Saturday, February 4, 2017

ನಮ್ಮ ದೇವರು ದೇವಸ್ಥಾನದೊಳಗೆ ಮಾತ್ರ ಹೋಗಿ ಕೂತದ್ದು ಯಾವಾಗಿನಿಂದ?

ನಮ್ಮ ದೇವರು ಸರ್ವಂತರ್ಯಾಮಿ. ಎಲ್ಲಾ ಕಡೆ ಇರುವವನು. ಅವನು ದೇವಸ್ಥಾನದೊಳಗೆ ಮಾತ್ರ ಹೋಗಿ ಕೂತದ್ದು ಯಾವಾಗಿನಿಂದ? ಈ ಪ್ರಶ್ನೆಗೆ ಬೇಬಿ ಶಾಮಿಲಿಯ ಬಾಯಲ್ಲಿ ಕನ್ನಡದ ಒಂದು ಚಿತ್ರದಲ್ಲಿ ನಿರ್ದೇಶಕ ಉತ್ತರವನ್ನು ಕೊಟ್ಟಿದ್ದಾರೆ, ಗಾಳಿ ಎಲ್ಲಾಕಡೆಯಲ್ಲೂ ಇದ್ದರೂ ಚಕ್ರದ ಟ್ಯೂಬಿನಲ್ಲಿ ಇಡುವಹಾಗೆ, ದೇವರು ಎಲ್ಲಾ ಕಡೆಯಲ್ಲಿ ಇದ್ದರೂ ದೇವಸ್ಥಾನದಲ್ಲಿ ದೇವರ ಇರುವಿಕೆ ವಿಶೇಷವೆನಿಸುತ್ತದೆ. ನಾನು ಈ ಪ್ರಶ್ನೆಗೆ ಹೀಗೆ ಉತ್ತರಿಸಲು ಪ್ರಯತ್ನಿಸುತ್ತೇನೆ.
ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಊಟ ತಿಂಡಿ ಎಲ್ಲಿ ಮಾಡಿದರೂ ಹೊಟ್ಟೆಗೆ ಹೋಗುತ್ತದೆ, ಹಾಗಂತ ಬಾತ್‌ರೂಮಲ್ಲಿ ಮಾಡಲಾಗುವುದಿಲ್ಲ. ಅದೇ ರೀತಿ, ದೇವರು ಸರ್ವಾಂತರ್ಯಾಮಿಯಾದರೂ ದೇವಸ್ಥಾನದಲ್ಲಿ ದೇವರ ಮೇಲೆ ಭಕ್ತಿ ಏಕಾಗ್ರತೆ ಹೆಚ್ಚಾಗುತ್ತದೆ. ದೇವರಲ್ಲಿ ಮನಸ್ಸು ಮಾಡಲು ಶ್ರದ್ಧೆ ಇಡಲು ಹೆಚ್ಚು ಸಹಾಯ ಮಾಡುವ ಜಾಗ ದೇವಸ್ಥಾನ. ಹೊರ ಜಗತ್ತಿನಿಂದ ಸ್ವಲ್ಪ ದೂರವಿದ್ದು ಧ್ಯಾನ ಮಾಡಲು ಸಹಕಾರಿ, ಬೇರೆ ಯಾವ ಕೆಲಸಗಳನ್ನು ಅಲ್ಲಿ ಮಾಡಬಾರದೆಂಬ ನಿಯಮ ಇವುಗಳನ್ನು ಮಾಡಲು ಇನ್ನೂ ಸ್ವಲ್ಪ ಹೆಚ್ಚು ಏಕಾಗ್ರತೆ ಒದಗಿಸಬಲ್ಲದು.
ಸಾಮಾನ್ಯವಾಗಿ ಮಕ್ಕಳು ತಂದೆ ತಾಯಿ ಎದುರಿನಲ್ಲಿದ್ದರೆ ಮಾತ್ರ ಅವರ ಓದುವ ಶೈಲಿ ಸರಿಯಾಗಿರುತ್ತದೆ, ಇಲ್ಲವೆಂದರೆ ತಂದೆ ತಾಯಿಯ ಬಗ್ಗೆ ಎಷ್ಟೇ ಗೌರವವಿದ್ದರೂ ಸ್ವಲ್ಪ ಅವರ ಮನಸ್ಸು ಆ ಕಡೆ ಈ ಕಡೆ ಓಡಾಡುತ್ತದೆ. ತರಗತಿಯಲ್ಲಿ ಶಿಕ್ಷಕ ಎದುರಿನಲ್ಲಿದ್ದರೆ ಮಾತ್ರ ವಿಧ್ಯಾರ್ಥಿಗಳು ಸುಮ್ಮನಿದ್ದ ಹಾಗೆ. ನಮ್ಮ ಮನಸ್ಸಿಗೂ ಹಾಗೆ ಸುತ್ತಲಿನ ಪರಿಸರ ಮುಖ್ಯವಾಗುತ್ತದೆ. ಈ ಜಾಗ ಈ ಕೆಲಸಕ್ಕೆ ಎಂದು ನಿಯಮವಿದ್ದರೆ ಅಲ್ಲಿ ಆ ಕೆಲಸದ ಸಾರ್ಥಕತೆ ಹೆಚ್ಚು ಸಿಗುತ್ತದೆ.
ಗುರು ಹಿರಿಯರಲ್ಲಿ ಮನಸಿನಲ್ಲಿ ಗೌರವವಿದೆ ಎಂದು ಎದುರು ಬಂದಾಗ ನಮಸ್ಕರಿಸದೇ ಇದ್ದರೆ ಅಥವಾ ವಿಚಾರಿಸದೇ ಇದ್ದರೆ ಸರಿಯಾಗುತ್ತದೆಯೇ? ದೇವರು ಎಲ್ಲಾ ಕಡೆ ಇರುವನೆಂದು ತಿಳಿಯುವುದು ಒಳ್ಳೆಯದು ಆದರೂ ದೇವಸ್ಥಾನದಲ್ಲಿ ಆತನ ಅನುಗ್ರಹ ವಿಶೇಷವಾಗಿರುತ್ತದೆಂದು ಹೋಗಬೇಕು. ಇಲ್ಲಿ ಕೆಲವು ದಾಸರ ಪದಗಳನ್ನು ಹೇಳಿದ್ದೇನೆ. ಅವರೂ ದೇವರೆಲ್ಲಕಡೆ ಇರುವನೆಂದು ನಂಬಿರುವವರೇ ಆದರೂ ಹಲವು ದೇವಸ್ಥಾನಗಳಿಗೆ ಹೋಗುವವರೇ. ಅವರ ಸಾಕ್ಷಾತ್ಕಾರದ ೧ರಷ್ಟು ನಮಗೆ ದೇವರ ಬಗ್ಗೆ ತಿಳಿದಿಲ್ಲ ಎನ್ನಬಹುದು.
೧. ನಿನ್ನ ದರುಶನಕೆ ಬಂದವನಲ್ಲವೋ ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ
ಎಲ್ಲೆಲ್ಲೂ ನೀನೆ ಸರ್ವವ್ಯಾಪ್ತನಾಗಿರಲಿಕ್ಕೆ ಇಲ್ಲಿಗೇ ಬಾಹ ಕಾರಣವ್ಯಾವುದೋ
೨. ಸುಲಭ ಪೂಜೆಯ ಮಾಡಿ ಬಲವಿಲ್ಲದವರು
ನಳಿನನಾಭನ ಪಾದ ನಳಿನ ಸೇವಕರು
ಇರುಳು ಹಚ್ಚುವ ದೀಪ ಹರಿಗೆ ನೀರಾಜನವು
ಮರೆಮಾಡುವ ವಸ್ತ್ರ ಪರಮ ಮಡಿಯು
ತಿರುಗಾಡಿ ನಡೆಯುವುದೆ ಹರಿಗೆ ಪ್ರದಕ್ಷಿಣೆಯು
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು
೩. ಹೂವ ತರುವರ ಮನೆಗೆ ಹುಲ್ಲ ತರುವ
ಅವ್ವೆ ಲಕುಮೀರಮಣ ಇವಗಿಲ್ಲ ಗರುವ
ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ
ಇಂದಿರಾರಮಣಗರ್ಪಿತವೆನ್ನಲು
ಒಂದೆ ಮನದಲಿ ಸಿಂಧುಶಯನ ಮುಕುಂದಯೆನೆ
ಎಂದೆಂದು ವಾಸಿಪನಾ ಮಂದಿರದೊಳಗೆ
೪. ಕೇಳನೋ ಹರಿ ತಾಳೆನೋ ತಾಳ ಮೆಳಗಳಿದ್ದು ಪ್ರೇಮವಿಲ್ಲದ ಗಾನ
ಹೀಗೆ ಹಲವಾರು ಪದಗಳಿವೆ. ಎಲ್ಲದರಲ್ಲೂ ದೇವಸ್ಥಾನಕ್ಕಿಂತ ಮನಸ್ಸಿನಲ್ಲಿ ದೇವರನ್ನು ಆರಾಧಿಸಿ, ಭಕ್ತಿ ಮುಖ್ಯ ಎಂದು ಹೊರನೋಟಕ್ಕೆ ಹೇಳಿದಂತೆ ಕಂಡರೂ ಅದು ಢಾಂಬಿಕ ಭಕ್ತರಿಗೆಂದೇ ತಿಳಿಯಬೇಕು. ಹೇಗೆ ಬಾಹ್ಯ ಶುದ್ಧಿಂಗಿಂತ ಅಂತರಂಗ ಶುದ್ಧಿ ಮುಖ್ಯ ಎಂದಾಗ ಬಾಹ್ಯ ಶುದ್ಧಿ ಮಾಡಿಕೊಳ್ಳಬಾರದು ಎಂದರ್ಥವಾಗುವುದಿಲ್ಲವೋ ಹಾಗೆ.
ಅಲ್ಲದೇ ಅವರೆಲ್ಲರೂ ದೇವರನ್ನು ಎಲ್ಲಾ ಕಡೆಯಲ್ಲಿ ಕಂಡರೂ, ಕಾಣಿ ಎಂದು ಹೇಳಿದರೂ ದೇವಸ್ಥಾನಗಳಿಗೆ ಹೋಗದೇ ಇದ್ದವರಲ್ಲ. ಪುರಂದರ ದಾಸರು ಪಾಂಡುರಂಗನ ಸನ್ನಿಧಿಯಲ್ಲಿ ಪಾಂಡುರಂಗನಿಗೆ ತಂಬಿಗೆಯಲ್ಲಿ ತಲೆಗೆ ಕುಟ್ಟಿ ಬುಗುಟೆ ಬರಿಸಿ, ನಂತರ ಕಳ್ಳತನದ ಆಪಾದನೆಯಲ್ಲಿ ಶಿಕ್ಷೆ ಪಡೆದುಕೊಂಡು ತಮ್ಮಲ್ಲಿದ್ದ ಸ್ವಲ್ಪ ಗರ್ವವನ್ನೂ ಅಳಿಸಿಕೊಂಡ ಕಥೆ, ತಿರುಪತಿಯಲ್ಲಿ ವೆಂಕಟೇಶನನ್ನು ಹಾಡಿ ಹೊಗಳಿಲ್ಲವೇ? ಉಡುಪಿಯಲಿ ಬಾಲ ಕೃಷ್ಣನನ್ನು ಕಂಡು ತಮ್ಮ ಪದಗಳ ಮೂಲಕ ಬಾಲಕೃಷ್ಣನನ್ನು ನಮ್ಮ ಕಣ್ಣ ಮುಂದೆ ತರಿಸಿಲ್ಲವೇ? ಕನಕದಾಸರಿಗಂತು ಅವರಿದ್ದ ಕಡೆಯೇ ತಿರುಗಿ ದರ್ಶನ ಕೊಟ್ಟ ಭಗವಂತ, ಆದರೂ ಅವರೆಲ್ಲರೂ ದೇವಸ್ಥಾನಕ್ಕೆ ಹೋದದ್ದು ದೇವರಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು, ನಾನು ನಿನ್ನ ಧೀನ ಎಂದು ಮಂಡಿ ಬಾಗಿ ಕೂರಲು. ದೇವಸ್ಥಾನದಲ್ಲಿ ಕೆಲಕಾಲ ಕುಳಿತು ದೇವರ ಮೂರ್ತಿಯನ್ನು ಕಣ್ತುಂಬ ತುಂಬಿಕೊಂಡು, ತನ್ನನ್ನು ತನ್ನ ಪ್ರತೀ ಕಾರ್ಯವನ್ನು ದೇವರಿಗೆ ಸಮರ್ಪಣೆ ಮಾಡಿ, ಜ್ಞಾನ ಭಕ್ತಿ ವೈರಾಗ್ಯವನ್ನು ಬೇಡುವುದು ದೇವಸ್ಥಾನಕ್ಕೆ ಹೋಗುವುದರ ಮುಖ್ಯ ಉದ್ದೇಶ. ಸರ್ವಾಂತರ್ಯಾಮಿಯಾಗಿದ್ದರೂ ದೇವಸ್ಥಾನದಲ್ಲಿ ವಿಶೇಷ ಸನ್ನಿಧಾನವಿದೆಯೆಂಬುದು ದೇವಸ್ಥಾನಕ್ಕೆ ಹೋಗುವುದರ ಹಿಂದಿರುವ ಉದ್ದೇಶ.