Saturday, April 2, 2016

ಬದಲಾದ ಟೀವಿಯ ಠೀವಿ

ನಾನು ತೊಂಬತ್ತರ ದಶಕದ ಹುಡುಗ, ನನ್ನ ಬಾಲ್ಯದಲ್ಲಿ ದೂರದರ್ಶನ(ಟೀವಿ) ಹೊಸದೇನು ಅಲ್ಲ, ಬೀದಿಯಲ್ಲಿ ಹತ್ತು ಮನೆಗಳಿಗೆ ಐದು ಮನೆಯಲ್ಲಿಯಾದರೂ ಟೀವಿ ಇರುತ್ತಿತ್ತು. ಆಂಟೆನದಿಂದ ಬಿತ್ತರವಾಗುತ್ತಿದ್ದ ಕಾರ್ಯಕ್ರಮಗಳನ್ನು ನೋಡಿದ ನೆನಪು ಇದೆ. ಯಾರು ಸ್ಕ್ರಾಲ್ ಡೌನ್ ಮಾಡುತ್ತಿದ್ದರೋ ಗೊತ್ತಿಲ್ಲ ಮಹಾಭಾರತದ ಅರ್ಜುನ ಮಾತ್ರ ನಮ್ಮ ಟೀವಿಯಲ್ಲಿ ಮೇಲೆ ಹೋಗುತ್ತಲೇ ಇದ್ದ. ಕೆಲವೊಮ್ಮೆ ಇಲ್ಲಿ ಅವನ ಕಣ್ಣಿದೆ, ಇಲ್ಲಿ ಅವನ ಬಾಯಿ, ಎಂದು ಊಹಿಸಿಕೊಂಡು ನೋಡಿದ ನೆನಪು. ಅವನು ಬಿಟ್ಟ ಬಾಣ ಮಾತ್ರ ಎಲ್ಲಾ ಪ್ರೊಜೆಕ್ಟೈಲ್ ಮೋಷನ್ ನ ಸೂತ್ರಗಳನ್ನು ಗಾಳಿಗೆ ತೂರಿ ಹಾರುತ್ತಿದ್ದವು. ಮನೆಯ ಮೆಲೆ ಹತ್ತಿ ಆಂಟೆನವನ್ನು ಸರಿ ಮಾಡಿ ಬಂದರೆ ಒಂದೈದು ನಿಮಿಷ ಯಾವುದೇ ರಂಗೋಲಿಗಳಿಲ್ಲದೆ ನೋಡಬಹುದಿತ್ತು.
ಅಷ್ಟರಲ್ಲೇ ಕೇಬಲ್ ನ ಧಾಳಿ ಶುರುವಾಗಿತ್ತು, ಪಕ್ಕದ ಮನೆಯಲ್ಲಿ ಕೇಬಲ್ ಹಾಕಿಸಿದ್ದರು, ಹಾಗೆ ಅಮ್ಮನ ಜೊತೆ ಅಥವ ಅಪ್ಪನ ಜೊತೆ ಹೋದಾಗ ನನ್ನ ಗಮನ ಆ ಟೀವಿಯ ಕಡೆಯೆ, ಯಾವುದೇ ಹುಳಗಳಿಲ್ಲದೇ ಪ್ರಸಾರವಾಗುತ್ತಿತ್ತು. ಹೇಗೋ ನಮ್ಮ ಮನೆಗೂ ಕೇಬಲ್ ಬಂತು, ಅರ್ಥವಾಗದ ಮಹಾಭಾರತದಲ್ಲಿ ಯುದ್ಧದ ಸೀನುಗಳಿಗಾಗೆ ಕಾಯುತ್ತ ಕೂರುತ್ತಿದ್ದೆ, ಧುರ್ಯೋಧನನಿಗಿಂತ ಹೆಚ್ಚು ನನಗೇ ಯುದ್ಧ ನಡೆಯಬೇಕಿತ್ತು. ಡಿಶ್ ಕೂಡ ಶಾಶ್ವತವಲ್ಲ ಗಂಟೆಗಟ್ಟಲೇ ಹೋಗುತಿತ್ತು, ಆಗ ಟೀವಿಯ ತುಂಬ ಬರೀ ಹುಳಗಳೇ, ಗಿಜಗಿಜ ಎಂದು, ಅದರಲ್ಲಿ ಯಾವುದೋ ಮುಖ ಕಂಡಂತೆ ಆದಾಗೆಲ್ಲಾ, ನನ್ನ ಅಣ್ಣನಿಗೋ ಅಪ್ಪ ಅಮ್ಮರಿಗೋ ಕರೆದು ನಿಮಗೆ ಕಾಣುತ್ತಿದೆಯ ಎಂದು ತಲೆ ತಿನ್ನುತ್ತಿದ್ದೆ. ಟೀವಿಗೆ ಬಡೆದಾಗ ಡಿಶ್ ಬಂದುಬಿಟ್ಟರಂತೂ ನಮ್ಮಲ್ಲಿ ಮಹಾ ಮಂತ್ರವಾದಿ ಜನ್ಮ ತಾಳುತ್ತಿದ್ದ. ಮಂತ್ರಕ್ಕೆ ಮಾವಿನಕಾಯಿ ಉದರಿತು ಎಂಬಂತೆ. ಮುಂದಿನ ಬಾರಿ ಹೋದಾಗ ನಮಣ್ಣ ನನಗೆ ಬಡೆಯಲು ಹೇಳುತ್ತಿದ್ದ. ನನಗೆ ನೆನಪಿದ್ದ ಹಾಗೆ ಡಿ.ಡಿ ಹಾಗು ಉದಯ ಎರಡೇ ಚಾನಲ್ಗಳು ನಮ್ಮ ಮನೆಯಲ್ಲಿ ಹೆಚ್ಚು ನೋಡುತ್ತಿದ್ದುದ್ದು.
ಆವಿಷ್ಕಾರ ಅಷ್ಟಕ್ಕೇ ನಿಂತಿರಲಿಲ್ಲ ನೋಡಿ, ಕಲರ್ ಟೀವಿಗಳ ಆಕ್ರಮಣ ಜೊತೆಗೆ ರಿಮೋಟ್ ಕಂಟ್ರೋಲರ್. ನಮ್ಮನ್ನು ಅತ್ಯಂತ ಹೆಚ್ಚು ಆಕರ್ಶಣೆ ಮಾಡಿತ್ತು. ಇದೂ ಕೂಡ ಪಕ್ಕದ ಮನೆಯಲ್ಲೇ ಮೊದಲು ಬಂದಿದ್ದು. ಸ್ವಲ್ಪ ದೊಡ್ಡವನಾಗಿದ್ದರಿಂದ ಅಪ್ಪ ಅಮ್ಮನ ಸಹಾಯವಿಲ್ಲದೆ ಅವರ ಮನೆಗೆ ಕಲರ್ ಟೀವಿ ನೋಡಲೆಂದೆ ಹೋಗುತ್ತಿದ್ದೆ. ಆ ಮನೆಯಲ್ಲಿದ್ದ ಮಾಮಿ ನಮ್ಮ ಮನೆಯಲ್ಲಿ ಎಲ್ಲಾ ಕಲರ್ ಕಲರ್ ಎಂದು ನನ್ನನ್ನು ತಮಾಷೆ ಮಾಡಿ ಛೇಡಿಸುತ್ತಿದ್ದದ್ದು ನೆನಪಿದೆ. ರಿಮೋಟ್ ಮಾತ್ರ ನನ್ನ ಕೈಲಿ ಕೊಡುತ್ತಿರಲಿಲ್ಲ. ಅಂದು ನನಗೆ ರಿಮೋಟ್ ಬದಲು ಬಂಗಾರ ಕೊಟ್ಟರೂ ತೆಗೆದುಕೊಳ್ಳುವ ಮನಸ್ಸಿರಲಿಲ್ಲ.
ಕಲರ್ ಟೀವಿ ನಮ್ಮ ಮನೆಗೆ ಬರಲೂ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ, ಗಾತ್ರದಲ್ಲಿ ದೊಡ್ಡದಾಗಿದ್ದ ಟೀವಿಗೆ, ಹಿಂದೆ ದೊಡ್ಡ ಡೂಮು ಬೇರೆ, ಮಂಚಗಳು ಸ್ವಲ್ಪ ಜರಿದು ಮೂಲೆಯಲ್ಲಿ ಟೀವಿಗೆ ಜಾಗ ಮಾಡಿಕೊಟ್ಟವು. ಅಷ್ಟದಿಕ್ಕುಗಳಿಗೂ ರಿಮೋಟನ್ನು ತಿರುಗಿಸಿ ತಿರುಗಿಸಿ ಪರಿಶೀಲಿಸಿ ನೋಡಿದ್ದೆ. ಪಕ್ಕದ ಮನೆಯ ಟೀವಿಗೆ ಹೋಗಿ ನಮ್ಮ ರಿಮೋಟ್ ವರ್ಕ್ ಆಗುತ್ತದೆಯ ಎಂದೂ ಪರಿಶೀಲಿಸುತ್ತಿದ್ದೆ. ಆ ರಿಮೋಟಿನಲ್ಲಿ ಅರ್ಥವಾಗದ ಕೀಗಳಂತೂ ನನಗೆ ಚಿದಂಬರ ರಹಸ್ಯವಾಗಿದ್ದವು. ಅಷ್ಟೇ ಕುತೂಹಲ ಟೀವಿಯ ಹಿಂದೆ ಸಂಧಿಯಲ್ಲಿ ಇಣುಕಿ ನೋಡುವುದು.
ಟೀವಿಯ ಮೇಲ್ಮೈ ಅಮ್ಮನ ಅಲಂಕಾರ ವಸ್ತುಗಳಿಗೆ, ಅಪ್ಪನ ವ್ಯವಹಾರದ ಚೀಟಿಗಳಿಗೆ, ನಮ್ಮ ಆಟದ ಸಾಮಾನುಗಳಿಗೆ ಜಾಗ ಮಾಡಿಕೊಟ್ಟಿತ್ತು. ಟೀವಿಯ ಮೇಲಿದ್ದ ಹೂದಾನಿ, ಕೋಲ್ಗೇಟಿಗೆ ಫ್ರೀಯಾಗಿ ಬರುತ್ತಿದ್ದ ಸಚಿನ್, ದ್ರಾವಿಡ್ ಹಾಗೂ ನನ್ನ ಕಾರುಗಳು, ಟೀವಿಯನ್ನು ನೋಡುವ ಭಾಗ್ಯವನ್ನು ಕಳೆದುಕಂಡಿದ್ದವು.
ನನ್ನ ಸುಮಾರು ವರ್ಷ ದೊಡ್ಡ ಪೆಟ್ಟಿಗೆಯೊಂದಿಗೆ ಕಳೆಯಿತು. ಕಣ್ಣನ್ ಮಾಮರ "ಮತ್ತೆ ನಾಳೆ ಭೇಟಿಯಾಗೋಣ" ಇಂದ ಪ್ರಾರಂಭವಾಗಿ, ಉದಯ ವಾರ್ತೆಯ "ಇಲ್ಲಿಗೆ ವಾರ್ತಾ ಪ್ರಸಾರ ಮುಗಿಯಿತು, ಮುಂದಿನ ವಾರ್ತಾ ಪ್ರಸಾರ ನಾಳೆ ರಾತ್ರಿ ಎಂಟು ಮೂವತ್ತಕ್ಕೆ" ಗೆ ಮುಗಿಯುತ್ತಿತ್ತು. ಭಾನುವಾರದ ಪ್ರಪಂಚ ಪರ್ಯಟನೆ, ಶಕ್ತಿಮಾನ್, ಅಲಿಫ್ ಲೈಲ, ಪಾಪ ಪಾಂಡು ನಮ್ಮೆಲ್ಲರ ಕಾರ್ಯಕ್ರಮಗಳಾಗಿದ್ದರೆ, ಜನನಿ, ಮಾಯಾಮೃಗ, ಚದುರಂಗ ನಮ್ಮ ತಾಯಿಯ ಕಾರ್ಯಕ್ರಮ. ನಮಿಬ್ಬರ ಶತ್ರು ವಾರ್ತೆಗಳು ನಮ್ಮ ತಂದೆಯ ನೆಚ್ಚಿನ ಕಾರ್ಯಕ್ರಮ.
ಇತ್ತೀಚೆಗೆ ಸುಮಾರು ಎರಡು ಮೂರು ವರ್ಷಗಳ ಹಿಂದೆಯಷ್ಟೆ ನಮ್ಮ ಮನೆಯಲ್ಲಿ ಆ ಭೂತಗಾತ್ರದ ಟೀವಿಯ ಗತಕಾಲದ ವೈಭವ ಮುಕ್ತಾಯವಾಯಿತು. ಮೇಲಿಡುತ್ತಿದ್ದ ಹೂದಾನಿ, ಫೋಟೋಗಳು ಶೋಕೇಸ್ ಸೇರಿದವು, ಟೀವಿ ಸ್ವತಃ ಗೋಡೆಗೆ ನೇಣು ಹಾಕಿಕೊಂಡಿತು, ಕಿಟಕಿಯಿಂದ ತೂರಿಕೊಂಡು ಬಂದ ಕೇಬಲ್ - ಗೋಡೆಯ ಒಳಗಿಂದ ಬಂದಿತು, ಒಂದು ರಿಮೋಟ್ ಮರಿ ಹಾಕಿ ಎರಡಾದವು. ಟೀವಿಯ ಗಾತ್ರದ ಜೊತೆ ಕಾರ್ಯಕ್ರಮಗಳೂ ತನ್ನ ಗುಣಮಟ್ಟವನ್ನು ಸಣ್ಣದಾಗಿಸುತ್ತಾ ಬಂದವು. ತಂತ್ರಜ್ಞಾನದ ಸಹಾಯದಿಂದ ಇಂದು ನೋಡಲಾಗದ ಕಾರ್ಯಕ್ರಮ ರಾತ್ರಿಯೋ ಅಥವ ನಾಳೆಯೋ ಅಂತರ್ಜಾಲದಲ್ಲಿ ನೋಡಬಹುದಾಗಿದೆ.
ನಮ್ಮ ಕಾಲದಲ್ಲಿ ಹೀಗಿತ್ತು ಎಂದು ಹೇಳುವಷ್ಟು ಬದಲಾಗಿದೆ. ಇದಿಷ್ಟೂ ನನ್ನ ನೆನಪು ಹಾಗು ಅನುಭವ. ಇನ್ನು ಟೀವಿಯನ್ನು ಹೊಸದಾಗಿ ನೋಡಿದವರ ಅನುಭವ ಇನ್ನೂ ಕುತೂಹಲವಾಗಿರುತ್ತದೆ. ಈ ರೀತಿಯ ಸವಿ ನೆನಪುಗಳೇನಾದರೂ ನಿಮ್ಮಲ್ಲಿ ಇದ್ದೆರೆ ಇಲ್ಲಿ ಹಂಚಿಕೊಳ್ಳಿ.
"ಮತ್ತೆ ಇನ್ನೊಮ್ಮೆ ಭೇಟಿಯಾಗೋಣಾ...."