ದಾಸರೆಂದರೆ ಪುರಂದರ ದಾಸರಯ್ಯ ಎಂದು ಪುರಂದರ ದಾಸರ ಆರಾಧನೆ ಪ್ರಯುಕ್ತ ಕೆಲವು ದಿನಗಳು ಪ್ಹೆಸ್ಬುಕ್ಕಲ್ಲಿ ಒಂದಷ್ಟು ಹಾಡುಗಳನ್ನು ಹಾಕುತಿದ್ದೆ. ಹಾಗೆ ಕೆಳಗಿನ ಚಿತ್ರ ತುಂಬಾ ಹಿಂದೆ ನಾನು ಬಿಡಿಸಿದ್ದು. ಅದಕ್ಕೆ ಫೋಟೋಶಾಪಲ್ಲಿ ಹೊಸಾ ಲುಕ್ ಕೊಡೋಣ ಎಂದೆನಿಸಿ ಹೊಸ ಟಚ್ ಕೊಟ್ಟಿದ್ದಾಯ್ತು. ಹಾಗೆಯೇ ದಾಸರ ಬಗ್ಗೆ ಒಂದೆರಡು ಅತಿ ಕಡಿಮೆ ಸಾಲುಗಳು ಬರೆದಿದ್ದೇನೆ.
ಯಾರು ಪುರಂದರ ದಾಸರು?
ಮೂಲತಃ ಅವರು ನಾರದರ ಅವತಾರ. ಸದಾ ನಾರಾಯಣನ ನಾಮ ಸ್ಮರಣೆ ಮಾಡುವ ನಾರದರ ಅಂಶವಿದೆ ಅಂದ ಮೇಲೆ ಕೇಳಬೇಕೇ? ಹರಿಯನ್ನು ಹಾಡಿಪೊಗಳುವುದರಲ್ಲಿ ಎತ್ತಿದ ಕೈ. ಅಂದು ನಾರದರಾಗಿ ಕಯಾದುವಿನ ಗರ್ಭದಲ್ಲಿದ್ದ ಪ್ರಹ್ಲಾದನಿಗೆ ಸಕಲ ಪಾಠ ಮಾಡಿದವರು ಕಲಿಯುಗದಲ್ಲಿ ಅದೇ ಪ್ರಹ್ಲಾದರಾಯರ ಅವತಾರವಾದ ಶ್ರೀ ವ್ಯಾಸರಾಜರ ಬಳಿ ದಾಸತ್ವವನ್ನು ಗಳಿಸಿದವರು. ವೇದ, ಶಾಸ್ತ್ರ, ಶೃತಿ ಸ್ಮೃತಿಗಳೆಲ್ಲಾ ಪಾಮರರಿಗೆ ಅರ್ಥವಾಗುವ ಹಾಗೆ ಸರಳ ಕನ್ನಡದಲ್ಲಿ ಹಾಡುಗಳ ರೂಪದಲ್ಲಿ ಬರೆದವರು. ಶಾಸ್ತ್ರೀಯ ಸಂಗೀತವನ್ನು ಸುಲಭಗೊಳಿಸಿ ಕರ್ನಾಟಕ ಸಂಗೀತ ಪಿತಾಮಹರಾದವರು. ವಿಜಯ ನಗರ ಸಾಮ್ರಾಜ್ಯದಲ್ಲಿದ್ದು ಆಚಾರ್ಯ ಮದ್ವಸಾಮ್ರಾಜ್ಯದಲ್ಲಿ ದಾಸರಾಗಿ ರಾರಾಜಿಸಿದವರು.
ದಾಸರ ಹಾಡಿನಲ್ಲಿರುವ ವಿಶೇಷವೇನು?
ಮೂವತ್ತನೇ ವಯಸ್ಸಿನಲ್ಲಿ ಹರಿಯ ಕೃಪೆಯಿಂದ ಸಂಸಾರ, ಧನ ಕನಕದಲ್ಲಿ ವೈರಾಗ್ಯ ಮೂಡಿ 'ಪುರಂದರ ವಿಠಲ' ಎಂಬ ಅಂಕಿತ ನಾಮದಲ್ಲಿ ಐವತ್ತು ವರ್ಷಗಳ ಕಾಲ ಸುಮಾರು 45,000 ಕೀರ್ತನೆಗಳನ್ನು ರಚಿಸಿದವರು. ಅಂದರೆ ವರ್ಷಕ್ಕೆ ಸರಿಸುಮಾರು ಸಾವಿರ ಹಾಡುಗಳು. ಅವರ ಹಾಡುಗಳನ್ನು ಗಮನಿಸಿದರೆ, ಅದರಲ್ಲಿ ಇರದ ವಿಷಯಗಳೇ ಇಲ್ಲ. ಹರಿ ಭಕ್ತಿ, ತತ್ವಶಾಸ್ತ್ರದಿಂದ ಹಿಡಿದು ಹಾಸ್ಯ, ಅಣಕು ಪಿಳ್ಳಾರಿ ಗೀತೆಯವರೆಗೂ ಎಲ್ಲಾ ರೀತಿಯ ಹಾಡುಗಳನ್ನು ಬರೆದಿದ್ದಾರೆ. 'ಮನೆಯೊಳಗಾಡೋ ಗೋವಿಂದ, ತೋಳು ತೋಳು ತೋಳು ರಂಗ ತೋಳನ್ನಾಡೈ- ಎಂದು ಯಶೋದೆ ಕೃಷ್ಣನಿಗೆ ಲಾಲನೆ ಪಾಲನೆ ಮಾಡಿದ ರೀತಿಯನ್ನು ಸ್ವತಃ ತಾವೇ ಮಾಡಿದ್ದಾರೇನೋ ಎಂಬಂತೆ ಕಣ್ಣ ಮುಂದೆ ತಂದಿಟ್ಟಿದ್ದಲ್ಲದೆ, 'ಕೇಳಲೊಲ್ಲನೇ ಎನ್ನ ಮಾತನು ರಂಗ' ಎಂದು ಗೋಪಿಯಾಗಿ ಯಶೋದೆಯ ಮುಂದೆ ಕೃಷ್ಣನ ಬಗ್ಗೆ ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ. ಅದೆಷ್ಟು ರೀತಿ ಹತ್ತು ಸಾಲುಗಳಲ್ಲಿ ದಶಾವತಾರವನ್ನು ವರ್ಣಿಸಿದ್ದಾರೋ.. ಆಚಾರವಿಲ್ಲದ ನಾಲಗೆ, ಕೆರೆಯ ನೀರನು ಕೆರೆಗೆ ಚೆಲ್ಲಿ, ಜಾಲಿಯ ಮರದಂತೆ, ಮಾನವ ಜನ್ಮ ದೊಡ್ಡದು, ಆರು ಹಿತವರು ನಿನಗೆ- ಹೀಗೆ ಕಲಿಯುಗದ ಮಾನವರಿಗೆ ಮಾಡಬೇಕಾದ ಎಲ್ಲಾ ಉಪದೇಶಗಳಿರುವ ಹಾಡುಗಳಿವೆ. ಕಲ್ಲು ಸಕ್ಕರೆ ಕೊಳ್ಳಿರೋ ಎಂದು ಸಕಲ ವೇದಶಾಸ್ತ್ರಗಳ ಸಾರವನ್ನು ನಮ್ಮಂಥಾ ಪಾಮರರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಹಲವು ರಚನೆಗಳಿವೆ. ತುರುಕರು ಕರೆದರೆ ಉಣಬಹುದು, ಐದು ಕಾಲಿನ ಮಂಚ ತುಂಟ ಮಲಗಿದ್ದ, ತಂದೇ ತಂದೇ ತಂದೆನ್ನ ತಂದೆ ನಾ ಬಂದೆ, ಇಕ್ಕಲಾರೆ ಕೈಂಜಲು, ಊಟಕ್ಕೆ ಬಂದೆವು ನಾವು, ಒಂಬತ್ತು ಬಾಗಿಲೊಳು ಒಂದು ದೀಪವ ಹಚ್ಚಿ- ಎಂಬ ಒಗಟುಗಳುಳ್ಳ ಪದ್ಯಗಳಂತು ನಮ್ಮ ಬುದ್ದಿಮತ್ತೆಗೆ ಸವಾಲನ್ನು ಎಸೆಯುತ್ತವೆ. ನಾನೇಕೇ ಬಡವನೋ ನಾನೇಕೆ ಪರದೇಸಿ, ಎನಗೂ ಆಣೆ ರಂಗ ನಿನಗೂ ಆಣೆ- ಎಂಬ ಭಕ್ತಿ ಮತ್ತು ಸಲಗೆ ಎರಡೂ ಬೆರತಿರುವ ಕೇಳುಗರಿಗೆ ದಾರಿ ತೋರುವುದರ ಜೊತೆ ಮನಸಿಗೆ ಮುದ ನೀಡುವ ರಚನೆಗಳಿವೆ.
ಕೀರ್ತನೆಗಳ ಜೊತೆಯಲ್ಲಿ ವಿವಿಧ ಪ್ರಕಾರಗಳಾದ ಉಗಾಭೋಗಗಳು, ಮುಂಡಿಗೆಗಳು(ಒಗಟಿನ ರೀತಿಯ ಪದ್ಯಗಳು) ಹಾಗೂ ಸುಳಾದಿಗಳನ್ನೂ(ಸುಲಭದ ಹಾದಿ ಅಂದರೆ ತತ್ವವಾದದ ತಿರುಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸುಲಭದ ಹಾದಿ ಈ ಸುಳಾದಿಗಳು) ರಚಿಸಿದ್ದಾರೆ. ಪ್ರಪಂಚದಲ್ಲಿ ಸಾಹಿತ್ಯಕ್ಕಾಗಿ ಕೊಡುವ ಪ್ರತಿಯೊಂದು ಪ್ರಶಸ್ತಿಗಳು ಇವರಿಗೆ ಸಲ್ಲಿದರೆ ತೀರಾ ಕಡಿಮೆಯಾಗುತ್ತದೇನೋ. ಹಾಗಾಗಿಯೇ ಗುರುಗಳಾದ ಶ್ರೀ ವ್ಯಾಸರಾಜರಿಂದಲೇ ದಾಸರೆಂದರೆ ಪುರಂದರ ದಾಸರಯ್ಯ ಎಂದು ಹೊಗಳಿಸಿಕೊಂಡವರಲ್ಲವೇ. ಅವರ ಹಾಡುಗಳ ಜೊತೆಯಲ್ಲಿ ಇನ್ನೂ ಅನೇಕ ಹರಿ ದಾಸರ ಹಾಡುಗಳನ್ನು ಈ ಆಪ್ ನಲ್ಲಿ ಪಡೆಯಬಹುದು.
https://play.google.com/store/apps/details?id=pro.pada.android.haridasa&hl=en