Saturday, May 28, 2016

ಜಗಲೀ ಕಟ್ಟೆ

ಇಂದು ಯಾಕೋ ಇಲ್ಲಿ ಒಂದು ಮನೆಯ ಮುಂದಿನ ಜಗಲೀ ಕಟ್ಟೆ ನೋಡಿ ನನ್ನ ತಲೆಯಲ್ಲಿ ನನ್ನ ಬಾಲ್ಯದ ಜಗಲೀ ಕಟ್ಟೆಯ ನೆನಪಾಯಿತು. ಕೆಲ ಸಂಗತಿಗಳು ನಮ್ಮ ನಿಮ್ಮೆಲ್ಲರಲ್ಲಿ ಸಾಮ್ಯತೆಯಿರಬಹುದು. ಹಾಗೆ ನೀವೂ ಒಮ್ಮೆ ಫ್ಲಾಷ್ ಬ್ಯಾಕ್‌ಗೆ ಹೋಗಿ ಬನ್ನಿ.
ಈಗಿನ ಸಿಟ್ ಔಟ್‌ಗಳಲ್ಲಿ ಅಂತದ್ದೇನು ಸಂಗತಿಗಳು ನಡೆಯುವುದಿಲ್ಲ, ಕಾರಣ ನಾವಿಂದು ಕಾಲಿಗೆ ಚಕ್ರವನ್ನು ಕಟ್ಟಿಕೊಂಡಿದ್ದೇವೆ ಅಥವ ಯಾವುದೋ ವೈಫೈ ಮರದ ಕೆಳಗೆ ಕೂತು ಐದಿಂಚಿನ ಪ್ರಪಂಚದಲ್ಲೇ ಸುತ್ತಾಡುತ್ತಿದ್ದೇವೆ. ಅಲ್ಲದೇ ಪಕ್ಕದ ಮನೆಯವರ ಹೆಸರು ತಿಳಿಯದೇ ವರ್ಷಾನುಗಟ್ಟಲೆ ಬದುಕುತ್ತಿದ್ದೇವೆ ಕೂಡ. ನಮ್ಮ ಬದುಕಿನ ಮಟ್ಟ ಹೆಚ್ಚುತ್ತಾ ಹೋದಂತೆ ನಾವು ಒಂಟಿ ಪಿಶಾಚಿಗಳಾಗುತ್ತಿದ್ದೇವೆ. ನೆರೆಹೊರೆಯವರೊಂದಿಗೆ ಪರಸ್ಪರ ಒಡನಾಟ, ಬಾಂಧವ್ಯ ಬೆಳೆಸಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಳೆಯದನ್ನು ನೆನಪಿಸಿಕೊಂಡು ಖುಷಿ ಪಡಬೇಕಷ್ಟೆ.
ನನಗೆ ಜಗಲಿ ಕಟ್ಟೆ ಎಂದೊಡೆ ನೆನಪಿಗೆ ಬರುವುದು, ಶಾಲೆ ಮುಗಿಸಿಕೊಂಡು ಬಂದು ಬ್ಯಾಗೊಳಗೆ ನೀಟಾಗಿ ಜೋಡಿಸಿಟ್ಟ ಪುಸ್ತಕಗಳಿಂದ ಒಂದು ಪುಸ್ತಕ ತೆಗೆದು, ಕಾಲಿನ ಮುಂದೆ ಬ್ಯಾಗಿಟ್ಟಿಕೊಂಡು ಮಾಡುತ್ತಿದ್ದ ಹೋಂವರ್ಕ್. ನಮ್ಮ ಮನೆಯ ಜಗಲಿ ಕಟ್ಟೆ ಸಂಜೆಯ ಸಮಯದಲ್ಲಿ ಹೋಂವರ್ಕ್ ಕಟ್ಟೆಯಾಗಿ ಬದಲಾಗುತ್ತಿತ್ತು. ನಾನು ನನ್ನಣ್ಣ ಹಾಗು ಪಕ್ಕದ ಮನೆಯ ಹುಡುಗರೆಲ್ಲಾ ಅಲ್ಲೇ ಕೂತು ಹೋಂವೆರ್ಕ್ ಮಾಡುತ್ತಿದ್ದೆವು. ಯಾರಾದರೂ ನಂದು ಮುಗಿಯಿತೆಂದೊಡನೆ ನಮ್ಮ ಬರವಣಿಗೆಯ ವೇಗ ಹೆಚ್ಚಾಗುತ್ತಿತ್ತು. ನಂಗಿವತ್ತು ಮ್ಯಾತ್ಸ್ ಹೋಂವರ್ಕ್ ಏನು ಕೊಟ್ಟಿಲ್ಲ ಎಂದು ನಾನು ಹೇಳಿದೊಡನೆ ಉಳಿದವರೆಲ್ಲ ಉರಿದುಕೊಂಡಿದ್ದು ನನಗಂದು ಖುಷಿಕೊಡುತ್ತಿತ್ತು.
ಅಷ್ಟರಲ್ಲಿ ಹೋಂವರ್ಕ್ ಮುಗಿದವ ಬ್ಯಾಟ್ ಹಿಡಿದುಕೊಂಡು ಬಂದರೆ ಸಾಕು ನಮ್ಮ ಬರವಣಿಗೆ ನಿಂತಂತೆ. ಅಲ್ಲೇ ಬುಕ್ ಇಟ್ಟು ಎದ್ದೇಳುತ್ತಿದ್ದೆವು ಆಮೇಲೆ ಮಾಡಿದರಾಯಿತು ಎಂದು. ಆ ಕಟ್ಟೆಯ ಒಂದು ಬದಿಯಲ್ಲಿ ಸೀಮೇ ಸುಣ್ಣದಿಂದ ಅಥವ ಇಟ್ಟಿಗೆ ತುಂಡಿನಿಂದ ಬರೆದ ವಿಕೆಟ್ ಅನ್ನು ಸರಿಯಾಗಿ ತಿದ್ದಿ ನಮ್ಮದೇ ವಿಚಿತ್ರವಾದ ರೂಲ್ಸ್ ಅಲ್ಲಿ SPL(Street Premier League) ಶುರುಮಾಡಿಯೇ ಬಿಡುತ್ತಿದ್ದೆವು. ಅಷ್ಟರಲ್ಲೇ ಆ ಜಗಲೀ ಕಟ್ಟೆಗೆ ನಮಮ್ಮ, ಪಕ್ಕದ ಮನೆಯ ಮಾಮಿ, ಎದರು ಮನೆಯ ಆಂಟಿ ಎಲ್ಲರ ಆಗಮನ. ಕೇಳ್ತೀರ ಹರಟೆ ಪ್ರಾರಂಭವಾದರೆ ಸಾಕು, ಸೀದ ಕುಕ್ಕರ್ ಇಡಲು ರಾತ್ರಿ ಏಳಕ್ಕೆ ಏಳುತ್ತಿದ್ದರು. ಇವರೆಲ್ಲ ನಮ್ಮ ಪ್ರೇಕ್ಷಕರೆಂದು ತಿಳಿಯಬೇಡಿ, ಇವರಿಂದ ನಮಗೆ 'ಏಯ್ ಆಕಡೆ ಹೋಗಿ ಆಡ್ಕೊಳ್ರೋ' ಅನ್ನೋ ಡೈಲಾಗ್ ತಪ್ಪಿದ್ದಲ್ಲ. ಬಯ್ಕೊಳ್ತಾನೆ ಹೋಗುತ್ತಿದ್ದೆವು. ಚೆಂಡಿನ ಏಟು ಕೂತವರಿಗೆ ಬಿದ್ದಾಗ ಒಂದು ಕಡೆ ಭಯ, ಒಂದು ಕಡೆ ಸಂತೋಷ. ಚೆಂಡಿನ ಏಟು ಒಬ್ಬರಿಗೆ ಬಿದ್ದಾಗ ನಗೆಯ ಬದಲು feeling sorry ಆದರೆ ಅಂದು ನಮ್ಮ ಬಾಲ್ಯ ಮುಗಿದಿದೆ ಎಂದರ್ಥ.
ಇನ್ನು ಬೇಸಿಗೆ ರಜೆ ಬಂತೆಂದರೆ ಸಾಕು ಆ ಕಟ್ಟೆಯ ತುಂಬ ಚೌಕಗಳು. ಚೌಕಬಾರ, ಕುಂಟಾಪಿಲ್ಲೆ, ಚೆನ್ನಮಣೆ, ರಾಜ ರಾಣಿ ಈ ಎಲ್ಲಾ ಆಟಗಳ ಪ್ಲೇಗ್ರೌಂಡ್ ಆಗುತ್ತಿತ್ತು. ರಾತ್ರಿ ಅದರ ಮೇಲೆ ಮಲಗಿ ಕತ್ತನ್ನು ಉಲ್ಟ ಕೆಳಗೆ ಇಳಿ ಬಿಟ್ಟು ಸಪ್ತಋಷಿ ಮಂಡಲ ಹುಡುಕುತ್ತಿದ್ದ ಮಜವೇ ಬೇರೆ. ಅದೇನೋ ಆ ಸಮಯದಲ್ಲಿ ಒಂದಾದರೂ ವಿಮಾನ ತನ್ನ ದೀಪವನ್ನು ಮಿನುಗಿಸುತ್ತಾ ಹೋಗುತ್ತಿತ್ತು. 
ಕಟ್ಟೆಯನ್ನು ಹತ್ತಿ ಜಿಗಿದು ಮಾಡುತ್ತಿದ್ದ ರಂಪಾಟದಲ್ಲಿ ಮೂಲೆಯಲ್ಲಿ ಇಟ್ಟಿದ್ದ ತುಳಸಿ ಡಬ್ಬವನ್ನು ಎಡವಿ ಬೀಳಿಸಿ ಅಮ್ಮನ ಬಳಿ ಮಂಗಳಾರತಿ ಮಾಡಿಸಿಕೊಂಡ ನೆನಪು ಇದೆ. ಬೈದಾಗ ಮುಖ ಊದಿಸಿಕೊಂಡು ಬಂದು ಕೂಡುತ್ತಿದ್ದ ಜಾಗ ಕೂಡ ಅದೇ. ಆ ಕಟ್ಟೆ ಅಲ್ಲಿ ಕೂತವರು ನಗುನಗುತ್ತಾ ಇರಬೇಕೆಂದು ನಿಯಮ ಮಾಡಿಕೊಂಡಿತ್ತೋ ಏನೋ ಮುಖ ಊದಿಸಿ ಕೊಂಡು ಕೂತ ತಪ್ಪಿಗೆ ಮಳೆಗಾಲದಲ್ಲಿ ಜರ್ರನೆ ಜಾರಿ ತಲೆ ಊದುವ ಹಾಗೆ ಮಾಡಿತ್ತು. ಆ ಕಟ್ಟೆ ಬಿಸಿಲಲ್ಲಿ ಬಂದ ತರಕಾರಿ ಮಾರುವವರಿಗೆ, ನನ್ನ ಸೈಕಲ್ಲಿಗೆ, ನಾಯಿ ಹಸುಗಳಿಗೆ ವಿಶ್ರಮಿಸುವ ಜಾಗ ಕೂಡ ಆಗಿತ್ತು. ನನ್ನ ತಂದೆ ಹಾಗು ಪಕ್ಕದ ಮನೆ ಅಂಕಲ್‌ಗಳಿಗೆ ರಾಜಕೀಯ ಮಾತನಾಡುವ ವೇದಿಕೆ.
ಎದರುಗಡೆಯ ಮೋರಿ ರಿಪೇರಿ , ರಸ್ತೆಗೆ ಟಾರ್ ಹಾಕಲು ಬಂದರಂತೂ ಚಿನ್ನದ ಗಣಿ ಅಗೆಯುವುದನ್ನು ನೋಡುವ ಹಾಗೆ ನೋಡಲು ಆ ಕಟ್ಟೆಯ ಮೇಲೆ ಫಿಕ್ಸ್. ಅಪ್ಪ ಕೆಲಸ ಮುಗಿಸಿ ಬರುವುದನ್ನು ನಾವು ಕಾದಿದ್ದು, ಶಾಲೆಯಿಂದ ಬರುವ ನಮ್ಮನ್ನು ನಮ್ಮ ಅಮ್ಮ ಕಾಯುತ್ತದ್ದದ್ದು ಅದೇ ಕಟ್ಟೆಯಮೇಲೆ ಕುಳಿತು. ಕೊನೆಗೆ ನಮ್ಮಜ್ಜಿಯು ತೀರಿ ಹೋದಾಗ ಅವರ ದೇಹವನ್ನು ಎತ್ತಿಕೊಂಡು ಹೋಗುವುದನ್ನು ದುಃಖ, ಭಯ ಹಾಗು ಗೊಂದಲದಲ್ಲಿ ನೋಡಿದ್ದು ಅದೇ ಜಗಲಿ ಕಟ್ಟೆಯಲ್ಲಿ ಕುಳಿತು.
ಆದರೆ ಇಂದು ಮನೆಗೆ ಕಟ್ಟೆಗಳೇ ಕಡಿಮೆ ಇದ್ದರೂ ಆಳೆತ್ತರದ ಕಾಂಪೌಂಡುಗಳ ಹಿಂದೆ ಯಾರಿಗೂ ಕಾಣದ ಹಾಗೆ ಮಲಗಿವೆ. ಮಕ್ಕಳೋ ಮೊಬೈಲ್ನಲ್ಲೇ ಹಾರುತ್ತಾರೆ, ಕುಣಿಯುತ್ತಾರೆ. ಇಲ್ಲಿ ವೈಫೈ ಸರಿ ಸಿಗುವುದಿಲ್ಲವೆಂದು ಒಳಗೆ ಕೂಡುವ ಯುವಕರು, ಸೀರಿಯಲ್‌‌ ನೋಡುವುದರಲ್ಲಿ ಮುಳುಗುವ ತಾಯಂದಿರು. ಒಟ್ಟಾರೆಯಾಗಿ ನಗರಗಳಲ್ಲಿ ಜಗಲಿ ಕಟ್ಟೆಯ ಸುಂದರ ಜಗತ್ತು ಕಾಣೆಯಾಗುತ್ತಿದೆ.