Friday, November 1, 2024

ಗೋವಿನ ಹಾಡು (ಪುಣ್ಯಕೋಟಿ ಹಾಡು) Complete Original Song of 'Punyakoti'


ಧರಣಿ ಮಂಡಲ ಮಧ್ಯದೊಳಗೆ ಮೆರೆವುದೈವತ್ತಾರು ದೇಶದಿ 

ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು


ರೂಢಿಯೊಳಗರುಣಾದ್ರಿ ಗಿರಿಯು ನಾಡಿನೊಳಗಿಹುದೊಂದು ಬೆಟ್ಟವು 

ರೂಢಿಗಂಬರ ತುರುಕುವಂದದಿ ನೋಡಲಾಶ್ಚರವೆನಿಸಿತು


ಸೃಷ್ಟಿಯೊಳಗರುಣಾದ್ರಿಗಿರಿಯು ಬೆಟ್ಟದಾ ಬಳಸೇಳು ಗಿರಿಗಳು 

ನೆಟ್ಟನೆ ಹನ್ನೆರಡು ಯೋಜನ ದಟ್ಟೆಸಿತಾರಣ್ಯದಿ


ನಾಗಸಂಪಿಗೆ ಮಾವು ನೇರಿಲು ತೇಗ ಚೆನ್ನಂಗಿ ಬನ್ನಿ ಪಾದ್ರಿಯು 

ಬಾಗೆ ತಿಂತ್ರಿಣಿ ಮತ್ತೆ ಬಿಲ್ವ ತಾಗಿ ಮೆರೆದವರಣ್ಯದಿ


ಆಲವರಳಿಯು ಅತ್ತಿಕಿತ್ತಳೆ ಜಾಲ ತದಿಗಿಲು ಅಗಿಲು ಶ್ರೀಗಂಧ 

ಬೇಲ ಭೂತಳೆ ಬಿದಿರು ಬೂರಗ ಲೀಲೆಯೊಳು ವನವೊಪ್ಪಿತು


ಎಕ್ಕೆ ಎಲಚಿಯು ಲಕ್ಕಿಗಿಡಗಳು ಸೊಕ್ಕಿ ಮೆರೆವಾ ಸೀಗೆ ಮರಗಳು 

ಉಕ್ಕಿ ಬೆಳೆಯುವ ನೆಲ್ಲಿಗಿಡಗಳು ತೆಕ್ಕಯಿಸಿತಾರಣ್ಯದಿ


ತೊಂಡೆ ತೊಟ್ಟಿಯು ಸೊಂಡೆಗಿಡ ಭೂ ಮಂಡಲಾದೊಳು ಬೆಳೆವ ತೊಳಸಿಯು 

ಉಂಡು ಸಂತಸಗೊಂಬ ನೇರಿಲು ತಂಡ ತಂಡದಿ ಮೆರೆದುವು


ಮೊಲ್ಲೆ ಮಲ್ಲಿಗೆ ಮುಗುಳುಸಂಪಿಗೆ ಚೆಲ್ವ ಜಾಜಿಯು ಸುರುಗಿ ಸುರಹೊನ್ನೆ 

ಎಲ್ಲಿ ನೋಡಲು ದವನ ಕೇತಕಿ ಅಲ್ಲಿ ಮೆರೆದವರಣ್ಯದಿ


ನಿಂಬೆ ನೇರಿಲು ಹಲಸು ಬೇಲವು ಅಂಬರಕ್ಕೆ ಹರಿವ ಅಡಕೆಯು 

ತುಂಬಿ ತುಳುಕುವ ತೆಂಗಿನಾ ಮರ ಸಂಭ್ರಮಾದೊಳು ಮೆರೆದುವು


ಆಡಸೋಗೆಯು ಕಾಡುನುಗ್ಗೆಯು ರೂಢಿಯಿಂದಲಿ ಬೆಳೆವ ತಗ್ಗಿಯು 

ಕೂಡಿ ಬೆಳೆಯುವ ಈಜಿಯಿಪ್ಪೆಯು ರೂಢಿಯೊಳು ವನವೊಪ್ಪಿತು


ವರಹ ಶಾರ್ದೂಲ ಸಿಂಹ ವಾರಣ ಕರದಿ ಕಾಡೆಮ್ಮೆ ಕಡವೆ ಮೃಗಗಳು 

ಅರುಣ ಸಾರಗ ಬೆಕ್ಕು ಜಂಬುಕ ಮರೆ ಹುಲ್ಲೆ ಸಿಂಗ ಮುಸುವನು


ಗಿಳಿಯು ಕೋಗಿಲೆ ನವಿಲು ಕಾಡ್ಕೊಳಿ ಪೊಳೆವ ಕಾಡ್ಡೆಕ್ಕು ಲಗಡೆ ರಣಹದ್ದು 

ಸುಳಿವ ಕಾಳಿಂಗ ಹಂಸ ಚಕೋರನ ಬಳಗವೊಪ್ಪಿತು ವನದೊಳು


ಪಚ್ಚೆಹಕ್ಕಿಯು ಪಾರಿವಾಳವು ಹೆಚ್ಚಿನಾ ಗೌಜೀನ ಹಕ್ಕಿಯು 

ಕಚ್ಚಿ ಆಡುವ ಸಿಪಲೆ ಹಕ್ಕಿಯು ರಚ್ಚಿಸಿ ಮೆರೆದವರಣ್ಯದಿ


ಬಣ್ಣದುರುಳಿಯ ಬೆಟ್ಟದಾವರೆ ಕಣ್ಣಿಗೆ ಪ್ರಿಯವಾದ ಸರ್ಪವು 

ಬಣ್ಣ ಬಣ್ಣದ ಕೀರ ಮರಿಗಳು ತಣ್ಣಗಿರ್ದವರಣ್ಯದಿ


ಉರುಬಿನಿಂದಾ ಬರುವ ಕರಿಗಳು ಎರಗಿ ಬರುತಿಹ ಗಂಡು ಮೃಗಗಳು 

ತರುಬಿ ಬರುತಿಹ ಮಲೆಯ ಹೋರಿಯು ಬಳಸಿ ಮೆರೆದವರಣ್ಯದಿ


ಕೆಂಚ ನಾಟ್ಗಳು ಕೆಲವು ಕಾಡ್ಕೊಳಿ ಪಂಚವರ್ಣದ ಪಾರಿವಾಳವು 

ಸಂಚಿನೊಳ್ತಾ ಬರುವ ಕಿರುಬನು ಮುಂಚಿ ಮೆರೆದವರಣ್ಯದಿ


ಹೊಂಚಿ ಕಾಯುವ ತೋಳ ನರಿಗಳು ಅಂಜಿವೋಡುವ ಮೊಲನು ಕಪಿಗಳು 

ರಂಜಿಸುತ್ತಿಹ ಕೋಣ ಮರಿಗಳು ಬಂದು ಮೆರೆದವರಣ್ಯದಿ


ಗಿರಿಯ ಪ್ರಾಂತ್ಯದಿ ಶೈಲಗೃಹದಿ ಇರುವ ಮುನಿಗಳು ತಪಸಿ ಸಿದ್ಧರು 

ಪರಮ ಮುನಿಜನ ಬ್ರಹ್ಮ ಋಷಿಗಳು ಹರಿಯ ಧ್ಯಾನದೊಳಿರ್ದರು


ಪೃಥ್ವಿಯೊಳಗರುಣಾದ್ರಿಗಿರಿಯು ಒತ್ತಿನೊಳಗಿಹ ಪುಣ್ಯತೀರ್ಥವು 

ಸತ್ಯಸಾಗರ ಮುಂದೆ ಗೌತಮಿ ಉತ್ತಮಾ ನದಿ ಮೆರೆದವು


ಗಿರಿಗಳೆಡೆಯೊಳು ಅಡವಿ ಮಧ್ಯದಿ ತುರುವ ದೊಡ್ಡಿಯ ಮಾಡಿಕೊಂಡು 

ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು


ಗೊಲ್ಲದೊಡ್ಡಿಯೊಳಿರುವ ಪಶುಗಳು ಎಲ್ಲ ಬೆಟ್ಟದ ಮೇಲೆ ಮೇಯುತ 

ಒಳ್ಳೆ ಹುಲ್ಲು ನೀರ್ಗಳಿಂದಲಿ ಅಲ್ಲಿ ಮೆರೆದವರಣ್ಯದಿ


ತಿರುಗಿ ಮಂದೆಗೆ ಬರುತ ಪಶುಗಳು ನೆನೆದು ತಮ್ಮಾ ಕರುಗಳನ್ನು 

ಪರಿದು ಲಂಘಿಸಿ ಚಿಮ್ಮಿ ನೆಗೆಯುತ ಭರದಿ ಬಂದವು ದೊಡ್ಡಿಗೆ


ತಮ್ಮ ತಾಯ್ಸಳ ಕಂಡು ಕರುಗಳು ಅಮ್ಮನೆಂದೂ ಕೂಗಿ ನಲಿಯುತ 

ಸುಮ್ಮಾನದೊಳು ಮೊಲೆಯನುಂಡು ನಿರ್ಮಲಾದೊಳು ಇದ್ದವು


ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು 

ಮದನ ತಿಲಕವ ಫಣೆಯೊಳಿಟ್ಟು ಚದುರಸಿಕೆಯನು ಹಾಕಿದ


ಉಟ್ಟ ದಟ್ಟಯು ಪಟ್ಟೆ ಚಲ್ಲಣ ತೊಟ್ಟ ಪದಕವು ಬಿಲ್ಲೆ ಸರಗಳು 

ಕಟ್ಟಿ ಭಾಪುರಿ ಭುಜದ ಕೀರ್ತಿಯು ಇಟ್ಟ ಮುದ್ರಿಕೆಯುಂಗುರ


ಪಚ್ಚೆ ಕಡಗವು ಪವಳದಾಸರ ಹೆಚ್ಚಿನಾ ಕಾಲ್ಗಡಗ ಗೆಜ್ಜೆಯು 

ನಿಶ್ಚಿತಾನಂದದಲಿ ಮೆರೆದನು ಮುತ್ತಿನಾ ಸರ ಪದಕವು


ಇಟ್ಟ ಮುತ್ತಿನ ಒಂಟ ಬಾವುಲಿ ಕಂಠಮಾಲೆ ಪದಕ ಸರಗಳು 

ದಿಟ್ಟತನದಲಿ ಧರಿಸಿ ಮೆರೆದನು ಗಂಟೆ ಮೊದಲಾದೊಡವೆಯಾ


ನೀಲದೊಂಟಿಯು ತಾಳಿ ಚೌಕಳಿ ಕಾಲ ಕಡಗವು ಮೇಲೆ ಭಾಪುರಿ 

ನೀಲದುಂಗುರ ಕಾಲ ಸರಗಳು ಲೋಲ ಧರಿಸಿಯೆ ಮೆರೆದನು


ಚಂದ್ರಗಾವಿಯ ಅಂಗಿತೊಟ್ಟು ಇಂದ್ರನೀಲದ ಪಾಗುಸುತ್ತಿ 

ಚಂದ್ರಕಾಂತದ ದುಪಟಿಯನ್ನು ಚಂದದಿಂದಲಿ ಪೊದ್ದನು


ಗೊಲ್ಲ ಶೃಂಗಾರೀಸಿಕೊಂಡು ಒಳ್ಳೆ ದುಕುಲಗಳನ್ನು ಪೊದ್ದು 

ಬೆಳ್ಳಿಯಂಡೆಯ ಕೈಲಿ ಪಿಡಿದು ಎಲ್ಲ ಗೋವಳ ಕರೆದನು


ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲಗೌಡನು 

ಬಳಸಿ ಬರುವ ತರುಗಳನ್ನು ಬಳಿಗೆ ಕರೆದನು ಹರುಷದಿ


ಪಾರ್ವತೀ ಲಕ್ಷ್ಮೀಯು ಬಾರೆ ಸರಸ ಸದ್ಗುಣವನಿತೆ ಬಾರ 

ಸರಸ್ವತಿಯ ಮಾಣಿಕವೆ ಬಾರೆಂದು ಸರಸದಿಂ ಗೊಲ್ಲ ಕರೆದನು


ಉದಯ ಭಾಸ್ಕರ ದೇವಿ ಬಾರೆ ಚದುರ ಗುಣ ಸಂಪನ್ನೆ ಬಾರೆ 

ಹೃದಯ ನಿರ್ಮಳೆ ನೀನು ಬಾರೆಂದು ಹರುಷದೊಳು ಗೊಲ್ಲ ಕರೆದನು


ಧರ್ಮದೇವಿ ನೀನು ಬಾರೆ ಧರ್ಮಗುಣದಾ ತಾಯೆ ಬಾರೆ 

ಧರ್ಮವತಿಯೇ ನೀನು ಬಾರೆಂದು ಪ್ರೇಮದೊಳು ಗೊಲ್ಲ ಕರೆದನು


ಗಂಗೆ ಬಾರೇ ಗೌರಿ ಬಾರೇ ತುಂಗಭದ್ರೆ ನೀನು ಬಾರೇ 

ಅಂಗನಾಮಣಿ ನೀನು ಬಾರೆಂದು ಅಂಗವಿಸಿ ಗೊಲ್ಲ ಕರೆದನು


ರಂಗನಾಯಕಿ ನೀನು ಬಾರೆ ರಘುಕುಲೋತ್ತಮೆ ನೀನು ಬಾರೆ 

ಶೃಂಗಾರದ ಸೊಬಗಿ ಬಾರೆಂದು ಅಂಗವಿಸಿ ಗೊಲ್ಲ ಕರೆದನು


ಪುಣ್ಯಕೋಟಿಯೆ ನೀನು ಬಾರೆ ಪುಣ್ಯವಾಹಿನಿ ನೀನು ಬಾರೆ 

ಪೂರ್ಣಗುಣ ಸಂಪನ್ನೆ ಬಾರೆಂದು ನಾಣ್ಯದಿಂ ಗೊಲ್ಲ ಕರೆದನು


ಕಾಮಧೇನುವೆ ನೀನು ಬಾರೆ ಭೂಮಿ ದೇವಿಯೆ ನೀನು ಬಾರೆ 

ರಾಮದರಗಿಣಿ ನೀನು ಬಾರೆಂದು ಪ್ರೇಮದಿಂ ಗೊಲ್ಲ ಕರೆದನು


ಭಾಗ್ಯ ಲಕ್ಷ್ಮಿಯೆ ನೀನು ಬಾರೆ ಭಾಗ್ಯ ಗುಣ ಚಾರಿತ್ರೆ ಬಾರೆ 

ಯೋಗವತಿಯೇ ನೀನು ಬಾರೆಂದು ಬೇಗದಿಂ ಗೊಲ್ಲ ಕರೆದನು


ಗೊಲ್ಲ ಕರೆದಾ ಧ್ವನಿಯ ಕೇಳಿ ಎಲ್ಲ ಪಶುಗಳು ಬಂದವಾಗ 

ಚಲ್ಲಿ ಸೂಸಿ ಪಾಲ ಕರೆದು ಅಲ್ಲಿ ತುಂಬಿತು ಬಿಂದಿಗೆ


ಒಡನೆ ದೊಡ್ಡಿಯ ಬಿಡುತ ಪಶುಗಳು ನಡೆದವಾಗಾರಣ್ಯಕಾಗಿ 

ಕಡಲು ಮೇಘವು ತೆರಳುವಂದದಿ ನಡೆದವಾಗಾರಣ್ಯಕೆ


ಎಣಿಕೆ ಹುಲ್ಲೆ ವರ್ಣದಾವು ಉನ್ನಂತ ಬೆಟ್ಟದ ಕೆಂದ ಆವು 

ಉನ್ನಂತವಹ ಕಪಿಲೆ ಗೋವಳು ಉನ್ನಂತವಾಗಿ ನಡೆದವು


ಕರುವುಗಾಳು ಕಡಸುಗಾಳು ಸರಿಯ ಪ್ರಾಯದ ಎತ್ತುಗಾಳು 

ದುರುಳು ಪ್ರಾಯದ ಗೋವಳೆಲ್ಲ ತೆರಳಿದಾವಾರಣ್ಯಕೆ



ಅಟ್ಟ ಬೆಟ್ಟದ ಕಿಬ್ಬಿಯೊಳಗೆ ಇಟ್ಟೆಡೆಯ ಬೆಟ್ಟಾದ ನಡುವೆ 

ದಟ್ಟೆಸಿದಾ ಸಸಿಗಳೆಡೆಯೊಳು ಮುಟ್ಟಿ ಮೇದವು ಹುಲ್ಲನು


ಅಕ್ಕಿಯಂತ ಹುಲ್ಲುಗಳನು ಸಕ್ಕರೆಯಂದದಲಿ ಸವಿದು 

ಅಕ್ಕರಿಂದಾಹಾರಗೊಂಡು ಸೊಕ್ಕಿ ಸಂತಸಗೊಂಡವು


ಹರಿದು ಮೇದ ಪಶುಗಳನು ಕರೆದು ತಂದನು ಗೊಲ್ಲಗೌಡನು 

ಕೊರಳ ಗಂಟೆಯ ಡಣಿರು ಡಣಿರೆನೆ ಮರಳಿ ಬರುತಿರೆ ದೊಡ್ಡಿಗೆ


ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಬುತಾನೆಂತೆಂಬ ವ್ಯಾಘ್ರನು 

ಗಬ್ಬಿತನದೊಳು ಬೆಟ್ಟದಾ ಅಡಿ ಕಿಬ್ಬಿಯೊಳು ತಾನಿರುವನು


ಒಡಲಿಗೇಳು ದಿವಸದಿಂದ ತಡೆದಾಹಾರವ ಬಳಲಿ ವ್ಯಾಘ್ರನು 

ಅಡಗಿಕೊಂಡು ಗವಿಯ ಬಾಗಿಲ ಹೊರನುಡಿಯ ಆಲಿಸುತಿರ್ದನು


ಕೊರಳ ಗಂಟೆಯ ಧ್ವನಿಯು ಕರ್ಣಕೆ ಎರಗಲಾಕ್ಷಣ ವ್ಯಾಘ್ರನೆದ್ದು

ಹರಿದು ಆಹಾರಗೊಂಬೆನೆನುತಲಿ ಹೊರಹೊರಟು ತಾ ಬಂದಿತು


ಸಿಡಿಲು ಘೋಷದಿ ಮೊರೆಯುತಾ ಹುಲಿ ಘುಡುಘುಡಿಸಿ ಭೋರಿಡುತ ವ್ಯಾಘ್ರನು 

ತುಡುಕಿಯೆರಗಿದ ರಭಸದಿಂದೊ ಗ್ಗೂಡೆದವಾಗಾ ಗೋಡ್ಗಳು


ಕೋಮಲತೆಯಿಂ ನಲಿದು ನೆಗೆಯುತ ಆ ಮಹಾಟವಿ ಮಧ್ಯದಲ್ಲಿ 

ಪ್ರೇಮದಿಂದಲಿ ಬರುವ ಪಶುವನು ಭೂಮಿಯೊಳು ಹುಲಿ ಕಂಡಿತು


ಕನ್ನೆ ಮಗನ ಪಡೆದ ಪಶುವು ತನ್ನ ಕಂದನ ನೆನೆದುಕೊಂಡು 

ಪುಣ್ಯಕೋಟಿಯೆಂಬ ಪಶುವು ಚನ್ನಾಗಿ ತಾ ಬರುತಿರೆ


ಇಂದು ಎನಗಾಹಾರ ಸಂದಿತು ಎನುತಲಾಗ ದುಷ್ಟ ವ್ಯಾಘ್ರನು 

ಬಂದು ಬಳಸಿ ಅಡ್ಡಗಟ್ಟಿ ಕೊಂಡಿತಾಗ ಪಶುವನು


ಹೊಲನ ಗದ್ದೆಯ ಹಾಳುಮಾಡಿದೆ ಬೆಳೆದ ಪೈರನು ಸವಿದು ಕೆಡಿಸಿದೆ 

ಬಳಿಕ ಎನ್ನಯ ಗವಿಯ ಬಳಿಗೆ ತಳುಗದೇ ನೀ ಬಂದೆಯಾ


ಎಂದು ಹುಲಿಯು ಅಡ್ಡಗಟ್ಟಿ ಹಿಂದೆ ಮುಂದಿಹ ಪಶುಗಳೆಲ್ಲ 

ಒಂದಕೊಂದು ಭಯದೊಳೋಡಿ ಮುಂದೆ ದೊಡ್ಡಿಗೆ ಬಂದವು


ಪುಣ್ಯಕೋಟಿ ಎಂಬ ಪಶುವನು ತಾನು ತಿಂದೇನೆಂದು ಹುಲಿಯು 

ಚೆನ್ನಗೋವನು ಅಡ್ಡಗಟ್ಟಿ ತಿನ್ನ ಯಷೀಕರಿಸಿತು


ಖೂಳ ಹುಲಿಯು ಅಡ್ಡಗಟ್ಟಿ ಬೀಳ ಹೊಯ್ದನು ನಿನ್ನ ನೆನುತಲಿ 

ಸೀಳಿ ಬಿಸುಡುವೆ ಬೇಗವೆನುತ ಪ್ರಳಯವಾಗಿಯೆ ಕೋಪಿಸಿ


ಹಾಳು ಮಾಡುವ ಗರತಿಯಲ್ಲ ಬೀಳು ಮಾಡುವ ಗೈಮೆಯಲ್ಲ 

ಬಾಳುವಂತೆ ಮಾಳ್ವೆ ಧರೆಯೊಳು ಕೇಳಯ್ಯ ಹುಲಿರಾಯನೆ


ನಾನು ಮೆಟ್ಟಿದ ಭೂಮಿ ಬೆಳೆವುದು ಧಾನ್ಯಧನಗಳುಂಟು ಮಾಡುವೆ 

ಶಾನೆ ಕ್ಷೀರವ ಕೊಡುವೆ ನಿತ್ಯವು ಮಾನವರಿಗುಪಕಾರಿಯು


ಅಡವಿಯೊಳಗಣ ಹುಲ್ಲ ಮೇಯುವೆ ಮಡುವಿನೊಳಗಣ ನೀರ 

ಕುಡಿಯುವೆ ಒಡೆಯನಾಜ್ಞೆ ಯಿಂದಲಿರುವೆನು ಕಡೆಹಾಯಿಸು ಹುಲಿರಾಯನೆ


ಉತ್ತರಾವನು ಕೊಡಲು ಹುಲಿಯು ಮತ್ತೆ ಕೋಪದಿ ರೌದ್ರತಾಳಿ 

ಕತ್ತ ಮುರಿವೆನು ಕಚ್ಚಿ ಒದರುವೆ ರಕ್ತ ಹೀರುವೆನೆಂದಿತು


ಒಂದು ಬಿನ್ನಹ ಹುಲಿಯರಾಯನೆ ಕಂದನೈದೆನೆ ಮನೆಯ ಒಳಗೆ 

ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ನಾನಿಲ್ಲಿ ನಿಲ್ಲುವ


ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವಮಾಡಿಕೊಳ್ಳದೀಗ 

ನುಸುಳಿಹೋದರೆ ನೀನು ಬರುವೆಯ ಹಸನಾಯಿತೀಗೆಂದಿತು


ಮುನ್ನ ಪಾಂಡವ ಸತಿಯು ಹುಸಿಮ ತನ್ನ ನಿಜವನು ತಪ್ಪಿ ನಡೆದಳು 

ನಿನ್ನ ನಂಬುವರಾರು ಈಗ ನಿನ್ನ ನಾ ಬಿಡೆನೆಂದಿತು


ಮೂರು ಮೂರ್ತಿಗಳಾಣೆ ಬರುವೆನು ಸೂರ್ಯಚಂದ್ರಮರಾಣೆ ಬರುವೆನು 

ಧಾರುಣೀ ದೇವಿಯಾಣೆ ಬರುವೆನು ಎಂದು ಭಾಷೆಯ ಮಾಡಿತು


ಬರುವೆನೆಂದು ಭಾಷೆ ಮಾಡಿ ತಪ್ಪೆನೆಂದಾ ಪುಣ್ಯ ಕೋಟಿಯು 

ಒಪ್ಪಿಸಲೊಡಂಬಟ್ಟು ವ್ಯಾಘ್ರನು ಅಪ್ಪಣೆಯ ತಾ ಕೊಟ್ಟಿತು


ಅಲ್ಲಿಂದ ಕಳುಹೀಸಿಕೊಂಡು ನಿಲ್ಲದೆ ದೊಡ್ಡಿಗೆ ಬಂದು 

ಚೆಲ್ವ ಮಗನನು ಕಂಡು ಬೇಗ ಅಲ್ಲಿ ಕೊಟ್ಟಿತು ಮೊಲೆಯನು


ಮಗನೆ ಬಾರೊ ಮೊಲೆಯ ಕುಡಿಯೊ ಹೇಗೆ ಬದುಕಿಯೊ ಏನನರಿಯ 

ಬೇಗ ಬಾರೊ ಕಂದ ಎನುತಲಿ ಮಗನ ನೋಡಿಯೆ ಎಂದಳು


ಕಟ್ಟಕಡೆಯಲಿ ಮೇಯದೀರು ಬೆಟ್ಟದೊತ್ತಿಗೆ ಹೋಗದೀರು 

ದುಷ್ಟ ವ್ಯಾಘ್ರಗಳುಂಟು ಅಲ್ಲಿ ನಟ್ಟನಡುವೆ ಬಾರಯ್ಯನೆ


ಇಂದು ಒಂದು ದುಷ್ಟ ವ್ಯಾಘ್ರನು ತಿಂದೆನೆನುತಲಿ ಬಂದಿತಯ್ಯ 

ಕಂದ ನಿನಗೆ ಮೊಲೆಯ ಕೊಡುವೆ ನೆಂದು ಬಂದೆನು ದೊಡ್ಡಿಗೆ


ಕೊಂದೆನೆಂಬ ದುಷ್ಟ ವ್ಯಾಘ್ರಗೆ ಚೆಂದದಿಂದ ಭಾಷೆಯಿತ್ತು 

ಕಂದ ನಿನ್ನನು ನೋಡಿ ಪೋಗುವೆ ನೆಂದು ಬಂದೆನು ದೊಡ್ಡಿಗೆ


ಅಮ್ಮ ನೀನು ಸಾಯಲೇತಕೆ ಸುಮ್ಮನಿರು ನೀ ಎಲ್ಲಾರಹಾಗೆ 

ತಮ್ಮ ತಾಯಿಗೆ ಪೇಳಿ ಕರುವು ಸುಮ್ಮಾನವಡಗಿ ನಿಂದಿತು


ಕೇಳಿ ಮಗನ ಬುದ್ಧಿಯನ್ನು ತಾಳಿ ಹರುಷವ ಸತ್ಯವೆಂದು 

ಬಾಳಿ ಬದುಕುವ ಭಾಗ್ಯ ನಿನ್ನದು ಮುಂದರಿತು ನೀ ಬಾಳ್ವೆಯಾ


ಕೊಟ್ಟ ಭಾಷೆಗೆ ತಪ್ಪಲಾರೆನು ಕೆಟ್ಟ ಯೋಚನೆ ಮಾಡಲಾರೆನು 

ನಿಷ್ಠೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ


ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಸರ್ವ ಬಳಗವು

ಸತ್ಯವಾಕ್ಯಕೆ ತಪ್ಪಿದಾರೆ ಅಚ್ಯುತಾ ಹರಿ ಮೆಚ್ಚನು


ಕೊಟ್ಟ ಭಾಷೆಗೆ ತಪ್ಪಿದಾರೆ ಸೃಷ್ಟಿಯೊಳು ಶ್ರೀಹರಿಯು ಮೆಚ್ಚನು 

ಎಷ್ಟು ಕಾಲ ಇರುವುದೀ ಕಾಯ ಕಟಕಟಾ ಕಂದಯ್ಯನೆ


ಆರ ಮೊಲೆಯಾ ಕುಡಿಯಲಮ್ಮ ಆರ ಸೇರಿ ಬದುಕಲಮ್ಮ 

ಆರ ಬಳಿಯಲಿ ಮಲಗಲಮ್ಮ ಆರು ಎನಗೆ ಹಿತವರು


ಅಮ್ಮಗಳಿರಾ ಅಕ್ಕಗಳಿರಾ ಎನ್ನ ತಾಯಿಯೊಡಹುಟ್ಟುಗಳಿರಾ 

ನಿಮ್ಮ ಕಂದನೆಂದು ಕಂಡಿರಿ ತಬ್ಬಲಿ ಮಗನೈದನೆ


ಮುಂದೆ ಬಂದರೆ ಹಾಯದೀರಿ ಹಿಂದೆ ಬಂದರೆ ಒದೆಯದೀರಿ 

ನಿಮ್ಮ ಕಂದನೆಂದು ಕಂಡಿರಿ ತಬ್ಬಲಿ ಮಗನೈದನೆ


ಅಮ್ಮ ಕೇಳೆ ಪುಣ್ಯಕೋಟಿಯೆ ನೀನು ಹೋಗಿ ಸಾಯಲೇತಕೆ 

ಬಳಗವೆಲ್ಲವು ಕೂಡಿ ನಿನ್ನ ಸಂಗಡಲೆ ನಾವ್ ಬರುವೆವು


ಅಮ್ಮ ನೀವು ಎನ್ನ ಸಂಗಡ ಬರುವುದೀಗ ಉಚಿತವಲ್ಲ 

ಮುನ್ನ ನಾನು ಪಡೆದ ಫಲವಿದು ಎನ್ನ ಬಿಡುವುದೆ ಎಂದಿತು


ಅಮ್ಮ ಕೇಳೆ ಪುಣ್ಯಕೋಟಿಯೆ ನಿನ್ನ ಕಂದನೆ ನಮ್ಮ ಕಂದನು 

ನಿನ್ನ ಮನದೊಳು ಖೇದವೇತಕೆ ನಿರ್ಮಲಾದೊಳಿರಮ್ಮನೆ


ಅಮ್ಮ ನೀವು ಎಲ್ಲರಿರಲು ಎನ್ನ ಮನದೊಳು ಖೇದವೇತಕೆ 

ನಿಮ್ಮ ಕಂದನೆಂದು ಕೊಂಡಿರಿ ತಬ್ಬಲಿ ಮಗನೈದನೆ


ತಬ್ಬಲಿಯಾದೆಲ್ಲೊ ಮಗನೆ ಹೆಬ್ಬುಲಿಯ ಬಾಯಿಗೆ ಹೊಗುವೆನು 

ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಳು ಕಂದನ


ಅಮ್ಮನೆಂದು ಕರೆವ ಬಾಯಲಿ ಮಣ್ಣಹಾಕಿದ ಶಿವನು ಎನುತಲಿ 

ಎನ್ನ ಪುಣ್ಯದ ಭಾಗ್ಯವನ್ನು ಯಾರಿಗೆಯು ನಾನುಸುರಲಿ


ನಿನ್ನ ಬಸುರಲಿ ಏಕೆ ಹುಟ್ಟಿದೆ ಅನ್ಯಕಾರಿ ಪಾಪಿ ನಾನು 

ಇನ್ನು ಅಮ್ಮನೆನುತ ಯಾರನು ಎನ್ನ ಪ್ರೇಮದಿ ಕರೆಯಲಿ


ಕಂದ ನಿನಗೆ ದುಃಖವೇತಕೆ ಚೆಂದದಿಂದ ಬಾಳು ಧರೆಯೊಳು 

ಮುನ್ನ ಜನ್ಮದ ಪಡೆದ ಫಲವಿದು ಎನ್ನ ಬಿಡುವುದೆ ಎಂದಿತು


ಕಂದನೀಗೆ ಬುದ್ದಿ ಹೇಳಿ ಬಂದಳಾಗ ಪುಣ್ಯಕೋಟಿಯು 

ಚೆಂದದಿಂದ ಪುಣ್ಯನದಿಯೊಳು ನಿಂದು ಸ್ನಾನವ ಮಾಡಿತು


ಗೋವು ಸ್ನಾನವ ಮಾಡಿಕೊಂಡು ಗವಿಯ ಬಾಗಿಲ ಪೊಕ್ಕು ನಿಂತು 

ಸಾವಕಾಶವ ಮಾಡದಂತೆ ವ್ಯಾಘ್ರರಾಯನ ಕರೆದಳು


ಅಣ್ಣ ಬಾರೋ ಹುಲಿಯ ರಾಯನೆ ಹಸಿದೆಯೆಲ್ಲೋ ದೋಷ ಬಂದಿತು 

ಎನ್ನ ಆಹಾರವನು ಬೇಗನೆ ಕೊಳ್ಳಲೋ ಹುಲಿರಾಯನೆ


ಖಂಡವಿದೆ ಕೊ ರಕ್ತವಿದೆ ಕೊ ಗುಂಡಿಗೆಯ ಕೊಟ್ಟೂಗಳಿದೆ ಕೋ 

ಉಂಡು ಸಂತಸಗೊಂಡು ನೀ ಭೂ ಮಂಡಲದೊಳು ಬಾಳಯ್ಯನೆ


ಪುಣ್ಯಕೋಟಿಯು ಬಂದು ನುಡಿಯೆ ತನ್ನ ಮನದೊಳು ಹುಲಿಯರಾಯನು 

ಕನ್ನೆಯಿವಳನು ಕೊಂದು ತಿಂದರೆ ಎನ್ನ ನರಹರಿ ಮೆಚ್ಚನು


ಎನ್ನ ಒಡಹುಟ್ಟಕ್ಕ ನೀನು ನಿನ್ನ ತಿಂದು ನಾನೇನ ಪಡೆವೆನು 

ನಿನ್ನ ಪಾದದ ಮೇಲೆ ಬಿದ್ದು ಎನ್ನ ಪ್ರಾಣವ ಬಿಡುವೆನು


ಮುನ್ನ ನೂರು ಗೋವ ಕೊಂದ ಅನ್ಯಕಾರಿ ಪಾಪಿ ನಾನು 

ಇನ್ನು ಇರಿಸಲು ಏಕೆ ಪ್ರಾಣವ ಬಿಡುವೆನೆಂದು ಪೇಳಿತು


ಅಮ್ಮ ನೀನು ಸತ್ಯವಂತೆಯು ನಿನ್ನ ದರುಶನ ಮಾತ್ರದಿಂದಲಿ 

ನಾನು ಪೂರ್ವದಿ ತಂದ ಫಲವು ಇಂದು ಪರಿಹರವಾಯಿತು


ಯಾಕಯ್ಯ ಹುಲಿರಾಯ ಕೇಳು ಜೋಕೆಯಿಂದಲಿ ಎನ್ನನೊಲ್ಲದೆ 

ನೂಕಿ ನೀನು ಸಾಯಲೇತಕೆ ಬೇಕೆಂದು ನಾ ಬಂದೆನು


ನಿನ್ನ ಪ್ರಾಣವ ತೊರೆಯಲೇತಕೆ ಕನ್ನೆಯೆನ್ನನು ತಿಂದು ಬದುಕದೆ 

ಮುನ್ನ ನಿನ್ನಯ ತೃಷೆಯ ಸಲಹಿಕೊ ಪನ್ನಗ ಶಯನೀಗೆ ಪ್ರಿಯವು


ಪುಣ್ಯಕೋಟಿಯ ಮಾತ ಕೇಳಿ ಕಣ್ಣಿನೊಳಗೆ ನೀರ ಸುರಿಯುತ 

ಅನ್ಯಕಾರಿಯು ತಾನು ಎನುತಲಿ ತನ್ನ ಮನದೊಳು ಧ್ಯಾನಿಸಿ


ಮೂರು ಮೂರ್ತಿಗೆ ಕೈಯ ಮುಗಿದು ಸೇರಿ ಎಂಟು ದಿಕ್ಕ ನೋಡಿ 

ಹಾರಿ ಆಕಾಶಕ್ಕೆ ನೆಗೆದು ತನ್ನ ಪ್ರಾಣವ ಬಿಟ್ಟಿತು


ಹರಿಯು ಮೆಚ್ಚಿದ ಹರನು ಮೆಚ್ಚಿದ ಬ್ರಹ್ಮದೇವನು ತಾನು ಮೆಚ್ಚಿದ 

ಸುರರು ಪೂಮಳೆಗರೆದು ಬೇಗದಿ ಕರುಣದಿಂದಲಿ ಇರುವರು


ಬ್ರಹ್ಮ ಪ್ರಾಣವ ಕರೆದುಕೊಂಡ ಹರನು ಪುಲಿಯ ಚರ್ಮ ಪೊದ್ದನು 

ಹರನು ಹಸುವನು ಮನ್ನಿಸಿಯೇ ಬೇಗ ತಿರುಗಿ ಕಳುಹಿದ ದೊಡ್ಡಿಗೆ


ಆಗ ತಮ್ಮಾ ಬಳಗವೆಲ್ಲಾ ಬೇಗದಿಂ ಸಂತೋಷಗೊಂಡು 

ಹೇಗೆ ಬಂದೆಯೆ ಪುಣ್ಯಕೋಟಿಯ ಈಗ ನೀನತಿ ಶೀಘ್ರದಿ


ಹುಲಿಗೆ ಮೋಕ್ಷವ ಕೊಟ್ಟು ಶಿವನು ಸಲಹಿ ಎನ್ನನು ಬಿಡಿಸಿದಾನು 

ನಲಿದು ಬಂದೆನು ಮರಳಿ ದೊಡ್ಡಿಗೆ ಗೆಲುವಿನಿಂದಲಿ ಈಗಲು


ಎಂದ ವಾಕ್ಯವ ಕೇಳಿ ಪಶುಗಳು ಚೆಂದದಿಂದ ನಲಿದು ನೆಗೆಯುತ 

ಇಂದುಧರ ಅರವಿಂದನಾಭ ಗೋ ವಿಂದ ಎನುತಲಿ ನಲಿದವು


ಗೊಲ್ಲಗೌಡನು ತಾನು ಬಂದು ಪುಣ್ಯಕೋಟಿಯ ಪಾದಕೆರಗಿದ 

ಉನ್ನತದ ಸೌಭಾಗ್ಯವೀಯೆಂದು ಚೆನ್ನಾಗಿ ತಾ ಕೇಳಿದ


ಪುಣ್ಯಕೋಟಿಯು ನಲಿದು ಕರುವಿಗೆ ಪುಣ್ಯಕಾರಿ ಎನುತ ಬೇಗದಿ 

ಚೆನ್ನ ಗೌಡನ ಕಂಡು ತಾನು ಉನ್ನತಾದಿಂದೆಂದಿತು


ಎನ್ನ ವಂಶದ ಗೋವಳೊಳಗೆ ನಿನ್ನ ವಂಶದ ಗೊಲ್ಲರೊಳಗೆ 

ಮುನ್ನ ಸಂಕ್ರಾಂತಿ ಹಬ್ಬದೊಳಗೆ ಚೆನ್ನ ಕೃಷ್ಣನ ಭಜಿಸಿಯ


ಪಾಲು ಪೊಂಗಲನಿಕ್ಕಿಸಯ್ಯ ಬಾಲ ಗೋವಳ ಕೂಡಿ ಸಾಗಲು 

ಲೋಲ ಕೃಷ್ಣನು ನಿಮಗೆ ಒಲಿವನು ಪಾಳಿಸೆನ್ನಯ ವಾಕ್ಯವಾ


ಪುಣ್ಯಕೋಟಿಯ ಮಾತಕೇಳಿ ಗೊಲ್ಲಗೌಡನು ತಾನು ಬೇಗದಿ 

ಪುಣ್ಯ ನದಿಯೊಳು ಮಿಂದು ಬಂದು ಆಗ ಹಬ್ಬವ ಮಾಡಿದ


ನಮ್ಮ ವಂಶಕೆ ವರುಷಕೊಂದು ಸಂಕರಾತ್ರಿಯ ಹಬ್ಬದೊಳಗೆ 

ಪಾಲು ಪೊಂಗಲ ಮಾಳ್ವವೆಂದು ಆಗ ಹಬ್ಬವ ಮಾಡಿದ


ಗೋವು ಹೇಳಿದ ಪುಣ್ಯ ಕಥೆಗಳ ಹೇಳಿದವರಿಗೆ ಕೇಳಿದವರಿಗೆ 

ಈವ ಅಚ್ಯುತ ಸೌಭಾಗ್ಯ ಸಂಪದ ಆವ ಕಾಲಕೆ ತೆಗೆಯದ


ಪದ್ಮನಾಭನೆ ಪರಂಧಾಮನೆ ಮದ್ದುರ ಶ್ರೀನಾರಸಿಂಹನೆ 

ಮುದ್ದು ವರಗಳ ಕೊಡುವ ನಿಮಗೆಯು ನಮೋ ನಮೋ ಮಂಗಳಂ