Sunday, August 6, 2017

ಆಧಾರ

     ಸಂಜೆ ದಾರಿದೀಪಗಳು ಕಣ್ಣುಜ್ಜಿಕೊಂಡು ಏಳುವ ಹೊತ್ತು. ರಾಜೀವ ಅವನ ಬಾಸು ಹೇಳಿದ ಕೆಲಸವನ್ನು ಅವಸರದಲ್ಲೇ ಮುಗಿಸಿ ಆಫೀಸಿನಿಂದ ಆತುರಾತುರದಲ್ಲಿ ಹೊರಟ. ದಾರಿಯುದ್ದಕ್ಕೂ ಅವನಲ್ಲಿ ಅದೇನೋ ಚಿಂತೆ ಕಾಡುತಿತ್ತು. ಗಾಡಿಯ ಹಾರನ್ ಅನ್ನು ಪಿಸ್ತೂಲಿನ ಗುಂಡಂತೆ ಕಂಡ ಕಂಡವರ ಮೇಲೆಲ್ಲಾ ಹಾರಿಸುತ್ತಿದ್ದ. ಟ್ರಾಫಿಕ್ಕಿನಲ್ಲಿ ನಿಂತಾಗ ಜೇಬಿಂದ ಮೊಬೈಲ್ ಅನ್ನು ತೆಗೆದು ಹೆಲ್ಮೆಟಿನ ಸಂದಿಯಲ್ಲಿ ತೂರಿಸಿ ಯಾರಿಗೋ ಕೂಗಾಡುತ್ತಿದ್ದ. ಅಕ್ಕಪಕ್ಕದವರೆಲ್ಲಾ ಇವನ ರಂಪಾಟಕ್ಕೆ ಮನಸಿನಲ್ಲೇ ಇವನಿಗೇನಾಗಿದೆ ಅಂತ ಬಯ್ದುಕೊಳ್ಳುತ್ತಿದ್ದರು. ಹಲವು ಕಡೆ ಎಡಕ್ಕೆ ಸಿಗ್ನಲ್ ಹಾಕಿ ಬಲಕ್ಕೆ ತಿರುಗಿ ಹೋಗುತ್ತಿದ್ದ. ಐದು ನಿಮಿಷ ಬಂದೆ ಎನ್ನುತ್ತ ತನ್ನ ವೇಗವನ್ನು ಹೆಚ್ಚಿಸಿದ. ಸೂರ್ಯ ಇವನ ಅವಸರ ಕೂಗಾಟವನ್ನು ನೋಡಿ ಸ್ವಲ್ಪ ಬೇಗನೇ ಅಸ್ತಂಗತನಾದ.

    ರಾಜೀವ ಹಾವೇರಿಯ ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದು ಮೂರು ವರ್ಷಗಳಾಗಿದ್ದವು. ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದ ರಾಜೀವ ಬೆಂಗಳೂರಿನ ಯಾವುದೋ ಸಣ್ಣ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಂದ ಸಂಬಳವನ್ನು ತಮ್ಮ ರಘುವಿಗೆ ಮತ್ತು ಊರಿನಲ್ಲಿದ್ದ ಅಮ್ಮನಿಗೆ ಕಳಿಸಿ ಉಳಿದಿದ್ದನ್ನು ತನ್ನ ಖರ್ಚಿಗೆ ಇಟ್ಟುಕೊಳ್ಳುತ್ತಿದ್ದ. ಯಾವುದೇ ದುಶ್ಚಟಗಳಿಲ್ಲದ ಕಾರಣ ರೂಮ್ ಬಾಡಿಗೆ ಊಟದ ಖರ್ಚು, ಪೆಟ್ರೋಲ್ ಖರ್ಚು ಎಲ್ಲಾ ಹೋಗಿ ಪರ್ಸಿನಲ್ಲಿ ಒಂದೆರಡು ಸಾವಿರ ಉಳಿಯುತಿತ್ತು. ಅದನ್ನು ತಮ್ಮ ಯಾವುದೋ ಪ್ರಾಜೆಕ್ಟ್, ನೋಟ್ಸ್, ಎಕ್ಸಾಮ್ ಫೀ ಎಂದು ಕೇಳಿ ಪಡೆಯುತ್ತಿದ್ದ. ಕೊನೆಯಲ್ಲಿ ಅವನ ಪರ್ಸಿನಲ್ಲಿ ಐದು ನೂರಿನ ಚಿಲ್ಲರೆ ಬಿಟ್ಟರೆ ಡಿಎಲ್, ತನ್ನ ಅಪ್ಪ ಅಮ್ಮನ ಫೋಟೋ ಹಾಗೂ ಯಾವುದೋ ವಿಸಿಟಿಂಗ್ ಕಾರ್ಡುಗಳು.
    ಅಂದು ಸಂಜೆ ಆತನ ರೂಮೇಟ್ ಫೋನ್ ಮಾಡಿ ನಾನು ಕೀ ಕಳೆದು ಕೊಂಡಿದ್ದೇನೆ ಸ್ವಲ್ಪ ಅರ್ಜೆಂಟಿನ ಕೆಲಸವಿದೆ ಬೇಗ ಬಾ ಎಂದು ಪೀಡಿಸುತಿದ್ದ. ರಾಜೀವನಿಗೆ ಆತನ ರೂಮೇಟಿನ ಪರಿಸ್ಥಿತಿ ತಿಳಿದಿತ್ತು. ಆದರೂ ಫೋನಿನಲ್ಲಿ ಕೂಗಾಡುತ್ತಾ ಬರುತ್ತಿದ್ದ. ಗಾಡಿ ಜೋರಾಗಿಯೇ ಮುನ್ನುಗ್ಗುತ್ತಿತ್ತು. ರೂಮಿನ ತಿರುವಿನಲ್ಲಿ ತಿರುಗಬೇಕು ಅಷ್ಟರಲ್ಲಿ ಜೇಬಿನಿಂದ ಮೊಬೈಲ್ ಗುರ್ರ್ಗುಟ್ಟುತಿತ್ತು. ಈ ಸಾರಿ ಚೆನ್ನಾಗಿಯೇ ಬಯ್ಯಬೇಕೆಂದು ಎಡಗೈನಲ್ಲಿ ಕ್ಲಚ್ ಹಿಡಿದು ಬಲಗೈಯಲ್ಲಿ ಮೊಬೈಲ್ ರಿಸೀವ್ ಮಾಡಿದೊಡನೆ ಹತಾಟ್ಟನೆ ಎದುರಿಗಿದ್ದ ಗುಂಡಿಯಲ್ಲಿ ಗಾಡಿ ಇಳಿದು ಆತ ಮಾರು ದೂರ ಹಾರಿ ಕೆಳಗೆ ಬಿದ್ದ. ಹಿಂದೆಯೇ ಇದ್ದ ಕಾರು ಆತನ ಕಾಲುಗಳ ಮೇಲೆ ಏರಿತ್ತು. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಆಘಾತ ಕಾದಿತ್ತು. ಮೆದುಳಿಗೆ ತನ್ನ ಕೈಯಲ್ಲಿ ಹಿಡಿದ ಮೊಬೈಲ್ ಹಿಡಿದಂತೆಯೇ ಇದೆ, ಆದರೆ ಕೈ ಆತನ ದೇಹದಿಂದ ಬೇರ್ಪಟ್ಟಿತ್ತು. ಮೆದುಳಿನಿಂದ ಹಲವು ಮಾತು ಹೊರಡುತ್ತಿದೆ ಆದರೆ ಬಾಯಿಯಿಂದ ಹೊರ ಬರುತ್ತಿಲ್ಲ. ಆತನ ರಕ್ತಸಿಕ್ತ ಸ್ಥಿತಿಯನ್ನು ಕಂಡು ಅಕ್ಕಪಕ್ಕದಲ್ಲಿದ್ದ ಜನ ಲೊಚುಗಿಡುತ್ತಾ, ಹತ್ತಿರ ಹೋಗಲೂ ಭಯ ಪಡುತ್ತಾ ನಿಂತಿದ್ದರು. ತನ್ನ ಇನ್ನೊಂದು ಕೈಯಲ್ಲಿ ಎಲ್ಲರನ್ನು ಬನ್ನಿ ಬನ್ನಿ ಎಂದು ಕರೆಯುತಿದ್ದ. ಅದನ್ನು ನೋಡಿದ ಎಂತವರಿಗೂ ಒಂದು ಕ್ಷಣ ಹೃದಯ ನಿಲ್ಲುವುದು ಖಚಿತ.
    ಕೊನೆಯಲ್ಲಿ ಒಂದಿಬ್ಬರು ಅವನ ಹತ್ತಿರ ಬಂದು ರಕ್ತದಲ್ಲಿ ಮಿಂದಿದ್ದ ತಲೆಯನ್ನು ಹಿಡಿದು ಆತನ ಮಾತಿಗಾಗಿ ಕಿವಿಗೊಟ್ಟರು. ಎಲ್ಲವೂ ಅಸ್ಪಷ್ಟ. ಆದರೆ ಎಲ್ಲರಿಗೂ ಆತ ಏನೋ ಹೇಳಬಯಸುತ್ತಿದ್ದಾನೆ ಎಂಬುದು ಖಾತ್ರಿಯಾಗಿತ್ತು.
    ಅಷ್ಟರಲ್ಲಿ ಅವನ ರೂಮೇಟ್ ಹತ್ತಿರವೇ ಕೇಳುತಿದ್ದ ಗದ್ದಲ ಕೇಳಿ ನೋಡಲು ಬಂದ. ನೋಡಿದರೆ ಆತನ ಗೆಳೆಯ. ಓಡಿ ಬಂದವನೇ ಅವನನ್ನು ಎತ್ತಿಕೊಂಡ, ಗೆಳೆಯನ ಕೈಯಲ್ಲಿ ರಾಜೀವನಿಗೋ ಒಂದು ರೀತಿಯ ನೆಮ್ಮದಿಯ ಭಾವ ಉಂಟಾಯಿತು. ಅನಾಥವಾಗಿ ಸಾಯುವುದಿಲ್ಲವೆಂಬ ಧೈರ್ಯವೋ ಏನೋ ಅಂತೂ ಇಂತೂ ಅವನ ಬಾಯಿಂದ ಕೆಲ ಶಬ್ಧಗಳು ಕೇಳಿದವು. ಅದು ಅಲ್ಲಿ ನೆರೆದಿದ್ದ ಜನರಿಗೆಲ್ಲಾ ಒಂದು ಪಾಠವಾಗಿತ್ತು. 
ತಮ್ಮ ಜೀವನದಲ್ಲೂ ಇಂಥಹಾ ಪರಿಸ್ಥಿತಿ ಬಂದರೆ ಮುಂಜಾಗೃತವಾಗಿ ಏನೆಲ್ಲಾ ಮಾಡಬೇಕೆಂಬ ನೀತಿ. ಸುತ್ತಾ ನೆರೆದಿದ್ದ ಜನರ ಗದ್ದಲದಲ್ಲಿ ಅವನ ಬಾಯಿಂದ ಹೊರಟ ಆ ಮಾತುಗಳು...
"ನನ್ನ ಆಧಾರ್ ಕಾರ್ಡ್ ಕೆಂಪು ಶೆರ್ಟಿನ ಜೇಬಿನಲ್ಲಿದೆ"
😜😜😄
Aadhaar Number Required For Death Certificate From October 1

Tuesday, July 11, 2017

ಈ ವಾಟ್ಸಾಪ್ ಗ್ರೂಪುಗಳ ಉದ್ದೇಶವೇನು?

ಈ ವಾಟ್ಸಾಪ್ ಗ್ರೂಪುಗಳ ಉದ್ದೇಶವೇನು?
೧.  ಗನ್ನು ಹಿಡಿದು ಚೀನಾ ವಿರುದ್ಧ ಯುದ್ಧಕ್ಕೆ ಹೋಗುವ ರೀತಿ ಚೀನಾ ವಸ್ತುಗಳನ್ನು ನಿಷೇಧಿಸಿ ಎಂದು ಹೇಳುವ ಅಸಾಧ್ಯದ(India imports 61.5 billion USD from China and Exports 9.5 billion USD to China. Think what if china stops importing from India- Wikipedia) ಮೆಸೇಜುಗಳನ್ನು ಫಾರ್ವರ್ಡ್ ಮಾಡಲಿಕ್ಕಾ?
೨. ಪ್ರತಿನಿತ್ಯ ಶುಭೋದಯ  ಹೇಳಿ ಎಬ್ಬಿಸಲಿಕ್ಕಾ ಅಥವಾ ಶುಭರಾತ್ರಿ ಹೇಳಿ ಎಲ್ಲರನ್ನು ಮಲಗಿಸಲಿಕ್ಕಾ?
೩. ಕ್ರಿ.ಪೂ ದಲ್ಲಿ ಕಳೆದು ಹೋದ ಯಾವುದೋ ಮಗುವಿನ ಫೋಟೋ ಹಾಕಿ ಹುಡುಕಲು ಸಹಾಯ ಮಾಡಲಿಕ್ಕಾ?
೪. ಏನನ್ನೂ ಡಿಕ್ಲೇರ್ ಮಾಡದ ಯುನೆಸ್ಕೋ ಏನನ್ನೋ (Best PM, Best national anthem ಹೀಗೆ) ಡಿಕ್ಲೇರ್ ಮಾಡಿದ್ದನ್ನು ಶೇರ್ ಮಾಡಲಿಕ್ಕಾ?
೫. ಹುಲಿ ಬಂತು ಹುಲಿ ಕಥೆಂತೆ ನಿಜವಾಗಿಯೂ ರಕ್ತ ಬೇಕಾದಾಗ ಆ ಸಂದೇಶವನ್ನು ನಂಬದ ಹಾಗೆ ಮಾಡುವ ರಕ್ತದ ಅವಶ್ಯಕತೆ ಇದೆ, ಶೇರ್ ಮಾಡಿ ಎಂದು ಬರುವ ಸಂದೇಶವನ್ನು ಕಳಿಸಲಿಕ್ಕಾ?
೬. ಆ ಗ್ರೂಪಿನಿಂದ ಈ ಗ್ರೂಪಿಗೆ ನಾ ಮುಂದು ತಾ ಮುಂದು ಎಂದು ಬಂದ ಜೋಕುಗಳನ್ನು ವೀಡಿಯೋಗಳನ್ನು ಶೇರ್ ಮಾಡಲಿಕ್ಕಾ?

ಸ್ವಲ್ಪ ಯೋಚಿಸಿ ಯಾವುದೇ ವಿಷಯವನ್ನು ಅದರ ಸತ್ಯಾಸತ್ಯತೆಯನ್ನು ತಿಳಿದು ಹಂಚಿದರೆ ಒಳ್ಳೆಯದು. ಆ ರೀತಿ ಹಂಚಲೇ ಬೇಕು ಎಂದರೆ ಫೇಸ್‍ಬುಕ್ಕಿನಲ್ಲಿ ಹಂಚಿಕೊಳ್ಳಲಿ, ಯಾರಿಗೂ ಹೊರೆಯಾಗುವುದಿಲ್ಲ, ಬೇಕಾದವರು ನೋಡಿಕೊಳ್ಳುತ್ತಾರೆ. ವಾಟ್ಸಾಪಿನಲ್ಲಾದರೆ ಎಲ್ಲರ ಮೊಬೈಲಿನಲ್ಲೂ ಬಂದು ಬೀಳುತ್ತವೆ ನೀವು ಕಳಿಸಿದ ಸಂದೇಶಗಳು. ಯಾವುದೋ ಅತ್ಯವಶ್ಯಕ ಸಂದೇಶಗಳು ಈ ಹಾಳು ಜೋಕು, ಫೇಕು ಸಂದೇಶಗಳಲ್ಲಿ ಕಳೆದು ಹೋಗುತ್ತವೆ.

Wednesday, April 12, 2017

ನಮ್ಮೂರ ಹಬ್ಬ

ನಮ್ಮೂರ ಹೆಸರು ಕೇಳಿದಾಗಲೇ ಹಬ್ಬದ ಅನುಭವವಾಗುತ್ತದೆ ಇನ್ನು ನಮ್ಮೂರ ಹಬ್ಬದ ಬಗ್ಗೆ ಹೇಳಬೇಕೆಂದರೆ ಹಬ್ಬಕ್ಕಿಂತ ದೊಡ್ಡ ಪದ ಹುಡುಕಬೆಕಾಗುತ್ತದೆ. ನನ್ನೂರು ಶಿಕಾರಿಪುರ. ಹೊನ್ನಾಳಿ, ಶಿವಮೊಗ್ಗ ಈಗ ದಾವಣಗೆರೆಯಲ್ಲಿ ವಾಸವಿದ್ದರೂ ನನಗೆ ಶಿಕಾರಿಪುರವೇ ನನ್ನೂರು ಎಂದೆನಿಸುತ್ತದೆ. ಉಳಿದವುಗಿಂತ ಸ್ವಲ್ಪ ಅಭಿಮಾನ ಹೆಚ್ಚು. ನನ್ನ ಬಾಲ್ಯ ಕಳೆದದ್ದು ಅಲ್ಲಿಯೇ ಇದಕ್ಕೆ ಮೂಲ ಕಾರಣವಿರಬಹುದು. ಯಾವುದೇ ಅಹಂ ಇಲ್ಲದೇ ಬಲಿತ(ಮೆಚ್ಯೂರ್ಡ್) ಮನಸಿಲ್ಲದೇ ಎಲ್ಲರ ಜೊತೆ ಬೆರೆತು ಕಾಲ ಕಳೆಯುತ್ತಿದುದರಿಂದ ಬಾಲ್ಯದ ಜೊತೆ ಸವಿನೆನಪು ಪದ ಉಚಿತವಾಗಿ ಬರುತ್ತದೆ ಎಂದೆನಿಸುತ್ತದೆ. ಈಗ ಹಬ್ಬದ ವಿಷಯಕ್ಕೆ ಬರೋಣ.
ಅಲ್ಲಿ ನಡೆಯುತ್ತಿದ್ದದ್ದು ಮಾರಿ ಹಬ್ಬ ಜೊತೆಗೆ ಹುಚ್ಚಪ್ಪನ ಜಾತ್ರೆ. ನಾನೀಗ ಹೇಳಹೊರಟಿರುವುದು ಹುಚ್ಚಪ್ಪನ ಜಾತ್ರೆಯ ಬಗ್ಗೆ. ಹುಚ್ಚಪ್ಪ ಅಥವಾ ಹುಚ್ಚುರಾಯ ಎಂದರೆ ಹನುಮಂತ ದೇವರ ಹೆಸರು. ನಮ್ಮ ಧರ್ಮದಲ್ಲಿರೋ ಸುಂದರ ವಿಷಯವೇ ಅದು- ದೇವರ ಜೊತೆ ಸಲಿಗೆ ಜಾಸ್ತಿ. ಹುಚ್ಚಪ್ಪ, ಕಿಟ್ಟಣ್ಣ ಹೀಗೆ ಪ್ರೀತಿಯಿಂದ ಕರೆಯುತ್ತೇವೆ. ಶಿಕಾರಿಪುರದ ಹನುಮಪ್ಪನನ್ನು ಸ್ಥಾಪಿಸಿದ್ದು ವ್ಯಾಸರಾಯರು. ಅವನಿಗೆ ಭ್ರಾಂತೇಶನೆಂದೂ ಕರೆಯುತ್ತಾರೆ. ಭ್ರಾಂತೇಶ, ಶಾಂತೇಶ(ಸಾತೇನಹಳ್ಳಿ) ಹಾಗೂ ಕಾಂತೇಶ(ಕದಲಮಂಡಗಿ) ಈ ಮೂರು ಹನುಮಪ್ಪನನ್ನು ಒಂದೇ ದಿನ ನೋಡಬೇಕೆಂದು ವಾಡಿಕೆಯಿದೆ. ಈ ಹನುಮಪ್ಪನದ್ದೂ ಒಂದು ಕತೆಯಿದೆ, ಅಗಸನಿಗೆ ಕನಸಿನಲ್ಲಿ ಇಲ್ಲಿಯ ಕೆರೆಯಲ್ಲಿ ನೀನು ಬಟ್ಟೆ ಒಗೆಯುವ ಕಲ್ಲಿನ ಕೆಳಗೆ ನಾನಿದ್ದೇನೆ ಎಂದು ಹನುಮಪ್ಪ ಹೇಳಿದನಂತೆ, ನೋಡಿದರೆ ಅದು ಸತ್ಯವಿತ್ತಂತೆ ನಂತರ ಅದನ್ನು ಸ್ಥಾಪಿಸಿದರಂತೆ ಎಂದು ಒಂದು ಕತೆ. ಈ ಹನುಮಪ್ಪನ ಹಣೆಯ ಮೇಲೆ ಸಾಲಿಗ್ರಾಮವಿದೆ. ಹನುಮಂತ ದುಷ್ಟಶಕ್ತಿಗಳನ್ನು ಕಾಪಾಡುವವನಾದ್ದರಿಂದ ಆತನನ್ನು ಹಿಂದೆ ಊರ ಬಾಗಿಲಲ್ಲಿ ಪ್ರತಿಷ್ಠಾಪಿಸುತ್ತಿದ್ದರಂತೆ. ಈಗ ಹಲವು ಕಡೆ ಊರು ಬೆಳೆದು ಟ್ರಾಫಿಕ್ಕಿನಲ್ಲಿ ಸಿಕ್ಕ ಗಾಡಿಯಂತಾಗಿದ್ದಾನೆ ಹನುಮಪ್ಪ. ಆದರೆ ಶಿಕಾರಿಪುರದಲ್ಲಿ ಈಗಲೂ ಊರ ಬಾಗಿಲಲ್ಲಿ ನಿಂತು ದುಷ್ಟ ಶಕ್ತಿಗಳ ಹಲ್ಲು ಮುರಿವೆಯೆಂದು ನಿಂತಿದ್ದಾನೆ. ಇಷ್ಟು ದೇವಸ್ಥಾನದ ಹಿನ್ನಲೆ.
ಈ ಹುಚ್ಚಪ್ಪನಿಗೆ ಉತ್ಸವ ನಡೆಯುವುದು ಚೈತ್ರ ಶುದ್ಧ ಹುಣ್ಣಿಮೆಯಂದು. ಅದನ್ನು ದವನದ ಹುಣ್ಣಿಮೆಯೆಂದೂ ಕರೆಯುತ್ತಾರೆ. ಅಂದು ಹನುಮ ಜಯಂತಿ. ಹಾಗಾಗಿ ಹನುಮನಿಗೆ ಮೂರು ದಿನ ರಥೋತ್ಸವ ಹಾಗು ನಾಲ್ಕನೇ ದಿನ ತೆಪ್ಪೋತ್ಸವ ಜರುಗುತ್ತದೆ. ಜಾತ್ರೆಗೆ ತಯಾರಿ ಪ್ರಾರಂಭವಾಗುವುದು ಯುಗಾದಿಯಿಂದ ಅಂದರೆ ಹದಿನೈದು ದಿನಗಳ ಮುಂಚಿತವಾಗಿ. ಯುಗಾದಿಯಂದು ದೇವಸ್ಥಾನದೆದುರು ತಗಡಿನ ಶೆಡ್ಡಿನಲ್ಲಿ ಬಚ್ಚಿಟ್ಟಿದ್ದ ರಥಗಳನ್ನು ಹೊರತೆಗೆದಿಡುತ್ತಿದ್ದರು. ಮಳೆಗಾಲ ಚಳಿಗಾಲವನ್ನೇ ಕಾಣದ ಈ ರಥಗಳು ಬೇಸಿಗೆಗಾಲದಲ್ಲಿ ಸುಡುವ ಬಿಸಿಲನ್ನು ಕಾಣಲು ಹೊರಬರುತ್ತಿದ್ದವು. ಸದಾ ಎಳ್ಳೆಣ್ಣೆ, ಸುಗಂಧರಾಜ ಹೂವು ಅಥವ ಊದುಬತ್ತಿಯ ವಾಸನೆಯಿಂದ ಕೂಡಿರುತ್ತಿದ್ದ ದೇವಸ್ಥಾನ ಸುಣ್ಣ-ಬಣ್ಣದ ವಾಸನೆ ಸೂಸಲು ಪ್ರಾರಂಭಿಸುತಿತ್ತು. ಬೇಸಿಗೆಗೆ ಅಲ್ಪ ಸ್ವಲ್ಪ ನೀರಿರುತ್ತಿದ್ದ ಕೆರೆಯಲ್ಲಿ ಶುದ್ಧೀಕರಣ ಜೋರಾಗಿಯೇ ನಡೆಯುತ್ತಿತ್ತು. ಇತ್ತ ಹೊರ ಬಂದ ರಥಗಳಿಗೆ ತೈಲಮರ್ಜನ, ಗಾಲಿಯ ಕೀಲುಗಳಿಗೆ ಮರುಜೀವ ಹೀಗೆ ಮೂರು ದಿನಗಳ ಮ್ಯಾರಾಥಾನ್ಗೆ ತಯಾರಿ ಮಾಡುತ್ತಿದ್ದರು. ಆದರೆ ನಾವೆಲ್ಲಾ ಕಾಯುತ್ತಿದ್ದುದ್ದು ಬೇರೊಂದಕ್ಕಾಗಿ, ಅಲ್ಲಿಯೇ ದೇವಸ್ಥಾನದ ಹಿಂಭಾಗದಲ್ಲಿ ಇದ್ದ ಸಣ್ಣ ಜಾಗದಲ್ಲಿ ಯಾವ ರೀತಿಯ ಆಟ ಆಡುವ ದೈತ್ಯ ಚಕ್ರಗಳು, ತಿರುಗುವ ಕುರ್ಚಿಗಳು, ಕುದುರೆ, ಕಾರುಗಳನ್ನು ಹಾಕುತ್ತಿದ್ದಾರೆ ಎಂಬುದರ ಕಡೆ ಗಮನ. ತುಂಬಾ ತಯಾರಿ ಬೇಕಾದ್ದರಿಂದ ಅವರು ಮುಂಚೆಯೇ ಬಂದಿರುತ್ತಿದ್ದರು. ನಂತರ ಇನ್ನೇನು ಹುಣ್ಣಿಮೆಗೆ ಕೆಲವೇ ದಿನಗಳು ಬಾಕಿಯಿರುವಾಗ, ಮೊದಲ ಮಳೆಗೆ ಚಿಗುರುವ ಎಲೆಗಳಂತೆ ರಥಬೀದಿಯಲ್ಲೆಲ್ಲಾ ಅಂಗಡಿಗಳು ತಲೆಯೆತ್ತತೊಡಗುತ್ತಿದ್ದವು.
ಜಾತ್ರೆ ಪ್ರಾರಂಭವಾದರೆ, ನಮ್ಮ ಕಣ್ಣು ಅಂಗಡಿಯಲ್ಲಿ ಮೇಲುಗಡೆ ಇಡುತ್ತಿದ್ದ ರಿಮೋಟ್ ಕಾರ್, ದೊಡ್ಡ ದೊಡ್ಡ ಗನ್ನುಗಳಕಡೆಯಾದರೆ, ಹುಡುಗಿಯರ ಕಣ್ಣು ತೂಗು ಬಿಡುತ್ತಿದ್ದ ಸರ, ಸಾಲಾಗಿ ಜೋಡಿಸಿಟ್ಟಿದ್ದ ಬಳೆಗಳ ಕಡೆಗೆ. ಇಡೀ ಅಂಗಡಿಯನ್ನು ಕೊಂಡುಕೊಳ್ಳಬೇಕೆನ್ನುವಷ್ಟು ತವಕ ಆದರೆ ಕೊನೆಗೆ ಹಳೇಯ ಡಬ್ಬಿಯಲ್ಲಿ ಕೂಡಿಟ್ಟಿದ್ದ ದುಡ್ಡಿನಲ್ಲಿ ಒಂದು ಸಣ್ಣ ಸಿನಿಮಾ ನಟ ನಟಿಯರನ್ನು ನೋಡಬಹುದಾದಂತಾ ಕ್ಯಾಮರ ತೆಗೆದುಕೊಂಡು ದಾರಿಯತುಂಬೆಲ್ಲಾ ನಮ್ಮ ಫೋಟೋಗ್ರಾಫಿಯ ಕರಾಮತ್ತನ್ನು ತೋರಿಸುತ್ತಾ ಬಂದ ನೆನಪು. ಮಾರನೇ ದಿನ ಅಮ್ಮನನ್ನು ಕಾಡಿ ಬೇಡಿ ಗನ್ನು ತೆಗೆದುಕೊಳ್ಳುತ್ತೇನೆಂದು ಹೋಗಿ ಅಂಗಡಿ ಮುಂದೆ ಗೊಂದಲ ಉಂಟಾಗಿ ಊದುವ ಕೊಳಲನ್ನು ತಂದು ಹರಿಪ್ರಸಾದ್ ಚೌರಾಸಿಯ ಅಥವ ಪ್ರವೀಣ್ ಗೋಡ್ಕಿಂಡಿಯಂತೆ ಊದುತ್ತಿದ್ದದ್ದೂ ಉಂಟು. ಊದಿ ಊದಿ ಗಲ್ಲ ನೋವಾದಾಗ ಗನ್ನು ತೆಗೆದುಕೊಳ್ಳಬೇಕಿತ್ತೇನೋ ಎಂದು ಪೇಚಾಡಿದ್ದೂ ಉಂಟು. ದೇವಸ್ಥಾನಕ್ಕೆಂದು ಮನೆಯಿಂದ ಹೊರಟರೆ ದಾರಿಯುದ್ದಕ್ಕೂ ಕಾಣಸಿಗುತ್ತಿದ್ದ ಅಂಗಡಿಗಳನ್ನು ಕಣ್ಣಿನಲ್ಲೇ ದೋಚಿಕೊಂಡು ಹೋಗುತ್ತಿದ್ದೆ. ಹುಡುಗಿಯರ ಕೈಯಲ್ಲಿ ಬಳೆ, ಸರಗಳು, ಉಗುರು ಬಣ್ಣ, ರಿಬ್ಬನ್ ಈ ರೀತಿ ಅಲಂಕಾರಿಕ ವಸ್ತುಗಳೇ ಜಾಸ್ತಿ ಕಾಣುತ್ತಿದ್ದವು. ಇನ್ನೂ ಒಂದು ವಿಭಾಗವಿದೆ. ತಿಂಡಿ ತಿನಿಸುಗಳು. ಖಾರ ಮಂಡಕ್ಕಿ, ಬೆಂಡು ಬತ್ತಾಸು, ಜಿಲೇಬಿ, ಬಿಸಿ ಬಿಸಿ ಅಂಬೋಡೆ ಆಹಾ ಬಾಯಲ್ಲಿ ನೀರು ಜಿನುಗುತ್ತದೆ. ಬಲೂನಿನ ವಾಸನೆ, ಮುಡಿದ ಮಲ್ಲಿಗೆಯ ವಾಸನೆ, ಮಿರ್ಚಿ ಅಂಬೋಡೆಯ ವಾಸನೆಯ ನಡುವೆ ತೇರಿಗೆ ಹಚ್ಚಿದ್ದ ಹರಳೆಣ್ಣೆಯ ವಾಸನೆ ದೇವರನ್ನು ನೆನಪಿಸಿತು.
ಹುಚ್ಚಪ್ಪನ ಜಾತ್ರೆಯಲ್ಲಿ ಮೂರು ರಥಗಳನ್ನು ಎಳಿಯುತ್ತಿದ್ದರು. ಒಟ್ಟು ಎರಡು ರಥಗಳಿದ್ದವು. ತ್ರಯೋದಶಿಯಂದು ರಾತ್ರಿ ದೀಪಾಲಂಕೃತ ರಥ, ಚತುರ್ದಶಿಯಂದು ಹೂವುಗಳಿಂದ ಅಲಂಕೃತ ರಥ ಹಾಗು ಹುಣ್ಣಿಮೆಯಂದು ಬಾವುಟಗಳಿಂದ ಕೂಡಿರುತ್ತಿದ್ದ ದೊಡ್ಡ ರಥ ಅಥವಾ ಬ್ರಹ್ಮರಥೋತ್ಸವ. ಮೊದಲೆರಡು ರಥಗಳನ್ನು ರಾತ್ರಿಯ ವೇಳೆ ಎಳಿಯುತ್ತಿದ್ದರು. ತೇರುಬೀದಿಯ ತುಂಬೆಲ್ಲಾ ಜಗಮಗ ದೀಪಗಳಿಂದ ತುಂಬಿದ್ದ ಅಂಗಡಿಗಳು, ಅದರ ಮಧ್ಯೆಯಲ್ಲಿ ದೀಪಾಲಂಕೃತ ತೇರು ಬರುತ್ತಿದ್ದರೆ, ಅಂಗಡಿಯ ದೀಪಗಳನ್ನೆಲ್ಲಾ ಅಯಸ್ಕಾಂತದಂತೆ ತನ್ನ ಕಡೆ ಎಳೆದುಕೊಳ್ಳುತ್ತಿದೆಯೇನೋ ಎಂದೆನಿಸುತಿತ್ತು. ಹುಣ್ಣಿಮೆಯ ದಿನ ಬ್ರಹ್ಮ ರಥೋತ್ಸವ ಜನರು ಎಲ್ಲಿಲ್ಲದ ಸಡಗರ, ಬೀದಿಯಲ್ಲಿ ಕಾಲಿಡಲು ಸಾದ್ಯವಾಗದಷ್ಟು ಜನಸಾಗರ. ಸುತ್ತಮುತ್ತಲಿನ ಹಳ್ಳಿಗಳಿಂದ ಎತ್ತಿನ ಗಾಡಿ ಕಟ್ಟಿಕೊಂಡು ಬರುತಿದ್ದರು. ಒಂಬತ್ತು ತಿಂಗಳ ತುಂಬು ಗರ್ಭಿಣಿಯಂತೆ ನಿಧಾನವಾಗಿ ಅತ್ತಿಂದಿತ್ತ ಅಲುಗಾಡುತ್ತಾ ನಿಧಾನವಾಗಿ ತೇರು ಬರುತಿದ್ದರೆ, ಕೆಳಗಿನಿಂದ ಬಾಳೆ ಹಣ್ಣು, ಹೂವು, ದವನ ಎಸೆದು ಕೈಮುಗಿದು ಧನ್ಯತಾ ಮನೋಭಾವದಿಂದ ಹನುಮಪ್ಪನಿಗೆ ವಂದಿಸುತಿದ್ದರು. ಭಕ್ತಿಯ ಬಗ್ಗೆ ಅಷ್ಟೇನು ಅರಿಯದ ವಯಸ್ಸು ನನ್ನದು, ನಾವಂದು ತೂರಿದ ಬಾಳೆ ಹಣ್ಣನ್ನು ಗಾಲಿಯ ಪಕ್ಕ ಹತ್ತಿ ನಿಂತಿದ್ದ ಭಟ್ಟರ ತಲೆಗೆ ತಾಕಿದಾಗ ಗುಸು ಗುಸು ನಕ್ಕಿದ್ದು ಉಂಟು. ಮತ್ತೆ ಯಾರೋ ತೂರಿದ ಬಾಳೆಹಣ್ಣನ್ನು ಹಿಡಿದು ಮತ್ತೆ ತೂರುತ್ತಾ ಕಪೀಶನ ಮುಂದೆ ನಮ್ಮ ಕಪಿ ಚೇಷ್ಟೆ ಜೋರಾಗಿಯೇ ನಡೆಯುತಿತ್ತು.
ನಮ್ಮ ಬಾಲ್ಯದ ಆ ಜಾತ್ರೆಯ ದಿನಗಳನ್ನು ಎಷ್ಟು ನೆನಪಿಸಿಕೊಂಡರೂ ಸಾಲದು. ನಮ್ಮ ಆಚರಣೆಗಳೇ ಹಾಗೆ. ಎಲ್ಲರೊಂದಿಗೆ ಸೇರಿ ನಮ್ಮೆಲ್ಲಾ ದುಃಖಗಳನ್ನು ಮರೆತು ಸಂಭ್ರಮದಿಂದ ಕಳೆಯಲು ಸಹಾಯ ಮಾಡುತ್ತವೆ. ಈಗಿನ ಮಕ್ಕಳಿಗೆ ಯಾವುದಾದರೂ ಎಕ್ಸಿಬಿಷನ್‍ಗೆ ಕರೆದುಕೊಂಡು ಹೋಗಿ ಏನನ್ನಾದರೂ ತಿನಿಸಿ ಸ್ವಲ್ಪ ಆಟ ಆಡಿಸಿ ಕರೆದುಕೊಂಡು ಬರುತ್ತಾರೆ, ಆದರೆ ಅಲ್ಲಿ ಆ ಜಾತ್ರೆಯ ಸೊಬಗಿರುವುದಿಲ್ಲ, ದೇವರ ಕಲ್ಪನೆ ಭಕ್ತಿ ಎಂಬುದಿರುವುದಿಲ್ಲ. ನಮ್ಮ ಆಚರಣೆ ನಮ್ಮ ಹೆಮ್ಮೆ, ಸಾದ್ಯವಾದಷ್ಟು ಉಳಿಸಿಕೊಳ್ಳೋಣ.

Monday, April 10, 2017

ಕನಸಿಗಿಲ್ಲ ಪಾಜ಼ು ಪ್ಲೆ

ಕನಸಿಗಿಲ್ಲ ಪಾಜ಼ು ಪ್ಲೆ
ಶಾಂತವಾಗಿತ್ತು ಸಾಗರದಲೆ
ತೇಲುತಿತ್ತು ಆಲದೆಲೆ
ನಾ ಮಲಗಿದ್ದೆ ಅದರ ಮೇಲೆ
ಕನಸಿಗಿಲ್ಲ ಪಾಜ಼ು ಪ್ಲೇ

ಸುರಿಯುತಿತ್ತು ನಕ್ಷತ್ರಗಳಾ ಮಳೆ
ಮಾಡಬೇಕೆಂದೆನಿಸಿತು ಆ ತಾರೆಗಳ ಮಾಲೆ
ಬಾಚುತಿದ್ದೆನು ಎಲ್ಲಿಲ್ಲದ ಪುಳಕದಲ್ಲೇ
ಮಾಯವಾದವು ಕ್ಷಣದಲ್ಲೇ
ಕನಸಿಗಿಲ್ಲ ಪಾಜ಼ು ಪ್ಲೇ

ತಿಳಿಯಿತು ಕನಸಿಗೆಲ್ಲಿದೆ ಎಲ್ಲೆ
ಚಂದ್ರ ಮಿಂದನು ಅಂಬುಧಿಯಲ್ಲೇ
ಸೂರ್ಯ ಕಂಡನು ಮೂಡಣದಲ್ಲೆ
ಕಣ್ಣು ಬಿಟ್ಟೆನು ಅಷ್ಟರಲ್ಲೇ
ಕನಸಿಗೆಲ್ಲಿದೆ ಪಾಜ಼ು ಪ್ಲೇ

Tuesday, March 28, 2017

ಯುಗಾದಿಯಾಚರಣೆಯಲ್ಲಿ ದೇಶಕಾಲದ(spacetime) ಚಿಂತನೆ

ವಿಜ್ಞಾನಿಗಳೆಂದ ತಕ್ಷಣ ನಮ್ಮ ಮನಸಿನಲ್ಲಿ ಬರುವುದು ಐನ್‍ಸ್ಟಿನ್ ಮತ್ತು ನ್ಯೂಟನ್. ಅದರಲ್ಲೂ ಐನ್‍ಸ್ಟಿನ್ ನಮಗೆ ಹತ್ತಿರದಲ್ಲಿ ಬದುಕಿದ್ದರಿಂದ ಅವರೇ ಮೊದಲು ಬರುತ್ತಾರೆ. ಅರೇ ನಮಗೆ ಹತ್ತಿರ ಎಂದರೆ ಅವರೂ ಭಾರತದವರಾ? ಅಥವಾ ಕರ್ನಾಟಕದವರೇ ಎಂದು ಕೇಳಬೇಡಿ. ಒಬ್ಬ ವ್ಯಕ್ತಿಯ ಇರುವಿಕೆ ತಿಳಿಯ ಬೇಕಾದರೆ ಕೇವಲ ಆತ ನಿಂತಿರುವ ಸ್ಥಳ ಒಂದೇ ಸಾಲದು. ಆತ ಆ ಸ್ಥಳದಲ್ಲಿ ಯಾವ ಸಮಯದಲ್ಲಿ ಇದ್ದ ಎಂಬುದು ಬಹುಮುಖ್ಯವಾಗುತ್ತದೆ. ಅಂದರೆ ಸ್ಥಳದ ಜೊತೆ ಕಾಲ ಕೂಡ ಒಂದು ಮಾನದಂಡ. ಈ ಪರಿಕಲ್ಪನೆ ಕೊಟ್ಟಿದ್ದು ಹರ್ಮನ್ ಮಿಂಕೋವ್ಸ್ಕಿ(Hermann Minkowski), ಐನ್‍ಸ್ಟಿನ್ನ ಗುರು. ಐನ್‍ಸ್ಟಿನ್ ಈ ಪರಿಕಲ್ಪನೆಯನ್ನು ತನ್ನ ಥಿಯೇರಿ ಆಫ್ ರಿಲೇಟಿವಿಟಿಯಲ್ಲಿ ಬಳಸಿ ವಿಶ್ವವಿಖ್ಯಾತರಾದರು. ಮಿಂಕೋವ್ಸ್ಕಿ ಇದನ್ನು ಸ್ಪೇಸ್‍ಟೈಮ್ ಎಂದು ಕರೆದನು. ಅಂದರೆ ನಮ್ಮ ಭಾಷೆಯಲ್ಲಿ ದೇಶಕಾಲ ಎನ್ನುತ್ತಾರೆ. ಹಾಗಾಗಿ ಐನ್‍ಸ್ಟಿನ್ 1879-1955ರಲ್ಲಿ ಬದುಕಿದ್ದರಿಂದ ಅವರು ನಮಗೆ ಹತ್ತಿರದವರು ಎಂದು ಹೇಳಿದ್ದು.
ಏನಿದು ಸ್ಪೇಸ್‍ಟೈಮ್ ಅಥವಾ ದೇಶಕಾಲ? ಒಂದು ಉದಾಹರಣೆಯೊಂದಿಗೆ ವಿವರಿಸಲು ಪ್ರಯತ್ನಿಸುತ್ತೇನೆ. ನೀವು ಒಂದು ಪ್ರವಾಸ ಹೋಗಿದ್ದಿರೆಂದು ಭಾವಿಸಿ, ಪ್ರವಾಸದ ಬಗ್ಗೆ ಬರೆಯಲು ಇಷ್ಟ ಪಡುತ್ತೀರಿ, ಬರೆಯುವಾಗ ನೀವು ಪ್ರವಾಸದ ಸ್ಥಳಗಳ ಜೊತೆಗೆ ಆ ಸ್ಥಳಗಳನ್ನು ಭೇಟಿ ಮಾಡಿದ ದಿವಸವನ್ನು ಸೇರಿಸಿದರೆ ಆ ದಾಖಲೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕನ್ನಡದ ದೃಶ್ಯ ಎಂಬ ಚಲನಚಿತ್ರವನ್ನು ನೆನಪಿಸಿಕೊಳ್ಳಿ, ಚಿತ್ರದ ನಾಯಕ ಪೊನ್ನಪ್ಪ ಮಾರ್ಚ್ ಒಂದನೇ ತಾರೀಖು ನಂಜನಗೂಡಿಗೆ ಹೋಗಿದ್ದು ಎಂಬ ದಾಖಲೆ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆಂದು. ಹಾಗಾಗಿ ಯಾವುದಾದರೂ ಪ್ರಬಲವಾದ ದಾಖಲೆಗೆ  ನಮ್ಮ ಇರುವಿಕೆ ತಿಳಿಸಬೇಕಾದರೆ ಸ್ಥಳದ ಜೊತೆ ಕಾಲ ಕೂಡ ಬಹು ಮುಖ್ಯವಾದದ್ದು.
ನಾಳೆ ಯುಗಾದಿ, ಇದು ಸಂಪೂರ್ಣ ಕಾಲದ ನಿಯಾಂತಕ(parameter), ನಮ್ಮ ಕಾಲದ ರೇಖೆಯಲ್ಲಿ ಮತ್ತೊಂದು ಹೊಸ ಹೆಜ್ಜೆಯನ್ನು ಇಡುವ ಸಮಯ. ಅಂದರೆ ಕಳೆದ ಒಂದು ವರ್ಷ ನಾವು ಬದುಕಿದ್ದು ದುರ್ಮುಖ ಎಂಬ ಸಂವತ್ಸರದಲ್ಲಿ, ಹಿಂದೂ ಕಾಲಗಣತಿಯ ಪ್ರಕಾರ ಒಂದು ವರ್ಷ ಎಂದರೆ ಒಂದು ಸಂವತ್ಸರ. ನಾಳೆ ಆ ದುರ್ಮುಖ ಸಂವತ್ಸರದಿಂದ ಹೇಮಲಂಬ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಇರುವಿಕೆಯಲ್ಲಿ ನಾವಿಡುವ ಪ್ರತೀ ಹೆಜ್ಜೆ ನಮ್ಮ ಸ್ಥಳವನ್ನು ಬದಲಿಸುವುದಲ್ಲದೇ ಸಮಯದಲ್ಲೂ ಬದಲಾವಣೆಯಾಗುತ್ತದೆ.  ನಮಗೆ ಈ ಸ್ಪೇಸ್‍ಟೈಮ್ ಪರಿಕಲ್ಪನೆ ಮಿಂಕೋವ್ಸ್ಕಿಗಿಂತಾ ಮುಂಚಿನಿಂದಲೂ ತಿಳಿದಿತ್ತು.  ಹಾಗಂತಾ ಮಿಂಕೋವ್ಸ್ಕಿ ಸಾಧನೆ ದೊಡ್ಡದಲ್ಲ ಎಂದು ಹೇಳುತ್ತಿಲ್ಲ, ಆತ ಪ್ರತ್ಯೇಕವಾಗಿ ಕಂಡುಹಿಡಿದಿರಬಹುದು ಅಥವಾ ನಮ್ಮಿಂದ ಪ್ರಭಾವಿತನಾಗಿರಬಹುದು. ಪ್ರತೀ ಪೂಜೆಯಲ್ಲೂ ಮೊದಲು ಮಾಡುವುದು ಸಂಕಲ್ಪ, ಸಂಕಲ್ಪವಿಲ್ಲದ ಪೂಜೆಗೆ ಫಲವಿಲ್ಲ ಎಂದು ಹೇಳುತ್ತಾರೆ. ಸಂಕಲ್ಪದ ಮಂತ್ರ ಹೀಗಿದೆ
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣ: ದ್ವೀತೀಯಪರಾರ್ಧೇ, ಶ್ರೀಶ್ವೇತವರಾಹಕಲ್ಪೇ,
ವೈವಸ್ವತ ಮನ್ವಂತರೇ, ಅಷ್ಟಾವಿಂಶತಿತಮೇ ಕಲಿಯುಗೇ, ಪ್ರಥಮಪಾದೇ,
ಜಂಬೂದ್ವೀಪೇ, ಭರತವರ್ಷೇ,  ಭರತಖಂಡೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ,
ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ, ಅಸ್ಮಿನ್ವರ್ತಮಾನೇ,_______ ಸಂವತ್ಸರೇ,
_______ಆಯನೇ, ___________ಋತೌ, ____________ಮಾಸೇ, __________ಪಕ್ಷೇ, 
______ತಿಥೌ, ________ವಾಸರೇ, __________ನಕ್ಷತ್ರೇ, ಶುಭಯೋಗ, ಶುಭಕರಣ, 
ಏವಂಗುಣ ವಿಶೇಷಣ ವಿಶಿಷ್ಟಾಯಾಮ್ ಶುಭತಿತೌ...
ಇಲ್ಲಿ ಗಮನಿಸಿದರೆ ದೇಶಕಾಲದ ಪರಿಕಲ್ಪನೆ ಸ್ಪಷ್ಟವಾಗಿ ಕಾಣುತ್ತದೆ. ನಾವು ಮಾಡುತ್ತಿರುವ ಪೂಜೆ ಎಲ್ಲಿ(ಸ್ಥಳ), ಯಾವ ಸಮಯದಲ್ಲಿ(ಕಾಲ) ಮಾಡುತ್ತಿದ್ದೇವೆಂದು ದೇವರಿಗೆ ತಿಳಿಸಿ ಮುಂದುವರೆಯಬೇಕು. ಆದ್ಯ ಬ್ರಹ್ಮಣಃ ಇಂದ ಪ್ರಾರಂಭಗೊಂಡು ಪ್ರಥಮಪಾದೆ ವರೆಗೂ ಕಾಲವನ್ನು ಜಂಬೂದ್ವೀಪೇ ಇಂದ ದಕ್ಷಿಣೇತೀರೇ ವರೆಗೂ ನಾವಿರುವ ಸ್ಥಳವನ್ನೂ, ಪುನಃ ಶಾಲಿವಾಹನ ಶಕೇ ಇಂದ ನಕ್ಷತ್ರೇ ವರೆಗೂ ಲೌಕಿಕ ಕಾಲಗಣನೆಯನ್ನು ಕಾಣಬಹುದು. ಒಂದೊಂದಾಗಿ ನೋಡೋಣ.
ಮೊದಲು ನಾವಿರುವ ಸ್ಥಳವನ್ನು ನೋಡೋಣ, ಸಾಮಾನ್ಯವಾಗಿ ನಾವು ನೋಡುವ ಭೂಮಿಯ ಪಟ ನಿಜವಾದ ಪಟವಲ್ಲ, ಎಲ್ಲಾ ದೇಶ, ಖಂಡಗಳ ಆಕಾರ ಪಟದಲ್ಲಿ ಕಾಣುವಂತಿಲ್ಲ. ಹಲವಾರು ರೀತಿ ಭೂಮಿಯನ್ನು ಕಾಗದದ ಮೇಲೆ ಇಳಿಸಬಹುದು. ಅದಕ್ಕೆ ವಿಜ್ಞಾನದಲ್ಲಿ ಪ್ರೊಜೆಕ್ಷನ್ ಎಂದು ಕರೆಯುತ್ತಾರೆ. ಭೂಮಿಯ ಹಲವು ಪ್ರೊಜೆಕ್ಶನ್‍ಗಳನ್ನು ಇಲ್ಲಿ ಕಾಣಬಹುದು.
ಈಗ ಜಂಬೂದ್ವೀಪದ ವಿಷಯಕ್ಕೆ ಬರೋಣ. ಇಡೀ ಭೂಮಂಡಲವನ್ನು "ಸಪ್ತದ್ವೀಪಾ ವಸುಮತಿ" ಎಂದೂ ಕರೆಯುತ್ತಾರೆ. ಇದು ಒಂದು ಬಗೆಯ ಪ್ರೊಜೆಕ್ಷನ್ ಎಂದು ಭಾವಿಸಬಹುದು. ಪುರಾಣಗಳಲ್ಲಿ ತಿಳಿಸಿರುವಂತೆ ಈ ಪ್ರೊಜೆಕ್ಷನ್ನಿನಲ್ಲಿ ಏಳು ದ್ವೀಪಗಳನ್ನು ಏಳು ಸಾಗರಗಳು ವೃತ್ತಾಕಾರದಲ್ಲಿ ಬೇರ್ಪಡಿಸಿವೆ. ಏಳು ದ್ವೀಪಗಳ ಹೆಸರು ಇಂತಿವೆ. ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ. ಜಂಬೂದ್ವೀಪ ಎಂಬುದು ಪುರಾಣದ ಏಳು ದ್ವೀಪಗಳಲ್ಲಿ ಒಂದು. ಜಂಬೂಫಲ ಎಂದರೆ ನೇರಳೇ ಹಣ್ಣು. ಅತಿ ಹೆಚ್ಚು ಜಂಬೂಫಲಗಳು ಇದ್ದುದರಿಂದ ಆ ದ್ವೀಪವನ್ನು ಜಂಬೂದ್ವೀಪವೆಂದು ಕರೆಯಲ್ಪಟ್ಟರು. ಜಂಬೂದ್ವೀಪವನ್ನು ಚಿತ್ರದಲ್ಲಿ ಗಮನಿಸಬಹುದು. ಜಂಬೂದ್ವೀಪವನ್ನು ಒಂಬತ್ತು ಭಾಗಗಳನ್ನಾಗಿ ವಿಭಾಗ ಮಾಡಿದ್ದಾರೆ, ಅದರಲ್ಲಿ ನಾವಿರುವುದು ಭರತವರ್ಷೇ ಭರತಖಂಡೇ ಅಂದರೆ ನಮ್ಮ ಭಾರತದ ಒಂದು ತುಂಡು(ಖಂಡ) ದಂಡಕಾರಣ್ಯ, ಅಂದರೆ ಈಗಿನ ಆಂದ್ರ, ಮಹರಾಷ್ಟ್ರ ಹಾಗು ಒರಿಸ್ಸಾದ ಕೆಲ ಭಾಗಗಳು ಇರುವ ದೇಶದಲ್ಲಿ ಗೋದಾವರ್ಯಾ: ದಕ್ಷಿಣೇತೀರೇ- ಗೋದಾವರಿಯ ದಕ್ಷಿಣ(ಗೋದಾವರಿಯ ಮೇಲಿರುವವರು ಗಂಗಾಯಾ ದಕ್ಷಿಣೇ ಪಾರ್ಶ್ವೇ-ಗಂಗೆಯ ದಕ್ಷಿಣ) ಭಾಗದಲ್ಲಿ ನಿಂತು ಈ ಸಂಕಲ್ಪವನ್ನು ಮಾಡುತ್ತಿದ್ದೇನೆ ಎಂದು ನಾವಿರುವ ಸ್ಥಳವನ್ನು ದೇವರಿಗೆ ತಿಳಿಸಬೇಕು.

ಈಗ ಕಾಲದ ಕಲ್ಪನೆಯನ್ನು ನೋಡೋಣ, ಕಾಲದ ರೇಖೆಯಲ್ಲಿ ಬ್ರಹ್ಮಕಲ್ಪದಿಂದ ಪ್ರಾರಂಭಿಸೋಣ. ಬ್ರಹ್ಮಕಲ್ಪ(ಅಥವಾ ಪರ) ಎಂದರೆ ಬ್ರಹ್ಮನ ನೂರು ವರ್ಷಗಳು. ಒಂದು ಪರವನ್ನು ಎರಡು ಭಾಗವನ್ನಾಗಿ ಮಾಡಿದರೆ ಅದರಲ್ಲಿ ಉತ್ತರಾರ್ಧ ಅಥವಾ ದ್ವಿತಿಯಪರಾರ್ಧದಲ್ಲಿ ನಾವಿದ್ದೇವೆ. ಬ್ರಹ್ಮನ ಒಂದು ದಿನ(ಹಗಲು+ರಾತ್ರಿ) ಎಂದರೆ ಎರಡು ಕಲ್ಪಗಳು. ಒಟ್ಟು ಮೂವತ್ತು ಕಲ್ಪಗಳಿವೆ (ಶ್ವೇತವರಾಹ, ನೀಲಲೋಹಿತ, ವಾಸುದೇವ, ರಥಂತರ, ರೌರವ, ಪ್ರಾಣ, ಬೃಹತ್, ಕಂದರ್ಪ, ಸದ್ಯ, ಈಶಾನ, ವ್ಯಾನ, ಸಾರಸ್ವತ, ಉದಾನ, ಗಾರುಡ, ಕೌರ್ಮ, ನಾರಸಿಂಹ, ಸಮಾನ, ಆಗ್ನೇಯ, ಸೋಮ, ಮಾನವ, ತತ್ಪುರುಷ, ವೈಕುಂಠ, ಲಕ್ಷ್ಮಿ, ಸಾವಿತ್ರಿ, ಘೋರ, ವಾರಾಹ, ವೈರಾಜ, ಗೌರಿ, ಮಾಹೇಶ್ವರ, ಪಿತೃ). ನಾವೀಗ ಇರುವುದು ಶ್ವೇತಕಲ್ಪದಲ್ಲಿ. ಅಲ್ಲಿಗೆ ನಾವೀಗಿರುವುದು ಬ್ರಹ್ಮನ ಐವತ್ತೊಂದನೇ ವರ್ಷದ ಮೊದಲನೇ ದಿನದ ಬೆಳಗಿನ ಜಾವದಲ್ಲಿದ್ದೇವೆ. ಒಂದು ಕಲ್ಪ ಎಂದರೆ ಹದಿನಾಲ್ಕು ಮನ್ವಂತರಗಳು (ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ,
ಚಾಕ್ಷುಷ, ವೈವಸ್ವತ, ಸಾವರ್ಣಿ, ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ, ದೇವಸಾವರ್ಣಿ, ಇಂದ್ರಸಾವರ್ಣಿ). ನಾವಿರುವುದು ವೈವಸ್ವತ ಮನ್ವಂತರದಲ್ಲಿ. ಒಂದು ಮನ್ವಂತರವನ್ನು ಎಪ್ಪತ್ತೊಂದು ಮಹಾಯುಗಗಳನ್ನಾಗಿಯೂ, ಒಂದು ಮಹಾಯುಗವೆಂದರೆ ನಾಲ್ಕು ಯುಗಗಳಾಗಿಯೂ(ಕೃತ, ತ್ರೇತ, ದ್ವಾಪರ, ಕಲಿ) ವಿಭಾಗಿಸಿದ್ದಾರೆ. ನಾವೀಗ ಇರುವುದು ಅಷ್ಟಾವಿಂಶತಿತಮೇ ಕಲಿಯುಗೇ- ಇಪ್ಪತ್ತೆಂಟನೇಯ ಮಹಾಯುಗ. ಅಂದರೆ ಇಲ್ಲಿಯವರೆಗೂ ಇಪ್ಪತ್ತೇಳು ಬಾರಿ ಕಲಿಯುಗಗಳು ಬಂದಿವೆ. ಇದಿಷ್ಟೂ ಬ್ರಹ್ಮನ ಆಯಸ್ಸಿನ ಪ್ರಕಾರ ವಿಭಾಗಿಸಿದರೆ ಮುಂದಿನದ್ದು ಲೌಕಿಕ ಕಾಲಗಣನೆ.
ಶಾಲೀವಾಹನ ಶಕೇ- ಶಕೆ ಎಂದರೆ ಒಬ್ಬ ಶ್ರೇಷ್ಠ ರಾಜನ ಆಳ್ವಿಕೆಯ ಕಾಲ(ಉದಾಹರಣೆಗೆ ಬೇಕಿದ್ದರೆ ಇದನ್ನು ಮೋದಿ ಶೆಕೆಯೆಂದೂ ಕರೆಯಬಹುದು 👅). ಹಾಗೆ ಅನೇಕ ರಾಜರ ಶೆಕೆಗಳಾದ ನಂತರ ನಾವಿರುವುದು ಶಾಲಿವಾಹನ ಎಂಬ ರಾಜನ ಕಾಲಘಟ್ಟದಲ್ಲಿ. ಆತನ ಕಾಲಘಟ್ಟದಲ್ಲಿ ನಾವಿರುವುದು 1938ನೇ ವರ್ಷ. ಇದನ್ನು ನಮ್ಮ 2017ನೇ ವರ್ಷದ ಜೊತೆ ಹೋಲಿಸಬಾರದು. ಏಕೆಂದರೆ ಶಾಲಿವಾಹನನ ಆಳ್ವಿಕೆ ಪ್ರಾರಂಭವಾಗಿ 1938 ವರ್ಷಗಳು ಕಳೆದಿದೆ(ಉದಾಹರಣೆಗೆ 2017ನ್ನು ಮೋದಿ ಶೆಕೆ 3 ಎಂದು ಕರೆಯಬಹುದು). ನಾಳೆಯಿಂದ 1939ನೇ ವರ್ಷ ಪ್ರಾರಂಭ. ನಂತರ ಬೌದ್ಧಾವತಾರೇ ಅಂದರೆ ಇದುವರೆಗೂ ಆಗಿರುವ ವಿಷ್ಣುವಿನ ಅವತಾರಗಳಲ್ಲಿ  ಕೊನೆಯ ಅವತಾರ ಬೌದ್ಧಾವತಾರ ಹಾಗಾಗಿ ಮುಂದಿನ ಅವತಾರ ಕಲ್ಕಿ ಬರುವವರೆಗೂ ನಾವು ಬೌದ್ಧಾವತಾರದ ಕಾಲ ಘಟ್ಟದಲ್ಲಿರುತ್ತೇವೆ ಎಂದರ್ಥ. ರಾಮಕ್ಷೇತ್ರೇ ಅಂದರೆ ಶ್ರೀರಾಮ ಓಡಾಡಿದ ಪುಣ್ಯ ಭೂಮಿಯಲ್ಲಿ ನಾವಿದ್ದು ಚಂದ್ರನ ಮಾನದಲ್ಲಿ ಇರುವ ಅರವತ್ತು ಸಂವತ್ಸರದಲ್ಲಿ ನಾವು ದುರ್ಮುಖ ಸಂವತ್ಸರವನ್ನು ದಾಟಿ ಹೇಮಲಂಬ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಸಂವತ್ಸರವನ್ನು ಎರಡು ಆಯನಗಳಾಗಿ/ಆರು ಋತುಗಳಾಗಿ, ಪ್ರತೀ ಋತುವನ್ನು ಎರಡು ಮಾಸಗಳನ್ನಾಗಿ, ಪ್ರತೀ ಮಾಸವನ್ನು ಚಂದ್ರನ ಆಧಾರದ ಮೇಲೆ ಎರಡು ಪಕ್ಷಗಳನ್ನಾಗಿ ಪ್ರತೀ ಪಕ್ಷವನ್ನು ಹದಿನೈದು ತಿಥಿಗಳನ್ನಾಗಿ ವಿಭಾಗಿಸಿದ್ದಾರೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಗೂಗಲ್‍ನ ಜಿಪಿಎಸ್ ಕೊಡುವ ಮಾಹಿತಿಯನ್ನು ನಾವು ನಮ್ಮ ಸಂಕಲ್ಪದಲ್ಲಿ ಈ ರೀತಿ ಹೇಳಿಕೊಂಡು ನಾನು ಇಲ್ಲಿ, ಈ ಸಮಯದಲ್ಲಿ ಪೂಜೆಯನ್ನು ಮಾಡುತ್ತಿದ್ದೇನೆೆಂದು ಹೇಳಿ ಮುಂದುವರೆಯಬೇಕು.
ದುರ್ಮುಖ ಸಂವತ್ಸರದಲ್ಲಿ ಭೀಕರ ಬರಗಾಲವನ್ನು ಎದುರಿಸಿದ್ದೇವೆ, ಈ ಹೇಮಲಂಬಿ ಸಂವತ್ಸರದಲ್ಲಾದರೂ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ. ಸರ್ವರೂ ಧರ್ಮಾಚರಣೆಯನ್ನು ಮಾಡಲಿ, ಸತ್ಕರ್ಮಗಳನ್ನು ಮಾಡುವ ಮನಸ್ಸು ಕೊಡಲಿ ಎಂದೂ ದೇವರಲ್ಲಿ ಪ್ರಾರ್ಥಿಸೋಣ. ಸರ್ವರಿಗೂ ಹೇಮಲಂಬಿ ಸಂವತ್ಸರದ ಶುಭಾಶಯಗಳು.

Tuesday, March 14, 2017

ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ಸಂಧರ್ಭ ಸಹಿತ ವಿವರಿಸಿ

"ರಾಮ ಮದ್ಯಪಾನ ಮಾಡುತ್ತಾನೆ, ಸ್ತ್ರೀ ಸಂಘ ಮಾಡುತ್ತಾನೆ" ಈ ವಾಕ್ಯವನ್ನು ಪರಾಮರ್ಶಿಸುವ ಮುನ್ನ ಶಾಲಾ ದಿನದ ಆ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ರಾಮ ರಾಜನಾದರೆ ಮದ್ಯಪಾನ ಮಾಡುತ್ತಾನೆ, ಸ್ತ್ರೀ ಸಂಘ ಮಾಡುತ್ತಾನೆ ಎಂದು ಮಂಥರೆ ಕೈಕೇಯಿಗೆ ಹೇಳುತ್ತಾಳೆ. ಕೈಕೇಯಿಯಲ್ಲಿ ರಾಮನ ಬಗ್ಗೆ ಕೆಟ್ಟ ಯೋಚನೆ ಬರಲಿ, ಭರತನನ್ನು ರಾಜನನ್ನಾಗಿಸಲು ದಶರಥನ ಬಳಿ ಕೇಳಿಕೊಳ್ಳುವಂತಾಗಲಿ ಎಂಬ ಕಾರಣಕ್ಕೆ ಹೀಗೆ ಹೇಳುತ್ತಾಳೆ.
ಇಲ್ಲಿ ಆ ವಾಕ್ಯದ ಕಂಟೆಕ್ಸ್ಟ್ ಪ್ರಗತಿಪರರಿಗೆ ಬು.ಜೀಗಳಿಗೆ, ದೇಶವನ್ನು ಉದ್ಧಾರ ಮಾಡುತ್ತೇವೆ ಎಂದು ಟೊಂಕ ಕಟ್ಟಿ ನಿಂತವರಿಗೆ ಬೇಕಾಗಿಲ್ಲ. ಅಲ್ಲಿ ಇದನ್ನು ಯಾರು ಯಾರಿಗೆ ಹೇಳಿದರು ಸಂಧರ್ಭ ಸಹಿತ ವಿವರಿಸಿ ಎಂಬ ಪ್ರಶ್ನೆ ಹಾಕಿಕೊಳ್ಳುವುದಿಲ್ಲ.
ಮೊನ್ನೆ ಒಂದು ಪ್ರಕರಣ ನಡೆಯಿತು. ಸಾಹಿತಿ ಯೋಗೀಶ್ ಮಾಸ್ಟರ್ ಎಂಬುವರಿಗೆ ಯಾರೋ ಕಿಡಿಗೇಡಿಗಳು ಮಸಿ ಬಳೆದಿದ್ದಾರೆ.
ಹಾಗೆಯೇ ಸ್ವಲ್ಪ ದಿನಗಳ ಹಿಂದೆ ಸಾಹಿತಿಯೊಬ್ಬರಿಗೆ ಮತ್ತೊಬ್ಬ ಸಾಹಿತಿ ಸಭೆಯಲ್ಲಿ ಚಪ್ಪಲಿ ತೋರಿಸಿದ ಪ್ರಸಂಗ ನಡೆದಿತ್ತು.
ಈ ಎರಡು ಪ್ರಕರಣಗಳನ್ನು ಯಾವುದೇ ಎಡ ಬಲಗಳ ಯೋಚನೆ ಮಾಡದೇ ವಿರೋಧಿಸಬಹುದು. ಮಸಿ ಬಳೆಯುವುದು ಚಪ್ಪಲಿ ತೋರಿಸುವುದು ಅಥವಾ ಎಸೆಯುವುದು ಅವರನ್ನು ವಿರೋಧಿಸುವ ದಾರಿಯಲ್ಲ. ಆದರೆ ಇಲ್ಲಿ ಆ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಯಾರು ಯಾರಿಗೆ ಮಸಿ ಬಳೆದದ್ದು, ಚಪ್ಪಲಿ ತೋರಿಸಿದ್ದು ಎಂಬುದರ ಮೇಲೆ ಪ್ರ.ಪ ಬು.ಜೀಗಳ ಪ್ರತಿಕ್ರಿಯೆ ಅವಲಂಬಿತವಾಗಿರುತ್ತದೆ.
ಅದೇ ರೀತಿ ಯಾವುದೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಪ್ರತಿಕ್ರಿಯೆ ಸಮಾನವಾಗಿರಬೇಕು ಆದರೆ ಅಲ್ಲಿಯೂ ಯಾರು ಮಾಡಿಕೊಂಡಿದ್ದು, ಸಂಧರ್ಭ ಅಥವಾ ಆತನ ಹಿನ್ನಲೆ ಮೇಲೆ ಇವರುಗಳ ಪ್ರತಿಕ್ರಿಯೆ ಹೋರಾಟಗಳು ಅವಲಂಬಿತವಾಗಿರುತ್ತದೆ.
ಅಷ್ಟೆಲ್ಲಾ ಯಾಕೆ ಬಿಡಿ ಹಾಕಿಕೊಳ್ಳುವ ಬಟ್ಟೆಗೂ ಆ ಪ್ರಶ್ನೆ ಹಾಕಿಕೊಂಡೇ ಪ್ರತಿಕ್ರಿಯೆ ಕೊಡುತ್ತಾರೆ. ಮೊದಲನೇಯದಾಗಿ ತೆರಿಗೆ ಕಟ್ಟಿ ತಾನು ಸಂಪಾದಿಸಿದ ಹಣದಲ್ಲಿ ಏನು ಬೇಕಾದರೂ ಮಾಡುವ ಧರಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಅಂತಾಗಿಯೂ ಯಾವುದೋ ಕಾರಣವಿಟ್ಟುಕೊಂಡು ಪ್ರಶ್ನಿಸುವುದಾದರೆ ನಿಶ್ಪಕ್ಷಪಾತವಾಗಿ ಪ್ರಶ್ನಿಸಬೇಕು. ಲಕ್ಷಾಂತರ ಬೆಲೆಬಾಳುವ ವಾಚು, ಪಂಚೆ, ಕನ್ನಡಕ ಹಾಕಿಕೊಂಡವರ ಸರ್ಕಾರ ಬಡವರ ಸರ್ಕಾರವೆಂದೆನಿಸುತ್ತದೆ, ದೇಶಕ್ಕಾಗಿ ಹಗಲು ರಾತ್ರಿ ದುಡಿಯುವವ,  ದೇಶದ ಬಗ್ಗೆ ಪ್ರಪಂಚದೆಲ್ಲೆಡೆ ಒಳ್ಳೆಯ ಮಾತನ್ನಾಡುವಂತೆ ಮಾಡಿದವರು ಹಾಕಿಕೊಂಡ ಸೂಟಿನ ಮೇಲೆ ಇವರ ಆರೋಪ. ಸೂಟು ಬೂಟಿನ ಸರ್ಕಾರ ಎಂದವರು ವಾಚು ರೇಬಾನ್ ಸರ್ಕಾರ ಎನ್ನಲಿಲ್ಲ, ಕಾರಣ ಯಾರು ಏನನ್ನು ಹಾಕಿಕೊಂಡರು? ಹಾಕಿಕೊಂಡವರು ನಮ್ಮವರಾ(ಧರ್ಮ,ಜಾತಿ,ಒಡೆಯ) ಎಂಬ ಪ್ರಶ್ನೆ.
ಕೊನೆಯದಾಗಿ ನಾನು ಹೇಳ ಹೊರಟಿರುವುದು ಇಷ್ಟೇ, ನಮ್ಮ ಅಭಿಪ್ರಾಯ ಯಾವುದೇ ಪೂರ್ವಗ್ರಹ ಪೀಡಿತವಾಗಿರದೆ, ಪೂರ್ಣ ಹಿನ್ನಲೆಯನ್ನು ತಿಳಿದು ನಿಶ್ಪಕ್ಷಪಾತವಾಗಿರಲಿ.

Saturday, February 4, 2017

ನಮ್ಮ ದೇವರು ದೇವಸ್ಥಾನದೊಳಗೆ ಮಾತ್ರ ಹೋಗಿ ಕೂತದ್ದು ಯಾವಾಗಿನಿಂದ?

ನಮ್ಮ ದೇವರು ಸರ್ವಂತರ್ಯಾಮಿ. ಎಲ್ಲಾ ಕಡೆ ಇರುವವನು. ಅವನು ದೇವಸ್ಥಾನದೊಳಗೆ ಮಾತ್ರ ಹೋಗಿ ಕೂತದ್ದು ಯಾವಾಗಿನಿಂದ? ಈ ಪ್ರಶ್ನೆಗೆ ಬೇಬಿ ಶಾಮಿಲಿಯ ಬಾಯಲ್ಲಿ ಕನ್ನಡದ ಒಂದು ಚಿತ್ರದಲ್ಲಿ ನಿರ್ದೇಶಕ ಉತ್ತರವನ್ನು ಕೊಟ್ಟಿದ್ದಾರೆ, ಗಾಳಿ ಎಲ್ಲಾಕಡೆಯಲ್ಲೂ ಇದ್ದರೂ ಚಕ್ರದ ಟ್ಯೂಬಿನಲ್ಲಿ ಇಡುವಹಾಗೆ, ದೇವರು ಎಲ್ಲಾ ಕಡೆಯಲ್ಲಿ ಇದ್ದರೂ ದೇವಸ್ಥಾನದಲ್ಲಿ ದೇವರ ಇರುವಿಕೆ ವಿಶೇಷವೆನಿಸುತ್ತದೆ. ನಾನು ಈ ಪ್ರಶ್ನೆಗೆ ಹೀಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಊಟ ತಿಂಡಿ ಎಲ್ಲಿ ಮಾಡಿದರೂ ಹೊಟ್ಟೆಗೆ ಹೋಗುತ್ತದೆ, ಹಾಗಂತ ಬಾತ್‌ರೂಮಲ್ಲಿ ಮಾಡಲಾಗುವುದಿಲ್ಲ. ಅದೇ ರೀತಿ, ದೇವರು ಸರ್ವಾಂತರ್ಯಾಮಿಯಾದರೂ ದೇವಸ್ಥಾನದಲ್ಲಿ ದೇವರ ಮೇಲೆ ಭಕ್ತಿ ಏಕಾಗ್ರತೆ ಹೆಚ್ಚಾಗುತ್ತದೆ. ದೇವರಲ್ಲಿ ಮನಸ್ಸು ಮಾಡಲು ಶ್ರದ್ಧೆ ಇಡಲು ಹೆಚ್ಚು ಸಹಾಯ ಮಾಡುವ ಜಾಗ ದೇವಸ್ಥಾನ. ಹೊರ ಜಗತ್ತಿನಿಂದ ಸ್ವಲ್ಪ ದೂರವಿದ್ದು ಧ್ಯಾನ ಮಾಡಲು ಸಹಕಾರಿ, ಬೇರೆ ಯಾವ ಕೆಲಸಗಳನ್ನು ಅಲ್ಲಿ ಮಾಡಬಾರದೆಂಬ ನಿಯಮ ಇವುಗಳನ್ನು ಮಾಡಲು ಇನ್ನೂ ಸ್ವಲ್ಪ ಹೆಚ್ಚು ಏಕಾಗ್ರತೆ ಒದಗಿಸಬಲ್ಲದು.
ಸಾಮಾನ್ಯವಾಗಿ ಮಕ್ಕಳು ತಂದೆ ತಾಯಿ ಎದುರಿನಲ್ಲಿದ್ದರೆ ಮಾತ್ರ ಅವರ ಓದುವ ಶೈಲಿ ಸರಿಯಾಗಿರುತ್ತದೆ, ಇಲ್ಲವೆಂದರೆ ತಂದೆ ತಾಯಿಯ ಬಗ್ಗೆ ಎಷ್ಟೇ ಗೌರವವಿದ್ದರೂ ಸ್ವಲ್ಪ ಅವರ ಮನಸ್ಸು ಆ ಕಡೆ ಈ ಕಡೆ ಓಡಾಡುತ್ತದೆ. ತರಗತಿಯಲ್ಲಿ ಶಿಕ್ಷಕ ಎದುರಿನಲ್ಲಿದ್ದರೆ ಮಾತ್ರ ವಿಧ್ಯಾರ್ಥಿಗಳು ಸುಮ್ಮನಿದ್ದ ಹಾಗೆ. ನಮ್ಮ ಮನಸ್ಸಿಗೂ ಹಾಗೆ ಸುತ್ತಲಿನ ಪರಿಸರ ಮುಖ್ಯವಾಗುತ್ತದೆ. ಈ ಜಾಗ ಈ ಕೆಲಸಕ್ಕೆ ಎಂದು ನಿಯಮವಿದ್ದರೆ ಅಲ್ಲಿ ಆ ಕೆಲಸದ ಸಾರ್ಥಕತೆ ಹೆಚ್ಚು ಸಿಗುತ್ತದೆ.
ಗುರು ಹಿರಿಯರಲ್ಲಿ ಮನಸಿನಲ್ಲಿ ಗೌರವವಿದೆ ಎಂದು ಎದುರು ಬಂದಾಗ ನಮಸ್ಕರಿಸದೇ ಇದ್ದರೆ ಅಥವಾ ವಿಚಾರಿಸದೇ ಇದ್ದರೆ ಸರಿಯಾಗುತ್ತದೆಯೇ? ದೇವರು ಎಲ್ಲಾ ಕಡೆ ಇರುವನೆಂದು ತಿಳಿಯುವುದು ಒಳ್ಳೆಯದು ಆದರೂ ದೇವಸ್ಥಾನದಲ್ಲಿ ಆತನ ಅನುಗ್ರಹ ವಿಶೇಷವಾಗಿರುತ್ತದೆಂದು ಹೋಗಬೇಕು. ಇಲ್ಲಿ ಕೆಲವು ದಾಸರ ಪದಗಳನ್ನು ಹೇಳಿದ್ದೇನೆ. ಅವರೂ ದೇವರೆಲ್ಲಕಡೆ ಇರುವನೆಂದು ನಂಬಿರುವವರೇ ಆದರೂ ಹಲವು ದೇವಸ್ಥಾನಗಳಿಗೆ ಹೋಗುವವರೇ. ಅವರ ಸಾಕ್ಷಾತ್ಕಾರದ ೧ರಷ್ಟು ನಮಗೆ ದೇವರ ಬಗ್ಗೆ ತಿಳಿದಿಲ್ಲ ಎನ್ನಬಹುದು.
೧. ನಿನ್ನ ದರುಶನಕೆ ಬಂದವನಲ್ಲವೋ ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ
ಎಲ್ಲೆಲ್ಲೂ ನೀನೆ ಸರ್ವವ್ಯಾಪ್ತನಾಗಿರಲಿಕ್ಕೆ ಇಲ್ಲಿಗೇ ಬಾಹ ಕಾರಣವ್ಯಾವುದೋ
೨. ಸುಲಭ ಪೂಜೆಯ ಮಾಡಿ ಬಲವಿಲ್ಲದವರು
ನಳಿನನಾಭನ ಪಾದ ನಳಿನ ಸೇವಕರು
ಇರುಳು ಹಚ್ಚುವ ದೀಪ ಹರಿಗೆ ನೀರಾಜನವು
ಮರೆಮಾಡುವ ವಸ್ತ್ರ ಪರಮ ಮಡಿಯು
ತಿರುಗಾಡಿ ನಡೆಯುವುದೆ ಹರಿಗೆ ಪ್ರದಕ್ಷಿಣೆಯು
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು
೩. ಹೂವ ತರುವರ ಮನೆಗೆ ಹುಲ್ಲ ತರುವ
ಅವ್ವೆ ಲಕುಮೀರಮಣ ಇವಗಿಲ್ಲ ಗರುವ
ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ
ಇಂದಿರಾರಮಣಗರ್ಪಿತವೆನ್ನಲು
ಒಂದೆ ಮನದಲಿ ಸಿಂಧುಶಯನ ಮುಕುಂದಯೆನೆ
ಎಂದೆಂದು ವಾಸಿಪನಾ ಮಂದಿರದೊಳಗೆ
೪. ಕೇಳನೋ ಹರಿ ತಾಳೆನೋ ತಾಳ ಮೆಳಗಳಿದ್ದು ಪ್ರೇಮವಿಲ್ಲದ ಗಾನ
ಹೀಗೆ ಹಲವಾರು ಪದಗಳಿವೆ. ಎಲ್ಲದರಲ್ಲೂ ದೇವಸ್ಥಾನಕ್ಕಿಂತ ಮನಸ್ಸಿನಲ್ಲಿ ದೇವರನ್ನು ಆರಾಧಿಸಿ, ಭಕ್ತಿ ಮುಖ್ಯ ಎಂದು ಹೊರನೋಟಕ್ಕೆ ಹೇಳಿದಂತೆ ಕಂಡರೂ ಅದು ಢಾಂಬಿಕ ಭಕ್ತರಿಗೆಂದೇ ತಿಳಿಯಬೇಕು. ಹೇಗೆ ಬಾಹ್ಯ ಶುದ್ಧಿಂಗಿಂತ ಅಂತರಂಗ ಶುದ್ಧಿ ಮುಖ್ಯ ಎಂದಾಗ ಬಾಹ್ಯ ಶುದ್ಧಿ ಮಾಡಿಕೊಳ್ಳಬಾರದು ಎಂದರ್ಥವಾಗುವುದಿಲ್ಲವೋ ಹಾಗೆ.
ಅಲ್ಲದೇ ಅವರೆಲ್ಲರೂ ದೇವರನ್ನು ಎಲ್ಲಾ ಕಡೆಯಲ್ಲಿ ಕಂಡರೂ, ಕಾಣಿ ಎಂದು ಹೇಳಿದರೂ ದೇವಸ್ಥಾನಗಳಿಗೆ ಹೋಗದೇ ಇದ್ದವರಲ್ಲ. ಪುರಂದರ ದಾಸರು ಪಾಂಡುರಂಗನ ಸನ್ನಿಧಿಯಲ್ಲಿ ಪಾಂಡುರಂಗನಿಗೆ ತಂಬಿಗೆಯಲ್ಲಿ ತಲೆಗೆ ಕುಟ್ಟಿ ಬುಗುಟೆ ಬರಿಸಿ, ನಂತರ ಕಳ್ಳತನದ ಆಪಾದನೆಯಲ್ಲಿ ಶಿಕ್ಷೆ ಪಡೆದುಕೊಂಡು ತಮ್ಮಲ್ಲಿದ್ದ ಸ್ವಲ್ಪ ಗರ್ವವನ್ನೂ ಅಳಿಸಿಕೊಂಡ ಕಥೆ, ತಿರುಪತಿಯಲ್ಲಿ ವೆಂಕಟೇಶನನ್ನು ಹಾಡಿ ಹೊಗಳಿಲ್ಲವೇ? ಉಡುಪಿಯಲಿ ಬಾಲ ಕೃಷ್ಣನನ್ನು ಕಂಡು ತಮ್ಮ ಪದಗಳ ಮೂಲಕ ಬಾಲಕೃಷ್ಣನನ್ನು ನಮ್ಮ ಕಣ್ಣ ಮುಂದೆ ತರಿಸಿಲ್ಲವೇ? ಕನಕದಾಸರಿಗಂತು ಅವರಿದ್ದ ಕಡೆಯೇ ತಿರುಗಿ ದರ್ಶನ ಕೊಟ್ಟ ಭಗವಂತ, ಆದರೂ ಅವರೆಲ್ಲರೂ ದೇವಸ್ಥಾನಕ್ಕೆ ಹೋದದ್ದು ದೇವರಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು, ನಾನು ನಿನ್ನ ಧೀನ ಎಂದು ಮಂಡಿ ಬಾಗಿ ಕೂರಲು. ದೇವಸ್ಥಾನದಲ್ಲಿ ಕೆಲಕಾಲ ಕುಳಿತು ದೇವರ ಮೂರ್ತಿಯನ್ನು ಕಣ್ತುಂಬ ತುಂಬಿಕೊಂಡು, ತನ್ನನ್ನು ತನ್ನ ಪ್ರತೀ ಕಾರ್ಯವನ್ನು ದೇವರಿಗೆ ಸಮರ್ಪಣೆ ಮಾಡಿ, ಜ್ಞಾನ ಭಕ್ತಿ ವೈರಾಗ್ಯವನ್ನು ಬೇಡುವುದು ದೇವಸ್ಥಾನಕ್ಕೆ ಹೋಗುವುದರ ಮುಖ್ಯ ಉದ್ದೇಶ. ಸರ್ವಾಂತರ್ಯಾಮಿಯಾಗಿದ್ದರೂ ದೇವಸ್ಥಾನದಲ್ಲಿ ವಿಶೇಷ ಸನ್ನಿಧಾನವಿದೆಯೆಂಬುದು ದೇವಸ್ಥಾನಕ್ಕೆ ಹೋಗುವುದರ ಹಿಂದಿರುವ ಉದ್ದೇಶ.

Sunday, January 1, 2017

ಸ್ವಾಮಿ ವಿವೇಕಾನಂದರು ಮತ್ತು ಶ್ರೀನಿವಾಸ ರಾಮಾನುಜನ್

ವಿಶ್ವದ ಉಗಮ ಹೇಗಾಯಿತು? ಎಂಬ ಮೂಲಭೂತ ಪ್ರಶ್ನೆಯನ್ನು ನಮ್ಮ ಮುಂದಿಟ್ಟುಕೊಂಡರೆ, ನ್ಯೂಟನ್, ಐನ್‍ಸ್ಟಿನ್, ಬೋಸ್ ಹೀಗೆ ಹಲವಾರು ಭೌತ(ಗಣಿತ)ಶಾಸ್ತ್ರಜ್ಞರು ಅವರ ಅನೇಕ ಸಮೀಕರಣಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ವಿಜ್ಞಾನದ ಯಾವುದೇ ವಿಷಯವನ್ನು ಅರ್ಥೈಸಲು ಗಣಿತಶಾಸ್ತ್ರದ ಮೊರೆಹೋಗುವುದು ಸಹಜ. ಗಣಿತವನ್ನು ವಿಜ್ಞಾನದ ಭಾಷೆಯೆಂದೇ ಕರೆಯುತ್ತಾರೆ. ವಿಜ್ಞಾನ ಕೂಡ ಸಂಪೂರ್ಣವಲ್ಲ. ಹಲವು ಪ್ರಶ್ನೆಗಳಿಗೆ ವಿಜ್ಞಾನಕ್ಕೆ ಉತ್ತರಿಸಲಾಗದೆ ಮೌನವಾಗಿಬಿಡುತ್ತದೆ. ಹೀಗೆ ಜ್ಞಾನದ ಸಾಗರದಲ್ಲಿ ದಾರಿ ಕಾಣದೆ ನಿಂತಿದ್ದ ದೋಣಿಗೆ ಆಧ್ಯಾತ್ಮ ದಿಕ್ಸೂಚಿಯಾಗುತ್ತದೆ, ತತ್ವಶಾಸ್ತ್ರ ಹುಟ್ಟಾಗುತ್ತದೆ.
ಹಾಗಾಗಿ ಜಗತ್ತಿನ ಯಾವುದೇ ವಿಷಯವನ್ನು ಹೆಚ್ಚು ಹೆಚ್ಚು ಆಳವಾಗಿ ತಿಳಿಯುತ್ತಾ ಹೋದರೆ ನಮಗೆ ಸಿಗುವುದು ಎರಡು ವಿಷಯ ಒಂದು ಗಣಿತಶಾಸ್ತ್ರ ಇನ್ನೊಂದು ತತ್ವಶಾಸ್ತ್ರ. ಈ ಎರಡು ವಿಷಯಗಳಿಗೆ ಭಾರತೀಯರ ಕೊಡುಗೆ ಅಪಾರ. ಅಂಥವರಲ್ಲಿ ಸ್ವಾಮಿ ವಿವೇಕಾನಂದರು ಹಾಗು ಶ್ರೀನಿವಾಸ ರಾಮಾನುಜನ್ನರು ವಿಶೇಷ ಪಾತ್ರವಹಿಸಿದ್ದಾರೆ. ಒಂದು ದೃಷ್ಟಿಕೋನದಲ್ಲಿ ಇವರುಗಳ ನಡುವೆ ಹಲವು ಸಾಮ್ಯತೆಗಳನ್ನು ಸಹ ನೋಡಬಹುದು. ಮೊದಲನೇಯದಾಗಿ ಇಬ್ಬರೂ ಕಿರಿಯ ವಯಸ್ಸಿನಲ್ಲೇ ಮಹಾನ್ ಸಾಧಕರಾಗಿ ಪರಿಚಯಗೊಂಡವರು. ಎರಡನೇಯದಾಗಿ, ಭಾರತವೆಂದರೆ ಬಡವರು, ಅನಾಗರೀಕರು, ಹಾವಾಡಿಗರ ದೇಶ, ಮೂಢನಂಬಿಕೆಯಲ್ಲಿ ಮುಳುಗಿದವರೆಂದೇ ತಿಳಿದಿದ್ದ ಪಾಶ್ಚಿಮಾತ್ಯರಲ್ಲಿ ಗೌರವವನ್ನು ಮೂಡಿಸಿ ಇಬ್ಬೆರಗಾಗುವಂತೆ ಮಾಡಿದವರಲ್ಲಿ ಇವರಿಬ್ಬರದೂ ಮುಖ್ಯ ಪಾತ್ರ. ಜಗತ್ತಿನ ಜ್ಞಾನದ ಅಡಿಪಾಯವೆಂದು ಪರಿಗಣಿಸಬಹುದಾದ ಗಣಿತ ಮತ್ತು ತತ್ವಶಾಸ್ತ್ರಗಳಲ್ಲಿ ಇವರು ಸಾಧನೆಗೈದಿರುವುದರಿಂದ ಅದನ್ನು ಮೂರನೇ ಸಾಮ್ಯತೆಯೆಂದೇ ಹೇಳಬಹುದು.
ವಸುದೈವ ಕುಟುಂಬಕಂ ಎಂಬ ತತ್ವವನ್ನು ಜಗತ್ತಿಗೆ ಸಾರಿ ಭಾರತೀಯರ ಉದಾರ ಹಾಗು ಶ್ರೇಷ್ಠ ಚಿಂತನೆಯನ್ನು ಪ್ರಪಂಚಕ್ಕೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರಾದರೆ, ಒಬ್ಬ ಸಾಧಾರಣ ಗುಮಾಸ್ತ ಸರಿಸುಮಾರು 3900 ಪ್ರಮೇಯಗಳನ್ನು ತನ್ನ ಕಡಿಮೆ ಜೀವಿತಾವಧಿಯಲ್ಲಿ ಬರೆದಿಟ್ಟು, ಪಾಶ್ಚಿಮಾತ್ಯ ವಿಜ್ಞಾನಿಗಳಿಂದ ಅವರ ಬುದ್ಧಿಮತ್ತೆಯನ್ನು ಐನ್ಸ್ಟಿನ್‍ ಬುದ್ದಿಮತ್ತೆಗೆ  ಹೋಲಿಸಿಕೊಂಡವರು ಶ್ರೀನಿವಾಸ ರಾಮಾನುಜನ್ ಅವರು. ಇವರಲ್ಲಿ ಕಾಣಸಿಗುವ ಮತ್ತೊಂದು ಸಮಾನ ಅಂಶವೆಂದರೆ ಆಧ್ಯಾತ್ಮ. ಸ್ವಾಮಿ ವಿವೇಕಾನಂದರು ಮತ್ತು ಶ್ರೀನಿವಾಸ ರಾಮಾನುಜನ್ ಇಬ್ಬರಿಗೂ ಇದ್ದ ಆಧ್ಯಾತ್ಮದ ಒಲವು ಇಬ್ಬರನ್ನೂ ಮಹಾನ್ ವ್ಯಕ್ತಿಗಳನ್ನಾಗಿಸಿರಬಹುದು. ಇಬ್ಬರೂ ಮನಸ್ಸು ಮಾಡಿದ್ದರೆ ಪಶ್ಚಿಮ ದೇಶದಲ್ಲೇ ಉಳಿದು ಸುಖ ಸಂಪತ್ತಿನಿಂದ ಕಾಲ ಕಳೆಯಬಹುದಿತ್ತು. ಆದರೆ ಇಬ್ಬರಿಗೂ ಇದ್ದ ಭಾರತದ ಪ್ರೀತಿ ಭಾರತಕ್ಕೆ ಹಿಂತಿರುಗುವಂತೆ ಮಾಡಿತು.
ಚಿಕಾಗೋದಲ್ಲಿ ನಡೆದ ಸಮ್ಮೇಳನಕ್ಕೆ ತಮ್ಮ ಧರ್ಮ ಶ್ರೇಷ್ಠ ಎಂದೇ ಸಾರಲು ಬಂದಿದ್ದ ಹಲವು ಧರ್ಮದ ಪ್ರಮುಖರ ಮುಂದೆ "ಅಮೇರಿಕಾದ ಸಹೋದರಿ ಮತ್ತು ಸೋದರರೆ" ಎನ್ನುವುದರ ಮೂಲಕ ಸನಾತನ ಧರ್ಮದ ಭ್ರಾತುತ್ವವನ್ನು ವಿವೇಕಾನಂದರು ಪರಿಚಯಿಸಿದರೆ, ಪರಮ ನಾಸ್ತಿಕ ಪ್ರೊ. ಹಾರ್ಡಿಗೆ "An equation has no meaning unless it expresses a thought of God" ಎನ್ನುವುದರ ಮೂಲಕ ರಾಮಾನುಜನ್ ಅವರು ವಿಜ್ಞಾನ ಮತ್ತು ದೇವರ ಅಸ್ತಿತ್ವದ ನಡುವೆ ಇರುವ ಸಂಬಂಧವನ್ನು ತೋರಿಸಿದರು.
ವಿವೇಕಾನಂದರು 39 ವರ್ಷ ಬದುಕಿದರೆ, ರಾಮಾನುಜನ್ 32 ವರ್ಷ. ತಮ್ಮ ಅಲ್ಪಾವಧಿಯಲ್ಲಿ ಇಡೀ ವಿಶ್ವದ ಗಮನವನ್ನು ಭಾರತದ ಕಡೆ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇಂಥಾ ಮೇರು ವ್ಯಕ್ತಿಗಳು ಜನಿಸಿದ ನಾಡಿನಲ್ಲಿ ಹುಟ್ಟಿರುವುದು ಹೆಮ್ಮೆಯ ವಿಷಯ. ಅವರು ತೋರಿಸಿಕೊಟ್ಟ ಆದರ್ಶ ಮಾರ್ಗದಲ್ಲಿ ಸಾಗೋಣ.