Saturday, September 24, 2016

ನಿಮ್ಮ ಸಂಪಾದನೆ ಸತ್ಯದ ಮಾರ್ಗದಲ್ಲಿರಲಿ

ಹಿಂದಿನ ಕಾಲದ ಒಂದು ಕಥೆ, ಇಂದಿಗೂ ಪ್ರಸ್ತುತವಾಗಿದೆ.
ಒಬ್ಬ ಬ್ರಾಹ್ಮಣ ಯಾತ್ರೆಗೆಂದು ಪ್ರಯಾಣ ಬೆಳೆಸಿದ್ದಾನೆ. ಸಂಜೆಯಾಗುತ್ತಾ ಬಂದಿದ್ದರಿಂದ, ಹತ್ತಿರವಿದ್ದ ಹಳ್ಳಿಯಲ್ಲಿ ಯಾರೋ ಒಬ್ಬನ ಮನೆಯಲ್ಲಿ ಉಳಿದುಕೊಳ್ಳಲು ಹೋಗುತ್ತಾನೆ. ತಡ ರಾತ್ರಿಯಾಗಿದ್ದರಿಂದ ಆ ಮನೆಯವರು ಊಟ ಮುಗಿಸಿ ಕುಳಿತಿರುತ್ತಾರೆ. ಮನೆಗೆ ಬ್ರಾಹ್ಮಣ ಬಂದಿದ್ದಾನೆ, ಆಯಾಸವಾಗಿರುತ್ತದೆ, ಊಟಕ್ಕೆ ಏನಾದರೂ ಏರ್ಪಾಡು ಮಾಡಬೇಕೆಂದು ತನ್ನ ಹುಡುಗನನ್ನು ಕರೆದು ಪದಾರ್ಥಗಳನ್ನು ತರಲು ಹೇಳುತ್ತಾನೆ. ರಾತ್ರಿಯಲ್ಲೂ ಹೇಗೋ ಪದಾರ್ಥಗಳನ್ನು ತಂದು ಕೊಡುತ್ತಾನೆ. ಅಡುಗೆ ಮಾಡಿ ಬಡಿಸಿ, ನಂತರ ಮನೆಯಲ್ಲಿ ಕಟ್ಟಿದ್ದ ಹಸುವಿನ ಹಾಲು ಕೊಟ್ಟು ಮಲಗಲು ಏರ್ಪಾಡು ಮಾಡುತ್ತಾರೆ. ರುಚಿಯಾದ ಹಾಲು ಕುಡಿದು ಯಜಮಾನನ ಉಪಚಾರದಿಂದ ಸಂತುಷ್ಟಗೊಂಡ ಬ್ರಾಹ್ಮಣ ನಿದ್ದೆಗೆ ಜಾರುತ್ತಾನೆ. ನಡು ರಾತ್ರಿ ಆತನಿಗೆ ಎಚ್ಚರವಾಗಿ ಆ ಹಸುವಿನ ಹಾಲು ಅಷ್ಟೊಂದು ರುಚಿಯಾಗಿದೆ, ಅದನ್ನು ಕದ್ದೊಯ್ದರೆ ತನ್ನ ಹೆಂಡತಿ ಮಕ್ಕಳು ಪ್ರತಿನಿತ್ಯ ರುಚಿಯಾದ ಹಾಲು ಮೊಸರು ತಿನ್ನಬಹುದು ಎಂಬ ದುರಾಲೋಚನೆ ಬರುತ್ತದೆ. ತಡ ಮಾಡದೆ ಆ ಕೆಲಸವನ್ನು ಮಾಡಿಯೇ ಬಿಡುತ್ತಾನೆ.
ಸೂರ್ಯೋದಯವಾಗುತ್ತದೆ, ಯಜಮಾನ ಬ್ರಾಹ್ಮಣನಿಗೆ ಎಬ್ಬಿಸಿ ಹಾಲು ಕೊಟ್ಟು ಆತನ ಮುಂದಿನ ಪ್ರಯಾಣಕ್ಕೆ ಸಹಾಯ ಮಾಡಬೇಕೆಂದು ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ಹಸು ಕಾಣಿಸುವುದಿಲ್ಲ. ಸರಿ ಬ್ರಾಹ್ಮಣನನ್ನು ಎಬ್ಬಿಸೋಣ ಎಂದು ಕೊಠಡಿಗೆ ಹೋದರೆ ಬ್ರಾಹ್ಮಣನೂ ಹೋಗಿರುತ್ತಾನೆ. ತಕ್ಷಣ ಕೋಪಗೊಳ್ಳದೇ ಛೇ ಅನಾಯಾಸವಾಗಿ ಬಂದಿದ್ದನು, ಆ ಹಸುವನ್ನು ದಾನ ಮಾಡಿದ್ದರೆ ನನಗೂ ಪುಣ್ಯ ಬರುತ್ತಿತ್ತು, ಆತನಿಗೂ ಈ ಕೆಟ್ಟ ಕೆಲಸ ಮಾಡದ ಹಾಗಾಗುತ್ತಿತ್ತು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ಹುಡುಕಿಯಾದರೂ ಅವನಿಗೆ ದಾನ ಮಾಡಿ ಬರಬೇಕು ಎಂದುಕೊಂಡು ಹೊರಡುತ್ತಾನೆ.
ಇತ್ತ ಬ್ರಾಹ್ಮಣ ಯಾವುದೋ ಮರದ ಕೆಳಗೆ ಮಲಗಿದ್ದವನು ಎದ್ದಾಗ ತನ್ನ ತಪ್ಪಿನ ಅರಿವಾಗುತ್ತದೆ. ಎಂದೂ ಈ ರೀತಿಯ ತಪ್ಪು ಮಾಡಿದವನಲ್ಲ, ಇಂದು ಏಕೆ ಹೀಗೆ ಮಾಡಿದೆ, ಉಪಕಾರ ಮಾಡಿದ ಆ ಯಜಮಾನನಿಗೆ ಪುನಃ ಹಸುವನ್ನು ಹಿಂತಿರುಗಿಸಬೇಕೆಂದು ಊರ ಕಡೆ ಹೊರಡುತ್ತಾನೆ.
ಊರ ಬಾಗಿಲಿನ ಹತ್ತಿರ ಇಬ್ಬರು ಎದರುಗೊಳ್ಳುತ್ತಾರೆ. ಆ ಬ್ರಾಹ್ಮಣ ಕ್ಷಮೆ ಕೇಳಿ, ನನ್ನಿಂದ ಈ ತಪ್ಪು ಹೇಗಾಯಿತು ಎಂದು ತಿಳಿಯುತ್ತಿಲ್ಲ. ಎಂದು ಹಸುವನ್ನು ಹಿಂತಿರುಗಿಸುತ್ತಾನೆ. ನಂತರ ಆ ತಡ ರಾತ್ರಿಯಲ್ಲಿ ಆಹಾರದ ಪದಾರ್ಥಗಳು ಎಲ್ಲಿ ಸಿಕ್ಕವು ಎಂದು ಕೇಳುತ್ತಾನೆ. ಯಜಮಾನ ಹುಡುಗನನ್ನು ಕರೆದು ಕೇಳುತ್ತಾನೆ. ಆತ ನಡೆದ ಘಟನೆಯನ್ನು ವಿವರಿಸುತ್ತಾನೆ. ಎಲ್ಲೂ ಸಿಗದ ಕಾರಣ, ಕದ್ದು ತಂದೆ ಎಂದು ತಪ್ಪೊಪ್ಪಿಕೊಳ್ಳುತ್ತಾನೆ. ಆಗ ಬ್ರಾಹ್ಮಣ ಇಷ್ಟಕ್ಕೆಲ್ಲಾ ಕಾರಣ ಆ ಕದ್ದು ತಂದ ಅಕ್ಕಿ ಎಂದು ಹೇಳಿ ಯಜಮಾನನಿಗೆ ಧನ್ಯವಾದವನ್ನು ತಿಳಿಸಿ ಮುಂದುವರೆಯುತ್ತಾನೆ.
#ನೀತಿ: ತಿನ್ನುವ ಆಹಾರ ಶುದ್ಧವಾಗಿರಬೇಕು(ಬಾಹ್ಯ ಸ್ವಚ್ಛತೆಯ ಜೊತೆಗೆ, ಅದನ್ನು ಪಡೆದ ರೀತಿ). ಮೋಸದಿಂದ ಗಳಿಸಿದ ಆಹಾರ ಸೇವನೆ ನಮ್ಮಲ್ಲಿ ಮೋಸದ ಗುಣಗಳನ್ನು ಬೆಳೆಸುತ್ತದೆ. ಏಕೆಂದರೆ ಗುಣಗಳು ನಾವು ಮಾಡುವ ಕಾರ್ಯದ ಮೇಲೆ ನಿರ್ಧಾರಗೊಳ್ಳುತ್ತದೆ, ಕಾರ್ಯದಲ್ಲಿ ನಮ್ಮ ಮೆದುಳಿನ ಪಾತ್ರ ದೊಡ್ಡದು. ಮೆದುಳಿಗೆ ರಕ್ತ ಸಂಚಾರ ಮುಖ್ಯ, ರಕ್ತಕ್ಕೆ ಆಹಾರ ಮುಖ್ಯ. ಮೋಸದಿಂದ ಸಂಪಾದಿಸಿದ ಆಹಾರ ಸರ್ವತಾ ನಿಷಿದ್ಧ.

Tuesday, September 20, 2016

ಹೀಗೊಂದು ಕಲ್ಪನೆ ಮಾಡಿಕೊಳ್ಳಿ

ಎತ್ತರದ ಕಟ್ಟದ ಅದರ ತಾರಸಿಯ ಮೇಲೆ ಒಂದು ಸಭ್ಯ ಔತಣಕೂಟ ನಡಿತಾ ಇದೆ. ಪ್ರೇಮಿಯೊಬ್ಬ ಪ್ರೇಮ ಪತ್ರ ಬರೆದು ಹರಿದು ಕಿಟಕಿಯಿಂದ ಬಿಸಾಡಿದಾಗ ಹರಡಿಕೊಂಡ ಹಾಳೆಗಳ ಚೂರಿನಂತೆ ಜನ ಚದುರಿಕೊಂಡು ಅವರವರ ಪರಿಚಯದವರ ಜೊತೆ ಮಾತನಾಡುತ್ತಾ, ಪರಿಚಯವಿಲ್ಲದವರ ಕಡೆ ಕಣ್ಣು ಹಾಯಿಸುತ್ತಾ ಪಾನೀಯವನ್ನು ಸವಿಯುತ್ತಿದ್ದಾರೆ. ಹೆಂಗಳೆಯರಿಗೆ ಬೇರೆಯವರ ನೆಕ್ಲೇಸ್, ಡ್ರೆಸ್, ಹೈರ್ ಸ್ಟೈಲ್ ಕಡೆ ಗಮನ, ಗಂಡಸರಿಗೆ ಆ ಹೆಂಗಳೆಯರ ಮೇಲೆ ಗಮನ. ನಗರದ ಬೆಳಕು ಕೋಟ್ಯಾಂತರ ನಕ್ಷತ್ರಗಳನ್ನು ನುಂಗಿಹಾಕಿದೆ. ತಾರಸಿಯ ಮಧ್ಯದಲ್ಲಿ ಸಣ್ಣ ಕಾರಂಜಿ. ಸಣ್ಣ ಮಕ್ಕಳು ಅಲ್ಲಿ ಬಿಟ್ಟರೆ ಐಸ್ ಕ್ರೀಮ್ ಇರುವ ಕಡೆಯಷ್ಟೆ ಕಾಣ ಸಿಗುತ್ತಾರೆ. ಸೂರ್ಯ ಮುಳುಗಿದರೂ ಗೊತ್ತಾಗದಷ್ಟು ಬೆಳಕು.
ಕಾರಂಜಿಯ ನೀರು ಮೇಲೆ ಚಿಮ್ಮಿ ಕೆಳಗೆ ಬೀಳುವಷ್ಟರಲ್ಲಿ ಭಯಾನಕವಾದ ಶಬ್ಧ, ನೋಡ ನೋಡುತ್ತಿದ್ದಂತೆ ಪಾರ್ಟಿ ನಡೆಯುತ್ತಿದ ಕಟ್ಟಡದ ಒಂದು ಭಾಗಕ್ಕೆ ಬಾಂಬ್ ಹಾಕಿದ ಪರಿಣಾಮ ಕಟ್ಟಡ ಕುಸಿಯ ತೊಡಗಿದೆ. ಕುಸಿದು ಅರ್ಧ ತಿಂದು ಬಿಸಾಡಿದ ಕ್ಯಾರೇಟಿನ ತರ ನಿಂತಿದೆ ಆ ಕಟ್ಟಡ. ಇಂಪಾದ ಸಂಗೀತ ಬರುತ್ತಿದ್ದ ಮ್ಯೂಸಿಕ್ ಪ್ಲೇಯರ್ ನರಳಾಟ ಚೀರಾಟದ ಗದ್ದಲದಲ್ಲಿ ಮೌನವಾದಂತಿದೆ. ಯಾವ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯ, ಅಷ್ಟರಲ್ಲಿ ಅಮ್ಮಾ ಅಮ್ಮಾ ಎಂಬ ಮಗುವಿನ ದನಿ ಎಲ್ಲರನ್ನು ಮೌನಗೊಳಿಸಿದೆ. ಎಂಟು ವರ್ಷದ ಬಾಲಕಿ ಮುರಿದ ಕಟ್ಟಡದ ತುದಿಯಲ್ಲಿ ಕಬ್ಬಿಣದ ಸರಳಿಗೆ ಜೋತು ಬಿದ್ದು ರೋಧಿಸುತ್ತಿದೆ. ತಾಯಿ ತನ್ನ ತಲೆಯಿಂದ ಸುರಿಯುತ್ತಿದ್ದ ರಕ್ತವನ್ನು ಬೆವರಿನಂತೆ ಒರೆಸಿಕೊಳ್ಳುತ್ತಾ ಮಗಳ ಕಡೆ ಓಡುತ್ತಿದ್ದಾಳೆ. ಅಷ್ಟರಲ್ಲಿ ಕೃಷ್ಣೆಗೆ ಬಂದ ಕೃಷ್ಣನ ರೀತಿ ಜೇಡದ ವೇಶ ಧರಿಸಿದ ವ್ಯಕ್ತಿ ಹಗ್ಗವನ್ನು ಹಾಕಿ ಜಿಗಿದು ಬಾಲಕಿಯನ್ನು ಹಿಡಿದು, ಎದುರಿಗಿದ್ದ ಮತ್ತೊಂದು ಕಟ್ಟಡಕ್ಕೆ ಹಗ್ಗವನ್ನು ಎಸೆದು ಹಾರಿ, ಮತ್ತೆ ಅದೇ ಕಟ್ಟಡಕ್ಕೆ ತಂದು ಬಿಡುತ್ತಾನೆ. ಹಗ್ಗವಲ್ಲ ಬಲೆ!!. ಮಗು ತಾಯಿಯನ್ನು ಬಿಗಿದಪ್ಪಿಕೊಳ್ಳುತ್ತಾಳೆ. ತಾಯಿಗೆ ಸುರಿಯುತ್ತಿದ್ದ ರಕ್ತ ಪನ್ನೀರಿನ ಅನುಭವ ತರುತ್ತದೆ.
ನೆರೆದಿದ್ದ ಜನರೆಲ್ಲಾ ಚಪ್ಪಾಳೆಯ ಸುರಿಮಳೆ ತರುತ್ತಾರೆ. ತಾಯಿ ತತ್ಕ್ಷಣ ತಾನಿದ್ದ ಜಾಗ, ನಡೆದ ಸಂಗತಿ ನೆನಪಿಸಿಕೊಂಡು ಆ ವ್ಯಕ್ತಿಯ ಬಳಿ ಬಂದು ಕೈ ಮುಗಿದು ಕೃತಜ್ಞತೆಯಿಂದ ಆತನ ಹೆಸರನ್ನು ಕೇಳುತ್ತಾಳೆ. ಆತ ಸ್ಪೈಡರ್ ಮ್ಯಾನ್ ಎಂದು ಮುಖಕ್ಕೆ ಮುಚ್ಚಿದ್ದ ಮುಖವಾಡವನ್ನು ತೆರೆಯುತ್ತಾನೆ. ಜಾದೂಗಾರನ ಕೈಲಿ ಕೊಳವೆಯಿಂದ ಹೊರತೆಗೆದ ಹೂವಿನಂತೆ ಆತನ ನಯವಾದ ಕೂದಲುಗಳು ಹಾರಾಡತೊಡಗುತ್ತದೆ. ಮ್ಯೂಸಿಕ್ ಪ್ಲೇಯರ್ ನಲ್ಲಿ ಹಳೆಯ ಹಾಡೊಂದು ಬರಲು ಪ್ರಾರಂಭಿಸುತ್ತದೆ, ಹತ್ತು ಪುರುಷರು ಹತ್ತು ಮಹಿಳೆಯರು ಗುಂಪಾಗಿ ಅವನು ನಡೆಯುತ್ತಿದ್ದ ದಾರಿಯ ಪಕ್ಕದಲ್ಲಿ ಚಪ್ಪಾಳೆ ತಟ್ಟುತ್ತಾ ನಿಲ್ಲುತ್ತಾರೆ. ಸಣ್ಣ ಹುಡುಗಿಯೊಂದು ಬಂದು ಆತನನ್ನು ಕರೆದು ಮುತ್ತು ಕೊಡುತ್ತಾಳೆ. ನಂತರ ಎಲ್ಲರೂ ಸೇರಿ ಐದು ನಿಮಿಷ ಹಾಡಿಗೆ ಹೆಜ್ಜೆ ಹಾಕುತ್ತಾರೆ.
ನಾನಿರುವುದೆ ನಿಮಗಾಗಿ ನಾಡಿರುವುದು ನಮಗಾಗಿ...

ಭಾರತದಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಮಾಡಿದರೆ, ಚಿತ್ರದ ಸನ್ನಿವೇಶ ಹೀಗಿರಬಹುದು ಅಲ್ಲವೇ?😜😜😜

Tuesday, September 6, 2016

ವಾತಾಪಿ ಗಣಪತಿಂ ಭಜೆ

ಅವರಾಡಿಕೊಳ್ಳೋದಕ್ಕೂ ಇವರು ಮಾಡುವುದಕ್ಕೂ ಸರಿ ಆಗ್ತಾ ಇದೆ.
ಜನರ ಸಂಘಟನೆಗಾಗಿ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕವಾಗಿ ಗಣಪತಿ ಇಡುವ ಪದ್ದತಿಯು ಇಂದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗ್ತಾ ಇದೆ. ತಮ್ಮ ತಮ್ಮ ಗಲ್ಲಿ ಗಲ್ಲಿಗಳಲ್ಲಿ ಇಟ್ಟುಕೊಂಡು ಸಂಘಟನೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಪಕ್ಕದ ಗಲ್ಲಿಯವರಿಗಿಂತಾ ಒಂದು ಹೆಚ್ಚು ಸ್ಪೀಕರ್ ತಂದು, ಹೊಸದಾಗಿ ರಿಲೀಸ್ ಆದ ಚಿತ್ರದ ಹಾಡು ಹಾಕುವುದೇ ಅವರ ಧ್ಯೇಯ. ಮೂರು, ಐದು ದಿನ, ಒಂದು ವಾರ ಹೀಗೆ ಇಡುತ್ತಿದ್ದ ಕಾಲ ಹೋಯಿತು, ಅಷ್ಟು ದಿನ ಗಣಪನನ್ನು ಮೈಂಟೇನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಒಂದೇ ದಿನಕ್ಕೆ ಜೈ ಎಂದುಬಿಡುತ್ತಾರೆ. ಕುಡಿಯಲು, ಕುಣಿಯಲೆಂದೇ ಗಣಪತಿಗಳನ್ನು ತಂದು ಕೆಟ್ಟದಾಗಿ ಹಾಡು ಹಾಕಿಕೊಂಡು, ಯಾವುದೋ ಟ್ರ್ಯಾಕ್ಟರ್, ಆಟೋಗಳಲ್ಲಿ ಇಟ್ಟುಕೊಂಡು ಹೋಗಿ ಬಿಟ್ಟು ಬರ್ತಾರೆ.
ನನ್ನ ಬಾಲ್ಯದಲ್ಲಿ (ಶಿಕಾರಿಪುರದಲ್ಲಿ) ಸಾರ್ವಜನಿಕವಾಗಿ ಅಂಬಾತನಯನನ್ನು ಇಡುತ್ತಿದ್ದ ಸಡಗರ ಸಂಭ್ರಮ ಇಂದು ನಾ ಕಾಣೆ. ಸುತ್ತಲಿನ ಮೂರು ನಾಲ್ಕು ಕೇರಿಯವರೆಲ್ಲ ಸೇರಿಕೊಂಡು ಗಣಪನನ್ನು ಕೂಡಿಸಿ ಹಬ್ಬವನ್ನು ಆಚರಿಸುತ್ತಿದ್ದರು. ಬೆಳಗ್ಗೆ ಸಮಯದಲ್ಲಿ ಹೋಮ ಹವನಗಳು ನಡೆದರೆ, ಸಂಜೆ ಮನೋರಂಜನೆಯೆಂದು ಸಂಗೀತ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು, ಯಾವುದಾದರು ಸಿನಿಮಾ ಪ್ರದರ್ಶನ ಹೀಗೆ ಸಭ್ಯತೆಯ ಚೌಕಟ್ಟು ಮೀರದಂತೆ ನಡೆಯುತ್ತಿತ್ತು. ವಿಸರ್ಜನೆ ಸಮಯದಲ್ಲಿ ಗಣಪತಿಯ ಮುಂದೆ ತಂಡೋಪ ತಂಡವಾಗಿ ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು, ದೊಡ್ಡ ಎರಡು ಗಂಡು ಹೆಣ್ಣಿನ ಗೊಂಬೆಗಳು, ಇನ್ನಿತರ ನೃತ್ಯ ತಂಡಗಳು. ಎಲ್ಲಾ ಮುಗಿದ ಮೇಲೆ ಭಕ್ತರು ಮುಂದೆ ನಾನು ಅವರ ಹಿಂದೆ ಎಂಬಂತೆ ಗಜಾನನನನ್ನು ಹೊತ್ತ ಅಲಂಕಾರಿತ ಟ್ರ್ಯಾಕ್ಟರ್ ಗಜನಡಿಗೆಯಲ್ಲಿ ಬರುತ್ತಿತ್ತು. ಡೊಳ್ಳಿನ ಶಬ್ಧ ಬಿಡಿ, ಹಿಂದೆ ಇಡುತ್ತಿದ್ದ ಜನರೇಟರ್‍ನ ಶಬ್ಧದವೂ ಕರ್ಕಶ ಎನಿಸುತ್ತಿರಲಿಲ್ಲ. ಇನ್ನು ಕಿವಿಯಲ್ಲಿ ಹಾಗೆಯೇ ಕೇಳಿಸುತ್ತಿದೆ.
ಆದರೆ ಇಂದು? ಗಣಪತಿಯೇ ಕಾಣದ ಹಾಗೆ ಹತ್ತಾರು ಸೌಂಡ್ ಸಿಸ್ಟಮ್ ಹೊತ್ತ ಗಾಡಿ, ಕಂಠ ಪೂರ್ತಿ ಕುಡಿದು, ಪ್ರಜ್ಞೆ ಇಲ್ಲದ ಹಾಗೆ ಕುಣಿಯುವ ಜನ, ಹಿಂದೆ ವಿಸರ್ಜನೆಗಾಗಿಯೇ ಕಾದು ಕುಳಿತಿರುವ ಗಣಪ. ಸಾರ್ವಜನಿಕ ಗಣೇಶೋತ್ಸವದ ಸೊಗಡೇ ಹಾಳಾಗಿ ಹೋಗಿದೆ. ಪಡ್ಡೇ ಹುಡುಗರ ಅಡ್ಡವಾಗಿ ಹೋಗಿದೆಯೇ ಹೊರೆತು, ತಿಲಕರ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.