದ ಗುರುಗಳ ಪಟ್ಟಿ ದೊಡ್ಡದು. ಒಂದಕ್ಷರ ಕಲಿಸಿದಾತಂ ಗುರು ಎಂದು ತಲೆಯಲ್ಲಿ ತುಂಬಿದ, ಇಷ್ಟೊಂದು ಬರೆಯುವುದಕ್ಕೂ ಮೊದಲು ನನ್ನ ಮೊದಲ, ತೊದಲು ನುಡಿ ಕೇಳಿ ಖುಷಿ ಪಟ್ಟು ಮಾತು ಕಲಿಸಿದ ನನ್ನ ಮೊದಲ ಗುರು ತಾಯಿ, ಇದು resistor, transistor ಎಂದು ಮನೆಯಲ್ಲಿಯ TV, radio ಗಳನ್ನು ಬಿಚ್ಚುವಾಗ ಕೂರಿಸಿಕೊಂಡು, ಗ್ರಹಣಗಳು, ಹಗಲು ರಾತ್ರಿ ಹೀಗೆ ಪ್ರಕೃತಿಯ ವಿಸ್ಮಯಗಳ ಬಗ್ಗೆ ಅರಿವು ಮೂಡಿಸಿ ನನ್ನಲ್ಲಿ ಸೃಜನಶೀಲತೆ ಬೆಳಸಿದ ನನ್ನ ತಂದೆ, ಮನೆಯ ಕಡಪ ಕಲ್ಲಿನ ಮೇಲೆ trigonometry derivations ಹೇಳಿಕೊಟ್ಟು ಗಣಿತದ ಕಡೆ ಒಲವು ಮೂಡಿಸಿದ ನನ್ನಣ್ಣ, ಅಜ್ಜಿಯ ಕನ್ನಡಕ, ಅಪ್ಪನ ಪಂಚೆ, ಥಿಯೇಟರ್ಗಳ ಪಕ್ಕ ಬಿದ್ದ advertisement ರೀಲ್ ಇಂದ film ಬಿಡುವ, ಅಗರಬತ್ತಿ ಕೊಳವೆಯಲ್ಲಿ telescope ಮಾಡಲು ಸಹಾಯ ಮಾಡಿದ್ದ ಬಾಲ್ಯ ಸ್ನೇಹಿತರು, ಶಿಕ್ಷಕ ವೃತ್ತಿಯಲ್ಲಿ ಬೆಳೆಯಲು ತಮ್ಮ ಉಪಯುಕ್ತ ಸಲಹೆಗಳನ್ನು ನೀಡಿದ ಸಹೋದ್ಯೋಗಿಗಳು ಎಲ್ಲರೂ ನನ್ನ ಗುರುಗಳೇ. ಶಿಕ್ಷಕ ವೃತ್ತಿಗಿಂತಲೂ ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ. ಸಮಾಧಾನ, ಸಂತೃಪ್ತಿ, ಪ್ರೀತಿ, ಗೌರವ ಎಲ್ಲವೂ ಸಿಗುವುದು ಶಿಕ್ಷಕನ ಕೆಲಸದಲ್ಲಿ.
ಇಂಜಿನಿಯರಿಂಗ್ ಓದಲು ನಾ ಮುಂದು ತಾ ಮುಂದು ಎಂದು ಓಡುತ್ತಿರುವ ವಿದ್ಯಾರ್ಥಿಗಳಿಗೆ ನನ್ನ ಸಲಹೆ ಅಷ್ಟೇ, ಹಾಗಂತ ಇಂಜಿನಿಯರಿಂಗ್ ಅನ್ನು ಯಾವುದೇ ಕಾರಣಕ್ಕೂ ಕಡಿಮೆ ಎನ್ನುತ್ತಿಲ್ಲ, ಎಲ್ಲಾ ವೃತ್ತಿಗಳಿಗೂ ತನ್ನದೇ ಆದ ಸ್ಥಾನಮಾನಗಳಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಿಸುವ ಶಿಕ್ಷಕರು ಬೇಕಾಗಿದ್ದಾರೆ. ಚಾಣಕ್ಯ ಹೇಳಿದಂತೆ ‘ರಾಜ ತನ್ನ ಕರ್ತವ್ಯದ ದಾರಿ ತಪ್ಪಿದಾಗ, ರಾಜ್ಯವನ್ನು ನಡೆಸುವ ಜವಾಬ್ದಾರಿ ಶಿಕ್ಷಕನ ಕೈಯಲ್ಲಿರುತ್ತದೆ’. ಮೊನ್ನೆ ಯಾವುದೋ ಬೇರೆ ಊರಿನಲ್ಲಿ ಒಬ್ಬ ಹುಡುಗ ಬಂದು ಸರ್ ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ ಎಂದು ಹೇಳಿಕೊಂಡಾಗ ಸಿಕ್ಕ ಖುಷಿ ಮತ್ತೆಲ್ಲಿ ಸಿಗುತ್ತದೆ ಹೇಳಿ. ‘ಸ್ವರಾಷ್ಟ್ರೇ ಪೂಜ್ಯಾತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||’ ದೇಶದಲ್ಲಿ ಮಾತ್ರ ರಾಜನಿಗೆ ಗೌರವ, ಆದರೆ ಜ್ಞಾನಿಗಳಿಗೆ ಎಲ್ಲಾ ಕಡೆಯಲ್ಲೂ ಗೌರವ ಸಿಗುತ್ತದೆ. ಅಂತಹ ಜ್ಞಾನವನ್ನು ಕೊಡುವ ವೃತ್ತಿಯ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳಸಿಕೊಳ್ಳಲಿ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಅರಿವು ಮೂಡಿಸುವಂತವರಾಗಲಿ. ದೇಶದಲ್ಲಿ ಒಳ್ಳೆ ಶಿಕ್ಷಕರಿದ್ದರೆ ‘ಹರ್ ಘರ್ ಸೆ ಅಫ್ಜಲ್ ನಹಿ ಚಾಣಕ್ಯ/ಕೌಟಿಲ್ಯ/ಆರ್ಯಭಟ/ಸುಶ್ರುತ/ನರೇಂದ್ರ ನಿಕಲೇಗ’.