Wednesday, March 30, 2016

ಇದು ಒಂಡೇ ಮ್ಯಾಚೂ ಕಣೋ...!!

3D Painting
ಕ್ರಿಕೆಟ್ ಎಂದರೆ ಭಾರತದಲ್ಲಿ ಎಲ್ಲಿಲ್ಲದ ಸಡಗರ, ಕುತೂಹಲ. ಪಾಕಿಸ್ತಾನದಲ್ಲಂತೂ ತಮ್ಮ ತಂಡ ಸೋತರೆ ಟೀವಿಯನ್ನೆಲ್ಲಾ ಒಡೆದು ಹಾಕುತ್ತಾರೆ. ನಮ್ಮಲ್ಲಿ ನಮ್ಮ ತಂಡ ಗೆಲ್ಲಲೂ ಹೋಮ ಹವನಗಳನ್ನೆಲ್ಲಾ ಮಾಡುತ್ತಾರೆ. ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಹೊಂದಿರುವ ಹೆಮ್ಮೆ ನಮ್ಮ ಭಾರತದ್ದೆ.
ಇಷ್ಟೊಂದು ಜನರನ್ನು ಆಕರ್ಷಿಸಲು ಕ್ರಿಕೇಟ್ ಆಟವೊಂದೇ ಕಾರಣ ಅಲ್ಲ, ಎಲ್ಲೋ ನಡೆಯುವ ಪಂದ್ಯ ನಮ್ಮ ಮನೆಯಲ್ಲಿ ಪ್ರಸಾರವಾಗುವ ರೀತಿ ಕೂಡ ಒಂದು ಅಂಶ. ಒಂದು ಕ್ರಿಕೆಟ್ ಪಂದ್ಯ ಕೇವಲ ಹನ್ನೊಂದು ಜನರ ಎರಡು ತಂಡಗಳಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಅದರ ಹಿಂದೆ ಕಾಣದ ಕೈಗಳ ಕೆಲಸ ಸಾವಿರ.
1922ರಲ್ಲಿ ಕ್ರಿಕೆಟ್ ನ ಮೊದಲ ರೇಡಿಯೋ ಕವರೇಜ್ ಮಾಡಲಾಗಿದ್ದು, ಅಂದಿನಿಂದ ಇಂದಿನವರೆಗೂ ಆಗಿರುವ ಬದಲಾವಣೆ ಆವಿಷ್ಕಾರ ಕ್ರಿಕೆಟನ್ನು ಇನ್ನಷ್ಟು ಆಕರ್ಷಿತವನ್ನಾಗಿ ಮಾಡಿದೆ. 1938ರಲ್ಲಿ ಮೊದಲು ಟೀವಿ ಪ್ರಸಾರವಾದರೆ, ವರ್ಣರಂಜಿತ ಪ್ರಸಾರ ನಡೆದದ್ದು 1968ರಲ್ಲಿ.
ಮೈದಾನದ ಮಧ್ಯದಲ್ಲಿ ಪೆಪ್ಸಿ, ಕೊಕಕೋಲಾದ ನಾಮಫಲಕಗಳು ನೇರವಾಗಿ ನಿಲ್ಲಿಸಿರುವುದು ಕಾಣಿಸುತ್ತಿರುತ್ತದೆ, ಇದ್ದಕ್ಕಿದ್ದಂತೆ ಅದರ ಮೇಲೆ ಕೀಪರ್ ನಿಲ್ಲುತ್ತಾನೆ, ಮೊದಲು ಈ ದೃಶ್ಯವನ್ನು ನೋಡಿದವರಿಗೆ ಆಶ್ಚರ್ಯವಾಗದೇ ಇರುತ್ತದೆಯೇ? 3Dಯ ಹಾಗೆ ಕಾಣುವ projected 2D ಚಿತ್ರಗಳನ್ನು ಮನುಷ್ಯರೂ ಬಿಡಿಸಬಹುದು, ಆದರೂ ಆ ಕೆಲಸವನ್ನು ಒಂದು ಸಣ್ಣ ರೋಬೋಟ್ ಮಾಡುತ್ತದೆ. ಒಂದು ಲೇಸರ್ ಸಹಾಯಿತ ಉಪಕರಣ ಆ ರೋಬೋಟನ್ನು ಚಲಾಯಿಸುತ್ತದೆ, ಅದು ತಾನು ನಡೆದಲ್ಲೆಲ್ಲ ಬಣ್ಣವನ್ನು ಚೆಲ್ಲುತ್ತಾ ಹೋಗುತ್ತದೆ. ನಂತರ ಕಲಾವಿದರು ವಿವಿಧ ಬಣ್ಣಗಳನ್ನು ನೀಡಿ ಪೂರ್ಣಗೊಳಿಸುತ್ತಾರೆ. ಆ ರೋಬೋಟಿನ ಕೆಲಸ ನೋಡಲು ಈ ಕೊಂಡಿಯನ್ನು ಒತ್ತಿ.

ಥರ್ಡ್ ಅಂಪೈರ್ ಇಲ್ಲದಿದ್ದರೆ ಎಷ್ಟೋ ಆಟಗಾರರು ಅನ್ಯಾಯಕ್ಕೊಳಗಾತ್ತಿದ್ದರೆಲ್ಲವೇ, ಈ ಐಡಿಯ ಮೊಟ್ಟ ಮೊದಲು ತಂದಿದ್ದು ಶ್ರೀಲಂಕದ ಕ್ರಿಕೆಟ್ ಆಟಗಾರ ಮಹಿಂದ ವಿಜೆಸಿಂಘೆ. 1992ರಲ್ಲಿ  ಭಾರತ ಹಾಗು ದ.ಆಫ್ರಿಕ ನಡುವಿನ ಪಂದ್ಯದಲ್ಲಿ ಈ ಥರ್ಡ್ ಅಂಪೈರ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿತ್ತು. ನಮ್ಮ ಕ್ರಿಕೆಟ್ ದೇವರು ಮೊದಲು ಥರ್ಡ್ ಅಂಪೈರ್ ತೀರ್ಪಿನಿಂದ ಔಟ್ ಆಗಿ ಅದರಲ್ಲೂ ಕೂಡ ದಾಖಲೆಯನ್ನು ಬರೆದಿದ್ದಾರೆ. ತೀರ್ಪು ಕೊಟ್ಟದ್ದು ಕಾರ್ಲ್ ಲೀಬನ್ಬರ್ಗ್.
Hawkeye

ಹಾಕ್_ಐ(Hawkeye) ಎಂಬ ತಂತ್ರಜ್ಞಾನವನ್ನು 2001ರಲ್ಲಿ ಕ್ರಿಕೆಟ್ ಆಟಕ್ಕೆ ಸೇರಿತು, ಇದರ ಕೆಲಸ ವೀಕ್ಷಕರಿಗೆ ಚೆಂಡಿನ ಹಾದಿಯನ್ನು ಗ್ರಾಫಿಕ್ಸ್ ಮೂಲಕ ತೋರಿಸುವುದು. ಮೊದಲು ಎಲ್.ಬಿ.ಡಬ್ಲ್ಯೂನಲ್ಲಿ ಮಾತ್ರ ಉಪಯೋಗವಾಗುತ್ತಿದ್ದ ಈ ತಂತ್ರಜ್ಞಾನ ಇಂದು ಬ್ಯಾಟ್ಸ್ ಮ್ಯಾನ್ ಬಾರಿಸುವ ಸಿಕ್ಸ್, ವ್ಯಾಗನ್ ವೀಲ್ ಎಲ್ಲ ಕಡೆ ಚಾಲ್ತಿಯಲ್ಲಿದೆ, ಹಾಗು ಅನಿವಾರ್ಯದ ಜೊತೆ ಆಕರ್ಷಣೆಯೂ ಆಗಿದೆ.


Snicko


Hotspot
ಸ್ಟಂಪಿನಲ್ಲಿ ಇಡುವ ಸ್ನಿಕೋಮೀಟರ್ ಎಂಬ ಸಣ್ಣ ಮೈಕ್ರೋಫೋನ್ ಸೂಕ್ಷ್ಮ ಶಬ್ಧವನ್ನು ಆಲಿಸಿ, ಅದರ ಏರಿಳಿತಗಳ ಗ್ರಾಫ್ ಅನ್ನು ನಮಗೆ ನೀಡುತ್ತದೆ, ಈ ತಂತ್ರಜ್ಞಾನ ಚೆಂಡು ಬ್ಯಾಟ್ಸ್ ಮ್ಯಾನ್ ನ ಬ್ಯಾಟಿಗೆ ತಾಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ. ಈ ತಂತ್ರಜ್ಞಾನವನ್ನು ಆಲನ್ ಪ್ಲಾಸ್ಕೆಟ್ ಎಂಬ ಇಂಗ್ಲೆಂಡಿನ ವಿಜ್ಞಾನಿ ಕ್ರಿಕೆಟ್ ಜಗತ್ತಿಗೆ ಕೊಡುಗೆನ್ನಾಗಿ ನೀಡಿದ್ದಾನೆ. ಎರಡು ವಸ್ತುಗಳ ಘರ್ಷಣೆಯಿಂದ ಸೃಷ್ಟಿಯಾಗುವ ಉಷ್ಣವನ್ನು ಮಾತ್ರ ಸೆರೆಹಿಡಿಯುವ ಹಾಟ್ಸ್ಪಾಟ್ ತಂತ್ರಜ್ಞಾನ ಕೂಡ ಬ್ಯಾಟ್ಗೆ ಚೆಂಡು ತಾಗಿದೆಯೋ ಇಲ್ಲವೋ ಎಂದು ಕಂಡುಹಿಡಿಯಲು ಬಳಸುತ್ತಾರೆ.


ಬ್ರೆಟ್ ಲೀ, ಶೋಯಬ್ ಅಕ್ತರ್ ಅಂತಹ ಬೌಲರ್ಗಳು ಎಸೆಯುವ ಬೆಂಕಿ ಚೆಂಡಿನ ವೇಗವನ್ನು ಅಳೆಯಲು ಉಪಯೋಗಿಸುವ ರಾಡಾರ್ ಗನ್ ವಾಹನದ ವೇಗ ಅಳೆಯಲು ಉಪಯೋಗಿಸುತ್ತರೆ. ಈ ರಾಡರ್ ಗನ್ ಅನ್ನು 1947ರಲ್ಲಿ ಮೊದಲು ಜಾನ್ ಬಾರ್ಕರ್ ಎಂಬಾತ ಕಂಡು ಹಿಡಿದನು. ವಾಹನಗಳ ವೇಗವನ್ನು ಅಳೆಯಲು ಉಪಯೋಗಿಸುತ್ತಿದ್ದ ಈ ತಂತ್ರಜ್ಞಾನ ಇಂದು ಕ್ರಿಕೆಟ್ ನ ಅವಿಭಾಜ್ಯ ಅಂಗವಾಗಿದೆ.


ಇನ್ನು ಸಚಿನ್ ಮಾಡದ ದಾಖಲೆಗಳನ್ನೆಲ್ಲಾ ಯಾರು ಬರೆದುಕೊಳ್ಳುತ್ತಾರೆ? ಸಚಿನ್ 45ನೇ ಓವರ್ನಲ್ಲಿ ಗಳಿಸಿದ ಅತ್ಯಂತ ಗರಿಷ್ಟ ರನ್ ಇಷ್ಟು, ಕೋಹ್ಲಿ ನೂರು ರನ್ ಗಳಿಸಿದ ಮ್ಯಾಚ್ನಲ್ಲಿ ಭಾರತ ಗೆಲ್ಲುವ ಸಂಭವನೀಯತೆ ಇಷ್ಟು, 40ನೇ ಓವರ್ನಲ್ಲಿ ಅತಿ ಹೆಚ್ಚು ಜೊತೆಯಾಟ, 9ನೇ ವಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ. ಹೀಗೆ ಪ್ರತಿಯೊಂದು ಸಣ್ಣ ಸಣ್ಣ ದಾಖಲೆಗಳನ್ನೆಲ್ಲಾ ಯಾರು ಬರೆದುಕೊಳ್ಳುತ್ತಾರೆ? ಅದನ್ನು ಹೇಗೆಲ್ಲಾ ವಿಶ್ಲೇಷಿಸಬಹುದು. ನೋಡುವ ಜನರಿಗೆ ಇಂಚು ಇಂಚು ಅಂಕಿಅಂಶಗಳ ಮಾಹಿತಿಯನ್ನು ಕೊಡುವ ಆ ಮನುಷ್ಯ ಯಾರಿಹಬಹುದು? ಅಲ್ಲವೇ?
1993ರಲ್ಲಿ ಡಾ. ಸೈಮನ್ ಕಿಂಗ್ ಎಂಬವರು ತಮ್ಮ ಸಂಶೋಧನ ವಿದ್ಯಾರ್ಥಿಗಳ ಜೊತೆ ಕೈಗೂಡಿಸಿ ಪ್ರಾರಂಭಿಸಿದ ಜಾಲತಾಣ CricInfo. ಪೀಟರ್ ಗ್ರಿಫ್ಟ್ಸ್, ಫಿಲಿಪ್ ಜೆ ಬೆಯ್ಲಿ ಎಂಬ ಸಂಖ್ಯಾಶಾಸ್ತ್ರಜ್ಞರು 2004ರಲ್ಲಿ CricketArchive ಎಂಬ ಜಾಲತಾಣವನ್ನು  ಪ್ರಾರಂಭಿಸಿದರು. ಇದುವರೆಗು 624,067 ಸ್ಕೋರ್ ಕಾರ್ಡ್ಗಳು, 1,122,540 ಆಟಗಾರರ ಅಂಕಿಅಂಶಗಳು ಈ ಡಾಟಾಬೇಸ್ನಲ್ಲಿವೆಯಂತೆ.
ಇಲ್ಲಿ ನಮ್ಮ ಹೆಮ್ಮೆಯ ಸಂಗತಿಯೆಂದರೆ 2010 ಫೆಬ್ರುವರಿ 24ರಂದು ಆದ ನಮ್ಮ ಕ್ರಿಕೆಟ್ ದೇವರ 200 ರನ್ ಗಳಿಸಿ ಸೃಷ್ಟಿಸಿದ ದಾಖಲೆಗೆ, cricinfo ಜಾಲತಾಣವನ್ನು ಭೇಟಿಕೊಟ್ಟವರ ಸಂಖ್ಯೆ 4ಕೋಟಿ 50ಲಕ್ಷಕ್ಕಿಂತ ಹೆಚ್ಚು ಎಂದು cricinfo ಹೇಳಿಕೊಂಡಿದೆ. ಅಲ್ಲದೇ ಇದುವರೆಗು ಕ್ರಿಕೆಟ್ ದೇವರ ಹುಡುಕಾಟದ ಸಂಖ್ಯೆಯೆ ಅತಿ ಹೆಚ್ಚು ಎಂದು ಕೂಡ ತಿಳಿಸಿದೆ.

ಅಂಪೈರ್ ಟೋಪಿಯ ಮೇಲೆ ಕ್ಯಾಮರ, ಬೆಲ್ಸ್ ಹಾರಿದಾಗ ಹತ್ತುವ ದೀಪ, ಸ್ಟಂಪಿನಲ್ಲಿರುವ ಕ್ಯಾಮರ, ಡ್ರೋನ್ ಕ್ಯಾಮರ, ಮಾನವ ಚಾಲಿತ ಸ್ಕೋರ್ ಬೋರ್ಡಿನಿಂದ ಡಿಜಿಟಲ್ ಬೋರ್ಡ್, ಅಲ್ಟ್ರಾ ಸ್ಲೋ ಮೋಷನ್ ಕ್ಯಾಮರ ಹೀಗೆ ಹತ್ತು ಹಲವಾರು ಸೃಜನಾತ್ಮಕ ಆವಿಷ್ಕಾರಗಳು ಕ್ರಿಕೆಟನ ಕಡೆಗೆ ಬಹಳಷ್ಟು ಜನರು ಆಕರ್ಷಿತವಾಗಲು ಸಾಧ್ಯವಾಗಿದೆ.

ಇದನ್ನೆಲ್ಲಾ ಗಮನಿಸಿದರೆ ಕೊನೆಯಲ್ಲಿ #ನನಗನಿಸಿದ್ದು, ಭಾರತದಲ್ಲಿ ಆವಿಷ್ಕಾರಗಳು ಕಡಿಮೆಯಾದರೂ, ಇಂಗ್ಲೆಂಡಿನ ಕೂಸಾದ ಕ್ರಿಕೆಟನ್ನು ಅತಿ ಹೆಚ್ಚು ಪ್ರೀತಿಸುತ್ತಿರುವವರು ಭಾರತದವರು. ಹ ಐಪಿಎಲ್ ಪಂದ್ಯಗಳ ವೇಳೆ ಮೈದಾನದಲ್ಲಿ ಹಾಕುವ ಪಿ ಪಿ ಪಿ ಪೀ ಪೀ ಎಂಬ ಮ್ಯೂಸಿಕ್ ಭಾರತೀಯರದ್ದೆ ಇರಬೇಕು.