Tuesday, October 18, 2016

ಪ್ರೇಮದ ಬಲೆಯಲ್ಲಿ ಜೇಡ.

ಸಿನಿಮಾಗಳಲ್ಲಿ ನಾಯಕನಿಂದ ನಾಯಕಿಗೆ ಪ್ರೇಮ ನಿವೇದನೆ ಮಾಡಿಸ್ಬೇಕು ಅಂದ್ರೆ ನಿರ್ದೇಶಕರಿಗೆ ತಕ್ಷಣ ಸಂಗೀತ ನಿರ್ದೇಶಕರು ನೆನಪಾಗ್ತಾರೆ. 'ಒಂದು ಗಿಟಾರ್ ಮ್ಯೂಸಿಕ್ ಇರೋ ಒಂದು ಹಾಡು ಮಾಡ್ಕೊಡಿ ಸರ್, ಒಳ್ಳೆ ರೊಮ್ಯಾಂಟಿಕ್ ಮೆಲೋಡಿ ಇರ್ಬೇಕು' ಅಂತ ಫೋನಾಯ್ಸಿ ಹೇಳ್ತಾರೆ. ನಾಯಕ ಗಿಟಾರ್ ಹಿಡ್ಕೊಂಡು ನಾಯಕಿ ಮನೆ ಹತ್ರ ನಿಂತು ಗಿಟಾರ್ ಬಾರಿಸ್ತಾ ಹಾಡು ಹೇಳ್ತಾನೆ, ನಾಯಕಿ ಕಿಟಕಿ ಇಂದ ನೋಡಿ ಬಿದ್ದೋಗ್ತಾಳೆ. ಕೆಳಗಲ್ಲ ಮಾರ್ರೇ, ಪ್ರೀತಿಲಿ. ಕೆಲವರು ಮನೆ ಹತ್ರ ಬೈಕಲ್ಲಿ ಸೈಕಲ್ ಅಲ್ಲಿ ಸ್ಟಂಟ್ಸ್ ಅಥವಾ ಡ್ಯಾನ್ಸ್ ಕೂಡ ಮಾಡ್ತಾರೆ. ನಂಗೊಂದು ಡೌಟು, ಅಲ್ಲಾ ಈ ನಾಯಕ ಹಾಗೆ ಬೀದಿಯಲ್ಲಿ ಹಾಡು ಹೇಳೋವಾಗ ಬೇರೆ ಯಾರಿಗಾದ್ರೂ ಕೇಳ್ಸಿ, ರಾತ್ರಿ ಡಿಸ್ಟರ್ಬ್ ಮಾಡ್ತೀಯ ಮಗನೆ ಅಂತೇಳಿ ಬಂದು ಎರಡು ಬಿಡೊಲ್ವಾ ಅಂತ. ಇರ್ಲಿ ಅದು ಸಿನಿಮಾ. ನಾನಿವಾಗ ಹೇಳಲಿಕ್ಕೆ ಹೊರ್ಟಿರುವುದು ಬೇರೆ.
ಮೇಲೆನ ಪ್ರಸಂಗ ಕೀಟ ಪ್ರಪಂಚಕ್ಕೂ ಬಿಟ್ಟಿಲ್ಲ. ಇಲ್ಲೊಂದು ಜೇಡ ಇದೆ, ಜಂಪಿಂಗ್ ಸ್ಪೈಡರ್ ಅಂತ, ನೀವು ನೋಡಿರಬಹುದು ಎಂಟು ಕಣ್ಣು ಇರುತ್ತೆ. ಇದು ತನ್ನ ಹುಡುಗಿ ಹೆಣೆದಿರೋ ಬಲೆ ಹಿಡ್ಕೊಂಡು ಅದರ ಹತ್ತಿರ ಹೋಗಿ ಹೇಗೆಲ್ಲಾ ಮಾಡೊತ್ತೆ ಅಂದ್ರೆ, ನಿರ್ದೇಶಕರಿಗೆ ಸ್ಫೂರ್ತಿ ಇದರಿಂದ ಬಂದಿರಬಹುದೇನೋ. ವಿವಿಧ ಶೈಲಿಯ ನೃತ್ಯ ಪ್ರಕಾರಗಳನ್ನೆಲ್ಲಾ ಮಾಡೊತ್ತೆ. ಆದರೆ ಹೆಣ್ಣು ಎಲ್ಲಾ ಜಾತಿಲೂ ಒಂದೆ ಅನ್ಸೊತ್ತೆ, ಬೇಗ ಒಪ್ಕೊಳಲ್ಲ. ಕೊನೆಗೆ ಗಿಟಾರ್ ಹಿಡ್ಕೊಂಡು ಸಂಗೀತ ಪ್ರಾರಂಭಿಸಿಯೇ ಬಿಡುತ್ತೆ. ಬಟ್ ಇಲ್ಲಿ ಇದರ ಸಂಗೀತಕ್ಕೆ ಯಾರು ಬಂದು ಹೊಡಿಯೊಲ್ಲ. ಆ ಜೇಡ ಸಂಗೀತ ಕಛೇರಿ ಮಾಡ್ತಿದೆ ಅಂದ್ರೆ ಆ ಜಾತಿಯ ಜೇಡಗಳಿಗೆ ಮಾತ್ರ ಕೇಳ್ಸುತ್ತೆ. ಮನುಷ್ಯರಿಗೆ ಕೇಳೊಲ್ಲ. ಅದು ತನ್ನ ದೇಹದ ಹಿಂಬಾಗವನ್ನು ಕಂಪಿಸುತ್ತಾ ಶಬ್ಧವನ್ನು ಮಾಡುತ್ತೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅದನ್ನು ಕೇಳಿಸಿಕೊಳ್ಳಲು ಅತ್ಯಾಧುನಿಕ ಲೇಸರ್ ವೈಬ್ರೆಟೋಮೀಟರ್ ಅನ್ನು ಉಪಯೋಗಿಸಿ ಅದರ ಕಂಪನದಿಂದ ಉಂಟಾಗುವ ಶಬ್ಧವನ್ನು ಆಲಿಸಿದ್ದಾರೆ.
ಎಂಥಾ ಪ್ರಕೃತಿಯ ವಿಸ್ಮಯ ಅಲ್ವಾ? ಅದರ ವೀಡಿಯೋವನ್ನು ಇಲ್ಲಿ ನೋಡಿ.


Saturday, October 1, 2016

ರೇಖಾಗಣಿತದ ತರಗತಿ ಒಂದು ತರಹದ ಇಂಡೋರ್ ಪಿ.ಇ ಪೀರಿಯಡ್.

ಶಾಲೆಯಲ್ಲಿ ಗಣಿತದ ತರಗತಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ನರಕ. ಏಕೆಂದರೆ ಬೇರೆ ತರಗತಿಯಲ್ಲಿ ಮಾತಾಡಿ ಸಿಕ್ಕಿಬಿದ್ದರೆ ನೇರ ಹೊಡೆತ. ಇಲ್ಲಿ ಮಗ್ಗಿ ಕೇಳಿ, ಆಮೇಲೆ ಯಾವುದಾದ್ರು ಸೂತ್ರ ಕೇಳಿ, ಕೊನೇಗೆ ಪ್ರಮೇಯಗಳ್ನ ಕೇಳಿ ಮರ್ಯಾದೆ ತೆಗೆದು ಆಮೇಲೆ ಹೊಡೆತ. ಆದರೆ ರೇಖಾಗಣಿತದ ತರಗತಿಯನ್ನು ಯಾರೂ ಮಿಸ್ ಮಾಡ್ಕೋತಿರ್ಲಿಲ್ಲ. ಏಂಕೆಂದ್ರೆ ಅದರ ತುಂಬ ಚಿತ್ರಗಳು ಬಿಡಿಸೋದು ಇರ್ತಿತ್ತು. ಒಂದು ರೀತಿ ಇನ್‌ಡೋರ್ ಪಿ.ಇ ಪೀರಿಯಡ್.
 ನನ್ನಣ್ಣನ ಜಾಮಿಟ್ರಿ ಬಾಕ್ಸು, ಅದರಲ್ಲಿ ಇದ್ದ ಪೆನ್ಸಿಲ್ ಹೆರೆದು ಮಾಡಿದ ಹೂಗಳು, ಪೆನ್ಸಿಲ್‌ನ ಮದ್ದು, ಮುರಿದ ಸ್ಕೇಲು, ಅದಕ್ಕೆ ಅಂಟಿಸಿದ ರಬ್ಬರ್ರು- ಅದರ ತುಂಬ  ಕೈವಾರ & ಪೆನ್ನಿನ ತೂತಗಳು, ಲೂಸ್ ಆಗಿದ್ದ ಕೈವಾರ- ಏನು ಮಾಡಿದರು ವೃತ್ತ ಪ್ರಾರಂಭವಾಗಿದ್ದ ಜಾಗಕ್ಕೆ ಬಂದು ಸೇರುತ್ತಿರಲಿಲ್ಲ, ಸಂಖ್ಯೆಗಳೇ ಕಾಣದ ಕೋನಮಾಪಕ, ಮೋಟು ಪೆನ್ಸಿಲ್ ನಮ್ಮೆಲ್ಲರ ಆಸ್ತಿ.
ಮೇಷ್ಟ್ರು ಒಂದು ಮರದ ದೊಡ್ಡ ಪೆಟ್ಟಿಗೆ ತರೋರು. ಯಾವುದೋ ಯಕ್ಷ ಪೆಟ್ಟಿಗೆ ಬಿಚ್ಚುತ್ತಿದ್ದಾರೇನೋ ಎಂಬಂತೆ ನೋಡುತ್ತಿದ್ದ ನಮ್ಮ ಕಣ್ಣುಗಳು.  ಅದರಲ್ಲಿದ್ದ ಆ ದೊಡ್ಡ‌ ಉಪಕರಣಗಳು ನಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗ್ತಿತ್ತು.
ಅಕ್ಕ ಪಕ್ಕದೋರ್ನ ನೋಡ್ಕೊಂಡು ಎಷ್ಟ್ ಸೆಂಟೀಮೀಟರ್ ಅಂತೋ ಅಂತ ಕೇಳ್ಕೊಂಡು ಸ್ಕೇಲ್ ಲಿ ಅಳೆದು ಚುಕ್ಕೆ ಇಟ್ಟು, ನೆಕ್ಸ್ಟ್ ಏನ್ ಮಾಡ್ಬೇಕಂತೆ ಅಂತ ಕೇಳ್ಕೊಂಡು ಕೇಳ್ಕೊಂಡು ಬರಿತಿದ್ದ ಮಜಾನೆ ಬೇರೆ. ಅಷ್ಟೆಲ್ಲಾ ಖುಷಿ ಕಷ್ಟ ಪಟ್ಟು ಬರಿತಿದ್ದಾದರು ಏನು? ಒಂದು ಸಮಭಾಹು ತ್ರಿಭುಜ. ನಮ್ಮಲ್ಲಿ ವಿಧಾನಸೌಧದ ನೀಲಿನಕ್ಷೆ ತಯಾರು ಮಾಡಿದ ರೀತಿ ಫೀಲಿಂಗು.
ನಾಲ್ಕು ಪೇಜಿಗೆ ತೂತ ಮಾಡುವ ಹಾಗೆ ಚುಚ್ಚಿ ಎಳೆದ ವೃತ್ತ, ಕೈವಾರದ ತುದಿ ಮುರಿದು ಹೋಗುವಂತೆ ಬೆಂಚಿನ ಮೇಲೆ ಬರೆದ ನಮ್ಮ ಹೆಸರು, ಆ ಪೈಥಾಗರಸ್ ಪ್ರಮೇಯ, ಚುಚ್ಚಿಕೊಂಡು ಮಾಡಿಕೊಂಡ ಗಾಯ. ನನ್ನ ನೋಟ್ಸೋ ಆ ದೇವರಿಗೇ ಪ್ರೀತಿ, ಚಿತ್ರಗಳು ಬಿಟ್ಟು ಇನ್ಯಾವ ಅಕ್ಷರಗಳೂ ಅರ್ಥ ಆಗ್ತಿರ್ಲಿಲ್ಲ.
ಸಂಜೆ ಹೋಗಿ ಹೋಂವರ್ಕ್ ಮಾಡಲು ಕೈಗೆತ್ತಿಕೊಳ್ಳುತ್ತಿದ್ದ ವಿಷಯ ಕೂಡ ರೇಖಾಗಣಿತ ನೇ..
ಇವತ್ತೊಂದು ಗೇಮ್ ಆಪ್ ಇನ್‌ಸ್ಟಾಲ್ ಮಾಡ್ಕೊಂಡೆ. ಕೆಳಗಿದೆ ನೋಡಿ ಲಿಂಕ್. ಮಕ್ಕಳಿಗೆ ಸಹಾಯ ಆಗೊತ್ತೆ. ಹಲವಾರು ಪ್ರಮೇಯಗಳ್ನ ಉಪಯೋಗಿಸಿ, ಅವರು ಕೊಟ್ಟಿರೋ ಹೋಂವರ್ಕ್ ಮಾಡ್ಬೇಕು ನಾವು.
ವಿ.ಸೂ: ಸ್ಕೇಲ್, ಪೆನ್ಸಿಲ್, ಕೈವಾರ, ಕೋನಮಾಪಕ ಏಲ್ಲಾ ಅವ್ರೇ ಕೊಟ್ಟಿದಾರೆ. ನೀವೇನು ತೊಗೊಳೋ ಅವಶ್ಯಕತೆ ಇಲ್ಲ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅವರ ಪೋಷಕರ ಅಥವ ದೊಡ್ಡವರ ಸಹಾಯದಿಂದ ಈ ಆಟ ಆಡಿಸಿ. ಒಳ್ಳೆ ಉಪಯೋಗ ಆಗೊತ್ತೆ.

https://play.google.com/store/apps/details?id=com.hil_hk.euclidea

Saturday, September 24, 2016

ನಿಮ್ಮ ಸಂಪಾದನೆ ಸತ್ಯದ ಮಾರ್ಗದಲ್ಲಿರಲಿ

ಹಿಂದಿನ ಕಾಲದ ಒಂದು ಕಥೆ, ಇಂದಿಗೂ ಪ್ರಸ್ತುತವಾಗಿದೆ.
ಒಬ್ಬ ಬ್ರಾಹ್ಮಣ ಯಾತ್ರೆಗೆಂದು ಪ್ರಯಾಣ ಬೆಳೆಸಿದ್ದಾನೆ. ಸಂಜೆಯಾಗುತ್ತಾ ಬಂದಿದ್ದರಿಂದ, ಹತ್ತಿರವಿದ್ದ ಹಳ್ಳಿಯಲ್ಲಿ ಯಾರೋ ಒಬ್ಬನ ಮನೆಯಲ್ಲಿ ಉಳಿದುಕೊಳ್ಳಲು ಹೋಗುತ್ತಾನೆ. ತಡ ರಾತ್ರಿಯಾಗಿದ್ದರಿಂದ ಆ ಮನೆಯವರು ಊಟ ಮುಗಿಸಿ ಕುಳಿತಿರುತ್ತಾರೆ. ಮನೆಗೆ ಬ್ರಾಹ್ಮಣ ಬಂದಿದ್ದಾನೆ, ಆಯಾಸವಾಗಿರುತ್ತದೆ, ಊಟಕ್ಕೆ ಏನಾದರೂ ಏರ್ಪಾಡು ಮಾಡಬೇಕೆಂದು ತನ್ನ ಹುಡುಗನನ್ನು ಕರೆದು ಪದಾರ್ಥಗಳನ್ನು ತರಲು ಹೇಳುತ್ತಾನೆ. ರಾತ್ರಿಯಲ್ಲೂ ಹೇಗೋ ಪದಾರ್ಥಗಳನ್ನು ತಂದು ಕೊಡುತ್ತಾನೆ. ಅಡುಗೆ ಮಾಡಿ ಬಡಿಸಿ, ನಂತರ ಮನೆಯಲ್ಲಿ ಕಟ್ಟಿದ್ದ ಹಸುವಿನ ಹಾಲು ಕೊಟ್ಟು ಮಲಗಲು ಏರ್ಪಾಡು ಮಾಡುತ್ತಾರೆ. ರುಚಿಯಾದ ಹಾಲು ಕುಡಿದು ಯಜಮಾನನ ಉಪಚಾರದಿಂದ ಸಂತುಷ್ಟಗೊಂಡ ಬ್ರಾಹ್ಮಣ ನಿದ್ದೆಗೆ ಜಾರುತ್ತಾನೆ. ನಡು ರಾತ್ರಿ ಆತನಿಗೆ ಎಚ್ಚರವಾಗಿ ಆ ಹಸುವಿನ ಹಾಲು ಅಷ್ಟೊಂದು ರುಚಿಯಾಗಿದೆ, ಅದನ್ನು ಕದ್ದೊಯ್ದರೆ ತನ್ನ ಹೆಂಡತಿ ಮಕ್ಕಳು ಪ್ರತಿನಿತ್ಯ ರುಚಿಯಾದ ಹಾಲು ಮೊಸರು ತಿನ್ನಬಹುದು ಎಂಬ ದುರಾಲೋಚನೆ ಬರುತ್ತದೆ. ತಡ ಮಾಡದೆ ಆ ಕೆಲಸವನ್ನು ಮಾಡಿಯೇ ಬಿಡುತ್ತಾನೆ.
ಸೂರ್ಯೋದಯವಾಗುತ್ತದೆ, ಯಜಮಾನ ಬ್ರಾಹ್ಮಣನಿಗೆ ಎಬ್ಬಿಸಿ ಹಾಲು ಕೊಟ್ಟು ಆತನ ಮುಂದಿನ ಪ್ರಯಾಣಕ್ಕೆ ಸಹಾಯ ಮಾಡಬೇಕೆಂದು ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ಹಸು ಕಾಣಿಸುವುದಿಲ್ಲ. ಸರಿ ಬ್ರಾಹ್ಮಣನನ್ನು ಎಬ್ಬಿಸೋಣ ಎಂದು ಕೊಠಡಿಗೆ ಹೋದರೆ ಬ್ರಾಹ್ಮಣನೂ ಹೋಗಿರುತ್ತಾನೆ. ತಕ್ಷಣ ಕೋಪಗೊಳ್ಳದೇ ಛೇ ಅನಾಯಾಸವಾಗಿ ಬಂದಿದ್ದನು, ಆ ಹಸುವನ್ನು ದಾನ ಮಾಡಿದ್ದರೆ ನನಗೂ ಪುಣ್ಯ ಬರುತ್ತಿತ್ತು, ಆತನಿಗೂ ಈ ಕೆಟ್ಟ ಕೆಲಸ ಮಾಡದ ಹಾಗಾಗುತ್ತಿತ್ತು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ, ಹುಡುಕಿಯಾದರೂ ಅವನಿಗೆ ದಾನ ಮಾಡಿ ಬರಬೇಕು ಎಂದುಕೊಂಡು ಹೊರಡುತ್ತಾನೆ.
ಇತ್ತ ಬ್ರಾಹ್ಮಣ ಯಾವುದೋ ಮರದ ಕೆಳಗೆ ಮಲಗಿದ್ದವನು ಎದ್ದಾಗ ತನ್ನ ತಪ್ಪಿನ ಅರಿವಾಗುತ್ತದೆ. ಎಂದೂ ಈ ರೀತಿಯ ತಪ್ಪು ಮಾಡಿದವನಲ್ಲ, ಇಂದು ಏಕೆ ಹೀಗೆ ಮಾಡಿದೆ, ಉಪಕಾರ ಮಾಡಿದ ಆ ಯಜಮಾನನಿಗೆ ಪುನಃ ಹಸುವನ್ನು ಹಿಂತಿರುಗಿಸಬೇಕೆಂದು ಊರ ಕಡೆ ಹೊರಡುತ್ತಾನೆ.
ಊರ ಬಾಗಿಲಿನ ಹತ್ತಿರ ಇಬ್ಬರು ಎದರುಗೊಳ್ಳುತ್ತಾರೆ. ಆ ಬ್ರಾಹ್ಮಣ ಕ್ಷಮೆ ಕೇಳಿ, ನನ್ನಿಂದ ಈ ತಪ್ಪು ಹೇಗಾಯಿತು ಎಂದು ತಿಳಿಯುತ್ತಿಲ್ಲ. ಎಂದು ಹಸುವನ್ನು ಹಿಂತಿರುಗಿಸುತ್ತಾನೆ. ನಂತರ ಆ ತಡ ರಾತ್ರಿಯಲ್ಲಿ ಆಹಾರದ ಪದಾರ್ಥಗಳು ಎಲ್ಲಿ ಸಿಕ್ಕವು ಎಂದು ಕೇಳುತ್ತಾನೆ. ಯಜಮಾನ ಹುಡುಗನನ್ನು ಕರೆದು ಕೇಳುತ್ತಾನೆ. ಆತ ನಡೆದ ಘಟನೆಯನ್ನು ವಿವರಿಸುತ್ತಾನೆ. ಎಲ್ಲೂ ಸಿಗದ ಕಾರಣ, ಕದ್ದು ತಂದೆ ಎಂದು ತಪ್ಪೊಪ್ಪಿಕೊಳ್ಳುತ್ತಾನೆ. ಆಗ ಬ್ರಾಹ್ಮಣ ಇಷ್ಟಕ್ಕೆಲ್ಲಾ ಕಾರಣ ಆ ಕದ್ದು ತಂದ ಅಕ್ಕಿ ಎಂದು ಹೇಳಿ ಯಜಮಾನನಿಗೆ ಧನ್ಯವಾದವನ್ನು ತಿಳಿಸಿ ಮುಂದುವರೆಯುತ್ತಾನೆ.
#ನೀತಿ: ತಿನ್ನುವ ಆಹಾರ ಶುದ್ಧವಾಗಿರಬೇಕು(ಬಾಹ್ಯ ಸ್ವಚ್ಛತೆಯ ಜೊತೆಗೆ, ಅದನ್ನು ಪಡೆದ ರೀತಿ). ಮೋಸದಿಂದ ಗಳಿಸಿದ ಆಹಾರ ಸೇವನೆ ನಮ್ಮಲ್ಲಿ ಮೋಸದ ಗುಣಗಳನ್ನು ಬೆಳೆಸುತ್ತದೆ. ಏಕೆಂದರೆ ಗುಣಗಳು ನಾವು ಮಾಡುವ ಕಾರ್ಯದ ಮೇಲೆ ನಿರ್ಧಾರಗೊಳ್ಳುತ್ತದೆ, ಕಾರ್ಯದಲ್ಲಿ ನಮ್ಮ ಮೆದುಳಿನ ಪಾತ್ರ ದೊಡ್ಡದು. ಮೆದುಳಿಗೆ ರಕ್ತ ಸಂಚಾರ ಮುಖ್ಯ, ರಕ್ತಕ್ಕೆ ಆಹಾರ ಮುಖ್ಯ. ಮೋಸದಿಂದ ಸಂಪಾದಿಸಿದ ಆಹಾರ ಸರ್ವತಾ ನಿಷಿದ್ಧ.

Tuesday, September 20, 2016

ಹೀಗೊಂದು ಕಲ್ಪನೆ ಮಾಡಿಕೊಳ್ಳಿ

ಎತ್ತರದ ಕಟ್ಟದ ಅದರ ತಾರಸಿಯ ಮೇಲೆ ಒಂದು ಸಭ್ಯ ಔತಣಕೂಟ ನಡಿತಾ ಇದೆ. ಪ್ರೇಮಿಯೊಬ್ಬ ಪ್ರೇಮ ಪತ್ರ ಬರೆದು ಹರಿದು ಕಿಟಕಿಯಿಂದ ಬಿಸಾಡಿದಾಗ ಹರಡಿಕೊಂಡ ಹಾಳೆಗಳ ಚೂರಿನಂತೆ ಜನ ಚದುರಿಕೊಂಡು ಅವರವರ ಪರಿಚಯದವರ ಜೊತೆ ಮಾತನಾಡುತ್ತಾ, ಪರಿಚಯವಿಲ್ಲದವರ ಕಡೆ ಕಣ್ಣು ಹಾಯಿಸುತ್ತಾ ಪಾನೀಯವನ್ನು ಸವಿಯುತ್ತಿದ್ದಾರೆ. ಹೆಂಗಳೆಯರಿಗೆ ಬೇರೆಯವರ ನೆಕ್ಲೇಸ್, ಡ್ರೆಸ್, ಹೈರ್ ಸ್ಟೈಲ್ ಕಡೆ ಗಮನ, ಗಂಡಸರಿಗೆ ಆ ಹೆಂಗಳೆಯರ ಮೇಲೆ ಗಮನ. ನಗರದ ಬೆಳಕು ಕೋಟ್ಯಾಂತರ ನಕ್ಷತ್ರಗಳನ್ನು ನುಂಗಿಹಾಕಿದೆ. ತಾರಸಿಯ ಮಧ್ಯದಲ್ಲಿ ಸಣ್ಣ ಕಾರಂಜಿ. ಸಣ್ಣ ಮಕ್ಕಳು ಅಲ್ಲಿ ಬಿಟ್ಟರೆ ಐಸ್ ಕ್ರೀಮ್ ಇರುವ ಕಡೆಯಷ್ಟೆ ಕಾಣ ಸಿಗುತ್ತಾರೆ. ಸೂರ್ಯ ಮುಳುಗಿದರೂ ಗೊತ್ತಾಗದಷ್ಟು ಬೆಳಕು.
ಕಾರಂಜಿಯ ನೀರು ಮೇಲೆ ಚಿಮ್ಮಿ ಕೆಳಗೆ ಬೀಳುವಷ್ಟರಲ್ಲಿ ಭಯಾನಕವಾದ ಶಬ್ಧ, ನೋಡ ನೋಡುತ್ತಿದ್ದಂತೆ ಪಾರ್ಟಿ ನಡೆಯುತ್ತಿದ ಕಟ್ಟಡದ ಒಂದು ಭಾಗಕ್ಕೆ ಬಾಂಬ್ ಹಾಕಿದ ಪರಿಣಾಮ ಕಟ್ಟಡ ಕುಸಿಯ ತೊಡಗಿದೆ. ಕುಸಿದು ಅರ್ಧ ತಿಂದು ಬಿಸಾಡಿದ ಕ್ಯಾರೇಟಿನ ತರ ನಿಂತಿದೆ ಆ ಕಟ್ಟಡ. ಇಂಪಾದ ಸಂಗೀತ ಬರುತ್ತಿದ್ದ ಮ್ಯೂಸಿಕ್ ಪ್ಲೇಯರ್ ನರಳಾಟ ಚೀರಾಟದ ಗದ್ದಲದಲ್ಲಿ ಮೌನವಾದಂತಿದೆ. ಯಾವ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ವಿಷಯ, ಅಷ್ಟರಲ್ಲಿ ಅಮ್ಮಾ ಅಮ್ಮಾ ಎಂಬ ಮಗುವಿನ ದನಿ ಎಲ್ಲರನ್ನು ಮೌನಗೊಳಿಸಿದೆ. ಎಂಟು ವರ್ಷದ ಬಾಲಕಿ ಮುರಿದ ಕಟ್ಟಡದ ತುದಿಯಲ್ಲಿ ಕಬ್ಬಿಣದ ಸರಳಿಗೆ ಜೋತು ಬಿದ್ದು ರೋಧಿಸುತ್ತಿದೆ. ತಾಯಿ ತನ್ನ ತಲೆಯಿಂದ ಸುರಿಯುತ್ತಿದ್ದ ರಕ್ತವನ್ನು ಬೆವರಿನಂತೆ ಒರೆಸಿಕೊಳ್ಳುತ್ತಾ ಮಗಳ ಕಡೆ ಓಡುತ್ತಿದ್ದಾಳೆ. ಅಷ್ಟರಲ್ಲಿ ಕೃಷ್ಣೆಗೆ ಬಂದ ಕೃಷ್ಣನ ರೀತಿ ಜೇಡದ ವೇಶ ಧರಿಸಿದ ವ್ಯಕ್ತಿ ಹಗ್ಗವನ್ನು ಹಾಕಿ ಜಿಗಿದು ಬಾಲಕಿಯನ್ನು ಹಿಡಿದು, ಎದುರಿಗಿದ್ದ ಮತ್ತೊಂದು ಕಟ್ಟಡಕ್ಕೆ ಹಗ್ಗವನ್ನು ಎಸೆದು ಹಾರಿ, ಮತ್ತೆ ಅದೇ ಕಟ್ಟಡಕ್ಕೆ ತಂದು ಬಿಡುತ್ತಾನೆ. ಹಗ್ಗವಲ್ಲ ಬಲೆ!!. ಮಗು ತಾಯಿಯನ್ನು ಬಿಗಿದಪ್ಪಿಕೊಳ್ಳುತ್ತಾಳೆ. ತಾಯಿಗೆ ಸುರಿಯುತ್ತಿದ್ದ ರಕ್ತ ಪನ್ನೀರಿನ ಅನುಭವ ತರುತ್ತದೆ.
ನೆರೆದಿದ್ದ ಜನರೆಲ್ಲಾ ಚಪ್ಪಾಳೆಯ ಸುರಿಮಳೆ ತರುತ್ತಾರೆ. ತಾಯಿ ತತ್ಕ್ಷಣ ತಾನಿದ್ದ ಜಾಗ, ನಡೆದ ಸಂಗತಿ ನೆನಪಿಸಿಕೊಂಡು ಆ ವ್ಯಕ್ತಿಯ ಬಳಿ ಬಂದು ಕೈ ಮುಗಿದು ಕೃತಜ್ಞತೆಯಿಂದ ಆತನ ಹೆಸರನ್ನು ಕೇಳುತ್ತಾಳೆ. ಆತ ಸ್ಪೈಡರ್ ಮ್ಯಾನ್ ಎಂದು ಮುಖಕ್ಕೆ ಮುಚ್ಚಿದ್ದ ಮುಖವಾಡವನ್ನು ತೆರೆಯುತ್ತಾನೆ. ಜಾದೂಗಾರನ ಕೈಲಿ ಕೊಳವೆಯಿಂದ ಹೊರತೆಗೆದ ಹೂವಿನಂತೆ ಆತನ ನಯವಾದ ಕೂದಲುಗಳು ಹಾರಾಡತೊಡಗುತ್ತದೆ. ಮ್ಯೂಸಿಕ್ ಪ್ಲೇಯರ್ ನಲ್ಲಿ ಹಳೆಯ ಹಾಡೊಂದು ಬರಲು ಪ್ರಾರಂಭಿಸುತ್ತದೆ, ಹತ್ತು ಪುರುಷರು ಹತ್ತು ಮಹಿಳೆಯರು ಗುಂಪಾಗಿ ಅವನು ನಡೆಯುತ್ತಿದ್ದ ದಾರಿಯ ಪಕ್ಕದಲ್ಲಿ ಚಪ್ಪಾಳೆ ತಟ್ಟುತ್ತಾ ನಿಲ್ಲುತ್ತಾರೆ. ಸಣ್ಣ ಹುಡುಗಿಯೊಂದು ಬಂದು ಆತನನ್ನು ಕರೆದು ಮುತ್ತು ಕೊಡುತ್ತಾಳೆ. ನಂತರ ಎಲ್ಲರೂ ಸೇರಿ ಐದು ನಿಮಿಷ ಹಾಡಿಗೆ ಹೆಜ್ಜೆ ಹಾಕುತ್ತಾರೆ.
ನಾನಿರುವುದೆ ನಿಮಗಾಗಿ ನಾಡಿರುವುದು ನಮಗಾಗಿ...

ಭಾರತದಲ್ಲಿ ಸ್ಪೈಡರ್ ಮ್ಯಾನ್ ಸಿನಿಮಾ ಮಾಡಿದರೆ, ಚಿತ್ರದ ಸನ್ನಿವೇಶ ಹೀಗಿರಬಹುದು ಅಲ್ಲವೇ?😜😜😜

Tuesday, September 6, 2016

ವಾತಾಪಿ ಗಣಪತಿಂ ಭಜೆ

ಅವರಾಡಿಕೊಳ್ಳೋದಕ್ಕೂ ಇವರು ಮಾಡುವುದಕ್ಕೂ ಸರಿ ಆಗ್ತಾ ಇದೆ.
ಜನರ ಸಂಘಟನೆಗಾಗಿ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕವಾಗಿ ಗಣಪತಿ ಇಡುವ ಪದ್ದತಿಯು ಇಂದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗ್ತಾ ಇದೆ. ತಮ್ಮ ತಮ್ಮ ಗಲ್ಲಿ ಗಲ್ಲಿಗಳಲ್ಲಿ ಇಟ್ಟುಕೊಂಡು ಸಂಘಟನೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಪಕ್ಕದ ಗಲ್ಲಿಯವರಿಗಿಂತಾ ಒಂದು ಹೆಚ್ಚು ಸ್ಪೀಕರ್ ತಂದು, ಹೊಸದಾಗಿ ರಿಲೀಸ್ ಆದ ಚಿತ್ರದ ಹಾಡು ಹಾಕುವುದೇ ಅವರ ಧ್ಯೇಯ. ಮೂರು, ಐದು ದಿನ, ಒಂದು ವಾರ ಹೀಗೆ ಇಡುತ್ತಿದ್ದ ಕಾಲ ಹೋಯಿತು, ಅಷ್ಟು ದಿನ ಗಣಪನನ್ನು ಮೈಂಟೇನ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಒಂದೇ ದಿನಕ್ಕೆ ಜೈ ಎಂದುಬಿಡುತ್ತಾರೆ. ಕುಡಿಯಲು, ಕುಣಿಯಲೆಂದೇ ಗಣಪತಿಗಳನ್ನು ತಂದು ಕೆಟ್ಟದಾಗಿ ಹಾಡು ಹಾಕಿಕೊಂಡು, ಯಾವುದೋ ಟ್ರ್ಯಾಕ್ಟರ್, ಆಟೋಗಳಲ್ಲಿ ಇಟ್ಟುಕೊಂಡು ಹೋಗಿ ಬಿಟ್ಟು ಬರ್ತಾರೆ.
ನನ್ನ ಬಾಲ್ಯದಲ್ಲಿ (ಶಿಕಾರಿಪುರದಲ್ಲಿ) ಸಾರ್ವಜನಿಕವಾಗಿ ಅಂಬಾತನಯನನ್ನು ಇಡುತ್ತಿದ್ದ ಸಡಗರ ಸಂಭ್ರಮ ಇಂದು ನಾ ಕಾಣೆ. ಸುತ್ತಲಿನ ಮೂರು ನಾಲ್ಕು ಕೇರಿಯವರೆಲ್ಲ ಸೇರಿಕೊಂಡು ಗಣಪನನ್ನು ಕೂಡಿಸಿ ಹಬ್ಬವನ್ನು ಆಚರಿಸುತ್ತಿದ್ದರು. ಬೆಳಗ್ಗೆ ಸಮಯದಲ್ಲಿ ಹೋಮ ಹವನಗಳು ನಡೆದರೆ, ಸಂಜೆ ಮನೋರಂಜನೆಯೆಂದು ಸಂಗೀತ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು, ಯಾವುದಾದರು ಸಿನಿಮಾ ಪ್ರದರ್ಶನ ಹೀಗೆ ಸಭ್ಯತೆಯ ಚೌಕಟ್ಟು ಮೀರದಂತೆ ನಡೆಯುತ್ತಿತ್ತು. ವಿಸರ್ಜನೆ ಸಮಯದಲ್ಲಿ ಗಣಪತಿಯ ಮುಂದೆ ತಂಡೋಪ ತಂಡವಾಗಿ ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು, ದೊಡ್ಡ ಎರಡು ಗಂಡು ಹೆಣ್ಣಿನ ಗೊಂಬೆಗಳು, ಇನ್ನಿತರ ನೃತ್ಯ ತಂಡಗಳು. ಎಲ್ಲಾ ಮುಗಿದ ಮೇಲೆ ಭಕ್ತರು ಮುಂದೆ ನಾನು ಅವರ ಹಿಂದೆ ಎಂಬಂತೆ ಗಜಾನನನನ್ನು ಹೊತ್ತ ಅಲಂಕಾರಿತ ಟ್ರ್ಯಾಕ್ಟರ್ ಗಜನಡಿಗೆಯಲ್ಲಿ ಬರುತ್ತಿತ್ತು. ಡೊಳ್ಳಿನ ಶಬ್ಧ ಬಿಡಿ, ಹಿಂದೆ ಇಡುತ್ತಿದ್ದ ಜನರೇಟರ್‍ನ ಶಬ್ಧದವೂ ಕರ್ಕಶ ಎನಿಸುತ್ತಿರಲಿಲ್ಲ. ಇನ್ನು ಕಿವಿಯಲ್ಲಿ ಹಾಗೆಯೇ ಕೇಳಿಸುತ್ತಿದೆ.
ಆದರೆ ಇಂದು? ಗಣಪತಿಯೇ ಕಾಣದ ಹಾಗೆ ಹತ್ತಾರು ಸೌಂಡ್ ಸಿಸ್ಟಮ್ ಹೊತ್ತ ಗಾಡಿ, ಕಂಠ ಪೂರ್ತಿ ಕುಡಿದು, ಪ್ರಜ್ಞೆ ಇಲ್ಲದ ಹಾಗೆ ಕುಣಿಯುವ ಜನ, ಹಿಂದೆ ವಿಸರ್ಜನೆಗಾಗಿಯೇ ಕಾದು ಕುಳಿತಿರುವ ಗಣಪ. ಸಾರ್ವಜನಿಕ ಗಣೇಶೋತ್ಸವದ ಸೊಗಡೇ ಹಾಳಾಗಿ ಹೋಗಿದೆ. ಪಡ್ಡೇ ಹುಡುಗರ ಅಡ್ಡವಾಗಿ ಹೋಗಿದೆಯೇ ಹೊರೆತು, ತಿಲಕರ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.


Sunday, July 24, 2016

ಲೋಕೋ ಭಿನ್ನ ರುಚಿಃ.

ರಜನಿ ಅಭಿಮಾನಿಗಳು ಇದನ್ನು ಓದಬೇಡಿ.
ಮೊದಲೇ ಹೇಳುತ್ತಿದ್ದೇನೆ, ರಜನಿಯ ವಯಕ್ತಿಕ ವಿಷಯ, ಬದುಕುವ ರೀತಿ, ಸರಳತೆಗೆ ನನ್ನ ಅಪಾರ ಗೌರವವಿದೆ, ಅಷ್ಟು ದೊಡ್ಡ ಸ್ಟಾರ್ಗಿರಿ ಇಟ್ಟುಕೊಂಡು ಹಾಗೆ ಬದುಕುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.
ರಜನಿಕಾಂತ್ ರಾಜ್ಕುಮಾರರ ಅಪ್ಪಟ ಅಭಿಮಾನಿ, ರಾಜ್ಕುಮಾರರನ್ನು ಬಾಯ್ತುಂಬಾ ಹೊಗಳಿದ್ದನ್ನು, ಅವರ ನಟನೆ ಮುಂದೆ ನನ್ನ ನಟನೆ ಏನೂ ಇಲ್ಲ ಎಂದು ಹೇಳಿದ್ದನ್ನು ಯೂಟ್ಯೂಬ್ನಲ್ಲಿ ನೋಡಬಹುದು. ಆದರೂ ಕರ್ನಾಟಕದಲ್ಲಿ ರಾಜ್ಕುಮಾರರ ಅಭಿಮಾನಿಗಳ ಸಂಖ್ಯೆ ಕಡಿಮೆ. ಇದಕ್ಕೆ ಮೊದಲ ಕಾರಣ ನಮ್ಮ ಜನಕ್ಕೆ ಆ ಕ್ರೇಜ್ ಇಲ್ಲ. ಒಬ್ಬ ಸಿನಿಮ ಹೀರೋನ ಸಿನಿಮದಲ್ಲಿ ನೋಡಿ ಮೂರು ದಿನದ ನಂತರ ಮರೆತುಬಿಡುತ್ತಾರೆ. ಆದರೆ ತ.ನಾ ಆ.ಪ್ರ ಗಳಲ್ಲಿ ಹಾಗಿಲ್ಲ. ಅವರ ಸಿನಿಮ ನಟರ, ರಾಜಕೀಯ ವ್ಯಕ್ತಿಗಳ ಮೇಲಿನ ಅಭಿಮಾನ ನಮಗಿಂತ ನೂರು, ಸಾವಿರ ಪಟ್ಟು ಹೆಚ್ಚು. ಆದಾಗಿಯೂ ಕೆಲವೊಮ್ಮೆ ಸಣ್ಣದಾಗಿ ಚರ್ಚೆ ನಡೆಯುತ್ತಿರುತ್ತದೆ, ಆಗ ರಾಜ್ಕುಮಾರರ ವಯಕ್ತಿಕ ವಿಷಯವನ್ನು ಎಳೆಯುತ್ತಾರೆ. ನನಗೆ ಅರ್ಥವಾಗದಿದ್ದು ಅದೇ, ಸಿನಿಮ ನಟರ ವಯಕ್ತಿಕ ವಿಚಾರಗಳನ್ನು ತಂದು ಆತನ ಸಿನಿಮಾಗಳನ್ನು ನೋಡದಿರುವುದು ಅಥವಾ ಹುಚ್ಚೆದ್ದು ನೋಡುವುದು ತಪ್ಪಾಗುತ್ತದೆ.
ರಜನಿಯ ವಿಚಾರದಲ್ಲೂ ಅಷ್ಟೆ, ಅತಿ ಹೆಚ್ಚು ಫ್ಯಾಂಟಸಿ, ಹೀರೋಯಿಸಂ ಅನ್ನು ಬಯಸುವ ತ.ನಾ ನ ಜನತೆಗೆ, ರಜನಿಯ ಚಿತ್ರ ವಿಚಿತ್ರ ಸ್ಟಂಟುಗಳು, ರೋಮಗಳನ್ನು ಎಬ್ಬಿಸುವ ಆರ್ಭಟದ ಡೈಲಾಗುಗಳು, ಅಸಾಧಾರಣವಾಗಿ ನಡೆಯುವ ರೀತಿ ಹುಚ್ಚೆಬ್ಬಿಸಿತು, ಆತನನ್ನು ಆರಾಧಿಸಲು ಪ್ರಾರಂಭಿಸಿದರು. ಅಲ್ಲಿಯ ಜನರ ಮನಸ್ಥಿತಿಗೆ, ಅವರ ರುಚಿಗೆ ಆತ ದೈವನಾದ. ರಜನಿಕಾಂತರೂ ಕೂಡ ಅವರ ಅಭಿಮಾನವನ್ನು ಉಳಿಸಿಕೊಂಡರು, ಸ್ಟಾರ್ ಗಿರಿಯು ತಲೆಗೆ ಏರಿಸಿಕೊಳ್ಳದೆ, ಸರಳತೆಯನ್ನು ಮೆರೆದರು. ಎಷ್ಟೋ ಸಹಾಯಗಳನ್ನು ಮಾಡಿದರು. ಇದನ್ನು ನೋಡುತ್ತಿದ್ದ ಕರ್ನಾಟಕದ ಜನತೆಗೆ, ಎಲ್ಲೋ ಮೂಲೆಯಲ್ಲಿ ಅವನ ನಟನೆ ವಿಚಿತ್ರವೆನಿಸಿದರೂ ಅವನ ಅಭಿಮಾನಿಗಳ ಕ್ರೇಜ್ ಇವರಲ್ಲೂ ಒತ್ತಾಯವಾಗಿ ಹರಿದಾಡಲು ಪ್ರಾರಂಭಿಸಿತು. ಇದಕ್ಕೆ ಜನ ಮರಳೋ ಜಾತ್ರೆ ಮರಳೋ ಎನ್ನುವುದು. ನಿಮಗೆ ಗೊತ್ತಿರಬಹುದು, ತ.ನಾ ಜನ ಕರ್ನಾಟಕದ ಹಲವೆಡೆ ವಾಸವಾಗಿದ್ದಾರೆ. ಭದ್ರಾವತಿ, ಶಿವಮೊಗ್ಗದಲ್ಲಂತೂ ಕೆಲವು ಹಳ್ಳಿಗಳು ಕರ್ನಾಟಕದಲ್ಲಿ ಇದಾವಾ ಎಂಬ ಪ್ರಶ್ನೆ ಮೂಡಿಸುವಷ್ಟು ತಮಿಳುಮಯವಾಗಿವೆ. ಅಂಕಿ ಅಂಶಗಳ ಪ್ರಕಾರ ತ.ನಾನಲ್ಲಿ ಕನ್ನಡ ಮಾತಾಡುವವರಿಗಿಂತ ಎರಡರಷ್ಟು ಕರ್ನಾಟಕದಲ್ಲಿ ತಮಿಳು ಮಾತಾಡುವವರಿದ್ದಾರೆ. ಅವರು ರಜನಿಯ ಚಿತ್ರಗಳನ್ನು ನೋಡಿ ಕುಣಿದಾಡುತ್ತಿದ್ದ ರೀತಿ ನೋಡಿ ಸ್ವಲ್ಪ ವಿರೋಧಿಸಿದರೆ ರಜನಿಯ ವಯಕ್ತಿಕ ಜೀವನವನ್ನು ತಂದಿಟ್ಟು ಅವನನ್ನು ಹೀರೋ ಎಂದು ಬಿಂಬಿಸಿ ವಿರೋಧಿಸಲು ಬಂದವರ ಬಾಯಿ ಮುಚ್ಚಿಸುತ್ತಾರೆ. ಉಪೇಂದ್ರ ಹೇಳಿದ್ದು ನಿಜ ನಾವು ಕನ್ನಡಿಗರಲ್ಲವೋ ವಿಶಾಲ ಹೃದಯದವರು.
ಇನ್ನು ಒಂದು ರೀತಿ ಅಭಿಮಾನಿಗಳಿದ್ದಾರೆ, ಸಿನಿಮಾವನ್ನು ಮನೋರಂಜನೆಗಾಗಿ ನೋಡುತ್ತೇವೆ, ಫ್ಯಾಂಟಸಿ ಇಷ್ಟ, ಅದರಲ್ಲಿ ನ್ಯೂಟನ್ ನ ಪ್ರಮೇಯಗಳನ್ನು ಹುಡುಕುವುದು ತಪ್ಪು ಎಂದು, ಹಾಗಾದರೆ ಅವರ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶ ಇದೆ ಎಂಬ ಮಾತನ್ನು ಯಾಕೆ ಹೇಳುತ್ತಾರೆ? ಮನೋರಂಜನೆಗಾಗಿ ನೋಡುವವರಿಗೆ ಸಮಾಜಕ್ಕೆ ಸಂದೇಶ ಕೊಡುತ್ತದೋ ಇಲ್ಲವೋ ಏಕೆ ಬೇಕು? ಇರಲಿ, ನೈಜತೆ ಬೇಡ, ನೈಜತೆಗೆ ಕಾಲುಭಾಗವಾದರೂ ಇರಬೇಕು ಅಲ್ಲವೇ? ಸಿನಿಮೀಯ ಎಂದು ಆತನ ಸ್ಟಂಟ್ಸ್, ಸ್ಟೈಲ್, ಡೈಲಾಗ್ ಡೆಲಿವರಿ ವಿಪರೀತವಾದರೂ ಮೆಚ್ಚುವುದು ಯಾವ ನ್ಯಾಯ? ಬೆಳಗ್ಗೆ ಬೆಳಗ್ಗೆ ವಾಚಿಂಗ್ ಕಬಾಲಿ ಅಂತ ಹಾಕಿಕೊಂಡರೀತಿಯಲ್ಲಿ ವಾಚಿಂಗ್ ರಂಗೀತರಂಗ, ಲೂಸಿಯ, ಗೋ.ಬ.ಸಾ.ಮೈ ಅಂತೆಲ್ಲಾ ಹಾಕಿಕೊಂಡಿದ್ದು ನೋಡಿಲ್ಲ. ತ.ನಾ ಜನರ ಕ್ರೇಜ್ ನಮ್ಮಲ್ಲಿ ಟ್ರಾನ್ಸ್ ಫಾರ್ಮ್ ಆಗಿದೆಯೇ ಹೊರೆತು, ನಮ್ಮಲ್ಲಿ ಎಲ್ಲೋ ಮೂಲೆಯಲ್ಲಿ ಅವನ ನಟನೆ, ಸಿನಿಮಾ ಶೈಲಿಯನ್ನು ನೋಡಿ ನಗು ಬರುವುದಂತು ಸತ್ಯ. ನೀವು ಎಷ್ಟೇ ಚೆನ್ನಾಗಿರೋ ಸಿನಿಮಾ ಮಾಡಿ, ನಮ್ಮ ನಟರ ಮೇಲೆ ಆ ಕ್ರೇಜ್ ಬರುವುದಿಲ್ಲ, ಏಕೆಂದರೆ ಮೂಲತಹ ನಾವು ಕ್ರೇಜ್ ಬೆಳೆಸಿಕೊಳ್ಳುವವರಲ್ಲ. ಕ್ರೇಜ್ ಹುಟ್ಟುವುದು, ಹುಚ್ಚೆದ್ದು ಅಭಿಮಾನ ತೋರಿಸುವವರನ್ನು ನೋಡಿದಾಗ. ನಮ್ಮವರ ಮೇಲೆ ಬಾರದ ಕ್ರೇಜ್ ಆ ನಟರ ಮೇಲೆ ಬಂದಿದೆಯೆಂದರೆ ಇದು ನಮಗೆ ತ.ನಾ ನ ಜನರನ್ನು ನೋಡಿ ಬಂದಿರುವ ಕ್ರೇಜ್ ಅಷ್ಟೇ. ಜನ ಮರಳೋ ಜಾತ್ರೆ ಮರಳೋ ಎಂಬಂತೆ.
ಕೊನೆಯದಾಗಿ ರಜನಿಯವರೇ ರಾಜ್ಕುಮಾರರ ಕುರಿತು ಹೇಳಿದ ಪ್ರಸಂಗವನ್ನು ಹೇಳ್ಬೇಕೆಂದೆನಿಸಿದೆ.
ರಜನಿ ಮತ್ತು ರಾಜಣ್ಣ ಹೋಗುತ್ತಿದ್ದ ಕಾರು ಕೆಟ್ಟು ನಿಂತಾಗ ರಾಜಣ್ಣನನ್ನು ನೋಡಿ ಎಲ್ಲರೂ ನಮಸ್ಕಾರ ಮಾಡಿದರಂತೆ, ಕಾರಿನಲ್ಲಿ ಮುಂದೆ ಹೊರಟಾಗ ರಾಜಣ್ಣ ರಜನಿಗೆ ಹೇಳಿದರಂತೆ, ನೋಡಿದಿರಾ ಎಷ್ಟೋಂದು ಮರ್ಯಾದೆ ಅಂತ. ರಜನಿ ನಿಮಗಲ್ಲದೆ ಬೇರೆಯಾರಿಗೆ ಕೊಡುತ್ತಾರೆ ಅಂದಾಗ, ಹುಚ್ಚಪ್ಪಾ ನನಗಲ್ಲ ಕೊಟ್ಟಿದ್ದ್ದು ಮರ್ಯಾದೆ, ನನ್ನಲ್ಲಿರೋ ಸರಸ್ವತಿಗೆ ಎಂದರಂತೆ ರಾಜಣ್ಣ. ರಜನಿಯ ವಯಕ್ತಿಕ ಜೀವನ ಇಷ್ಟೋಂದು ಸರಳವಾಗಿರುವುದಕ್ಕೆ ರಾಜಣ್ಣ ಆದರ್ಶವೇ ಕಾರಣವಿದ್ದರೂ ಇರಬಹುದು.
ಸಾರಾಂಶ ಇಷ್ಟೇ, ನಟನೆಯ ವಿಷಯದಲ್ಲಿ ರಜನಿಕಾಂತರ ನಟನೆ ನನಗೆ ಸ್ವಲ್ಪವೂ ಹಿಡಿಸಲಿಲ್ಲ. ಹಾಗಂತ ನಿಮಗೂ ಹಿಡಿಸಬಾರದೆಂದು ಯಾವ ಒತ್ತಡವೂ ಮಾಡುವುದಿಲ್ಲ. 
ಲೋಕೋ ಭಿನ್ನ ರುಚಿಃ.




Saturday, May 28, 2016

ಜಗಲೀ ಕಟ್ಟೆ

ಇಂದು ಯಾಕೋ ಇಲ್ಲಿ ಒಂದು ಮನೆಯ ಮುಂದಿನ ಜಗಲೀ ಕಟ್ಟೆ ನೋಡಿ ನನ್ನ ತಲೆಯಲ್ಲಿ ನನ್ನ ಬಾಲ್ಯದ ಜಗಲೀ ಕಟ್ಟೆಯ ನೆನಪಾಯಿತು. ಕೆಲ ಸಂಗತಿಗಳು ನಮ್ಮ ನಿಮ್ಮೆಲ್ಲರಲ್ಲಿ ಸಾಮ್ಯತೆಯಿರಬಹುದು. ಹಾಗೆ ನೀವೂ ಒಮ್ಮೆ ಫ್ಲಾಷ್ ಬ್ಯಾಕ್‌ಗೆ ಹೋಗಿ ಬನ್ನಿ.
ಈಗಿನ ಸಿಟ್ ಔಟ್‌ಗಳಲ್ಲಿ ಅಂತದ್ದೇನು ಸಂಗತಿಗಳು ನಡೆಯುವುದಿಲ್ಲ, ಕಾರಣ ನಾವಿಂದು ಕಾಲಿಗೆ ಚಕ್ರವನ್ನು ಕಟ್ಟಿಕೊಂಡಿದ್ದೇವೆ ಅಥವ ಯಾವುದೋ ವೈಫೈ ಮರದ ಕೆಳಗೆ ಕೂತು ಐದಿಂಚಿನ ಪ್ರಪಂಚದಲ್ಲೇ ಸುತ್ತಾಡುತ್ತಿದ್ದೇವೆ. ಅಲ್ಲದೇ ಪಕ್ಕದ ಮನೆಯವರ ಹೆಸರು ತಿಳಿಯದೇ ವರ್ಷಾನುಗಟ್ಟಲೆ ಬದುಕುತ್ತಿದ್ದೇವೆ ಕೂಡ. ನಮ್ಮ ಬದುಕಿನ ಮಟ್ಟ ಹೆಚ್ಚುತ್ತಾ ಹೋದಂತೆ ನಾವು ಒಂಟಿ ಪಿಶಾಚಿಗಳಾಗುತ್ತಿದ್ದೇವೆ. ನೆರೆಹೊರೆಯವರೊಂದಿಗೆ ಪರಸ್ಪರ ಒಡನಾಟ, ಬಾಂಧವ್ಯ ಬೆಳೆಸಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಳೆಯದನ್ನು ನೆನಪಿಸಿಕೊಂಡು ಖುಷಿ ಪಡಬೇಕಷ್ಟೆ.
ನನಗೆ ಜಗಲಿ ಕಟ್ಟೆ ಎಂದೊಡೆ ನೆನಪಿಗೆ ಬರುವುದು, ಶಾಲೆ ಮುಗಿಸಿಕೊಂಡು ಬಂದು ಬ್ಯಾಗೊಳಗೆ ನೀಟಾಗಿ ಜೋಡಿಸಿಟ್ಟ ಪುಸ್ತಕಗಳಿಂದ ಒಂದು ಪುಸ್ತಕ ತೆಗೆದು, ಕಾಲಿನ ಮುಂದೆ ಬ್ಯಾಗಿಟ್ಟಿಕೊಂಡು ಮಾಡುತ್ತಿದ್ದ ಹೋಂವರ್ಕ್. ನಮ್ಮ ಮನೆಯ ಜಗಲಿ ಕಟ್ಟೆ ಸಂಜೆಯ ಸಮಯದಲ್ಲಿ ಹೋಂವರ್ಕ್ ಕಟ್ಟೆಯಾಗಿ ಬದಲಾಗುತ್ತಿತ್ತು. ನಾನು ನನ್ನಣ್ಣ ಹಾಗು ಪಕ್ಕದ ಮನೆಯ ಹುಡುಗರೆಲ್ಲಾ ಅಲ್ಲೇ ಕೂತು ಹೋಂವೆರ್ಕ್ ಮಾಡುತ್ತಿದ್ದೆವು. ಯಾರಾದರೂ ನಂದು ಮುಗಿಯಿತೆಂದೊಡನೆ ನಮ್ಮ ಬರವಣಿಗೆಯ ವೇಗ ಹೆಚ್ಚಾಗುತ್ತಿತ್ತು. ನಂಗಿವತ್ತು ಮ್ಯಾತ್ಸ್ ಹೋಂವರ್ಕ್ ಏನು ಕೊಟ್ಟಿಲ್ಲ ಎಂದು ನಾನು ಹೇಳಿದೊಡನೆ ಉಳಿದವರೆಲ್ಲ ಉರಿದುಕೊಂಡಿದ್ದು ನನಗಂದು ಖುಷಿಕೊಡುತ್ತಿತ್ತು.
ಅಷ್ಟರಲ್ಲಿ ಹೋಂವರ್ಕ್ ಮುಗಿದವ ಬ್ಯಾಟ್ ಹಿಡಿದುಕೊಂಡು ಬಂದರೆ ಸಾಕು ನಮ್ಮ ಬರವಣಿಗೆ ನಿಂತಂತೆ. ಅಲ್ಲೇ ಬುಕ್ ಇಟ್ಟು ಎದ್ದೇಳುತ್ತಿದ್ದೆವು ಆಮೇಲೆ ಮಾಡಿದರಾಯಿತು ಎಂದು. ಆ ಕಟ್ಟೆಯ ಒಂದು ಬದಿಯಲ್ಲಿ ಸೀಮೇ ಸುಣ್ಣದಿಂದ ಅಥವ ಇಟ್ಟಿಗೆ ತುಂಡಿನಿಂದ ಬರೆದ ವಿಕೆಟ್ ಅನ್ನು ಸರಿಯಾಗಿ ತಿದ್ದಿ ನಮ್ಮದೇ ವಿಚಿತ್ರವಾದ ರೂಲ್ಸ್ ಅಲ್ಲಿ SPL(Street Premier League) ಶುರುಮಾಡಿಯೇ ಬಿಡುತ್ತಿದ್ದೆವು. ಅಷ್ಟರಲ್ಲೇ ಆ ಜಗಲೀ ಕಟ್ಟೆಗೆ ನಮಮ್ಮ, ಪಕ್ಕದ ಮನೆಯ ಮಾಮಿ, ಎದರು ಮನೆಯ ಆಂಟಿ ಎಲ್ಲರ ಆಗಮನ. ಕೇಳ್ತೀರ ಹರಟೆ ಪ್ರಾರಂಭವಾದರೆ ಸಾಕು, ಸೀದ ಕುಕ್ಕರ್ ಇಡಲು ರಾತ್ರಿ ಏಳಕ್ಕೆ ಏಳುತ್ತಿದ್ದರು. ಇವರೆಲ್ಲ ನಮ್ಮ ಪ್ರೇಕ್ಷಕರೆಂದು ತಿಳಿಯಬೇಡಿ, ಇವರಿಂದ ನಮಗೆ 'ಏಯ್ ಆಕಡೆ ಹೋಗಿ ಆಡ್ಕೊಳ್ರೋ' ಅನ್ನೋ ಡೈಲಾಗ್ ತಪ್ಪಿದ್ದಲ್ಲ. ಬಯ್ಕೊಳ್ತಾನೆ ಹೋಗುತ್ತಿದ್ದೆವು. ಚೆಂಡಿನ ಏಟು ಕೂತವರಿಗೆ ಬಿದ್ದಾಗ ಒಂದು ಕಡೆ ಭಯ, ಒಂದು ಕಡೆ ಸಂತೋಷ. ಚೆಂಡಿನ ಏಟು ಒಬ್ಬರಿಗೆ ಬಿದ್ದಾಗ ನಗೆಯ ಬದಲು feeling sorry ಆದರೆ ಅಂದು ನಮ್ಮ ಬಾಲ್ಯ ಮುಗಿದಿದೆ ಎಂದರ್ಥ.
ಇನ್ನು ಬೇಸಿಗೆ ರಜೆ ಬಂತೆಂದರೆ ಸಾಕು ಆ ಕಟ್ಟೆಯ ತುಂಬ ಚೌಕಗಳು. ಚೌಕಬಾರ, ಕುಂಟಾಪಿಲ್ಲೆ, ಚೆನ್ನಮಣೆ, ರಾಜ ರಾಣಿ ಈ ಎಲ್ಲಾ ಆಟಗಳ ಪ್ಲೇಗ್ರೌಂಡ್ ಆಗುತ್ತಿತ್ತು. ರಾತ್ರಿ ಅದರ ಮೇಲೆ ಮಲಗಿ ಕತ್ತನ್ನು ಉಲ್ಟ ಕೆಳಗೆ ಇಳಿ ಬಿಟ್ಟು ಸಪ್ತಋಷಿ ಮಂಡಲ ಹುಡುಕುತ್ತಿದ್ದ ಮಜವೇ ಬೇರೆ. ಅದೇನೋ ಆ ಸಮಯದಲ್ಲಿ ಒಂದಾದರೂ ವಿಮಾನ ತನ್ನ ದೀಪವನ್ನು ಮಿನುಗಿಸುತ್ತಾ ಹೋಗುತ್ತಿತ್ತು. 
ಕಟ್ಟೆಯನ್ನು ಹತ್ತಿ ಜಿಗಿದು ಮಾಡುತ್ತಿದ್ದ ರಂಪಾಟದಲ್ಲಿ ಮೂಲೆಯಲ್ಲಿ ಇಟ್ಟಿದ್ದ ತುಳಸಿ ಡಬ್ಬವನ್ನು ಎಡವಿ ಬೀಳಿಸಿ ಅಮ್ಮನ ಬಳಿ ಮಂಗಳಾರತಿ ಮಾಡಿಸಿಕೊಂಡ ನೆನಪು ಇದೆ. ಬೈದಾಗ ಮುಖ ಊದಿಸಿಕೊಂಡು ಬಂದು ಕೂಡುತ್ತಿದ್ದ ಜಾಗ ಕೂಡ ಅದೇ. ಆ ಕಟ್ಟೆ ಅಲ್ಲಿ ಕೂತವರು ನಗುನಗುತ್ತಾ ಇರಬೇಕೆಂದು ನಿಯಮ ಮಾಡಿಕೊಂಡಿತ್ತೋ ಏನೋ ಮುಖ ಊದಿಸಿ ಕೊಂಡು ಕೂತ ತಪ್ಪಿಗೆ ಮಳೆಗಾಲದಲ್ಲಿ ಜರ್ರನೆ ಜಾರಿ ತಲೆ ಊದುವ ಹಾಗೆ ಮಾಡಿತ್ತು. ಆ ಕಟ್ಟೆ ಬಿಸಿಲಲ್ಲಿ ಬಂದ ತರಕಾರಿ ಮಾರುವವರಿಗೆ, ನನ್ನ ಸೈಕಲ್ಲಿಗೆ, ನಾಯಿ ಹಸುಗಳಿಗೆ ವಿಶ್ರಮಿಸುವ ಜಾಗ ಕೂಡ ಆಗಿತ್ತು. ನನ್ನ ತಂದೆ ಹಾಗು ಪಕ್ಕದ ಮನೆ ಅಂಕಲ್‌ಗಳಿಗೆ ರಾಜಕೀಯ ಮಾತನಾಡುವ ವೇದಿಕೆ.
ಎದರುಗಡೆಯ ಮೋರಿ ರಿಪೇರಿ , ರಸ್ತೆಗೆ ಟಾರ್ ಹಾಕಲು ಬಂದರಂತೂ ಚಿನ್ನದ ಗಣಿ ಅಗೆಯುವುದನ್ನು ನೋಡುವ ಹಾಗೆ ನೋಡಲು ಆ ಕಟ್ಟೆಯ ಮೇಲೆ ಫಿಕ್ಸ್. ಅಪ್ಪ ಕೆಲಸ ಮುಗಿಸಿ ಬರುವುದನ್ನು ನಾವು ಕಾದಿದ್ದು, ಶಾಲೆಯಿಂದ ಬರುವ ನಮ್ಮನ್ನು ನಮ್ಮ ಅಮ್ಮ ಕಾಯುತ್ತದ್ದದ್ದು ಅದೇ ಕಟ್ಟೆಯಮೇಲೆ ಕುಳಿತು. ಕೊನೆಗೆ ನಮ್ಮಜ್ಜಿಯು ತೀರಿ ಹೋದಾಗ ಅವರ ದೇಹವನ್ನು ಎತ್ತಿಕೊಂಡು ಹೋಗುವುದನ್ನು ದುಃಖ, ಭಯ ಹಾಗು ಗೊಂದಲದಲ್ಲಿ ನೋಡಿದ್ದು ಅದೇ ಜಗಲಿ ಕಟ್ಟೆಯಲ್ಲಿ ಕುಳಿತು.
ಆದರೆ ಇಂದು ಮನೆಗೆ ಕಟ್ಟೆಗಳೇ ಕಡಿಮೆ ಇದ್ದರೂ ಆಳೆತ್ತರದ ಕಾಂಪೌಂಡುಗಳ ಹಿಂದೆ ಯಾರಿಗೂ ಕಾಣದ ಹಾಗೆ ಮಲಗಿವೆ. ಮಕ್ಕಳೋ ಮೊಬೈಲ್ನಲ್ಲೇ ಹಾರುತ್ತಾರೆ, ಕುಣಿಯುತ್ತಾರೆ. ಇಲ್ಲಿ ವೈಫೈ ಸರಿ ಸಿಗುವುದಿಲ್ಲವೆಂದು ಒಳಗೆ ಕೂಡುವ ಯುವಕರು, ಸೀರಿಯಲ್‌‌ ನೋಡುವುದರಲ್ಲಿ ಮುಳುಗುವ ತಾಯಂದಿರು. ಒಟ್ಟಾರೆಯಾಗಿ ನಗರಗಳಲ್ಲಿ ಜಗಲಿ ಕಟ್ಟೆಯ ಸುಂದರ ಜಗತ್ತು ಕಾಣೆಯಾಗುತ್ತಿದೆ.

Saturday, April 2, 2016

ಬದಲಾದ ಟೀವಿಯ ಠೀವಿ

ನಾನು ತೊಂಬತ್ತರ ದಶಕದ ಹುಡುಗ, ನನ್ನ ಬಾಲ್ಯದಲ್ಲಿ ದೂರದರ್ಶನ(ಟೀವಿ) ಹೊಸದೇನು ಅಲ್ಲ, ಬೀದಿಯಲ್ಲಿ ಹತ್ತು ಮನೆಗಳಿಗೆ ಐದು ಮನೆಯಲ್ಲಿಯಾದರೂ ಟೀವಿ ಇರುತ್ತಿತ್ತು. ಆಂಟೆನದಿಂದ ಬಿತ್ತರವಾಗುತ್ತಿದ್ದ ಕಾರ್ಯಕ್ರಮಗಳನ್ನು ನೋಡಿದ ನೆನಪು ಇದೆ. ಯಾರು ಸ್ಕ್ರಾಲ್ ಡೌನ್ ಮಾಡುತ್ತಿದ್ದರೋ ಗೊತ್ತಿಲ್ಲ ಮಹಾಭಾರತದ ಅರ್ಜುನ ಮಾತ್ರ ನಮ್ಮ ಟೀವಿಯಲ್ಲಿ ಮೇಲೆ ಹೋಗುತ್ತಲೇ ಇದ್ದ. ಕೆಲವೊಮ್ಮೆ ಇಲ್ಲಿ ಅವನ ಕಣ್ಣಿದೆ, ಇಲ್ಲಿ ಅವನ ಬಾಯಿ, ಎಂದು ಊಹಿಸಿಕೊಂಡು ನೋಡಿದ ನೆನಪು. ಅವನು ಬಿಟ್ಟ ಬಾಣ ಮಾತ್ರ ಎಲ್ಲಾ ಪ್ರೊಜೆಕ್ಟೈಲ್ ಮೋಷನ್ ನ ಸೂತ್ರಗಳನ್ನು ಗಾಳಿಗೆ ತೂರಿ ಹಾರುತ್ತಿದ್ದವು. ಮನೆಯ ಮೆಲೆ ಹತ್ತಿ ಆಂಟೆನವನ್ನು ಸರಿ ಮಾಡಿ ಬಂದರೆ ಒಂದೈದು ನಿಮಿಷ ಯಾವುದೇ ರಂಗೋಲಿಗಳಿಲ್ಲದೆ ನೋಡಬಹುದಿತ್ತು.
ಅಷ್ಟರಲ್ಲೇ ಕೇಬಲ್ ನ ಧಾಳಿ ಶುರುವಾಗಿತ್ತು, ಪಕ್ಕದ ಮನೆಯಲ್ಲಿ ಕೇಬಲ್ ಹಾಕಿಸಿದ್ದರು, ಹಾಗೆ ಅಮ್ಮನ ಜೊತೆ ಅಥವ ಅಪ್ಪನ ಜೊತೆ ಹೋದಾಗ ನನ್ನ ಗಮನ ಆ ಟೀವಿಯ ಕಡೆಯೆ, ಯಾವುದೇ ಹುಳಗಳಿಲ್ಲದೇ ಪ್ರಸಾರವಾಗುತ್ತಿತ್ತು. ಹೇಗೋ ನಮ್ಮ ಮನೆಗೂ ಕೇಬಲ್ ಬಂತು, ಅರ್ಥವಾಗದ ಮಹಾಭಾರತದಲ್ಲಿ ಯುದ್ಧದ ಸೀನುಗಳಿಗಾಗೆ ಕಾಯುತ್ತ ಕೂರುತ್ತಿದ್ದೆ, ಧುರ್ಯೋಧನನಿಗಿಂತ ಹೆಚ್ಚು ನನಗೇ ಯುದ್ಧ ನಡೆಯಬೇಕಿತ್ತು. ಡಿಶ್ ಕೂಡ ಶಾಶ್ವತವಲ್ಲ ಗಂಟೆಗಟ್ಟಲೇ ಹೋಗುತಿತ್ತು, ಆಗ ಟೀವಿಯ ತುಂಬ ಬರೀ ಹುಳಗಳೇ, ಗಿಜಗಿಜ ಎಂದು, ಅದರಲ್ಲಿ ಯಾವುದೋ ಮುಖ ಕಂಡಂತೆ ಆದಾಗೆಲ್ಲಾ, ನನ್ನ ಅಣ್ಣನಿಗೋ ಅಪ್ಪ ಅಮ್ಮರಿಗೋ ಕರೆದು ನಿಮಗೆ ಕಾಣುತ್ತಿದೆಯ ಎಂದು ತಲೆ ತಿನ್ನುತ್ತಿದ್ದೆ. ಟೀವಿಗೆ ಬಡೆದಾಗ ಡಿಶ್ ಬಂದುಬಿಟ್ಟರಂತೂ ನಮ್ಮಲ್ಲಿ ಮಹಾ ಮಂತ್ರವಾದಿ ಜನ್ಮ ತಾಳುತ್ತಿದ್ದ. ಮಂತ್ರಕ್ಕೆ ಮಾವಿನಕಾಯಿ ಉದರಿತು ಎಂಬಂತೆ. ಮುಂದಿನ ಬಾರಿ ಹೋದಾಗ ನಮಣ್ಣ ನನಗೆ ಬಡೆಯಲು ಹೇಳುತ್ತಿದ್ದ. ನನಗೆ ನೆನಪಿದ್ದ ಹಾಗೆ ಡಿ.ಡಿ ಹಾಗು ಉದಯ ಎರಡೇ ಚಾನಲ್ಗಳು ನಮ್ಮ ಮನೆಯಲ್ಲಿ ಹೆಚ್ಚು ನೋಡುತ್ತಿದ್ದುದ್ದು.
ಆವಿಷ್ಕಾರ ಅಷ್ಟಕ್ಕೇ ನಿಂತಿರಲಿಲ್ಲ ನೋಡಿ, ಕಲರ್ ಟೀವಿಗಳ ಆಕ್ರಮಣ ಜೊತೆಗೆ ರಿಮೋಟ್ ಕಂಟ್ರೋಲರ್. ನಮ್ಮನ್ನು ಅತ್ಯಂತ ಹೆಚ್ಚು ಆಕರ್ಶಣೆ ಮಾಡಿತ್ತು. ಇದೂ ಕೂಡ ಪಕ್ಕದ ಮನೆಯಲ್ಲೇ ಮೊದಲು ಬಂದಿದ್ದು. ಸ್ವಲ್ಪ ದೊಡ್ಡವನಾಗಿದ್ದರಿಂದ ಅಪ್ಪ ಅಮ್ಮನ ಸಹಾಯವಿಲ್ಲದೆ ಅವರ ಮನೆಗೆ ಕಲರ್ ಟೀವಿ ನೋಡಲೆಂದೆ ಹೋಗುತ್ತಿದ್ದೆ. ಆ ಮನೆಯಲ್ಲಿದ್ದ ಮಾಮಿ ನಮ್ಮ ಮನೆಯಲ್ಲಿ ಎಲ್ಲಾ ಕಲರ್ ಕಲರ್ ಎಂದು ನನ್ನನ್ನು ತಮಾಷೆ ಮಾಡಿ ಛೇಡಿಸುತ್ತಿದ್ದದ್ದು ನೆನಪಿದೆ. ರಿಮೋಟ್ ಮಾತ್ರ ನನ್ನ ಕೈಲಿ ಕೊಡುತ್ತಿರಲಿಲ್ಲ. ಅಂದು ನನಗೆ ರಿಮೋಟ್ ಬದಲು ಬಂಗಾರ ಕೊಟ್ಟರೂ ತೆಗೆದುಕೊಳ್ಳುವ ಮನಸ್ಸಿರಲಿಲ್ಲ.
ಕಲರ್ ಟೀವಿ ನಮ್ಮ ಮನೆಗೆ ಬರಲೂ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ, ಗಾತ್ರದಲ್ಲಿ ದೊಡ್ಡದಾಗಿದ್ದ ಟೀವಿಗೆ, ಹಿಂದೆ ದೊಡ್ಡ ಡೂಮು ಬೇರೆ, ಮಂಚಗಳು ಸ್ವಲ್ಪ ಜರಿದು ಮೂಲೆಯಲ್ಲಿ ಟೀವಿಗೆ ಜಾಗ ಮಾಡಿಕೊಟ್ಟವು. ಅಷ್ಟದಿಕ್ಕುಗಳಿಗೂ ರಿಮೋಟನ್ನು ತಿರುಗಿಸಿ ತಿರುಗಿಸಿ ಪರಿಶೀಲಿಸಿ ನೋಡಿದ್ದೆ. ಪಕ್ಕದ ಮನೆಯ ಟೀವಿಗೆ ಹೋಗಿ ನಮ್ಮ ರಿಮೋಟ್ ವರ್ಕ್ ಆಗುತ್ತದೆಯ ಎಂದೂ ಪರಿಶೀಲಿಸುತ್ತಿದ್ದೆ. ಆ ರಿಮೋಟಿನಲ್ಲಿ ಅರ್ಥವಾಗದ ಕೀಗಳಂತೂ ನನಗೆ ಚಿದಂಬರ ರಹಸ್ಯವಾಗಿದ್ದವು. ಅಷ್ಟೇ ಕುತೂಹಲ ಟೀವಿಯ ಹಿಂದೆ ಸಂಧಿಯಲ್ಲಿ ಇಣುಕಿ ನೋಡುವುದು.
ಟೀವಿಯ ಮೇಲ್ಮೈ ಅಮ್ಮನ ಅಲಂಕಾರ ವಸ್ತುಗಳಿಗೆ, ಅಪ್ಪನ ವ್ಯವಹಾರದ ಚೀಟಿಗಳಿಗೆ, ನಮ್ಮ ಆಟದ ಸಾಮಾನುಗಳಿಗೆ ಜಾಗ ಮಾಡಿಕೊಟ್ಟಿತ್ತು. ಟೀವಿಯ ಮೇಲಿದ್ದ ಹೂದಾನಿ, ಕೋಲ್ಗೇಟಿಗೆ ಫ್ರೀಯಾಗಿ ಬರುತ್ತಿದ್ದ ಸಚಿನ್, ದ್ರಾವಿಡ್ ಹಾಗೂ ನನ್ನ ಕಾರುಗಳು, ಟೀವಿಯನ್ನು ನೋಡುವ ಭಾಗ್ಯವನ್ನು ಕಳೆದುಕಂಡಿದ್ದವು.
ನನ್ನ ಸುಮಾರು ವರ್ಷ ದೊಡ್ಡ ಪೆಟ್ಟಿಗೆಯೊಂದಿಗೆ ಕಳೆಯಿತು. ಕಣ್ಣನ್ ಮಾಮರ "ಮತ್ತೆ ನಾಳೆ ಭೇಟಿಯಾಗೋಣ" ಇಂದ ಪ್ರಾರಂಭವಾಗಿ, ಉದಯ ವಾರ್ತೆಯ "ಇಲ್ಲಿಗೆ ವಾರ್ತಾ ಪ್ರಸಾರ ಮುಗಿಯಿತು, ಮುಂದಿನ ವಾರ್ತಾ ಪ್ರಸಾರ ನಾಳೆ ರಾತ್ರಿ ಎಂಟು ಮೂವತ್ತಕ್ಕೆ" ಗೆ ಮುಗಿಯುತ್ತಿತ್ತು. ಭಾನುವಾರದ ಪ್ರಪಂಚ ಪರ್ಯಟನೆ, ಶಕ್ತಿಮಾನ್, ಅಲಿಫ್ ಲೈಲ, ಪಾಪ ಪಾಂಡು ನಮ್ಮೆಲ್ಲರ ಕಾರ್ಯಕ್ರಮಗಳಾಗಿದ್ದರೆ, ಜನನಿ, ಮಾಯಾಮೃಗ, ಚದುರಂಗ ನಮ್ಮ ತಾಯಿಯ ಕಾರ್ಯಕ್ರಮ. ನಮಿಬ್ಬರ ಶತ್ರು ವಾರ್ತೆಗಳು ನಮ್ಮ ತಂದೆಯ ನೆಚ್ಚಿನ ಕಾರ್ಯಕ್ರಮ.
ಇತ್ತೀಚೆಗೆ ಸುಮಾರು ಎರಡು ಮೂರು ವರ್ಷಗಳ ಹಿಂದೆಯಷ್ಟೆ ನಮ್ಮ ಮನೆಯಲ್ಲಿ ಆ ಭೂತಗಾತ್ರದ ಟೀವಿಯ ಗತಕಾಲದ ವೈಭವ ಮುಕ್ತಾಯವಾಯಿತು. ಮೇಲಿಡುತ್ತಿದ್ದ ಹೂದಾನಿ, ಫೋಟೋಗಳು ಶೋಕೇಸ್ ಸೇರಿದವು, ಟೀವಿ ಸ್ವತಃ ಗೋಡೆಗೆ ನೇಣು ಹಾಕಿಕೊಂಡಿತು, ಕಿಟಕಿಯಿಂದ ತೂರಿಕೊಂಡು ಬಂದ ಕೇಬಲ್ - ಗೋಡೆಯ ಒಳಗಿಂದ ಬಂದಿತು, ಒಂದು ರಿಮೋಟ್ ಮರಿ ಹಾಕಿ ಎರಡಾದವು. ಟೀವಿಯ ಗಾತ್ರದ ಜೊತೆ ಕಾರ್ಯಕ್ರಮಗಳೂ ತನ್ನ ಗುಣಮಟ್ಟವನ್ನು ಸಣ್ಣದಾಗಿಸುತ್ತಾ ಬಂದವು. ತಂತ್ರಜ್ಞಾನದ ಸಹಾಯದಿಂದ ಇಂದು ನೋಡಲಾಗದ ಕಾರ್ಯಕ್ರಮ ರಾತ್ರಿಯೋ ಅಥವ ನಾಳೆಯೋ ಅಂತರ್ಜಾಲದಲ್ಲಿ ನೋಡಬಹುದಾಗಿದೆ.
ನಮ್ಮ ಕಾಲದಲ್ಲಿ ಹೀಗಿತ್ತು ಎಂದು ಹೇಳುವಷ್ಟು ಬದಲಾಗಿದೆ. ಇದಿಷ್ಟೂ ನನ್ನ ನೆನಪು ಹಾಗು ಅನುಭವ. ಇನ್ನು ಟೀವಿಯನ್ನು ಹೊಸದಾಗಿ ನೋಡಿದವರ ಅನುಭವ ಇನ್ನೂ ಕುತೂಹಲವಾಗಿರುತ್ತದೆ. ಈ ರೀತಿಯ ಸವಿ ನೆನಪುಗಳೇನಾದರೂ ನಿಮ್ಮಲ್ಲಿ ಇದ್ದೆರೆ ಇಲ್ಲಿ ಹಂಚಿಕೊಳ್ಳಿ.
"ಮತ್ತೆ ಇನ್ನೊಮ್ಮೆ ಭೇಟಿಯಾಗೋಣಾ...."

Wednesday, March 30, 2016

ಇದು ಒಂಡೇ ಮ್ಯಾಚೂ ಕಣೋ...!!

3D Painting
ಕ್ರಿಕೆಟ್ ಎಂದರೆ ಭಾರತದಲ್ಲಿ ಎಲ್ಲಿಲ್ಲದ ಸಡಗರ, ಕುತೂಹಲ. ಪಾಕಿಸ್ತಾನದಲ್ಲಂತೂ ತಮ್ಮ ತಂಡ ಸೋತರೆ ಟೀವಿಯನ್ನೆಲ್ಲಾ ಒಡೆದು ಹಾಕುತ್ತಾರೆ. ನಮ್ಮಲ್ಲಿ ನಮ್ಮ ತಂಡ ಗೆಲ್ಲಲೂ ಹೋಮ ಹವನಗಳನ್ನೆಲ್ಲಾ ಮಾಡುತ್ತಾರೆ. ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಹೊಂದಿರುವ ಹೆಮ್ಮೆ ನಮ್ಮ ಭಾರತದ್ದೆ.
ಇಷ್ಟೊಂದು ಜನರನ್ನು ಆಕರ್ಷಿಸಲು ಕ್ರಿಕೇಟ್ ಆಟವೊಂದೇ ಕಾರಣ ಅಲ್ಲ, ಎಲ್ಲೋ ನಡೆಯುವ ಪಂದ್ಯ ನಮ್ಮ ಮನೆಯಲ್ಲಿ ಪ್ರಸಾರವಾಗುವ ರೀತಿ ಕೂಡ ಒಂದು ಅಂಶ. ಒಂದು ಕ್ರಿಕೆಟ್ ಪಂದ್ಯ ಕೇವಲ ಹನ್ನೊಂದು ಜನರ ಎರಡು ತಂಡಗಳಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಅದರ ಹಿಂದೆ ಕಾಣದ ಕೈಗಳ ಕೆಲಸ ಸಾವಿರ.
1922ರಲ್ಲಿ ಕ್ರಿಕೆಟ್ ನ ಮೊದಲ ರೇಡಿಯೋ ಕವರೇಜ್ ಮಾಡಲಾಗಿದ್ದು, ಅಂದಿನಿಂದ ಇಂದಿನವರೆಗೂ ಆಗಿರುವ ಬದಲಾವಣೆ ಆವಿಷ್ಕಾರ ಕ್ರಿಕೆಟನ್ನು ಇನ್ನಷ್ಟು ಆಕರ್ಷಿತವನ್ನಾಗಿ ಮಾಡಿದೆ. 1938ರಲ್ಲಿ ಮೊದಲು ಟೀವಿ ಪ್ರಸಾರವಾದರೆ, ವರ್ಣರಂಜಿತ ಪ್ರಸಾರ ನಡೆದದ್ದು 1968ರಲ್ಲಿ.
ಮೈದಾನದ ಮಧ್ಯದಲ್ಲಿ ಪೆಪ್ಸಿ, ಕೊಕಕೋಲಾದ ನಾಮಫಲಕಗಳು ನೇರವಾಗಿ ನಿಲ್ಲಿಸಿರುವುದು ಕಾಣಿಸುತ್ತಿರುತ್ತದೆ, ಇದ್ದಕ್ಕಿದ್ದಂತೆ ಅದರ ಮೇಲೆ ಕೀಪರ್ ನಿಲ್ಲುತ್ತಾನೆ, ಮೊದಲು ಈ ದೃಶ್ಯವನ್ನು ನೋಡಿದವರಿಗೆ ಆಶ್ಚರ್ಯವಾಗದೇ ಇರುತ್ತದೆಯೇ? 3Dಯ ಹಾಗೆ ಕಾಣುವ projected 2D ಚಿತ್ರಗಳನ್ನು ಮನುಷ್ಯರೂ ಬಿಡಿಸಬಹುದು, ಆದರೂ ಆ ಕೆಲಸವನ್ನು ಒಂದು ಸಣ್ಣ ರೋಬೋಟ್ ಮಾಡುತ್ತದೆ. ಒಂದು ಲೇಸರ್ ಸಹಾಯಿತ ಉಪಕರಣ ಆ ರೋಬೋಟನ್ನು ಚಲಾಯಿಸುತ್ತದೆ, ಅದು ತಾನು ನಡೆದಲ್ಲೆಲ್ಲ ಬಣ್ಣವನ್ನು ಚೆಲ್ಲುತ್ತಾ ಹೋಗುತ್ತದೆ. ನಂತರ ಕಲಾವಿದರು ವಿವಿಧ ಬಣ್ಣಗಳನ್ನು ನೀಡಿ ಪೂರ್ಣಗೊಳಿಸುತ್ತಾರೆ. ಆ ರೋಬೋಟಿನ ಕೆಲಸ ನೋಡಲು ಈ ಕೊಂಡಿಯನ್ನು ಒತ್ತಿ.

ಥರ್ಡ್ ಅಂಪೈರ್ ಇಲ್ಲದಿದ್ದರೆ ಎಷ್ಟೋ ಆಟಗಾರರು ಅನ್ಯಾಯಕ್ಕೊಳಗಾತ್ತಿದ್ದರೆಲ್ಲವೇ, ಈ ಐಡಿಯ ಮೊಟ್ಟ ಮೊದಲು ತಂದಿದ್ದು ಶ್ರೀಲಂಕದ ಕ್ರಿಕೆಟ್ ಆಟಗಾರ ಮಹಿಂದ ವಿಜೆಸಿಂಘೆ. 1992ರಲ್ಲಿ  ಭಾರತ ಹಾಗು ದ.ಆಫ್ರಿಕ ನಡುವಿನ ಪಂದ್ಯದಲ್ಲಿ ಈ ಥರ್ಡ್ ಅಂಪೈರ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿತ್ತು. ನಮ್ಮ ಕ್ರಿಕೆಟ್ ದೇವರು ಮೊದಲು ಥರ್ಡ್ ಅಂಪೈರ್ ತೀರ್ಪಿನಿಂದ ಔಟ್ ಆಗಿ ಅದರಲ್ಲೂ ಕೂಡ ದಾಖಲೆಯನ್ನು ಬರೆದಿದ್ದಾರೆ. ತೀರ್ಪು ಕೊಟ್ಟದ್ದು ಕಾರ್ಲ್ ಲೀಬನ್ಬರ್ಗ್.
Hawkeye

ಹಾಕ್_ಐ(Hawkeye) ಎಂಬ ತಂತ್ರಜ್ಞಾನವನ್ನು 2001ರಲ್ಲಿ ಕ್ರಿಕೆಟ್ ಆಟಕ್ಕೆ ಸೇರಿತು, ಇದರ ಕೆಲಸ ವೀಕ್ಷಕರಿಗೆ ಚೆಂಡಿನ ಹಾದಿಯನ್ನು ಗ್ರಾಫಿಕ್ಸ್ ಮೂಲಕ ತೋರಿಸುವುದು. ಮೊದಲು ಎಲ್.ಬಿ.ಡಬ್ಲ್ಯೂನಲ್ಲಿ ಮಾತ್ರ ಉಪಯೋಗವಾಗುತ್ತಿದ್ದ ಈ ತಂತ್ರಜ್ಞಾನ ಇಂದು ಬ್ಯಾಟ್ಸ್ ಮ್ಯಾನ್ ಬಾರಿಸುವ ಸಿಕ್ಸ್, ವ್ಯಾಗನ್ ವೀಲ್ ಎಲ್ಲ ಕಡೆ ಚಾಲ್ತಿಯಲ್ಲಿದೆ, ಹಾಗು ಅನಿವಾರ್ಯದ ಜೊತೆ ಆಕರ್ಷಣೆಯೂ ಆಗಿದೆ.


Snicko


Hotspot
ಸ್ಟಂಪಿನಲ್ಲಿ ಇಡುವ ಸ್ನಿಕೋಮೀಟರ್ ಎಂಬ ಸಣ್ಣ ಮೈಕ್ರೋಫೋನ್ ಸೂಕ್ಷ್ಮ ಶಬ್ಧವನ್ನು ಆಲಿಸಿ, ಅದರ ಏರಿಳಿತಗಳ ಗ್ರಾಫ್ ಅನ್ನು ನಮಗೆ ನೀಡುತ್ತದೆ, ಈ ತಂತ್ರಜ್ಞಾನ ಚೆಂಡು ಬ್ಯಾಟ್ಸ್ ಮ್ಯಾನ್ ನ ಬ್ಯಾಟಿಗೆ ತಾಗಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ. ಈ ತಂತ್ರಜ್ಞಾನವನ್ನು ಆಲನ್ ಪ್ಲಾಸ್ಕೆಟ್ ಎಂಬ ಇಂಗ್ಲೆಂಡಿನ ವಿಜ್ಞಾನಿ ಕ್ರಿಕೆಟ್ ಜಗತ್ತಿಗೆ ಕೊಡುಗೆನ್ನಾಗಿ ನೀಡಿದ್ದಾನೆ. ಎರಡು ವಸ್ತುಗಳ ಘರ್ಷಣೆಯಿಂದ ಸೃಷ್ಟಿಯಾಗುವ ಉಷ್ಣವನ್ನು ಮಾತ್ರ ಸೆರೆಹಿಡಿಯುವ ಹಾಟ್ಸ್ಪಾಟ್ ತಂತ್ರಜ್ಞಾನ ಕೂಡ ಬ್ಯಾಟ್ಗೆ ಚೆಂಡು ತಾಗಿದೆಯೋ ಇಲ್ಲವೋ ಎಂದು ಕಂಡುಹಿಡಿಯಲು ಬಳಸುತ್ತಾರೆ.


ಬ್ರೆಟ್ ಲೀ, ಶೋಯಬ್ ಅಕ್ತರ್ ಅಂತಹ ಬೌಲರ್ಗಳು ಎಸೆಯುವ ಬೆಂಕಿ ಚೆಂಡಿನ ವೇಗವನ್ನು ಅಳೆಯಲು ಉಪಯೋಗಿಸುವ ರಾಡಾರ್ ಗನ್ ವಾಹನದ ವೇಗ ಅಳೆಯಲು ಉಪಯೋಗಿಸುತ್ತರೆ. ಈ ರಾಡರ್ ಗನ್ ಅನ್ನು 1947ರಲ್ಲಿ ಮೊದಲು ಜಾನ್ ಬಾರ್ಕರ್ ಎಂಬಾತ ಕಂಡು ಹಿಡಿದನು. ವಾಹನಗಳ ವೇಗವನ್ನು ಅಳೆಯಲು ಉಪಯೋಗಿಸುತ್ತಿದ್ದ ಈ ತಂತ್ರಜ್ಞಾನ ಇಂದು ಕ್ರಿಕೆಟ್ ನ ಅವಿಭಾಜ್ಯ ಅಂಗವಾಗಿದೆ.


ಇನ್ನು ಸಚಿನ್ ಮಾಡದ ದಾಖಲೆಗಳನ್ನೆಲ್ಲಾ ಯಾರು ಬರೆದುಕೊಳ್ಳುತ್ತಾರೆ? ಸಚಿನ್ 45ನೇ ಓವರ್ನಲ್ಲಿ ಗಳಿಸಿದ ಅತ್ಯಂತ ಗರಿಷ್ಟ ರನ್ ಇಷ್ಟು, ಕೋಹ್ಲಿ ನೂರು ರನ್ ಗಳಿಸಿದ ಮ್ಯಾಚ್ನಲ್ಲಿ ಭಾರತ ಗೆಲ್ಲುವ ಸಂಭವನೀಯತೆ ಇಷ್ಟು, 40ನೇ ಓವರ್ನಲ್ಲಿ ಅತಿ ಹೆಚ್ಚು ಜೊತೆಯಾಟ, 9ನೇ ವಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ. ಹೀಗೆ ಪ್ರತಿಯೊಂದು ಸಣ್ಣ ಸಣ್ಣ ದಾಖಲೆಗಳನ್ನೆಲ್ಲಾ ಯಾರು ಬರೆದುಕೊಳ್ಳುತ್ತಾರೆ? ಅದನ್ನು ಹೇಗೆಲ್ಲಾ ವಿಶ್ಲೇಷಿಸಬಹುದು. ನೋಡುವ ಜನರಿಗೆ ಇಂಚು ಇಂಚು ಅಂಕಿಅಂಶಗಳ ಮಾಹಿತಿಯನ್ನು ಕೊಡುವ ಆ ಮನುಷ್ಯ ಯಾರಿಹಬಹುದು? ಅಲ್ಲವೇ?
1993ರಲ್ಲಿ ಡಾ. ಸೈಮನ್ ಕಿಂಗ್ ಎಂಬವರು ತಮ್ಮ ಸಂಶೋಧನ ವಿದ್ಯಾರ್ಥಿಗಳ ಜೊತೆ ಕೈಗೂಡಿಸಿ ಪ್ರಾರಂಭಿಸಿದ ಜಾಲತಾಣ CricInfo. ಪೀಟರ್ ಗ್ರಿಫ್ಟ್ಸ್, ಫಿಲಿಪ್ ಜೆ ಬೆಯ್ಲಿ ಎಂಬ ಸಂಖ್ಯಾಶಾಸ್ತ್ರಜ್ಞರು 2004ರಲ್ಲಿ CricketArchive ಎಂಬ ಜಾಲತಾಣವನ್ನು  ಪ್ರಾರಂಭಿಸಿದರು. ಇದುವರೆಗು 624,067 ಸ್ಕೋರ್ ಕಾರ್ಡ್ಗಳು, 1,122,540 ಆಟಗಾರರ ಅಂಕಿಅಂಶಗಳು ಈ ಡಾಟಾಬೇಸ್ನಲ್ಲಿವೆಯಂತೆ.
ಇಲ್ಲಿ ನಮ್ಮ ಹೆಮ್ಮೆಯ ಸಂಗತಿಯೆಂದರೆ 2010 ಫೆಬ್ರುವರಿ 24ರಂದು ಆದ ನಮ್ಮ ಕ್ರಿಕೆಟ್ ದೇವರ 200 ರನ್ ಗಳಿಸಿ ಸೃಷ್ಟಿಸಿದ ದಾಖಲೆಗೆ, cricinfo ಜಾಲತಾಣವನ್ನು ಭೇಟಿಕೊಟ್ಟವರ ಸಂಖ್ಯೆ 4ಕೋಟಿ 50ಲಕ್ಷಕ್ಕಿಂತ ಹೆಚ್ಚು ಎಂದು cricinfo ಹೇಳಿಕೊಂಡಿದೆ. ಅಲ್ಲದೇ ಇದುವರೆಗು ಕ್ರಿಕೆಟ್ ದೇವರ ಹುಡುಕಾಟದ ಸಂಖ್ಯೆಯೆ ಅತಿ ಹೆಚ್ಚು ಎಂದು ಕೂಡ ತಿಳಿಸಿದೆ.

ಅಂಪೈರ್ ಟೋಪಿಯ ಮೇಲೆ ಕ್ಯಾಮರ, ಬೆಲ್ಸ್ ಹಾರಿದಾಗ ಹತ್ತುವ ದೀಪ, ಸ್ಟಂಪಿನಲ್ಲಿರುವ ಕ್ಯಾಮರ, ಡ್ರೋನ್ ಕ್ಯಾಮರ, ಮಾನವ ಚಾಲಿತ ಸ್ಕೋರ್ ಬೋರ್ಡಿನಿಂದ ಡಿಜಿಟಲ್ ಬೋರ್ಡ್, ಅಲ್ಟ್ರಾ ಸ್ಲೋ ಮೋಷನ್ ಕ್ಯಾಮರ ಹೀಗೆ ಹತ್ತು ಹಲವಾರು ಸೃಜನಾತ್ಮಕ ಆವಿಷ್ಕಾರಗಳು ಕ್ರಿಕೆಟನ ಕಡೆಗೆ ಬಹಳಷ್ಟು ಜನರು ಆಕರ್ಷಿತವಾಗಲು ಸಾಧ್ಯವಾಗಿದೆ.

ಇದನ್ನೆಲ್ಲಾ ಗಮನಿಸಿದರೆ ಕೊನೆಯಲ್ಲಿ #ನನಗನಿಸಿದ್ದು, ಭಾರತದಲ್ಲಿ ಆವಿಷ್ಕಾರಗಳು ಕಡಿಮೆಯಾದರೂ, ಇಂಗ್ಲೆಂಡಿನ ಕೂಸಾದ ಕ್ರಿಕೆಟನ್ನು ಅತಿ ಹೆಚ್ಚು ಪ್ರೀತಿಸುತ್ತಿರುವವರು ಭಾರತದವರು. ಹ ಐಪಿಎಲ್ ಪಂದ್ಯಗಳ ವೇಳೆ ಮೈದಾನದಲ್ಲಿ ಹಾಕುವ ಪಿ ಪಿ ಪಿ ಪೀ ಪೀ ಎಂಬ ಮ್ಯೂಸಿಕ್ ಭಾರತೀಯರದ್ದೆ ಇರಬೇಕು.


Monday, February 29, 2016

In order to see we need to talk about 'c'.


ಹಾಗೇ ವಿಜ್ಞಾನ ದಿನದಂದು ಏನಾದರೂ ವಿಜ್ಞಾನದ ಬಗ್ಗೆ ನನಗೆ ತಿಳಿದಿರೋ ಸಣ್ಣ ಮಾಹಿತಿ ಹೇಳೋಣಾ ಅನ್ನಿಸಿತು.

ಸಾಮಾನ್ಯವಾಗಿ ತುಂಬಾ ಜನ ಹೇಳ್ತಾರೆ, ನನಗೆ Facebook ನೋಡ್ಲಿಕ್ಕೆ ಟೇಮ್ ಇಲ್ಲ ಅಂತ. ನಿಜವಾಗಿಯೂ ಅವರಾಡಿದ ಮಾತಿನ ಅರ್ಥ ಬೇರೆನೇ ಅರ್ಥಕೊಡೊತ್ತೆ. ನನಗೂ ಗೊತ್ತಿರಲಿಲ್ಲ, ಹಾಗೆ ಎಲ್ಲೋ ಒದಿದ್ದು, ನೋಡಿದ್ದು.
ವಿಚಿತ್ರ ಏನೆಂದರೆ, ಯಾರಾದರೂ ನನಗೆ time ಇಲ್ಲ ಎಂದರೆ ಅವರು ಬೆಳಕಿನ ವೇಗದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರ್ಥ. ನಂಗೆ ಗೊತ್ತು ನಿಮಗೆ ಮುಂದಿನದ್ದು ಓದಲಿಕ್ಕೆ ಟೇಮ್ ಇಲ್ಲ ಅಂತ..

ಜಗತ್ತಿನಲ್ಲಿ ಬೆಳಕಿನ ವೇಗದಲ್ಲಿ ಯಾವ ವಸ್ತುವೂ ಚಲಿಸಲು ಸಾಧ್ಯವಿಲ್ಲ ಎಂದು ನಮಗೆಲ್ಲ ತಿಳಿದಿರುವ ವಿಷಯ, ಆದರೂ time ಇಲ್ಲ ಎಂದು ಅವರೆಲ್ಲ ಹೇಗೆ ಬೆಳಕಿನ ವೇಗದಲ್ಲಿ ಚಲಿಸಲು ಸಾಧ್ಯವೋ ನನಗೆ ಗೊತ್ತಿಲ್ಲ.
ವಿಷಯಕ್ಕೆ ಬರೋಣ, ಅಕಸ್ಮಾತ್!! ನಾವು ಬೆಳಕಿನ ವೇಗದಲ್ಲಿ ಪ್ರಯಾಣಿಸಿದರೆ??

ಒಂದು ಕಾರು ಬಾಹ್ಯಾಕಾಶದಲ್ಲಿ ತನ್ನ ಹೆಡ್ ಲೈಟನ್ನು ಆನ್ ಮಾಡಿದೆ ಎಂದಿಟ್ಟುಕೊಳ್ಳಿ, ಅದರಿಂದ ಹೊರೆಟ ಬೆಳಕಿನ ಕಿರಣ ಒಂದು ಸೆಕೆಂಡಿನಲ್ಲಿ ಎಷ್ಟು ದೂರ ಚಲಿಸುತ್ತದೋ ಅದನ್ನು ಲೈಟ್ ಸೆಕೆಂಡ್ ಎನ್ನುತ್ತಾರೆ. 1 ಲೈಟ್ ಸೆಕೆಂಡ್ =  299792 ಕಿ.ಮೀ. ಅದೇ ಸಮಯದಲ್ಲಿ ಇನ್ನೊಂದು ಕಾರು ಬೆಳಕಿನ ವೇಗಕ್ಕೆ (99.999999999999999%)ಅತೀ ಹತ್ತಿರದ ವೇಗದಲ್ಲಿ ಮೊದಲನೇ ಕಾರಿನ ಹೆಡ್ ಲೈಟಿನಿಂದ ಚಲಿಸಲು ಪ್ರಾರಂಭಿಸಿದರೆ??
ನಮ್ಮ ಒಂದು ಲೈಟ್ ಸೆಕೆಂಡಿನ ನಂತರ ಎರಡು ಕಾರಿನ ಲೈಟ್ ಒಂದೇ ದೂರವನ್ನು ಕ್ರಮಿಸಿರುತ್ತದೆ. ಹಾಗದರೆ ಚಲಿಸುತ್ತಿದ್ದ ಕಾರಿನ ಲೈಟ್ ಕಡಿಮೆ ದೂರ ಚಲಿಸಿತ್ತಾ? ಇಲ್ಲ, ಬೆಳಕು ಎರಡರಲ್ಲೂ ಒಂದೇ ದೂರವನ್ನು ಕ್ರಮಿಸಿರೊತ್ತೆ, ಆದರೆ ಚಲಿಸುತ್ತಿದ್ದ ಕಾರಿನಲ್ಲಿದ್ದವರಿಗೆ ಕಡಿಮೆ ದೂರ ಕ್ರಮಿಸಿದೆ ಎಂದೆನಿಸುತ್ತದೆ, ಹೇಳಬೇಕೆಂದರೆ ಅವರಿಗೆ ಇನ್ನು ಒಂದು ಸೆಕೆಂಡ್ ಆಗಿರುವುದೇ ಇಲ್ಲ. ನಮಗೆ ಒಂದು ಸೆಕೆಂಡ್ ಆದ ಮೇಲೆ ಅವರಿಗೆ ಒಂದು ಸೆಕೆಂಡ್ ಆಗುತ್ತದೆ. ಅಂದರೆ ನಮ್ಮ ಚಲಿಸುವ ವೇಗ ಬೆಳಕಿನ ವೇಗಕ್ಕೆ ಸಮೀಪಿಸುತ್ತಾ ಹೋದರೆ ಸಮಯ ನಿಧಾನವಾಗುತ್ತಾ ಬರುತ್ತದೆ (Time is stretchable).
 ಒಂದು ವೇಳೆ ಬೆಳಕಿನ ವೇಗದಲ್ಲಿ ಚಲಿಸಿದರೆ ನಮ್ಮ ಸಮಯ ಸೊನ್ನೆಯಾಗುತ್ತದೆ. ಅದೆ ಹೇಳ್ತಾರಲ್ಲಾ, ನಂಗೆ ಟೇಮ್ ಇಲ್ಲ ಅಂತ ಹಾಗೆ.