Tuesday, October 18, 2016

ಪ್ರೇಮದ ಬಲೆಯಲ್ಲಿ ಜೇಡ.

ಸಿನಿಮಾಗಳಲ್ಲಿ ನಾಯಕನಿಂದ ನಾಯಕಿಗೆ ಪ್ರೇಮ ನಿವೇದನೆ ಮಾಡಿಸ್ಬೇಕು ಅಂದ್ರೆ ನಿರ್ದೇಶಕರಿಗೆ ತಕ್ಷಣ ಸಂಗೀತ ನಿರ್ದೇಶಕರು ನೆನಪಾಗ್ತಾರೆ. 'ಒಂದು ಗಿಟಾರ್ ಮ್ಯೂಸಿಕ್ ಇರೋ ಒಂದು ಹಾಡು ಮಾಡ್ಕೊಡಿ ಸರ್, ಒಳ್ಳೆ ರೊಮ್ಯಾಂಟಿಕ್ ಮೆಲೋಡಿ ಇರ್ಬೇಕು' ಅಂತ ಫೋನಾಯ್ಸಿ ಹೇಳ್ತಾರೆ. ನಾಯಕ ಗಿಟಾರ್ ಹಿಡ್ಕೊಂಡು ನಾಯಕಿ ಮನೆ ಹತ್ರ ನಿಂತು ಗಿಟಾರ್ ಬಾರಿಸ್ತಾ ಹಾಡು ಹೇಳ್ತಾನೆ, ನಾಯಕಿ ಕಿಟಕಿ ಇಂದ ನೋಡಿ ಬಿದ್ದೋಗ್ತಾಳೆ. ಕೆಳಗಲ್ಲ ಮಾರ್ರೇ, ಪ್ರೀತಿಲಿ. ಕೆಲವರು ಮನೆ ಹತ್ರ ಬೈಕಲ್ಲಿ ಸೈಕಲ್ ಅಲ್ಲಿ ಸ್ಟಂಟ್ಸ್ ಅಥವಾ ಡ್ಯಾನ್ಸ್ ಕೂಡ ಮಾಡ್ತಾರೆ. ನಂಗೊಂದು ಡೌಟು, ಅಲ್ಲಾ ಈ ನಾಯಕ ಹಾಗೆ ಬೀದಿಯಲ್ಲಿ ಹಾಡು ಹೇಳೋವಾಗ ಬೇರೆ ಯಾರಿಗಾದ್ರೂ ಕೇಳ್ಸಿ, ರಾತ್ರಿ ಡಿಸ್ಟರ್ಬ್ ಮಾಡ್ತೀಯ ಮಗನೆ ಅಂತೇಳಿ ಬಂದು ಎರಡು ಬಿಡೊಲ್ವಾ ಅಂತ. ಇರ್ಲಿ ಅದು ಸಿನಿಮಾ. ನಾನಿವಾಗ ಹೇಳಲಿಕ್ಕೆ ಹೊರ್ಟಿರುವುದು ಬೇರೆ.
ಮೇಲೆನ ಪ್ರಸಂಗ ಕೀಟ ಪ್ರಪಂಚಕ್ಕೂ ಬಿಟ್ಟಿಲ್ಲ. ಇಲ್ಲೊಂದು ಜೇಡ ಇದೆ, ಜಂಪಿಂಗ್ ಸ್ಪೈಡರ್ ಅಂತ, ನೀವು ನೋಡಿರಬಹುದು ಎಂಟು ಕಣ್ಣು ಇರುತ್ತೆ. ಇದು ತನ್ನ ಹುಡುಗಿ ಹೆಣೆದಿರೋ ಬಲೆ ಹಿಡ್ಕೊಂಡು ಅದರ ಹತ್ತಿರ ಹೋಗಿ ಹೇಗೆಲ್ಲಾ ಮಾಡೊತ್ತೆ ಅಂದ್ರೆ, ನಿರ್ದೇಶಕರಿಗೆ ಸ್ಫೂರ್ತಿ ಇದರಿಂದ ಬಂದಿರಬಹುದೇನೋ. ವಿವಿಧ ಶೈಲಿಯ ನೃತ್ಯ ಪ್ರಕಾರಗಳನ್ನೆಲ್ಲಾ ಮಾಡೊತ್ತೆ. ಆದರೆ ಹೆಣ್ಣು ಎಲ್ಲಾ ಜಾತಿಲೂ ಒಂದೆ ಅನ್ಸೊತ್ತೆ, ಬೇಗ ಒಪ್ಕೊಳಲ್ಲ. ಕೊನೆಗೆ ಗಿಟಾರ್ ಹಿಡ್ಕೊಂಡು ಸಂಗೀತ ಪ್ರಾರಂಭಿಸಿಯೇ ಬಿಡುತ್ತೆ. ಬಟ್ ಇಲ್ಲಿ ಇದರ ಸಂಗೀತಕ್ಕೆ ಯಾರು ಬಂದು ಹೊಡಿಯೊಲ್ಲ. ಆ ಜೇಡ ಸಂಗೀತ ಕಛೇರಿ ಮಾಡ್ತಿದೆ ಅಂದ್ರೆ ಆ ಜಾತಿಯ ಜೇಡಗಳಿಗೆ ಮಾತ್ರ ಕೇಳ್ಸುತ್ತೆ. ಮನುಷ್ಯರಿಗೆ ಕೇಳೊಲ್ಲ. ಅದು ತನ್ನ ದೇಹದ ಹಿಂಬಾಗವನ್ನು ಕಂಪಿಸುತ್ತಾ ಶಬ್ಧವನ್ನು ಮಾಡುತ್ತೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅದನ್ನು ಕೇಳಿಸಿಕೊಳ್ಳಲು ಅತ್ಯಾಧುನಿಕ ಲೇಸರ್ ವೈಬ್ರೆಟೋಮೀಟರ್ ಅನ್ನು ಉಪಯೋಗಿಸಿ ಅದರ ಕಂಪನದಿಂದ ಉಂಟಾಗುವ ಶಬ್ಧವನ್ನು ಆಲಿಸಿದ್ದಾರೆ.
ಎಂಥಾ ಪ್ರಕೃತಿಯ ವಿಸ್ಮಯ ಅಲ್ವಾ? ಅದರ ವೀಡಿಯೋವನ್ನು ಇಲ್ಲಿ ನೋಡಿ.


Saturday, October 1, 2016

ರೇಖಾಗಣಿತದ ತರಗತಿ ಒಂದು ತರಹದ ಇಂಡೋರ್ ಪಿ.ಇ ಪೀರಿಯಡ್.

ಶಾಲೆಯಲ್ಲಿ ಗಣಿತದ ತರಗತಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ನರಕ. ಏಕೆಂದರೆ ಬೇರೆ ತರಗತಿಯಲ್ಲಿ ಮಾತಾಡಿ ಸಿಕ್ಕಿಬಿದ್ದರೆ ನೇರ ಹೊಡೆತ. ಇಲ್ಲಿ ಮಗ್ಗಿ ಕೇಳಿ, ಆಮೇಲೆ ಯಾವುದಾದ್ರು ಸೂತ್ರ ಕೇಳಿ, ಕೊನೇಗೆ ಪ್ರಮೇಯಗಳ್ನ ಕೇಳಿ ಮರ್ಯಾದೆ ತೆಗೆದು ಆಮೇಲೆ ಹೊಡೆತ. ಆದರೆ ರೇಖಾಗಣಿತದ ತರಗತಿಯನ್ನು ಯಾರೂ ಮಿಸ್ ಮಾಡ್ಕೋತಿರ್ಲಿಲ್ಲ. ಏಂಕೆಂದ್ರೆ ಅದರ ತುಂಬ ಚಿತ್ರಗಳು ಬಿಡಿಸೋದು ಇರ್ತಿತ್ತು. ಒಂದು ರೀತಿ ಇನ್‌ಡೋರ್ ಪಿ.ಇ ಪೀರಿಯಡ್.
 ನನ್ನಣ್ಣನ ಜಾಮಿಟ್ರಿ ಬಾಕ್ಸು, ಅದರಲ್ಲಿ ಇದ್ದ ಪೆನ್ಸಿಲ್ ಹೆರೆದು ಮಾಡಿದ ಹೂಗಳು, ಪೆನ್ಸಿಲ್‌ನ ಮದ್ದು, ಮುರಿದ ಸ್ಕೇಲು, ಅದಕ್ಕೆ ಅಂಟಿಸಿದ ರಬ್ಬರ್ರು- ಅದರ ತುಂಬ  ಕೈವಾರ & ಪೆನ್ನಿನ ತೂತಗಳು, ಲೂಸ್ ಆಗಿದ್ದ ಕೈವಾರ- ಏನು ಮಾಡಿದರು ವೃತ್ತ ಪ್ರಾರಂಭವಾಗಿದ್ದ ಜಾಗಕ್ಕೆ ಬಂದು ಸೇರುತ್ತಿರಲಿಲ್ಲ, ಸಂಖ್ಯೆಗಳೇ ಕಾಣದ ಕೋನಮಾಪಕ, ಮೋಟು ಪೆನ್ಸಿಲ್ ನಮ್ಮೆಲ್ಲರ ಆಸ್ತಿ.
ಮೇಷ್ಟ್ರು ಒಂದು ಮರದ ದೊಡ್ಡ ಪೆಟ್ಟಿಗೆ ತರೋರು. ಯಾವುದೋ ಯಕ್ಷ ಪೆಟ್ಟಿಗೆ ಬಿಚ್ಚುತ್ತಿದ್ದಾರೇನೋ ಎಂಬಂತೆ ನೋಡುತ್ತಿದ್ದ ನಮ್ಮ ಕಣ್ಣುಗಳು.  ಅದರಲ್ಲಿದ್ದ ಆ ದೊಡ್ಡ‌ ಉಪಕರಣಗಳು ನಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗ್ತಿತ್ತು.
ಅಕ್ಕ ಪಕ್ಕದೋರ್ನ ನೋಡ್ಕೊಂಡು ಎಷ್ಟ್ ಸೆಂಟೀಮೀಟರ್ ಅಂತೋ ಅಂತ ಕೇಳ್ಕೊಂಡು ಸ್ಕೇಲ್ ಲಿ ಅಳೆದು ಚುಕ್ಕೆ ಇಟ್ಟು, ನೆಕ್ಸ್ಟ್ ಏನ್ ಮಾಡ್ಬೇಕಂತೆ ಅಂತ ಕೇಳ್ಕೊಂಡು ಕೇಳ್ಕೊಂಡು ಬರಿತಿದ್ದ ಮಜಾನೆ ಬೇರೆ. ಅಷ್ಟೆಲ್ಲಾ ಖುಷಿ ಕಷ್ಟ ಪಟ್ಟು ಬರಿತಿದ್ದಾದರು ಏನು? ಒಂದು ಸಮಭಾಹು ತ್ರಿಭುಜ. ನಮ್ಮಲ್ಲಿ ವಿಧಾನಸೌಧದ ನೀಲಿನಕ್ಷೆ ತಯಾರು ಮಾಡಿದ ರೀತಿ ಫೀಲಿಂಗು.
ನಾಲ್ಕು ಪೇಜಿಗೆ ತೂತ ಮಾಡುವ ಹಾಗೆ ಚುಚ್ಚಿ ಎಳೆದ ವೃತ್ತ, ಕೈವಾರದ ತುದಿ ಮುರಿದು ಹೋಗುವಂತೆ ಬೆಂಚಿನ ಮೇಲೆ ಬರೆದ ನಮ್ಮ ಹೆಸರು, ಆ ಪೈಥಾಗರಸ್ ಪ್ರಮೇಯ, ಚುಚ್ಚಿಕೊಂಡು ಮಾಡಿಕೊಂಡ ಗಾಯ. ನನ್ನ ನೋಟ್ಸೋ ಆ ದೇವರಿಗೇ ಪ್ರೀತಿ, ಚಿತ್ರಗಳು ಬಿಟ್ಟು ಇನ್ಯಾವ ಅಕ್ಷರಗಳೂ ಅರ್ಥ ಆಗ್ತಿರ್ಲಿಲ್ಲ.
ಸಂಜೆ ಹೋಗಿ ಹೋಂವರ್ಕ್ ಮಾಡಲು ಕೈಗೆತ್ತಿಕೊಳ್ಳುತ್ತಿದ್ದ ವಿಷಯ ಕೂಡ ರೇಖಾಗಣಿತ ನೇ..
ಇವತ್ತೊಂದು ಗೇಮ್ ಆಪ್ ಇನ್‌ಸ್ಟಾಲ್ ಮಾಡ್ಕೊಂಡೆ. ಕೆಳಗಿದೆ ನೋಡಿ ಲಿಂಕ್. ಮಕ್ಕಳಿಗೆ ಸಹಾಯ ಆಗೊತ್ತೆ. ಹಲವಾರು ಪ್ರಮೇಯಗಳ್ನ ಉಪಯೋಗಿಸಿ, ಅವರು ಕೊಟ್ಟಿರೋ ಹೋಂವರ್ಕ್ ಮಾಡ್ಬೇಕು ನಾವು.
ವಿ.ಸೂ: ಸ್ಕೇಲ್, ಪೆನ್ಸಿಲ್, ಕೈವಾರ, ಕೋನಮಾಪಕ ಏಲ್ಲಾ ಅವ್ರೇ ಕೊಟ್ಟಿದಾರೆ. ನೀವೇನು ತೊಗೊಳೋ ಅವಶ್ಯಕತೆ ಇಲ್ಲ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅವರ ಪೋಷಕರ ಅಥವ ದೊಡ್ಡವರ ಸಹಾಯದಿಂದ ಈ ಆಟ ಆಡಿಸಿ. ಒಳ್ಳೆ ಉಪಯೋಗ ಆಗೊತ್ತೆ.

https://play.google.com/store/apps/details?id=com.hil_hk.euclidea